ಶೇಕಡವಾರು ಹೆಚ್ಚಳ, ಸ್ಥಾನ ಕುಸಿತ

7
ಎಸ್‌ಎಸ್‌ಎಲ್‌ಸಿ ಫಲಿತಾಂಶ: ಶೇ 5ರಷ್ಟು ಫಲಿತಾಂಶ ಹೆಚ್ಚಳವಾದರೂ ರಾಜ್ಯದಲ್ಲಿ 8ನೇ ಸ್ಥಾನದಿಂದ 13 ಸ್ಥಾನಕ್ಕೆ ಕುಸಿತ

ಶೇಕಡವಾರು ಹೆಚ್ಚಳ, ಸ್ಥಾನ ಕುಸಿತ

Published:
Updated:
ಶೇಕಡವಾರು ಹೆಚ್ಚಳ, ಸ್ಥಾನ ಕುಸಿತ

ಧಾರವಾಡ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಕೆಲವು ವರ್ಷಗಳಿಂದ ಗಣನೀಯ ಸಾಧನೆ ಮಾಡುತ್ತಿರುವ ಜಿಲ್ಲೆ, ಕಳೆದ ಬಾರಿಗಿಂತ ಈ ಬಾರಿ ಒಟ್ಟಾರೆ ಫಲಿತಾಂಶದಲ್ಲಿ ಹೆಚ್ಚಾಗಿದೆ. ಆದರೆ ರಾಜ್ಯಮಟ್ಟದ ಸ್ಥಾನದಲ್ಲಿ 13ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 5ರಷ್ಟು ಹೆಚ್ಚು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

2017ರಲ್ಲಿ ಜಿಲ್ಲೆಯಲ್ಲಿ ಶೇ 77.29ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು. ಆಗ ಜಿಲ್ಲೆಯ ಸ್ಥಾನ 8 ಆಗಿತ್ತು. ಆದರೆ ಈ ಬಾರಿ ಪಾಸಾದವರ ಸಂಖ್ಯೆ ಶೇ 82.55ಕ್ಕೆ ಹೆಚ್ಚಳವಾಗಿದೆ. ಆದರೆ ರಾಜ್ಯಮಟ್ಟದಲ್ಲಿ ಜಿಲ್ಲೆಯ ಸ್ಥಾನ 13ಕ್ಕೆ ಕುಸಿದಿದೆ.

2015ರಲ್ಲಿ 25ನೇ ಸ್ಥಾನಕ್ಕೆ ತಲುಪಿ ತೀವ್ರ ನಿರಾಸೆ ಮೂಡಿಸಿತ್ತು. ಇದಾದ ನಂತರ 2016ರಲ್ಲಿ 15ನೇ ಸ್ಥಾನಕ್ಕೆ ಏರಿ ಸಮಾಧಾನ ಮೂಡಿಸಿತು. ಕಳೆದ ವರ್ಷ 8ಕ್ಕಿದ್ದ ಜಿಲ್ಲೆಯ ಸ್ಥಾನ, ಈ ವರ್ಷ ಮತ್ತೆ ಕೆಳಗಿಳಿದಿದೆ.

ರಾಜ್ಯದ ಒಟ್ಟು ಸರಾಸರಿ ಫಲಿತಾಂಶ­ಕ್ಕೆ ಹೋಲಿಸಿದರೆ ಜಿಲ್ಲೆಯ ಫಲಿತಾಂಶ ಹೆಚ್ಚೇ ಇದೆ. ಇದು ಸಮಾಧಾನಪಡುವ ವಿಷಯ. ಪರೀಕ್ಷೆ ಬರೆದ 25,579 ಮಕ್ಕಳಲ್ಲಿ 21,116 ಮಕ್ಕಳು ಪಾಸಾಗಿದ್ದಾರೆ. ಹಾಗೆಯೇ ಶೇ 100ರಷ್ಟು ಫಲಿತಾಂಶ ದಾಖಲಿಸಿದ ಶಾಲೆಗಳ ಸಂಖ್ಯೆ 22ರಿಂದ 34ಕ್ಕೆ ಹೆಚ್ಚಳವಾಗಿದೆ. ಶೂನ್ಯ ಫಲಿತಾಂಶ ದಾಖಲಿಸಿದ ಶಾಲೆಗಳ ಸಂಖ್ಯೆ 3ರಿಂದ 5ಕ್ಕೆ ಹೆಚ್ಚಾಗಿವೆ.

ಈ ಕುರಿತು ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್‌.ಎಚ್.ನಾಗೂರ, ‘ಈ ಬಾರಿ ಜಿಲ್ಲೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿರುವುದು ಸಂತಸದ ಸಂಗತಿ. ಜಿಲ್ಲೆಯ ಸ್ಥಾನ ಕುಸಿತ ಕಂಡಿದ್ದರೂ, ಶೇ 100ರಷ್ಟು ಫಲಿತಾಂಶ ದಾಖಲಾದ ಶಾಲೆಗಳು ಹಾಗೂ ಶೇ 70ಕ್ಕಿಂಥ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿರುವುದು ಉತ್ತಮ ಸಾಧನೆ’ ಎಂದರು.

ನಗರದ ಪವನ ಆಂಗ್ಲ ಮಾದ್ಯಮ ಶಾಲೆ ವಿದ್ಯಾರ್ಥಿ ಅಮಿತ ತಳವಾರ 621 ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾನೆ. ಕನ್ನಡ, ಹಿಂದಿ, ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ನೂರಕ್ಕೆ ನೂರು, ಇಂಗ್ಲಿಷ್‌ 123, ಸಮಾಜ ವಿಜ್ಞಾನ 98 ಅಂಕಗಳನ್ನು ಪಡೆದಿದ್ದಾನೆ.

ಸದ್ಯ ಬೆಂಗಳೂರಿನಲ್ಲಿ ಐಐಟಿ ಪ್ರವೇಶ ಪರೀಕ್ಷೆಯ ಬಗ್ಗೆ ತರಬೇತಿ ಪಡೆಯುತ್ತಿರುವ ಅಮಿತ ’ಪ್ರಜಾವಾಣಿ’ಯೊಂದಿಗೆ ಪ್ರತಿಕ್ರಿಯಿಸಿ, ‘ತರಗತಿಯಲ್ಲಿ ಶಿಕ್ಷಕರು ಮಾಡಿದ ಪಾಠ ನನಗೆ ಸಾಕಷ್ಟು ನೆರವಾಯಿತು. ಪ್ರಶ್ನೆಗಳಿಗೆ ಉತ್ತರ ಕಲಿಯುವ ಬದಲು, ನಾನು ವಿಷಯ ಗ್ರಹಿಕೆಗೆ ಹೆಚ್ಚು ಮಹತ್ವ ನೀಡುತ್ತಿದ್ದೆ. ಶಿಕ್ಷಕರೂ ನನಗೆ ಅಷ್ಟೇ ಸಂತೋಷದಿಂದ, ತಲೆಯಲ್ಲಿ ಅಚ್ಚೊತ್ತಿದಂತೆ ಹೇಳಿಕೊಟ್ಟಿದ್ದು ಪರೀಕ್ಷೆಯಲ್ಲಿ ನೆರವಿಗೆ ಬಂತು’ ಎಂದನು.

‘ಪರೀಕ್ಷೆಗೆ 45 ದಿನ ಇರುವಾಗ ನಾನು ಓದಲು ಆರಂಭಿಸಿದೆ. ನಿರ್ದಿಷ್ಟ ವಿಷಯಗಳಿಗೆ ಇಂತಿಷ್ಟು ಕಾಲವಕಾಶ ಎಂದು ನಿಗದಿಪಡಿಸಿಕೊಂಡಿದ್ದೆ. ಅದರಂತೆಯೇ ಓದಿದೆ. ಪಠ್ಯಪುಸ್ತಕ ಹೊರತುಪಡಿಸಿ, ನೋಟ್ಸ್‌, ಗೈಡ್ಸ್ ಇತ್ಯಾದಿಗಳನ್ನು ಓದಲಿಲ್ಲ. ಪೋಷಕರು ಪ್ರೋತ್ಸಾಹ ನನಗೆ ಈ ಸಾಧನೆಗೆ ಕಾರಣವಾಯಿತು. ಸಮಾಜವಿಜ್ಞಾನ ವಿಷಯದಲ್ಲಿ ಇನ್ನೂ ಒಂದು ಅಂಕ ಬರಬೇಕಿತ್ತು. ಅದನ್ನು ಫೋಟೊಪ್ರತಿ ತೆಗೆಸಿ ನೋಡುತ್ತೇನೆ’ ಎಂದು ವಿಷಯ ಹಂಚಿಕೊಂಡನು.

‘ಬಾಲ್ಯದಿಂದ ವಾಹನಗಳ ಕುರಿತು ಆಸಕ್ತಿ ಹೆಚ್ಚು. ಹೀಗಾಗಿ ಜೆಇಇ ಪರೀಕ್ಷೆ ಎದುರಿಸಿ ದೇಶದ ಉತ್ತಮ ಐಐಟಿ ಸಂಸ್ಥೆಯಲ್ಲಿ ಆಟೊಬೊಮೈಲ್‌ನಲ್ಲಿ ಬಿ.ಟೆಕ್ ಮಾಡಬೇಕೆಂದಿದ್ದೇನೆ. ಜತೆಗೆ ನನಗೆ ಸಾಹಿತ್ಯ ರಚಿಸುವ ಹವ್ಯಾಸವೂ ಇದೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಸಾಹಿತ್ಯ ರಚಿಸುತ್ತಿದ್ದೇನೆ’ ಎಂದು ಅಮಿತ್ ಹೇಳಿದನು.

ಅಮಿತ ತಂದೆ ಡಾ. ಎ.ಎಸ್.ತಳವಾರ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಂಖ್ಯಾ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದಾರೆ. ತಾಯಿ ಗೀತಾ ತಳವಾರ ಗೃಹಿಣಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry