ಬೆಂಗಳೂರಿನಲ್ಲಿರುವ ಗರ್ಭಿಣಿಯರಲ್ಲಿ ಖಿನ್ನತೆ

7

ಬೆಂಗಳೂರಿನಲ್ಲಿರುವ ಗರ್ಭಿಣಿಯರಲ್ಲಿ ಖಿನ್ನತೆ

Published:
Updated:
ಬೆಂಗಳೂರಿನಲ್ಲಿರುವ ಗರ್ಭಿಣಿಯರಲ್ಲಿ ಖಿನ್ನತೆ

ನವದೆಹಲಿ: ಬೆಂಗಳೂರಿನಲ್ಲಿರುವ ಸಾಮಾಜಿಕ–ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಗರ್ಭಿಣಿಯರ ಪೈಕಿ ಶೇ 10ರಷ್ಟು ಮಹಿಳೆಯರು ಹೆರಿಗೆಗೂ ಮುನ್ನ ಖಿನ್ನತೆಯಿಂದ ಬಳಲುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಗರ್ಭಿಣಿಯ ಪತಿಯ ಶಿಕ್ಷಣ, ಉದ್ಯೋಗ ಹಾಗೂ ಆ ಕುಟುಂಬದ ಒಟ್ಟು ಆದಾಯ ಖಿನ್ನತೆಗೆ ಕಾರಣವಾಗಿದ್ದು, ಈ ಮಾನಸಿಕ ಸ್ಥಿತಿ ಮಹಿಳೆ ಗರ್ಭ ಧರಿಸಿದ ಮೂರನೇ ತ್ರೈಮಾಸಿಕದಲ್ಲಿಯೇ ಹೆಚ್ಚಾಗಿ ಕಂಡು ಬರುತ್ತದೆ ಎಂದೂ ಅಧ್ಯಯನ ತಿಳಿಸುತ್ತದೆ.

ತಾಯಿಯ ಮಾನಸಿಕ ಆರೋಗ್ಯ ಮತ್ತು ಜನಿಸುವ ಮಗುವಿನ ಆರೋಗ್ಯಕ್ಕೂ ಇರುವ ನಿಕಟ ಸಂಬಂಧ ಕುರಿತಂತೆ ಈ ಅಧ್ಯಯನ ಹೆಚ್ಚು ಬೆಳಕು ಚೆಲ್ಲಿದೆ. ಅಲ್ಲದೇ, ಖಿನ್ನತೆ ಲಕ್ಷಣ ಹೊಂದಿರುವ ಗರ್ಭಿಣಿಯರಲ್ಲಿ ಈ ಮೊದಲೇ ಅವರು ಹೊಂದಿರಬಹುದಾದ ಆರೋಗ್ಯ ಸಂಬಂಧಿ ತೊಂದರೆಗಳು ಉಲ್ಬಣಸುವ ಸಾಧ್ಯತೆ ಸಹ ಹೆಚ್ಚು ಎಂಬ ಎಚ್ಚರಿಕೆಯನ್ನೂ ಈ ವರದಿ ನೀಡಿದೆ.

ಗರ್ಭಾವಸ್ಥೆಯಲ್ಲಿ ದುರ್ಬಲ ಮಾನಸಿಕ ಆರೋಗ್ಯ ಹೊಂದಿರುವ ಮಹಿಳೆಗೆ ಜನಿಸುವ ಮಗುವಿನಲ್ಲಿ ದೈಹಿಕ ನ್ಯೂನತೆ, ಕಡಿಮೆ ತೂಕ ಸಮಸ್ಯೆ, ಭಾವನಾತ್ಮಕ ಸಮಸ್ಯೆ, ಅವಧಿಪೂರ್ವ ಜನನ ಹಾಗೂ ಜನನದ ನಂತರ ಖಿನ್ನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಖಿನ್ನತೆಯ ಲಕ್ಷಣ ಹೊಂದಿರುವ ಗರ್ಭಿಣಿಯರಿಗೆ ಜನಿಸುವ ಮಕ್ಕಳಲ್ಲಿ ವರ್ತನೆ, ಅರಿವು ಮತ್ತು ಭಾಷಾಕೌಶಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತವೆ ಎಂದು ಈ ಹಿಂದೆ ನಡೆದಿರುವ ಅಧ್ಯಯನಗಳೂ ಹೇಳುತ್ತವೆ.

‘ನಿರುದ್ಯೋಗಿ ಪತಿ ಮತ್ತು ಮಾಸಿಕ ಆದಾಯ ₹ 10 ಸಾವಿರಕ್ಕಿಂತ ಕಡಿಮೆ ಹೊಂದಿರುವ 25 ವರ್ಷ ವಯೋಮಾನ ಮೀರಿದ ಮಹಿಳೆ ಗರ್ಭ ಧರಿಸಿದಾಗ ಖಿನ್ನತೆ ಕಾಣಿಸಿಕೊಳ್ಳುವ ಸಂಭವ ಹೆಚ್ಚು. ರಕ್ತಹೀನತೆ, ಅಧಿಕ ರಕ್ತದೊತ್ತಡದಿಂದ ಬಳಲುವ ಹಾಗೂ ಮೊದಲ ಬಾರಿ ಗರ್ಭ ಧರಿಸಿರುವ ಮಹಿಳೆಯರಲ್ಲಿ ಈ ಮಾನಸಿಕ ತೊಂದರೆ ಕಂಡು ಬರುವ ಸಾಧ್ಯತೆ ಇನ್ನೂ ಹೆಚ್ಚು’ ಎಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಕೈಗೊಂಡ ತಂಡದಲ್ಲಿದ್ದ, ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ (ಐಐಪಿಎಚ್‌) ಗಿರಿಧರಬಾಬು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry