ಗುರುವಾರ , ಫೆಬ್ರವರಿ 25, 2021
31 °C
ಆರು ಸಿಕ್ಸರ್‌, ಐದು ಬೌಂಡರಿಯೊಂದಿಗೆ ಅರ್ಧಶತಕ ಸಿಡಿಸಿದ ಇಶಾನ್ ಕಿಶನ್‌

ಮುಂಬೈಗೆ ಮತ್ತೆ ಮಣಿದ ನೈಟ್‌ ರೈಡರ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈಗೆ ಮತ್ತೆ ಮಣಿದ ನೈಟ್‌ ರೈಡರ್ಸ್‌

ಕೋಲ್ಕತ್ತ: ಐಪಿಎಲ್‌ನಲ್ಲಿ ತಂಡವೊಂದರ ಎದುರು ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿರುವ ಮುಂಬೈ ಇಂಡಿಯನ್ಸ್‌ ಮುಡಿಗೆ ಮತ್ತೊಂದು ಗರಿಸೇರಿತು. ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗದವರು ಕೋಲ್ಕತ್ತ ನೈಟ್‌ ರೈಡರ್ಸ್ ಎದುರು 102 ರನ್‌ಗಳಿಂದ ಗೆದ್ದರು.

211 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೋಲ್ಕತ್ತ 18.1 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟಾಯಿತು. ಈ ಗೆಲುವಿನೊಂದಿಗೆ ಮುಂಬೈ ತಂಡ ಕೋಲ್ಕತ್ತ ಎದುರಿನ 22 ಪಂದ್ಯಗಳಲ್ಲಿ 18 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿತು.

ಇಶಾನ್ ಕಿಶನ್‌ ಸ್ಫೋಟಕ ಅರ್ಧಶತಕ: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ (62; 21 ಎ, 6 ಸಿ, 5 ಬೌಂ) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಉತ್ತಮ ಮೊತ್ ಕಲೆ ಹಾಕಿತು.

ತಂಡದ ಪರ ಸೂರ್ಯಕುಮಾರ್ ಯಾದವ್ ಮತ್ತು ಎವಿನ್ ಲೂಯಿಸ್‌ ಮೊದಲ ವಿಕೆಟ್‌ಗೆ 46 ರನ್ ಸೇರಿಸಿದರು. ಲೂಯಿಸ್ ಔಟಾದ ನಂತರ ಸೂರ್ಯಕುಮಾರ್‌ ಜೊತೆಗೂಡಿದ ನಾಯಕ ರೋಹಿತ್ ಶರ್ಮಾ ಎರಡನೇ ವಿಕೆಟ್‌ಗೆ 16 ರನ್ ಜೋಡಿಸಿದರು. ಅಷ್ಟರಲ್ಲಿ ಯಾದವ್ ಔಟಾದರು. ಈ ಎರಡೂ ವಿಕೆಟ್‌ಗಳು ಲೆಗ್ ಸ್ಪಿನ್ನರ್‌ ಪೀಯೂಷ್‌ ಚಾವ್ಲಾ ಅವರ ಪಾಲಾದವು.

ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಕಿಶನ್‌ ಬೌಲರ್‌ಗಳನ್ನು ಕಾಡಿದರು. ಎದುರಿಸಿದ ಎರಡನೇ ಎಸೆತವನ್ನೇ ಸಿಕ್ಸರ್‌ಗೆ ಎತ್ತಿದರು. ನಂತರದ ಓವರ್‌ನಲ್ಲಿ ಪೀಯೂಷ್ ಚಾವ್ಲಾ ಅವರನ್ನು ಮೂರು ಬಾರಿ ಬೌಂಡರಿ ಗೆರೆಯಾಚೆ ಅಟ್ಟಿದರು. ವೇಗದ ಬೌಲರ್‌ಗಳನ್ನು ಕೂಡ ಅವರು ದಿಟ್ಟವಾಗಿ ಎದುರಿಸಿದರು.

ಆ್ಯಂಡ್ರೆ ರಸೆಲ್‌ ಹಾಕಿದ 12ನೇ ಓವರ್‌ನಲ್ಲಿ ಮೋಹಕ ಬೌಂಡರಿ ಗಳಿಸಿದರು. ಪ್ರಸಿದ್ಧ ಕೃಷ್ಣ ಅವರ ನಂತರದ ಓವರ್‌ನಲ್ಲಿ ಮೂರು ಬೌಂಡರಿ ಗಳಿಸಿದರು. ಕುಲದೀಪ್ ಯಾದವ್‌ ಹಾಕಿದ 14ನೇ ಓವರ್‌ನ ಕೊನೆಯ ನಾಲ್ಕು ಎಸೆತಗಳನ್ನು ಗ್ಯಾಲರಿಗೆ ಕಳುಹಿಸಿದರು. ಮುಂದಿನ ಓವರ್‌ನಲ್ಲಿ ಸುನಿಲ್ ನಾರಾಯಣ್‌ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಹೆಚ್ಚು ಪರಿಣಾಮ ಬೀರಲಿಲ್ಲ. ಆದರೆ ಒಂಬತ್ತು ಎಸೆತಗಳಲ್ಲಿ 24 ರನ್ ಗಳಿಸಿದ ಬೆನ್ ಕಟ್ಟಿಂಗ್‌ ಮೊತ್ತವನ್ನು 200ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 6ಕ್ಕೆ 210 (ಸೂರ್ಯಕುಮಾರ್ ಯಾದವ್‌ 36, ಎವಿನ್‌ ಲೂಯಿಸ್‌ 18, ರೋಹಿತ್ ಶರ್ಮಾ 36, ಇಶಾನ್ ಕಿಶನ್‌ 62, ಹಾರ್ದಿಕ್ ಪಾಂಡ್ಯ 19, ಬೆನ್‌ ಕಟ್ಟಿಂಗ್‌ 24, ಕೃಣಾಲ್ ಪಾಂಡ್ಯ ಔಟಾಗದೆ 8; ಪ್ರಸಿದ್ಧ ಕೃಷ್ಣ 41ಕ್ಕೆ1, ಟಾಮ್ ಕುರನ್‌ 33ಕ್ಕೆ1, ಸುನಿಲ್‌ ನಾರಾಯಣ್‌ 27ಕ್ಕೆ1, ಪೀಯೂಷ್ ಚಾವ್ಲಾ 48ಕ್ಕೆ3)

ಕೋಲ್ಕತ್ತ ನೈಟ್ ರೈಡರ್ಸ್‌: 18.1 ಓವರ್‌ಗಳಲ್ಲಿ 108ಕ್ಕೆ ಆಲೌಟ್‌ (ಕ್ರಿಸ್‌ ಲಿನ್‌ 21, ರಾಬಿನ್ ಉತ್ತಪ್ಪ 14, ನಿತೀಶ್ ರಾಣಾ 21, ಟಾಮ್ ಕುರನ್‌ 12, ಪೀಯೂಷ್ ಚಾವ್ಲಾ 11; ಮೆಕ್‌ಲೆಂಘಾನ್‌ 24ಕ್ಕೆ1, ಹಾರ್ದಿಕ್ ಪಾಂಡ್ಯ 12ಕ್ಕೆ2, ಜಸ್‌ಪ್ರೀತ್ ಬೂಮ್ರಾ 17ಕ್ಕೆ1, ಮಯಂಕ್ ಮಾರ್ಕಂಡೆ 26ಕ್ಕೆ1, ಬೆನ್ ಕಟ್ಟಿಂಗ್‌ 12ಕ್ಕೆ1). ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 102 ರನ್‌ಗಳ ಜಯ.ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.