ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿಗಳ ದಾಹ ನೀಗಿಸುವ ನೌಕರ

ಜಿಲ್ಲಾಡಳಿತ ಉದ್ಯಾನ ತುಂಬಿದ ಹಕ್ಕಿಗಳ ಕಲರವ
Last Updated 7 ಮೇ 2018, 14:14 IST
ಅಕ್ಷರ ಗಾತ್ರ

ಯಾದಗಿರಿ: ಮಿನಿ ವಿಧಾನಸೌಧದ ಅಂಗಳದಲ್ಲಿ ಹಸಿರು ಉದ್ಯಾನ ಅರಳಿದ ಮೇಲೆ ಪಕ್ಷಿಗಳ ಕಲರವ ಹೆಚ್ಚಿದೆ. ಆದರೆ, ಬಿರು ಬೇಸಿಗೆಯಲ್ಲಿ ಈ ಕಲರವ ಕಡಿಮೆಯಾಗಿ ಬಿಡುತ್ತದೆ. ಪಕ್ಷಿಗಳ ದಿಢೀರ್ ವಲಸೆ ಬಗ್ಗೆ ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಆದರೆ, ಕಾರಣವನ್ನು ಯಾರೂ ಹುಡುಕುತ್ತಿರಲಿಲ್ಲ. ಅಂತಹ ಕಾರಣವನ್ನು ಹುಡುಕಿ ಪ್ರಸಕ್ತ ಬೇಸಿಗೆಯಲ್ಲಿ ಮಿನಿವಿಧಾನ ಸೌಧದಲ್ಲಿ ಪಕ್ಷಿಗಳ ಕಲರವ ಹೆಚ್ಚುವಂತೆ ಅಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಚಂದ್ರಕಾಂತ ಮುಗಳಿ ತೋರಿಸಿದ್ದು, ಜನರ ಪ್ರೀತಿಗೆ ಪಾತ್ರಾಗಿದ್ದಾರೆ.

ಸುರ್ಯೋದಯಕ್ಕೂ ಮುಂಚೆ ನೀವು ಮಿನಿವಿಧಾನಸೌಧದ ಆವರಣ ಪ್ರವೇಶಿಸಿದರೆ ಅಲ್ಲಿ ಚಂದ್ರಕಾಂತ ಮುಗಳಿ ಕಾಣಿಸಿಕೊಳ್ಳುತ್ತಾರೆ. ನೂರಾರು ಮರಗಿಡಗಳಲ್ಲಿ ಅವರೇ ಕಟ್ಟಿರುವ ಮಣ್ಣಿನ ಮಡಿಕೆ, ಕುಡಿಕೆಗಳಿಗೆ ನೀರು ತುಂಬಿಸುತ್ತಾರೆ. ನಿತ್ಯ ಎರಡು ಗಂಟೆ ಪಕ್ಷಿಗಳ ದಾಹ ನೀಗಿಸುವ ಕೆಲಸವನ್ನು ಚಂದ್ರಕಾಂತ ಮಾಡುವುದು ಕಂಡುಬರುತ್ತದೆ. ಇದರಿಂದಾಗಿ ನಗರದಲ್ಲಿ ಚಂದ್ರಕಾಂತ ಈಗ ‘ಪಕ್ಷಿ ಚಂದ್ರು’ ಅಂತಲೇ ಹೆಸರಾಗಿದ್ದಾರೆ.

ಚಳಿಗಾಲ, ಮಳೆಗಾಲದಲ್ಲಿ ಉದ್ಯಾನಕ್ಕೊಂದು ಕಳೆ ತರುವ ಈ ಪಕ್ಷಿಗಳು ಬೇಸಿಗೆಯಲ್ಲಿ ದಿಢೀರ್ ಕಣ್ಮರೆಯಾಗುವುದು ಏಕೆ? ಎಂಬುದು ಚಂದ್ರಕಾಂತ ಅವರನ್ನು ಕಾಡುತ್ತಿತ್ತು. ಬಿಕೋ ಎನ್ನುತ್ತಿದ್ದ ಜಿಲ್ಲಾಡಳಿತ ಆವರಣ ಅಸಹನೀಯ ಅನಿಸುತ್ತಿತ್ತು. ಪಕ್ಷಿಗಳ ಕಣ್ಮರೆಗೆ ಪ್ರಮುಖ ಕಾರಣ ನೀರಿನ ಕೊರತೆ ಎಂಬುದು ನಂತರ ಅವರ ಅರಿವಿಗೆ ಬಂತು. ಮೊದಲಿಗೆ ನಾಲ್ಕೈದು ಮರಗಿಡಗಳಿಗೆ ಮಣ್ಣಿನ ಕುಡಿಕೆ ಕಟ್ಟಿ ಬೊಗಸೆಯಷ್ಟು ನೀರು ಸುರಿದರು. ನಾಲ್ಕೈದು ದಿನಗಳ ನಂತರ ನಿಧಾನವಾಗಿ ಪಕ್ಷಿಗಳು ಕಾಣಿಸಿದವು. ನಂತರ ನಗರದಲ್ಲಿ ₹ 2 ಸಾವಿರ ವೆಚ್ಚದಲ್ಲಿ ಆವರಣದಲ್ಲಿರುವ ಮರಗಿಡಗಳ ಕೊಂಬೆ, ರೆಂಬೆಗಳಿಗೆ ಕುಡಿಕೆ ಕಟ್ಟಿ ನೀರು ಹಾಕುತ್ತಾ ಬಂದರು. ಕ್ರಮೇಣ ಮಿನಿವಿಧಾನ ಸೌಧದ ಉದ್ಯಾನದಲ್ಲಿ ಈಗ ನಿರಂತರ ಪಕ್ಷಿಗಳ ಇನಿದನಿ ಕೇಳಿ ಬರುತ್ತಿದೆ.

‘ಉದ್ಯಾನ ಇದ್ದರೂ ಅಲ್ಲಿ ಪಕ್ಷಿಗಳಿರದಿದ್ದರೆ ಉದ್ಯಾನಕ್ಕೆ ಕಳೆ ಇರುವುದಿಲ್ಲ. ಉದ್ಯಾನ ಹಸಿರುಹೊತ್ತು ನೆರಳು ನೀಡಿದ್ದರೂ, ಹಕ್ಕಿಗಳ ಸಂಚಾರ ಏಕಿಲ್ಲ? ಎಂಬುದೇ ನನಗೂ ಯೋಚನೆಗೀಡು ಮಾಡಿತ್ತು. ಮಕರಂದ ಇರುವ ಹೂಬಳ್ಳಿ ಕೂಡ ಇದೆ. ಆದರೂ, ಪಕ್ಷಿಗಳೇಕಿಲ್ಲ ಎಂಬುದೇ ಕೊರಗಾಯಿತು. ಕೊನೆಗೆ ನೀರಿನ ಕೊರತೆ ಪ್ರಮುಖ ಕಾರಣ ಎಂಬುದಾಗಿ ಅರಿವಾಯಿತು. ಬೇಸಿಗೆ ಮುಗಿಯುವವರೆಗೂ ಅವುಗಳಿಗೆ ನೀರು ಸಂಗ್ರಹಿಸುವ ಕೆಲಸ ಆರಂಭಿಸಿದೆ. ಈಗ ಅವುಗಳ ಇನಿದನಿ ಎಲ್ಲರ ಕಿವಿ ತುಂಬಿದೆ’ ಎಂದು ಚಂದ್ರಕಾಂತ ಮುಗಳಿ ಖುಷಿಪಡುತ್ತಾರೆ.

ಪಕ್ಷಿಗಳಿಗೆ ನೀರುಣಿಸುವ ಕೆಲಸ ಮಾಡುವ ಚಂದ್ರು ಈಗ ಪಕ್ಷಿಗಳ ಅಧ್ಯಯನ ಆಸಕ್ತಿ ಕೂಡ ಬೆಳೆಸಿಕೊಂಡಿದ್ದಾರೆ. ಉದ್ಯಾನದಲ್ಲಿ ಲಗ್ಗೆ ಹಾಕುವ ಪಕ್ಷಿಗಳನ್ನು ಗುರುತು ಹಿಡಿದು ಜೀವನ ಕ್ರಮದ ಬಗ್ಗೆ ವಿವರಿಸುತ್ತಾರೆ.

‘ಕೆಂಬೂತ. ಕೋಗಿಲೆ, ಹೂವಿನ (ಹೆಮ್ಮಿಂಗ್ ಬರ್ಡ್‌) ಹಕ್ಕಿಗಳು, ಕಾಡು ಪರಿವಾಳಗಳು ಹೆಚ್ಚಾಗಿ ಬರುತ್ತವೆ. ಬಾಳೆ ಗುಬ್ಬಿ ಚಿಂವ್.. ಚಿಂವ್‌ ಎಂದು ಸದ್ದು ಮಾಡುತ್ತಿದ್ದರೆ ಅದನ್ನೇ ಕೇಳುತ್ತಿರಬೇಕು. ಅನ್ನಿಸುತ್ತದೆ. ಹೂವಿನ ಹಕ್ಕಿಗಳಿಗಾಗಿಯೇ ಒಂದಷ್ಟು ಜೋಳಿಗೆ ಗೂಡುಗಳನ್ನು ಮರಗಿಡಗಳಿಗೆ ತೂಗು ಹಾಕಿದ್ದೇನೆ. ಅದರಲ್ಲಿ ಈಗ ಎರಡು ಗಬ್ಬಚ್ಚಿಗಳು ಸಂಸಾರ ಹೂಡಿವೆ’ ಎಂದು ಚಂದ್ರಕಾಂತ ಖುಷಿ ಅನುಭವಿಸುತ್ತಾರೆ.

ಚಂದ್ರಕಾಂತ ಮುಗಳಿ ಆಸಕ್ತಿಗೆ ಈಗ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ ಬಿಡುವಿದ್ದಾಗಲೆಲ್ಲಾ ಅವರೂ ಕೂಡ ಚಂದ್ರಕಾಂತ ಅವರೊಂದಿಗೆ ಕೈಜೋಡಿಸುತ್ತಾರೆ. ಶುದ್ಧೀಕರಣ ಘಟಕದ ನೀರನ್ನೇ ಪಕ್ಷಿಗಳಿಗೆ ಬಳಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ, ನಗರದಲ್ಲಿನ ಜಿಲ್ಲಾಡಳಿತ ಆವರಣದಲ್ಲಿ ಬಿರುಬೇಸಿಗೆಯಲ್ಲೂ ಹಕ್ಕಿಗಳ ಇಂಪು ತುಂಬಿದೆ.

**
ಪಕ್ಷಿ ಸಂಕುಲ ಸಂರಕ್ಷಿಸುವ ಹೊಣೆ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಚಂದ್ರಕಾಂತರನ್ನು ಇತರರು ಮಾದರಿಯಾಗಿ ತೆಗೆದುಕೊಳ್ಳಬೇಕು
– ಜೆ.ಮಂಜುನಾಥ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT