ಮಂಗಳವಾರ, ಮಾರ್ಚ್ 2, 2021
28 °C
ಕೇಳುವವರಿಲ್ಲ ಬಡಾವಣೆಯ ಬವಣೆ

ಸಮಸ್ಯೆ ಕೇಳುವ ಪ್ರತಿನಿಧಿಗಳೆಲ್ಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ಯೆ ಕೇಳುವ ಪ್ರತಿನಿಧಿಗಳೆಲ್ಲಿ?

ಗುಂಡ್ಲುಪೇಟೆ: ತಾಲ್ಲೂಕಿನ ಅಭಿವೃದ್ಧಿ ಹರಿಕಾರ ಎಚ್.ಎಸ್.ಮಹದೇವಪ್ರಸಾದ್ ಅವರ ಹೆಸರಿನಲ್ಲಿರುವ ಬಡಾವಣೆಯಲ್ಲಿ ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿದ್ದು, ಸಮಸ್ಯೆಗಳನ್ನು ಪರಿಹರಿಸದ ಜನಪ್ರತಿನಿಧಿಗಳ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದ 1ನೇ ವಾರ್ಡ್ ವ್ಯಾಪ್ತಿಗೆ ಬರುವ ಎಚ್.ಎಸ್.ಮಹದೇವಪ್ರಸಾದ್ ನಗರ ಬಡಾವಣೆಯಲ್ಲಿ, ರಸ್ತೆ ಭಾಗ್ಯ ಸಿಕ್ಕಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳ ಮುಂದೆಯೇ ನೀರು ನಿಲ್ಲುವಂತಾಗಿದೆ. ಹದಿನೈದು ದಿನಗಳಿಗೊಮ್ಮೆ ನೀರು ಬಿಡುತ್ತಿರುವುದರಿಂದ ಇಲ್ಲಿನ ಜನ ಹಣ ಕೊಟ್ಟು ಟ್ಯಾಂಕರ್ ನೀರನ್ನು ಬಳಸುವಂತಾಗಿದೆ. ಸುಮಾರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಸವಿರುವ ಬಡಾವಣೆಯಲ್ಲಿ ಹತ್ತಾರು ವರ್ಷಗಳಿಂದ ರಸ್ತೆಗಳನ್ನು ನಿರ್ಮಾಣ ಮಾಡಿಲ್ಲ. ಈ ಬಡಾವಣೆಯ ಮುಖ್ಯ ರಸ್ತೆಯೊಂದನ್ನು ಬಿಟ್ಟರೆ ಉಳಿದಂತೆ ತಿರುವು ರಸ್ತೆಗಳು ಅಭಿವೃದ್ಧಿ ಕಂಡಿಲ್ಲ.

ನಾವು ಈ ವಾರ್ಡಿಗೆ ಬಂದು ಸುಮಾರು ಹತ್ತು ವರ್ಷಗಳು ಕಳೆಯಿತು. ಆಗ ಹೇಗಿತ್ತೋ ಈಗಲೂ ಅದೇ ರೀತಿ ಇದೆ. ಒಂದೆರಡು ಬಾರಿ ರಸ್ತೆ ಮಾಡಲಾಗುತ್ತದೆ ಎಂದು ಗುದ್ದಲಿ ಪೂಜೆಯನ್ನು ಮಾಡಿದ್ದರು. ಆದರೆ ಅಭಿವೃದ್ಧಿ ಕಾಮಗಾರಿ ಕೈಗೊಂಡಲ್ಲೇ ನಿಂತಿತು. ಈ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿ ವರ್ಗದವರಿಗೆ ತಿಳಿದಿದ್ದರೂ ಯಾರೂ ಸಮಸ್ಯೆಗಳನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.

ಇಲ್ಲಿನ ಪ್ರಮುಖ ಸಮಸ್ಯೆ ಎಂದರೆ ನೀರಿನ ಸಮಸ್ಯೆ. ಹದಿನೈದು ದಿನಗಳು ಕಳೆದರೂ ಈ ವಾರ್ಡಿಗೆ ನೀರು ಬರುವುದಿಲ್ಲ. ನೀರು ಬಿಡುವವರನ್ನು ಕೇಳಿದರೆ ಸ್ಪಂದಿಸುವುದಿಲ್ಲ, ಅದಕ್ಕೆ ಬೇಸತ್ತು ಟ್ಯಾಂಕರ್ ಮೂಲಕ ಹಣ ಕೊಟ್ಟ ಖರೀದಿ ಮಾಡುತ್ತಿದ್ದಾರೆ ಜನರು. ಈ ಸಮಸ್ಯೆ ಬಗ್ಗೆ ವಾರ್ಡ್ ಪುರಸಭೆ ಸದಸ್ಯ ರಂಗಸ್ವಾಮಿ ಅವರಿಗೆ ತಿಳಿಸಿದರೂ ಏನು ಪ್ರಯೋಜನವಾಗಿಲ್ಲ. ಇಲ್ಲಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮತ್ತು ವಿರೋಧ ಪಕ್ಷದವರು ಸಹ ಕಳೆದ ಬಾರಿ ಉಪಚುನಾವಣೆಯಲ್ಲಿ ಮತ ಕೇಳಲು ಇಲ್ಲಿಗೆ ಬಂದಿದ್ದು ಬಿಟ್ಟರೆ ಇಲ್ಲಿಯವರೆಗೂ ಯಾರೂ ತಿರುಗಿ ನೋಡಿಲ್ಲ ಎಂದು ಬಡಾವಣೆಯ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಡಾವಣೆಯ ಯಾವುದೇ ಅಡ್ಡರಸ್ತೆಗಳಿಗೆ ಚರಂಡಿ ವ್ಯವಸ್ಥೆ ಇಲ್ಲ, ಮನೆಯಿಂದ ಹೊರಹೋಗುವ ವ್ಯರ್ಥ ನೀರು ಚರಂಡಿಗಳಿಗೆ ಸೇರದೆ ಮನೆ ಮುಂದೆ ನಿಂತು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ. ಮನೆ ಮುಂದೆ ಇರುವ ಕಸಗಳನ್ನು ಸಹ ಪುರಸಭೆಯವರು ಕಾಲ ಕಾಲಕ್ಕೆ ಸ್ವಚ್ಛ ಮಾಡುವುದಿಲ್ಲ. ವಾರಗಟ್ಟಲೆ ಕಸದ ರಾಶಿಯಾದರೂ ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಇಲ್ಲಿನ ಮಹಿಳೆಯರ ಆರೋಪ.

ಈ ಬಡಾವಣೆಯಾಗಿ ಹಲವಾರು ವರ್ಷವಾಗಿದ್ದರೂ ಒಂದು ದೇವಸ್ಥಾನವಿಲ್ಲ, ಮಕ್ಕಳು ಆಟವಾಡಲು ಉದ್ಯಾನವನವಿಲ್ಲ, ಈ ಬಡಾವಣೆಯ ಸಾರ್ವಜನಿಕರು ದೇವಸ್ಥಾನ ಮತ್ತು ಉದ್ಯಾನವನಕ್ಕಾಗಿ ಮನವಿ ಪತ್ರ ನೀಡಿದರೂ ಯಾರು ಸಹ ಸ್ಪಂದಿಸುತ್ತಿಲ್ಲ. ಇದಕ್ಕೆ ಯಾರೂ ಉತ್ಸುಕತೆ ತೋರಿದಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಸ್ಥಳೀಯರು.

ಸಮಸ್ಯೆಗಳಿರುವುದರ ಬಗ್ಗೆ ಗಮನಕ್ಕೆ ಬಂದಿದೆ. ನೀರಿನ ಮತ್ತು ಕಸದ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲಾಗುತ್ತದೆ. ಉಳಿದಂತೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು - ರಮೇಶ್. ಪುರಸಭೆ ಮುಖ್ಯಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.