ಸೋಮವಾರ, ಮಾರ್ಚ್ 27, 2023
24 °C
ಜಾಲಹಳ್ಳಿ ‘ಎಸ್ಎಲ್‌‌‌ವಿ’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಶೋಧ

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗುರುತಿನ ಚೀಟಿಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗುರುತಿನ ಚೀಟಿಗಳು ಪತ್ತೆ

ಬೆಂಗಳೂರು: ಜಾಲಹಳ್ಳಿಯ ‘ಎಸ್ಎಲ್‌‌‌ವಿ’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 9,746 ಚುನಾವಣಾ ಗುರುತಿನ ಚೀಟಿಗಳು ಮಂಗಳವಾರ ಪತ್ತೆ ಆಗಿವೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ ನಂಬರ್ 115ರಲ್ಲಿ ಗುರುತಿನ ಚೀಟಿಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಬಿಜೆಪಿಯ ಕಾರ್ಯಕರ್ತರು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಫ್ಲ್ಯಾಟ್‌ಗೆ ನುಗ್ಗಿದ್ದರು. ಅದೇ ವೇಳೆ ಇಬ್ಬರು ಮಹಿಳೆಯರು ಓಡಿಹೋದರು. ನಾಲ್ವರನ್ನು ಹಿಡಿದುಕೊಂಡ ಕಾರ್ಯಕರ್ತರು, ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಅಧಿಕಾರಿಗಳು, ಫ್ಲ್ಯಾಟ್‌ನೊಳಗೆ ಹೋಗಿ ಪರಿಶೀಲನೆ ಆರಂಭಿಸಿದರು. ಗುರುತಿನ ಚೀಟಿಗಳನ್ನು ಎಣಿಸುವ ಕೆಲಸ ರಾತ್ರಿಯಿಡಿ ನಡೆಯಿತು.

‘ಫ್ಲ್ಯಾಟ್‌ನಲ್ಲಿರುವ 9,746 ಗುರುತಿನ ಚೀಟಿಗಳೆಲ್ಲವೂ ಅಸಲಿ ಆಗಿವೆ. ಪಕ್ಷವೊಂದರ ಅಭ್ಯರ್ಥಿ ಪರವಿರುವ ಕೆಲ ಏಜೆಂಟರು, ಮತದಾರರಿಗೆ ಹಣದ ಆಮಿಷವೊಡ್ಡಿ ಗುರುತಿನ ಚೀಟಿಗಳನ್ನು ಪಡೆದುಕೊಂಡಿರುವ ಮಾಹಿತಿ ಇದೆ’ ಎಂದು ವಿಚಕ್ಷಣಾ ದಳದ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ಮಾಹಿತಿ ರವಾನಿಸಿದ್ದರು.

ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ಅವರೇ ರಾತ್ರಿ 9 ಗಂಟೆಗೆ ಫ್ಲ್ಯಾಟ್‌ಗೆ ಬಂದು ಪರಿಶೀಲನಾ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಅವರ ಜತೆಗೆ ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ಕುಮಾರ್‌ ಇದ್ದರು.

ಒಂದು ಚೀಟಿಗೆ ₹1,000: ‘ಮತದಾರರನ್ನು ಸೆಳೆಯಲೆಂದೇ ಕೆಲ ಅಭ್ಯರ್ಥಿಗಳು, ಏಜೆಂಟರನ್ನು ನೇಮಕ ಮಾಡಿಕೊಂಡಿದ್ದಾರೆ. ಆ ಏಜೆಂಟರು, ಒಬ್ಬ ಮತದಾರರಿಗೆ ₹1,000 ಕೊಟ್ಟು ಗುರುತಿನ ಚೀಟಿಗಳನ್ನು ಪಡೆದುಕೊಂಡಿರುವ ಮಾಹಿತಿ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕೊಳೆಗೇರಿ ಪ್ರದೇಶದಲ್ಲಿ ವಾಸವಿರುವ ಮತದಾರರಿಂದಲೇ ಅತೀ ಹೆಚ್ಚು ಚೀಟಿಗಳನ್ನು ಪಡೆಯಲಾಗಿದೆ. ಅವುಗಳನ್ನೇ ಫ್ಲ್ಯಾಟ್‌ನಲ್ಲಿ ಸಂಗ್ರಹಿಡಲಾಗಿದೆ. ಮತದಾನದ ದಿನದಂದೇ ಆ ಚೀಟಿಗಳನ್ನು ಮತದಾರರಿಗೆ ಕೊಟ್ಟು ತಮ್ಮ ಪರ ಅಭ್ಯರ್ಥಿಗೆ ಮತ ಹಾಕಿಸಲು ಏಜೆಂಟರು ಯೋಚಿಸಿದ್ದರು’ ಎಂದರು.

‘ರಾತ್ರಿಯಾದರೂ ಚೀಟಿಗಳ ಎಣಿಕೆ ಕಾರ್ಯ ಮುಗಿದಿಲ್ಲ. ಯಾವ ಅಭ್ಯರ್ಥಿಗಳ ಪರವಾಗಿ ಈ ಚೀಟಿಗಳನ್ನು ಸಂಗ್ರಹಿಸಲಾಗಿತ್ತು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಅವರು ಹೇಳಿದರು.

ಕಾರ್ಯಕರ್ತರ ಪ್ರತಿಭಟನೆ: ಅಪಾರ್ಟ್‌ಮೆಂಟ್‌ ಸಮುಚ್ಚಯದ ಎದುರು ಸೇರಿದ್ದ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು, ಆರೋಪ– ಪ್ರತ್ಯಾರೋಪ ಮಾಡುತ್ತ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

‘ಕಾಂಗ್ರೆಸ್ ಪಕ್ಷದವರೇ ಮತದಾರರಿಗೆ ಆಮಿಷವೊಡ್ಡಿ ಗುರುತಿನ ಚೀಟಿಗಳನ್ನು ಸಂಗ್ರಹಿಸಿದ್ದಾರೆ. ಅಕ್ರಮದ ಮೂಲಕ ಮತ ಪಡೆಯಲು ಮುಂದಾಗಿರುವ ಆ ಪಕ್ಷದ  ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರು, ‘ಚೀಟಿ ಜಾಲದ ಹಿಂದೆ ಬಿಜೆಪಿಯವರ ಕೈವಾಡವಿದೆ. ಆ ಪಕ್ಷದ ಅಭ್ಯರ್ಥಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.

ಸ್ಥಳದಲ್ಲಿದ್ದ ಪೊಲೀಸರು, ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸದಾನಂದಗೌಡ, ದೇವೇಗೌಡ ಭೇಟಿ

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಭೇಟಿ ನೀಡಿದರು.

ಗುರುತಿನ ಚೀಟಿ ಸಂಗ್ರಹಿಸಿಟ್ಟಿದ್ದ ಫ್ಲ್ಯಾಟ್‌ಗೆ ಹೋಗಿ, ಅಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡರು. ‘ಚೀಟಿ ಸಂಗ್ರಹಿಸಿಟ್ಟಿದ್ದವರು ಹಾಗೂ ಅದಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರಿಬ್ಬರು ಒತ್ತಾಯಿಸಿದರು.

7 ಮಂದಿ ವಶಕ್ಕೆ

ಗುರುತಿನ ಚೀಟಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಏಳು ಮಂದಿಯನ್ನು ಜಾಲಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಅನುಮಾನದಡಿ ಏಳು ಮಂದಿಯನ್ನು ವಿಚಾರಣೆ ನಡೆಸುತ್ತಿದ್ದೇವೆ. ಅವರ ಜತೆಗೆ ಮತ್ತಷ್ಟು ಮಂದಿಯನ್ನು ವಶಕ್ಕೆ ಪಡೆಯಬೇಕಿದೆ. ನಂತರವೇ ಪ್ರಕರಣದ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ’ ಎಂದು ಪೊಲೀಸರು ತಿಳಿಸಿದರು.

ನಕಲಿ ‘ಅರ್ಜಿ ನಮೂನೆ 6’ ಪತ್ತೆ

ಬೆಂಗಳೂರು: ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ  ಗುರುತಿನ ಚೀಟಿಗಳು ಪತ್ತೆಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಪ್ರತ್ಯೇಕ ತಂಡ ರಚಿಸಿದ್ದೇವೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

ನಗರದಲ್ಲಿ ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 4,71,459 ಮತದಾರರಿದ್ದಾರೆ. ಫ್ಲ್ಯಾಟ್‌ನಲ್ಲಿ ಎರಡು ಟ್ರಂಕ್‌ಗಳು ಪತ್ತೆ ಆಗಿವೆ. ಅವುಗಳಲ್ಲೇ ಗುರುತಿನ ಚೀಟಿಗಳನ್ನು ಸಂಗ್ರಹಿಸಿಡಲಾಗಿದೆ. ಅದರ ಜತೆಗೆ ಹಾಲಿ ಶಾಸಕರ ಭಾವಚಿತ್ರವಿರುವ ಕರಪತ್ರಗಳೂ ಸಿಕ್ಕಿವೆ’ ಎಂದರು.

’ಎಲ್ಲ ಚೀಟಿಗಳು ಅಸಲಿಯದ್ದಾಗಿವೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಬಳಸುವ ಲಕ್ಷದಷ್ಟು ‘ನಮೂನೆ–6’ ದೊರಕಿವೆ. ಅವುಗಳೆಲ್ಲವೂ ನಕಲಿ ಆಗಿವೆ. ಅಪಾರ್ಟ್‌ಮೆಂಟ್‌ ಸಮುಚ್ಚಯದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪರಿಶೀಲನೆ ಮುಂದುವರಿದಿದೆ’ ಎಂದು ಸಂಜೀವ್‌ಕುಮಾರ್‌ ತಿಳಿಸಿದರು.

‘ಮಂಜುಳಾ ನಂಜಮೂರಿ ಎಂಬುವರಿಗೆ ಸೇರಿದ್ದ ಫ್ಲ್ಯಾಟ್‌ ಇದಾಗಿದ್ದು, ರಾಕೇಶ್‌ ಎಂಬುವರಿಗೆ ಬಾಡಿಗೆಗೆ ಕೊಡಲಾಗಿದೆ. ಅವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.