ಭಾನುವಾರ, ಮಾರ್ಚ್ 26, 2023
31 °C
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಶೇ 72.7ರಷ್ಟು ಫಲಿತಾಂಶ; ಹುನಗುಂದ ತಾಲ್ಲೂಕು ಪ್ರಥಮ, ಬೀಳಗಿ ಕೊನೆ

25ನೇ ಸ್ಥಾನಕ್ಕೆ ಬಡ್ತಿ ಪಡೆದ ಜಿಲ್ಲೆ

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

25ನೇ ಸ್ಥಾನಕ್ಕೆ ಬಡ್ತಿ ಪಡೆದ ಜಿಲ್ಲೆ

ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಕಳೆದ ಬಾರಿ 33ನೇ ಸ್ಥಾನಕ್ಕೆ ಕುಸಿದಿದ್ದ ಬಾಗಲಕೋಟೆ ಜಿಲ್ಲೆ, ಈ ಬಾರಿ 25ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಇದು ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಉತ್ಸಾಹ ಗರಿಗೆದರಿಸಿದೆ.

ಜಿಲ್ಲೆಗೆ ಈ ಬಾರಿ ಶೇ 72.7ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ 64.53ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಕಳೆದ ವರ್ಷದ ಸಾಧನಾ ಪಟ್ಟಿಯಲ್ಲಿ ಬಾಗಲಕೋಟೆ ಜಿಲ್ಲೆ ಕೊನೆಯ ಸ್ಥಾನಕ್ಕಿಂತ ಒಂದು ಹೆಜ್ಜೆ ಮುಂದೆ ಇತ್ತು. ಕಳಪೆ ಸಾಧನೆಯ ಕಾರಣಕ್ಕೆ ಜಿಲ್ಲೆಯ ಸಾರ್ವಕನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಆಗ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಾರಿಯ ಫಲಿತಾಂಶ ಸಮಾಧಾನ ಮೂಡಿಸಿದೆ.

ವಿಶೇಷವೆಂದರೆ ಈ ಬಾರಿ ಪಾಸ್‌ ಆಗಿ ನಗೆ ಬೀರಿದವರಲ್ಲಿ ಎಂದಿನಂತೆ ವಿದ್ಯಾರ್ಥಿನಿಯರೇ ಹೆಚ್ಚಾಗಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ 25,073 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಅವರಲ್ಲಿ 18,228 ಮಂದಿ ಮುಂದಿನ ತರಗತಿಗೆ ಅವಕಾಶ ಪಡೆದಿದ್ದಾರೆ. 12,855 ಬಾಲಕರ ಪೈಕಿ 8,945 ಮತ್ತು 12,218 ಬಾಲಕಿಯರಲ್ಲಿ 9,283 ಮಂದಿ ತೇರ್ಗಡೆ ಹೊಂದಿದ್ದಾರೆ.

ಹುನಗುಂದಕ್ಕೆ ಅಗ್ರಸ್ಥಾನ: ಹುನಗುಂದ ತಾಲ್ಲೂಕು ಶೇ 82.92 ಫಲಿತಾಂಶ ಪಡೆದು ಜಿಲ್ಲೆಗೆ ಅಗ್ರ ಸ್ಥಾನದ ಶ್ರೇಯ ತನ್ನದಾಗಿಸಿಕೊಂಡಿದೆ. ರಾಜ್ಯಮಟ್ಟದಲ್ಲಿ 79 ನೇ ಸ್ಥಾನ ದೊರೆತಿದೆ. ಅಚ್ಚರಿಯೆಂದರೆ ಕಳೆದ ವರ್ಷ ಮೊದಲ ಸ್ಥಾನ ಪಡೆದಿದ್ದ ಬೀಳಗಿ ತಾಲ್ಲೂಕು ಈ ಬಾರಿ ಶೇ.59.73ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ಕೊನೆಯ ಸ್ಥಾನಕ್ಕೆ ಇಳಿದಿದೆ.

ಸಾಮೂಹಿಕ ಪ್ರಯತ್ನದ ಫಲ: ‘ಈ ಬಾರಿ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡ ಕಾರಣ ಈ ಬಾರಿ ಸಾಧನೆ ಪಟ್ಟಿಯಲ್ಲಿ ಎಂಟು ಅಂಶ ಬಡ್ತಿ ಸಾಧ್ಯವಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಶಿಕ್ಷಕರು ಮಗುವಿನ ಪ್ರಗತಿ ಬಗ್ಗೆ ಪಾಲಕರೊಂದಿಗೆ ಚರ್ಚಿಸುತ್ತಿದ್ದರು. ಮನೆಯಲ್ಲಿ ಓದಿಸುವಂತೆ ಪ್ರೇರೇಪಿಸುತ್ತಿದ್ದರು. ಎಸ್.ಎಸ್.ಎಲ್.ಸಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ವೈಯಕ್ತಿಕ ಕಾಳಜಿ ವಹಿಸಿದ್ದರು.

‘ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ತಜ್ಞರಿಂದ ಆಪ್ತ ಸಮಾಲೋಚನಾ ಸಭೆ ನಡೆಸಿ, ಎರಡು ಅಥವಾ ಎರಡಕ್ಕಿಂತ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ವಿಷಯ ಪರಿಣಿತರಿಂದ ಕಠಿಣ ವಿಷಯಗಳ ಬಗ್ಗೆ ಸಂವಾದವನ್ನು ಏರ್ಪಡಿಸಲಾಗಿತ್ತು’ ಎಂದರು.

‘ರಜಾ ದಿನಗಳಲ್ಲಿ ವಿಶೇಷ ತರಗತಿ ತೆಗೆದುಕೊಂಡು ಪರಿಣಿತ ಶಿಕ್ಷಕರಿಂದ ಉಪನ್ಯಾಸ ಏರ್ಪಡಿಸಲಾಗಿತ್ತು. ರೇಡಿಯೊ ಕಾರ್ಯಕ್ರಮ, ಪರೀಕ್ಷೆ ಭಯ ನಿವಾರಣೆಗೆ ಕ್ರಮ, ತಾಯಂದಿರ ಸಭೆ, ಶಿಕ್ಷಕರ ತರಗತಿ ವೀಕ್ಷಣೆ, ಯೋಗ ತರಬೇತಿ, ರಾತ್ರಿ ವಸತಿ ಶಾಲೆ, ಪಿಕ್ನಿಕ್ ಫಜಲ್, ಮನೆಗೆ ವೇಳಾ ಪತ್ರಿಕೆ ತಲುಪಿಸುವ ಕಾರ್ಯ ಕೈಗೊಳ್ಳಲಾಗಿತ್ತು’ ಎಂದು ಕಾಮಾಕ್ಷಿ ತಿಳಿಸಿದರು.

ಶಾಲೆಗಳಲ್ಲಿ ಇಂದು ಫಲಿತಾಂಶ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸೋಮವಾರ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. ಶಾಲೆಗಳಲ್ಲಿ ಮಂಗಳವಾರ ಪ್ರಕಟಿಸಲಾಗುತ್ತಿದೆ. ಆಯಾ ಶಾಲೆಗಳಿಗೆ ಫಲಿತಾಂಶ ಪಟ್ಟಿಯನ್ನು ಅಂದು ಬೆಳಿಗ್ಗೆ ತಲುಪಿಸಲಾಗುವುದು ಎಂದು ಡಿಡಿಪಿಐ ಎಂ.ಆರ್.ಕಾಮಾಕ್ಷಿ ತಿಳಿಸಿದ್ದಾರೆ.

**

ಪಾಲಕರೊಂದಿಗೆ ನಿರಂತರ ಸಂಪರ್ಕ, ಸರಣಿ ಪರೀಕ್ಷೆಯ ಫಲವಾಗಿ ಈ ಫಲಿತಾಂಶ ದೊರೆತಿದೆ. ಈ ಬಾರಿ ಜೂನ್ ತಿಂಗಳಿನಿಂದಲೇ ಸಿದ್ಧತೆ ಆರಂಭಿಸಲಾಗುವುದು

– ಎಂ.ಆರ್.ಕಾಮಾಕ್ಷಿ, ಡಿಡಿಪಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.