ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬಡ್ತಿ, ಹಿಂಬಡ್ತಿಗೆ ಕ್ರಮ: ರಾಜ್ಯ ಸರ್ಕಾರ

Last Updated 9 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಬಡ್ತಿ ಮೀಸಲಾತಿ ಕಾಯ್ದೆ ರದ್ದುಪಡಿಸಿ 2017ರ ಫೆಬ್ರುವರಿ 9ರಂದು ನೀಡಲಾಗಿರುವ ತೀರ್ಪಿನ ಅನ್ವಯ ಇದುವರೆಗೆ 5,000 ನೌಕರರಿಗೆ ಮುಂಬಡ್ತಿ ನೀಡಲಾಗಿದ್ದು, ಅಂದಾಜು 3,000 ನೌಕರರಿಗೆ ಹಿಂಬಡ್ತಿ ನೀಡಿ ಆದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಆದರ್ಶಕುಮಾರ್‌ ಗೋಯಲ್‌ ಹಾಗೂ ಯು.ಯು. ಲಲಿತ್‌ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದೆದುರು ಬುಧವಾರ ಈ ವಿವರ ನೀಡಿದ ಸರ್ಕಾರದ ಪರ ವಕೀಲ ಬಸವಪ್ರಭು ಪಾಟೀಲ ಹಾಗೂ ಅಡ್ವೋಕೇಟ್‌ ಜನರಲ್‌ ಮಧುಸೂದನ ನಾಯ್ಕ, 45 ಇಲಾಖೆಗಳ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಆದೇಶ ನೀಡಲಾಗಿದೆ. ರಾಜ್ಯ ವಿಧಾನಸಭೆ ಚುನಾವಣೆ ಕಾರ್ಯಕ್ಕೆ ನಿಯುಕ್ತರಾಗಿರುವ ಕೆಲವು ಅಧಿಕಾರಿಗಳು ಬಡ್ತಿ ಹೊಂದಿದ ಹುದ್ದೆಗಳಿಗೆ ಹಾಜರಾಗಿಲ್ಲ. ತೀರ್ಪಿನ ಸಂಪೂರ್ಣ ಜಾರಿಗಾಗಿ ಮತ್ತಷ್ಟು ಕಾಲಾವಕಾಶದ ಅಗತ್ಯವಿದೆ ಎಂದರು.

ಕೋರ್ಟ್‌ ತೀರ್ಪನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಇದುವರೆಗೆ ಕೈಗೊಂಡಿರುವ ಪರಿಣಾಮಕಾರಿ ಕ್ರಮಗಳ ಕುರಿತ ವಿವರ ನೀಡಬೇಕು. ಇಲ್ಲದಿದ್ದರೆ ಆಯಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಜುಲೈ 4ರಂದು ನಡೆಯಲಿರುವ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು ಎಂದು ಪೀಠ ಸೂಚಿಸಿತು.

ಕೋರ್ಟ್‌ ತೀರ್ಪಿನ ಜಾರಿಯ ನಿಟ್ಟಿನಲ್ಲಿ ಇದುವರೆಗೆ ಭಾಗಶಃ ಕ್ರಮ ಕೈಗೊಂಡಿರುವ ಸರ್ಕಾರವು, ವ್ಯತಿರಿಕ್ತ ಹೇಳಿಕೆ ನೀಡಿದೆ ಎಂದು ಅರ್ಜಿದಾರರ ಪರ ವಕೀಲರಾದ ರಾಜೀವ್‌ ಧವನ್‌, ಕುಮಾರ್‌ ಪರಿಮಾಳ್‌ ಹಾಗೂ ಕಿರಣ್‌ ಸೂರಿ ದೂರಿದರು.

‘ತೀರ್ಪಿನ ಜಾರಿಗೆ ಕ್ರಮ ಕೈಗೊಂಡಿರುವ ಸರ್ಕಾರ ಕಷ್ಟಸಾಧ್ಯವಾದ ಕೆಲಸವನ್ನು ಮಾಡಿದೆ ಎಂಬುದನ್ನು ಒಪ್ಪಲೇಬೇಕು. ಮುಂದಿನ 10 ದಿನಗಳಲ್ಲಿ ಚುನಾವಣೆ ಸಂಬಂಧಿ ಕೆಲಸ– ಕಾರ್ಯಗಳು ಪೂರ್ಣಗೊಳ್ಳಲಿದ್ದು, ತೀರ್ಪು ಜಾರಿಗೊಳಿಸಲು ಕ್ರಮ ಕೈಗೊಳ್ಳುವ ವಿಶ್ವಾಸವಿದೆ’ ಎಂದು ನ್ಯಾಯಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT