ಯಾರಿಗೆ ಒಲಿಯಲಿದೆ ರಾಜಧಾನಿಯ ‘ಹೃದಯ’?

7

ಯಾರಿಗೆ ಒಲಿಯಲಿದೆ ರಾಜಧಾನಿಯ ‘ಹೃದಯ’?

Published:
Updated:
ಯಾರಿಗೆ ಒಲಿಯಲಿದೆ ರಾಜಧಾನಿಯ ‘ಹೃದಯ’?

ಉತ್ತರ–ದಕ್ಷಿಣದ ಮಧ್ಯೆ ಹೆಬ್ಬಾವಿನಂತೆ ಮಲಗಿರುವ ಬೆಂಗಳೂರು ‘ಕೇಂದ್ರ’ ಪ್ರದೇಶ ಮಹಾನಗರದ ‘ಹೃದಯ’.

ಇಡೀ ರಾಜ್ಯವನ್ನು ತನ್ನ ಅಂಗೈಯಲ್ಲಿ ತೂಗುವ, ಆಡಿಸಬಹುದಾದ ಶಕ್ತಿ ಸ್ಥಳವನ್ನೂ ಒಡಲೊಳಗೆ ಇಟ್ಟುಕೊಂಡಿರುವ ಈ ಸರಹದ್ದಿನಲ್ಲಿ 9 ವಿಧಾನಸಭಾ ಕ್ಷೇತ್ರಗಳಿವೆ. ಶ್ರೀಮಂತಿಕೆ ಸಾರುವ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್‌ ಹಾಗೂ ವಿಶ್ವದ ಐ.ಟಿ. ಕಂಪನಿಗಳ ನೆಲೆದಾಣಗಳು, ಮಾರುಕಟ್ಟೆ ಪ್ರದೇಶವಾಗಿರುವ ಚಿಕ್ಕಪೇಟೆ, ಅವೆನ್ಯೂ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಕತ್ತಲೆ ಕಗ್ಗತ್ತಲೆಯಲ್ಲೇ ಇಂದಿಗೂ ಜನ ಕಡು ಕಷ್ಟದಲ್ಲಿ ಬದುಕುತ್ತಿರುವ 30ಕ್ಕೂ ಹೆಚ್ಚು ಕೊಳಚೆ ಪ್ರದೇಶಗಳನ್ನೂ ಈ ಪ್ರದೇಶ ಒಳಗೊಂಡಿದೆ.

2013ರಲ್ಲಿ ನಡೆದ ಚುನಾವಣೆಯಲ್ಲಿ 5ರಲ್ಲಿ ಕಾಂಗ್ರೆಸ್‌, 3ರಲ್ಲಿ ಬಿಜೆಪಿ, 1ರಲ್ಲಿ ಜೆಡಿಎಸ್‌ ಗೆದ್ದಿದ್ದವು. ಈ ಬಾರಿ ಪಕ್ಷಗಳಲ್ಲಿನ ಪರಿಸ್ಥಿತಿ ಬದಲಾಗಿದೆ. ಅಲ್ಲಿದ್ದವರು ಇಲ್ಲಿಗೆ, ಇಲ್ಲಿದ್ದವರು ಅಲ್ಲಿಗೆ ಜಿಗಿದಿದ್ದಾರೆ. ಆದರೆ, ಇದ್ದೊಬ್ಬ ಶಾಸಕ ಕಾಂಗ್ರೆಸ್ ತೆಕ್ಕೆ ಸೇರಿಕೊಂಡಿರುವುದರಿಂದ ಜೆಡಿಎಸ್‌ ‘ಕೇಂದ್ರ’ದಲ್ಲಿ ಬಲ ಕಳೆದುಕೊಳ್ಳುವ ಭಯದಲ್ಲಿದೆ.

ಒಂದು ಬಾರಿ ಸೋತಿದ್ದು ಬಿಟ್ಟರೆ ಆರು ಬಾರಿ ಗೆದ್ದಿರುವ ರೋಷನ್ ಬೇಗ್‌ ಈಗ ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ. 2008ರಲ್ಲಿ ಹೆಬ್ಬಾಳದಲ್ಲಿ ನಿಂತು ಗೆದ್ದು ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಈ ಬಾರಿ ಕ್ಷೇತ್ರ ಕಳೆದುಕೊಂಡು ಶಿವಾಜಿನಗರಕ್ಕೆ ವಲಸೆ ಬಂದಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಅವರು ಇಲ್ಲಿಂದಲೇ ಗೆದ್ದಿದ್ದರು. ಇಬ್ಬರ ಮತಬ್ಯಾಂಕ್ ಬೇರೆಬೇರೆಯಾದರೂ ಜನಪ್ರಿಯತೆಯನ್ನೇ ಬಂಡವಾಳವಾಗಿಸಿ, ವಿಧಾನಸೌಧದ ಮೆಟ್ಟಿಲು ಏರಲು ಇಬ್ಬರೂ ಹರಸಾಹಸ ಪಡುತ್ತಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಭಾರತೀ ನಗರದಿಂದ ಸರ್ವಜ್ಞ ನಗರಕ್ಕೆ ತಮ್ಮ ಕಾರ್ಯಕ್ಷೇತ್ರ ಬದಲಾಯಿಸಿದ ಕೆ.ಜೆ. ಜಾರ್ಜ್‌ ಈ ಬಾರಿ ನಿರಾಳರಾಗಿದ್ದಾರೆ. ಎರಡು ಚುನಾವಣೆಗಳಲ್ಲಿ ಇವರಿಗೆ ಪೈಪೋಟಿ ನೀಡಿದ್ದ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಯುದ್ಧಕ್ಕೆ ಮೊದಲೇ ಶಸ್ತ್ರ ಕೆಳಗಿಟ್ಟಿದ್ದರಿಂದಾಗಿ ಜಾರ್ಜ್‌ಗೆ ತಲೆನೋವು ಕಡಿಮೆಯಾಯಿತು. ಹಾಗೆಂದು ಗೆಲುವೇನೂ ಸಲೀಸಲ್ಲ.

ನಾಲ್ಕು ಬಾರಿ ಗೆದ್ದಿರುವ ದಿನೇಶ್‌ ಗುಂಡೂರಾವ್‌, ‘ಗಾಂಧಿ’ ನಗರದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿ ಹಿರಿಯ ನಾಯಕ ರಾಮಚಂದ್ರ ಗೌಡರ ಪುತ್ರ ಸಪ್ತಗಿರಿ ಗೌಡ ಇವರಿಗೆ ಎದುರಾಳಿ. ಕೊನೇ ಗಳಿಗೆಯಲ್ಲಿ ಕಣಕ್ಕೆ ಧುಮುಕಿರುವ ಸಪ್ತಗಿರಿ ಗೌಡ, ಬಿರುಸಿನಿಂದ ಓಡಾಡುತ್ತಿದ್ದಾರೆ. ಇಲ್ಲಿ ಜೆಡಿಎಸ್‌ ಪಡೆವ ಮತಗಳು ಕೂಡ ನಿರ್ಣಾಯಕವಾಗಿವೆ. ತಮ್ಮದೇ ವರ್ಚಸ್ಸು ಹೊಂದಿರುವ ದಿನೇಶ್‌, ಕೊಳೆಗೇರಿಗಳು, ಮಧ್ಯಮವರ್ಗದ ಮತಗಳು ಹಾಗೂ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿದ್ದಾರೆ.

2013ರಲ್ಲಿ ರಾಜಾಜಿನಗರ ಕ್ಷೇತ್ರ ದೊಡ್ಡ ಮಟ್ಟದ ಸುದ್ದಿಯಲ್ಲಿತ್ತು. ಬಿಜೆಪಿಯ ಹಾಲಿ ಶಾಸಕ ಸುರೇಶ್ ಕುಮಾರ್ ಎದುರು ಕೆಜೆಪಿಯಿಂದ ಶೋಭಾ ಕರಂದ್ಲಾಜೆ, ಕಾಂಗ್ರೆಸ್‌ನಿಂದ ಅಂದು ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಮಂಜುಳಾ ನಾಯ್ಡು ಕಣಕ್ಕೆ ಇಳಿದಿದ್ದರು. ಈ ಬಾರಿ ಮಾಜಿ ಮೇಯರ್‌ ಪದ್ಮಾವತಿ ಕಾಂಗ್ರೆಸ್ ಹುರಿಯಾಳು. ಕಾಂಗ್ರೆಸ್‌ನಿಂದ ಕೊನೇ ಗಳಿಗೆಯಲ್ಲಿ ವಲಸೆ ಬಂದಿರುವ ಎಚ್.ಎಂ. ಕೃಷ್ಣಮೂರ್ತಿ ಜೆಡಿಎಸ್‌ನ ಅಭ್ಯರ್ಥಿ. ಪದ್ಮಾವತಿ ಹಿಂದಿರುವ ‘ಬಲಾಢ್ಯ’ರು ಒಡ್ಡುತ್ತಿರುವ ಸವಾಲನ್ನು ಸುರೇಶ್‌ ಕುಮಾರ್‌ ಎದುರಿಸಬೇಕಾಗಿದೆ. ಹೀಗಾಗಿ, ಗೆಲುವಿಗಾಗಿ ಪೈಪೋಟಿ ತೀವ್ರಗೊಂಡಿದೆ.

ಚಾಮರಾಜಪೇಟೆ ಕ್ಷೇತ್ರದಲ್ಲಿ ತಮ್ಮದೇ ‘ಪ್ರಭಾವ’ ಹೊಂದಿರುವ ಜಮೀರ್ ಅಹಮದ್ (ಎರಡು ಬಾರಿ ಜೆಡಿಎಸ್ ಶಾಸಕ) ಈಗ ಕಾಂಗ್ರೆಸ್ ಹುರಿಯಾಳು. ಕಾಂಗ್ರೆಸ್‌ನಲ್ಲಿದ್ದ ಅಲ್ತಾಫ್‌ ಅವರನ್ನು ಕರೆತಂದ ದೇವೇಗೌಡರು, ತಮ್ಮ ವಿರುದ್ಧ ಸಡ್ಡು ಹೊಡೆದಿರುವ ಜಮೀರ್‌ಗೆ ಪಾಠ ಕಲಿಸಲು ಟೊಂಕಕಟ್ಟಿ ನಿಂತಿದ್ದಾರೆ. ಕ್ಷೇತ್ರದಲ್ಲಿ ಇಟ್ಟುಕೊಂಡಿರುವ ‘ಹವಾ’ದ ಬಲವನ್ನೇ ನೆಚ್ಚಿಕೊಂಡ ಜಮೀರ್‌, ಇನ್ನೂ ಕ್ಷೇತ್ರದಲ್ಲಿ ಪ್ರಚಾರಕ್ಕೆ ಕಾಲಿಟ್ಟಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ರಾಜ್ಯದಾದ್ಯಂತ ಓಡಾಡುತ್ತಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಲಕ್ಷ್ಮಿನಾರಾಯಣ ಅವರು ಕೀಳುವ ಮತಗಳು ಫಲಿತಾಂಶವನ್ನು ನಿರ್ಧರಿಸಲಿವೆ.

ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆರ್.ವಿ. ದೇವರಾಜ್‌ ಗೆಲುವಿಗಾಗಿ ಶ್ರಮ ಹಾಕುತ್ತಿದ್ದಾರೆ. 2008ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಹೇಮಚಂದ್ರ ಸಾಗರ್‌ ಈ ಸಲ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದಾರೆ. ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಉದ್ಯಮಿ ಉದಯ ಗರುಡಾಚಾರ್‌ ಬಿಜೆಪಿ ಅಭ್ಯರ್ಥಿ. ಹಿಂದಿನ ಬಾರಿ ಜಮೀರ್ ಜತೆಗಿನ ಸಖ್ಯ ದೇವರಾಜ್ ದಡ ಹತ್ತಿಸಿತ್ತು. ಆದರೆ, ಈಗ ಜಮೀರ್ ಜೊತೆಗೇ ಇರುವುದರಿಂದ ದೇವರಾಜ್‌ ಅವರಿಗೆ ಬಲ ಬಂದಂತಾಗಿದೆ. ಹಾಗಿದ್ದರೂ ‘ಸ್ವಪ‍ಕ್ಷೀಯರ’ ಒಳತಂತ್ರ ಹಾಗೂ ಎದುರಾಳಿಗಳ ಪೈಪೋಟಿ ಅವರಿಗೆ ಸವಾಲಾಗಿದೆ.

ಶಾಂತಿನಗರದಲ್ಲಿ ಕಾಂಗ್ರೆಸ್‌ನ ಹ್ಯಾರಿಸ್‌ಗೆ ಇದು ಮೂರನೇ ಚುನಾವಣೆ. ತಮ್ಮ ಪುತ್ರ ಮೊಹಮದ್ ನಲಪಾಡ್‌ ತಂಡ, ಉದ್ಯಮಿ ಪುತ್ರ ವಿದ್ವತ್‌ ಮೇಲೆ ನಡೆಸಿದ ಹಲ್ಲೆ ಇಡೀ ರಾಜ್ಯದಲ್ಲಿ ಸುದ್ದಿಯಾಗಿತ್ತು. ಈಗ ಅದು ಚುನಾವಣಾ ವಿಷಯವೇ ಆಗಿಲ್ಲ. ಬಿಜೆಪಿಯ ವಾಸುದೇವ ಮೂರ್ತಿ, ಬಿಜೆಪಿಯಿಂದ ಜೆಡಿಎಸ್‌ಗೆ ಹೋಗಿರುವ ಶ್ರೀಧರ ರೆಡ್ಡಿ ಇಲ್ಲಿ ಎದುರಾಳಿಗಳು.

ಮಹದೇವಪುರ ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರಿನಲ್ಲೇ ಅತಿ ಹೆಚ್ಚು (5.15 ಲಕ್ಷ) ಮತದಾರರು ಇರುವ ಕ್ಷೇತ್ರ ಇದು. ಇದರಲ್ಲಿ ಹೊಸ ಮತದಾರರ ಸಂಖ್ಯೆ 36,902 ಇದೆ. ಹಿಂದಿನ ಚುನಾವಣೆಯಲ್ಲಿ ಸ್ಪರ್ಧೆಯೊಡ್ಡಿದ್ದ ಎ.ಸಿ. ಶ್ರೀನಿವಾಸ್ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ. ಇಬ್ಬರ ಮಧ್ಯೆ ಸ್ಪರ್ಧೆ ಎನಿಸಿದರೂ ಹೊಸ ಮತದಾರರು ನಿರ್ಣಾಯಕ ಎಂಬ ಸ್ಥಿತಿ ಇದೆ.

ಸಿ.ವಿ.ರಾಮನ್‌ ನಗರದಲ್ಲಿ ಮತ್ತೊಮ್ಮೆ ಆಯ್ಕೆ ಬಯಸಿರುವ ಬಿಜೆಪಿಯ ಎಸ್‌.ರಘು ಅವರಿಗೆ ಮೇಯರ್ ಸಂಪತ್ ರಾಜ್‌ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಐದು ವರ್ಷ ಕ್ಷೇತ್ರ ಬಿಟ್ಟು ಆಚೆಗೆ ಬರದ ರಘು ತಮ್ಮ ಮತ ಬಲವನ್ನು ಕ್ರೋಡೀಕರಿಸಿಕೊಂಡಿದ್ದಾರೆ. ದೇವರಜೀವನಹಳ್ಳಿ ವಾರ್ಡ್‌ನಿಂದ ಬಿಬಿಎಂಪಿಗೆ ಆಯ್ಕೆ

ಯಾಗಿರುವ ಸಂಪತ್‌ ಅವರಿಗೆ ಇದು ಹೊಸ ಕ್ಷೇತ್ರ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪೈಪೋಟಿ ಕೊಟ್ಟಿದ್ದ ಪಿ. ರಮೇಶ್ ಈಗ ಜೆಡಿಎಸ್ ಹುರಿಯಾಳು. ಇಲ್ಲಿ ತ್ರಿಕೋನ ಸ್ಪರ್ಧೆ ಇದೆ.

* ಕೊಳೆಗೇರಿಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲು ಇದುವರೆಗೆ ಆಳಿದವರಿಗೆ ಸಾಧ್ಯವಾಗಿಲ್ಲ. ‘ಕೇಂದ್ರ’ ವ್ಯಾಪ್ತಿಯ ಎಲ್ಲ ಕ್ಷೇತ್ರಗಳಲ್ಲಿ ರೌಡಿಗಳ ಕಾಟ ವಿಪರೀತವಾಗಿದೆ. ಅದನ್ನು ನಿಯಂತ್ರಣ ಮಾಡಲು ಮುಂದಾಗುತ್ತಿಲ್ಲ. ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ ಕೇವಲ ಭರವಸೆಯಾಗಿಯೇ ಉಳಿದಿದೆ

–ಜಿ. ಜ್ಞಾನೇಶ, ರಾಜಾಜಿನಗರ ಕ್ಷೇತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry