ಮುಂದೆ ರಸ್ತೆ ತಿರುವು ಇದೆ ಎಚ್ಚರ!

7
ಚಾಲಕರ ನಿಯಂತ್ರಣ ತಪ್ಪಿ ಲಂಡನ್ ಬ್ರಿಜ್ ಬಳಿ ಕೋಣೆನಾಲಾಕ್ಕೆ ಬೀಳುವ ವಾಹನಗಳು

ಮುಂದೆ ರಸ್ತೆ ತಿರುವು ಇದೆ ಎಚ್ಚರ!

Published:
Updated:
ಮುಂದೆ ರಸ್ತೆ ತಿರುವು ಇದೆ ಎಚ್ಚರ!

ಕಾರವಾರ: ನಗರದ ಪ್ರವೇಶ ದ್ವಾರದ ಸಮೀಪವಿರುವ ಲಂಡನ್ ಬ್ರಿಜ್‌ನ ತಿರುವು ರಾತ್ರಿವೇಳೆ ವಾಹನ ಚಾಲಕರ ಧೃತಿಗೆಡಿಸುತ್ತಿದೆ. ಇಲ್ಲಿ ಏಕಾಏಕಿ ತಿರುವು ಇರುವ ಬಗ್ಗೆ ಚಾಲಕರಿಗೆ ತಿಳಿಯದೇ ಪದೇಪದೇ ಅಪಘಾತಗಳಾಗುತ್ತಿವೆ. ಹಲವು ವಾಹನಗಳು ಕೋಣೆನಾಲಾಕ್ಕೆ ಉರುಳಿವೆ.

ಇಲ್ಲಿ ಮೇ 2ರಂದು ಒಂದೇ ದಿನ ಎರಡು ಅಪಘಾತಗಳಾಗಿವೆ. ಅಂದು ಬೆಳಗಿನ ಜಾವ ಮಾರುತಿ ಅರ್ಟಿಗಾ ಕಾರು ಸೇತುವೆಯ ಕೆಳಗಿನ ಕೋಣೆನಾಲಾಕ್ಕೆ ಬಿದ್ದಿತ್ತು. ಅದರಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದವು. ನಾಲೆಯಲ್ಲಿರುವ ಕೊಳಚೆ ನೀರಿನಲ್ಲಿ ಕಾರು ತೇಲಿದ್ದರಿಂದ ಹೆಚ್ಚಿನ ಅಪಾಯ ತಪ್ಪಿತ್ತು. ಅದೇದಿನ ತಡರಾತ್ರಿ ಲಾರಿಯೊಂದು ಕಾರು ಬಿದ್ದ ಜಾಗದಲ್ಲೇ ಬಿದ್ದಿತ್ತು. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಎರಡೂ ವಾಹನಗಳು ಸಾಕಷ್ಟು ಜಖಂಗೊಂಡಿದ್ದವು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಕೋಲಾ ಬದಿಯಿಂದ ಬರುವಾಗ ಇಲ್ಲಿ ಮುನ್ಸೂಚನೆಯೇ ಇಲ್ಲದೇ ತಿರುವು ತೆಗೆದುಕೊಳ್ಳಬೇಕು. ಆದರೆ, ವೇಗವಾಗಿ ಬರುವ ವಾಹನಗಳ ಚಾಲಕರು ಇದು ಅರಿವಿಗೆ ಬಾರದೇ ಎದುರಿಗಿರುವ ಪೆಟ್ರೋಲ್ ಬಂಕ್‌ಗೆ ಹೋಗುವ ನೇರ ರಸ್ತೆಗೆ ವಾಹವನ್ನು ನುಗ್ಗಿಸುತ್ತಾರೆ. ಕೊನೆಗೆ ವಾಹನಗಳ ಮೇಲೆ ನಿಯಂತ್ರಣ ಸಿಗದೇ ನಾಲೆಗೆ ಬೀಳುವಂತಾಗಿದೆ. ಒಂದುವೇಳೆ ಇಲ್ಲಿ ದ್ವಿಚಕ್ರ ವಾಹನಗಳ ಅಪಘಾತವಾದರೆ ಹೆಚ್ಚಿನ ಪ್ರಮಾಣದ ಅಪಾಯವಾಗುವ ಆತಂಕವಿದೆ. ಇದನ್ನು ತಡೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಮುಂದಾಗಬೇಕಿದೆ ಎನ್ನುತ್ತಾರೆ ಸ್ಥಳೀಯರಾದ ಮಂಜುನಾಥ.

ಈ ರೀತಿಯ ಅಪಘಾತಗಳಲ್ಲಿ ಬಹುತೇಕ ನಡೆದಿರುವುದು ಬೆಳಗಿನ ಜಾವದಲ್ಲೇ. ಚಾಲಕರು ನಿದ್ದೆಯ ಮಂಪರಿನಲ್ಲಿದ್ದಾಗ ರಸ್ತೆ ತಿರುವು ಗಮನಕ್ಕೆ ಬರುತ್ತಿಲ್ಲ. ಆದ್ದರಿಂದ ಪ್ರತಿಫಲಕದಿಂದ ಮಾಡಿದ ದೊಡ್ಡದಾದ ಸೂಚನಾ ಫಲಕವನ್ನು ತಿರುವಿಗೂ ಮೊದಲು ಅಳವಡಿಸಬೇಕು ಎಂಬುದು ಅವರ ಆಗ್ರಹವಾಗಿದೆ.

ಫಲಕ ಅಳವಡಿಸಲು ಪತ್ರ

ರಸ್ತೆ ತಿರುವಿನ ಬಗ್ಗೆ ಸೂಚನಾ ಫಲಕ ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಶೀಘ್ರವೇ ಅವರು ಫಲಕ ಅಳವಡಿಸುವ ವಿಶ್ವಾಸವಿದೆ. ಇದರಿಂದ ತಿರುವು ಹಾಗೂ ಸೇತುವೆ ಇರುವ ಬಗ್ಗೆ ವಾಹನ ಸವಾರರಿಗೆ ಸೂಕ್ತ ಮಾಹಿತಿ ಲಭಿಸಿ ಮತ್ತಷ್ಟು ಎಚ್ಚರಿಕೆಯಿಂದ ಸಂಚರಿಸಲು ಸಾಧ್ಯವಿದೆ ಎನ್ನುತ್ತಾರೆ ಕಾರವಾರ ಪೊಲೀಸ್ ವೃತ್ತ ನಿರೀಕ್ಷಕ ಕೆ.ಆರ್.ಶಿವಕುಮಾರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry