ನಮಸ್ಕಾರ್ರೀ... ಬದಲಾವಣೆ ಮಾಡ್ರಿ...

7
ಸೆಂಟ್ರಲ್ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರಾಜಣ್ಣ ಕೊರವಿ ಪ್ರಚಾರ

ನಮಸ್ಕಾರ್ರೀ... ಬದಲಾವಣೆ ಮಾಡ್ರಿ...

Published:
Updated:
ನಮಸ್ಕಾರ್ರೀ... ಬದಲಾವಣೆ ಮಾಡ್ರಿ...

ಹುಬ್ಬಳ್ಳಿ: ಎದುರಿಗೆ ಸಿಕ್ಕ ಕ್ಷೇತ್ರದ ಪ್ರತಿ ಮತದಾರರೆಲ್ಲರಿಗೂ ’ನಮಸ್ಕಾರ್ರಿ... ಈ ಸಲ ಬದಲಾವಣೆ ಮಾಡ್ರೀ’.... ಎನ್ನುತ್ತಲೇ ಮಾತು ಆರಂಭಿಸುವ ಸೆಂಟ್ರಲ್ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರಾಜಣ್ಣ ಕೊರವಿ ನಿತ್ಯ ಪಾದಯಾತ್ರೆ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.

ನಾಮಪತ್ರ ಸಲ್ಲಿಸಿದ ದಿನದಿಂದಲೇ ಅವರು ನಿತ್ಯ ವಾರ್ಡ್‌ ವಾಸ್ತವ್ಯ ಕೈಗೊಂಡಿದ್ದಾರೆ. ಕ್ಷೇತ್ರದ ಮತದಾರರ ಮನೆಯಲ್ಲಿಯೇ ಮಲಗಿ, ಮರುದಿನ ಅಲ್ಲಿಂದಲೇ ಪ್ರಚಾರ ಕಾರ್ಯ ಆರಂಭಿಸುತ್ತಾರೆ. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಅಂದು ಪ್ರಚಾರ ಮಾಡಬೇಕಾದ ಪ್ರದೇಶಗಳು, ಭೇಟಿಯಾಗಬೇಕಾದ ವ್ಯಕ್ತಿಗಳ ಕುರಿತು ಕಾರ್ಯ ಯೋಜನೆ ರೂಪಿಸಿ ಆರು ಗಂಟೆಗೆ ಕೆಲಸ ಆರಂಭಿಸುತ್ತಾರೆ.

ಸೋಮವಾರ ಕೂಡ ಎಂದಿನಂತೆ ನಾಲ್ಕು ಗಂಟೆಗೆ ಎದ್ದು ಕಾರ್ಯ ಶುರು ಮಾಡಿದರು. ವಾಕಿಂಗ್‌ ಪ್ರದೇಶಗಳು ಮತ್ತು ಮೈದಾನಗಳಿಗೆ ಭೇಟಿ ನೀಡಿ ಕ್ಷೇತ್ರದಲ್ಲಿ ಯಾಕೆ ಬದಲಾವಣೆ ಮಾಡಬೇಕು, ಮಾಡಿದರೆ ಏನು ಲಾಭ ಎನ್ನುವುದನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟರು. ಐದು ಬಾರಿ ಆಯ್ಕೆಯಾಗಿ ಬಂದರೂ ಎನೂ ಅಭಿವೃದ್ಧಿ ಮಾಡದವರೂ ನಮ್ಮಲ್ಲಿದ್ದಾರೆ. ಆದ್ದರಿಂದ ಬದಲಾವಣೆ ಬೇಕ್ರಿ... ಎಂದು ಆತ್ಮೀಯವಾಗಿ ಹೇಳಿ ಮತದಾರರ ಮನವೊಲಿಸಲು ಪ್ರಯತ್ನಿಸಿದರು.

ವಾಕಿಂಗ್ ಮುಗಿಸಿ ಹತ್ತು ಗಂಟೆಗೆ ವಾಸ್ತವ್ಯ ಹೂಡಿದ್ದ ಕಾರ್ಯಕರ್ತರ ಮನೆಗೆ ಮರಳಿ ತಯಾರಾಗಿ ವಾರ್ಡ್‌ನ ಪ್ರಮುಖರನ್ನು ಭೇಟಿಯಾದರು. ಬೆಂಗೇರಿಯಲ್ಲಿರುವ ಖಾದಿ ಗ್ರಾಮದ ಕುಟುಂಬಗಳಿಗೆ ಭೇಟಿ ನೀಡಿದರು. ಉಣಕಲ್ ಪ್ರದೇಶದ ತಾಜನಗರ, ಏಕತಾ ನಗರ, ಸಾಯಿನಗರ, ಉಣಕಲ್ ಕ್ರಾಸ್‌ಗೆ ಭೇಟಿ ನೀಡಿ ಹುಮಸ್ಸಿನಿಂದಲೇ ಮತಯಾಚನೆ ಮಾಡಿದರು. ಬಿಸಿಲಿನ ಬೇಗೆಗೆ ಬಳಲಿದರೂ ಅದನ್ನು ತೋರುಗೊಡದೆ ನೀರು ಕುಡಿದು ಸಾವರಿಸಿಕೊಳ್ಳುತ್ತ ಮುಂದೆ ಸಾಗಿದರು.

ಮತದಾರರ ಬಳಿ ತೆರಳಿದಾಗಲೆಲ್ಲ ‘ನಾನೇ ರಾಜಣ್ಣ ಕೊರವಿ ರ್ರೀ, ಜೆಡಿಎಸ್‌ ಕ್ಯಾಂಡಿಡೇಟ್‌, ನಂಗೇ ಮತ ಹಾಕ್ರೀ’ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಸಂಜೆಯವರೆಗೂ ಪ್ರಚಾರದ ಕೆಲಸ ಮುಗಿಸಿ ವಾಸ್ತವ್ಯ ಹೂಡಿದ ವಾರ್ಡ್‌ನಲ್ಲಿಯೇ ಕಾರ್ಯಕರ್ತರು ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು.   ಕ್ಷೇತ್ರ ವ್ಯಾಪ್ತಿಯ ಮತದಾರರ, ಪರಿಚಯದವರ ಮದುವೆ ಸಮಾರಂಭಗಳಿಗೂ ಭೇಟಿ ಕೊಟ್ಟು ಬಂದರು.

ಹೀಗೆ ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗುವ ರಾಜಣ್ಣ ಕೊರವಿ ಅವರ ದಿನಚರಿ ರಾತ್ರಿ ಒಂದು ಗಂಟೆಯ ತನಕ ಸಾಗುತ್ತದೆ. ರಾತ್ರಿ ಹತ್ತು ಗಂಟೆಗೆ ಪ್ರಚಾರ ಕೆಲಸ ಮುಗಿಸಿ, ನಂತರ ವಾರ್ಡ್‌ ವಾಸ್ತವ್ಯ ಮಾಡುತ್ತಾರೆ. ಪ್ರತಿ ದಿನ ಒಂದು ವಾರ್ಡ್‌ ಮಾತ್ರ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಯಾರ ಮನೆಯಲ್ಲಿ ವಾಸ್ತವ್ಯ ಮಾಡಬೇಕೆಂಬುದನ್ನು ಕಾರ್ಯಕರ್ತರೇ ನಿರ್ಧರಿಸುತ್ತಾರೆ. ರಾತ್ರಿ ಒಂದು ಗಂಟೆಗೆ ಮಲಗಿ ಮತ್ತೆ ಬೆಳಿಗ್ಗೆ ನಾಲ್ಕು ಗಂಟೆಗೆ ‍ಪ್ರಚಾರಕ್ಕೆ ಹೊರಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry