ಕರಡು ಸಲ್ಲಿಸಲು ಕೇಂದ್ರಕ್ಕೆ ಗಡುವು

7
ತಮಿಳುನಾಡಿಗೆ ಕಾವೇರಿ ನೀರು; ಸದ್ಯಕ್ಕೆ ಕರ್ನಾಟಕ ನಿರಾಳ

ಕರಡು ಸಲ್ಲಿಸಲು ಕೇಂದ್ರಕ್ಕೆ ಗಡುವು

Published:
Updated:
ಕರಡು ಸಲ್ಲಿಸಲು ಕೇಂದ್ರಕ್ಕೆ ಗಡುವು

ನವದೆಹಲಿ: ಕಾವೇರಿ ನೀರು ಹಂಚಿಕೆ ಕುರಿತ ಯೋಜನೆ (ಸ್ಕೀಂ)ಯ ಕರಡು ಸಲ್ಲಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಆರು ದಿನಗಳ ಗಡುವು ನೀಡಿ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶಿಸಿದೆ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರಿಂದ 4 ಟಿಎಂಸಿ ಅಡಿ ಕಾವೇರಿ ನೀರು ಹರಿಸುವಂತೆ ಸೂಚಿಸಬೇಕು ಎಂಬ ತಮಿಳುನಾಡಿನ ಮನವಿಯನ್ನು ಕೋರ್ಟ್‌ ಮಾನ್ಯ ಮಾಡದ್ದರಿಂದ ಕರ್ನಾಟಕ ನಿರಾಳವಾದಂತಾಗಿದೆ.

ತಮಿಳುನಾಡು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು, ಮೇ 14ರಂದು ನಡೆಯಲಿರುವ ವಿಚಾರಣೆಯ ವೇಳೆ ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಯವರೇ ಖುದ್ದಾಗಿ ಹಾಜರಾಗಿ ಯೋಜನೆಯ ಕರಡು ಸಲ್ಲಿಸಬೇಕು ಎಂದು ಸೂಚಿಸಿತು.

ಯೋಜನೆಯ ಕರಡು ಈಗಾಗಲೇ ಬಹುತೇಕ ಸಿದ್ಧಗೊಂಡಿದೆ. ಆದರೆ, ಕರ್ನಾಟಕದಲ್ಲಿ ಚುನಾವಣೆ ಇರುವುದರಿಂದ ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತಿಲ್ಲ. ಚುನಾವಣೆಯ ನಂತರವೇ ಕರಡನ್ನು ಸಲ್ಲಿಸಲು ಅವಕಾಶ ನೀಡಬೇಕು ಎಂಬ ಕೇಂದ್ರ ಸರ್ಕಾರದ ಮನವಿಗೆ ಸ್ಪಂದಿಸಿದ ಪೀಠ, ಮೇ 14ರ ಗಡುವು ನೀಡಿತು.

‘ಸುಪ್ರೀಂ ಕೋರ್ಟ್‌ ಕಳೆದ ಫೆಬ್ರುವರಿ 16ರಂದೇ ತೀರ್ಪು ನೀಡುವ ಮೂಲಕ ನೀರು ಹಂಚಿಕೆ ಕುರಿತ ಯೋಜನೆ ರೂಪಿಸುವಂತೆ ಸೂಚಿಸಿದ್ದರೂ, ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ’ ಎಂದು ತಮಿಳುನಾಡು ಪರ ವಕೀಲ ದೂರಿದರು.

‘ಹೌದು. ಮೇಲ್ನೋಟಕ್ಕೆ ಕೇಂದ್ರ ನ್ಯಾಯಾಂಗ ನಿಂದನೆ ಎಸಗಿರುವುದು ಸಾಬೀತಾಗಿದೆ’ ಎಂದ ಪೀಠ, ‘ಎರಡೂ ರಾಜ್ಯಗಳಲ್ಲಿನ ಬೆಳೆಗಳ ಸ್ಥಿತಿಗತಿ, ಕುಡಿಯುವ ನೀರಿನ ಅಗತ್ಯ ಮನಗಂಡು ಯೋಜನೆ ಸಿದ್ಧಪಡಿಸಿ’ ಎಂದು ಹೇಳಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry