‘ಡಿಜಿಟಲ್ ಯುಗದ ಸವಾಲು ಎದುರಿಸಿ’

7
ನವೋದ್ಯಮಿ ಮಹಿಳೆಯರಿಗೆ ಮೀತಾ ಮಲ್ಹೋತ್ರಾ ಕಿವಿಮಾತು

‘ಡಿಜಿಟಲ್ ಯುಗದ ಸವಾಲು ಎದುರಿಸಿ’

Published:
Updated:
‘ಡಿಜಿಟಲ್ ಯುಗದ ಸವಾಲು ಎದುರಿಸಿ’

ಬೆಂಗಳೂರು: ‘ನವೋದ್ಯಮಿ ಮಹಿಳೆಯರು ತಮ್ಮೊಳಗಿನ ಶಕ್ತಿ ಮತ್ತು ಕೊರತೆಗಳನ್ನು ಅರಿತರೆ ಉದ್ಯಮದಲ್ಲಿ ಉನ್ನತ ಸ್ತರಕ್ಕೇರಲು ಸಾಧ್ಯ’ ಎಂದು ವಿನ್ಯಾಸ ಮತ್ತು ಬ್ರ್ಯಾಂಡ್‌ ಕ್ಷೇತ್ರದ ತಜ್ಞೆ ಮೀತಾ ಮಲ್ಹೋತ್ರಾ ಹೇಳಿದರು.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಫಿಕ್ಕಿ) ಮಹಿಳಾ ಘಟಕದ ಆಶ್ರಯದಲ್ಲಿ ಬುಧವಾರ ನಡೆದ ಮಹಿಳಾ ಉದ್ಯಮಿಗಳ ಜೊತೆಗಿನ ಸಂವಾದದಲ್ಲಿ ಅವರು ಮಾತನಾಡಿದರು. ‘ತಮ್ಮದೇ ಆದ ಬ್ರ್ಯಾಂಡ್‌ನ ಛಾಪು ಒತ್ತಲು ಡಿಜಿಟಲ್‌ ಯುಗದ ಸವಾಲಿಗೆ ಪ್ರತಿಯಾಗಿ ಸೃಜನಶೀಲ ಚಿಂತನೆಯ ಮೂಲಕ ಯಶಸ್ಸು ಸಾಧಿಸಲು ಪ್ರಯತ್ನಿಸಬೇಕು’ ಎಂದರು.

‘ವೈವಿಧ್ಯಮಯ ಸಂಸ್ಕೃತಿ ಒಳಗೊಂಡ ದೇಶದಲ್ಲಿ ಸೃಜನಶೀಲ ಬ್ರ್ಯಾಂಡ್‌ಗಳಿಗೆ ಉತ್ತಮ ಮಾರುಕಟ್ಟೆ ಇದೆ. ಹೊಸದಾಗಿ ಉದ್ಯಮ ಆರಂಭಿಸುವ ಮಹಿಳೆಯರು ತಮ್ಮ ಸ್ವಂತ ಶಕ್ತಿ ಹಾಗೂ ಸಾಮರ್ಥ್ಯಗಳನ್ನು ಸ್ಪಷ್ಟವಾಗಿ ತಿಳಿದಿರಬೇಕು. ನವೋದ್ಯಮದ ಆರಂಭದಲ್ಲಿ ಅನ್ಯರ ಮಾತುಗಳಿಗೆ ಕಿವಿಗೊಡಬಾರದು. ನಮ್ಮ ವಿಶೇಷತೆ ಮತ್ತು ಮಾರುಕಟ್ಟೆಯ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳಬೇಕು. ತಲುಪಬೇಕಾದ ಗುರಿಯನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನಹರಿಸಬೇಕು.

‘ಅನುಭವದ ಕೊರತೆಗಳು ಇದ್ದಾಗ ವೈಫಲ್ಯಗಳು ಎದುರಾಗುತ್ತವೆ. ಇದರಿಂದ ಭಯ ಉಂಟಾಗುವುದು ಸಹಜ. ಅವುಗಳನ್ನು ಸವಾಲಾಗಿ ಸ್ವೀಕರಿಸಿ ದಿಟ್ಟತನದಿಂದ ಎದುರಿಸಬೇಕು. ಡಿಜಿಟಲ್ ಯುಗದ ಓಟದಲ್ಲಿ ಹಿಂದೆ ಬೀಳಬಾರದು. ವೈಯಕ್ತಿಕ ಕೌಶಲಗಳ ಮೂಲಕ ಪ್ರಗತಿ ಸಾಧಿಸಬೇಕು’ ಎಂದರು.

ಸಂವಾದದಲ್ಲಿ ಭಾಗವಹಿಸಿದ್ದ ಮಹಿಳೆಯರು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು. ವ್ಯವಹಾರ ಹಾಗೂ ಸಾರ್ವಜನಿಕ ಒಡನಾಟದಲ್ಲಿ ಧುತ್ತನೇ ಎದುರಾಗುವ ಸನ್ನಿವೇಶಗಳು ಮತ್ತು ಭಯಗಳನ್ನು ದೂರ ಮಾಡಿಕೊಂಡು ಮುನ್ನಡೆಯುವುದು ಹೇಗೆ ಎನ್ನುವುದರ ಬಗ್ಗೆ ಮೀತಾ ಅವರಿಂದ ಉತ್ತರ ಪಡೆದರು.

‘ಒತ್ತಡ ನಿವಾರಣೆಗೆ ಧ್ಯಾನ ಸಹಕಾರಿ’

ಒತ್ತಡ ನಿಭಾಯಿಸಲು ಧ್ಯಾನ ಹೇಗೆ ಸಹಕಾರಿ ಎಂಬುದನ್ನು ವಿವರಿಸುವ ದಿಸೆಯಲ್ಲಿ ಧ್ಯಾನದ ಮಹತ್ವವನ್ನೂ ಮೀತಾ ತಿಳಿಸಿಕೊಟ್ಟರು.

‘ಮನದಲ್ಲಿ ಸದಾ ಸುಳಿಯುವ ನಿರಂತರ ಆಲೋಚನೆಗಳನ್ನು ಶಾಂತಗೊಳಿಸಿ ದುಗುಡವನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು, ಏಕಾಗ್ರತೆಯನ್ನು ಹೇಗೆ ಸಾಧಿಸಬೇಕು’ ಎಂಬ ಬಗ್ಗೆ ಮೂರು ನಿಮಿಷಗಳ ಪ್ರಾತ್ಯಕ್ಷಿಕೆಯನ್ನೂ ಅವರು ನಡೆಸಿಕೊಟ್ಟರು.

‘ಪ್ರಾಣಾಯಾಮ ಮತ್ತು ಧ್ಯಾನದಿಂದ ಆಂತರ್ಯದ ಒತ್ತಡ ಕಡಿಮೆಯಾಗುತ್ತದೆ ಹಾಗೂ ಹೊಸ ಹೊಸ ಸ್ಫೂರ್ತಿಗೆ ಕಾರಣವಾಗುತ್ತವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry