ಗುರುವಾರ , ಮಾರ್ಚ್ 4, 2021
18 °C
ಯಮಕನಮರಡಿ ವಿಧಾನಸಭಾ ಕ್ಷೇತ್ರ: ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಸತೀಶ ಜಾರಕಿಹೊಳಿ

ಕಾಂಗ್ರೆಸ್‌– ಬಿಜೆಪಿ ನೇರ ಹಣಾಹಣಿ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌– ಬಿಜೆಪಿ ನೇರ ಹಣಾಹಣಿ

ಬೆಳಗಾವಿ: ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸತೀಶ ಜಾರಕಿಹೊಳಿ ಈ ಸಲ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದಾರೆ. ಇವರಿಗೆ ಬಿಜೆಪಿಯ ಮಾರುತಿ ಅಷ್ಟಗಿ ತೀವ್ರ ಪೈಪೋಟಿ ನೀಡಿದ್ದಾರೆ. ಇನ್ನುಳಿದಂತೆ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಶಂಕರ ಭರಮಾ ಗಸ್ತಿ ಹಾಗೂ ಇಬ್ಬರು ಪಕ್ಷೇತರರ ಸ್ಪರ್ಧೆಯು ಸಾಂಕೇತಿಕವಾಗಿದೆಯಷ್ಟೆ.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ನಂತರ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಇದು ಎಸ್‌.ಟಿ ಮೀಸಲು ಕ್ಷೇತ್ರವಾಗಿದೆ. ಇದುವರೆಗೆ ನಡೆದ ಎರಡೂ ಚುನಾವಣೆಗಳಲ್ಲಿ ಸತೀಶ ಜಾರಕಿಹೊಳಿ ಜಯಭೇರಿ ಬಾರಿಸಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಬಹುತೇಕ ಕಡೆಗಳಲ್ಲಿ ಉತ್ತಮ ರಸ್ತೆಗಳನ್ನು ಮಾಡಿಸಿದ್ದಾರೆ. ಇದನ್ನು ಕ್ಷೇತ್ರದ ಜನರು ಸ್ಮರಿಸುತ್ತಾರೆ.

ಕ್ಷೇತ್ರದ ತುಂಬೆಲ್ಲ ಶಾಸಕರ ಆಪ್ತ ಸಹಾಯಕರಿದ್ದಾರೆ (ಪಿ.ಎ) ನಮಗೆ ಸರ್ಕಾರದಿಂದ ಯಾವುದಾದರೂ ರೀತಿಯ ಸಹಾಯವಾಗಬೇಕಾದರೆ ನಾವು ಪಿ.ಎ.ಗಳನ್ನು ಭೇಟಿ ಮಾಡುತ್ತೇವೆ. ಬೋರ್‌ವೆಲ್‌ ಕೊರೆಸುವುದು, ಕೃಷಿ ಹೊಂಡ ಮಾಡಿಸುವುದು, ರೇಷನ್‌ ಕಾರ್ಡ್‌ ಮಾಡಿಸುವುದು ಸೇರಿದಂತೆ ಎಲ್ಲದಕ್ಕೂ ಇವರ ಮೇಲೆಯೇ ಅವಲಂಬನೆಯಾಗಿದ್ದೇವೆ. ಇವರು ಮಾಡಿಸಿಕೊಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆದರೆ, ಕುಡಿಯುವ ನೀರಿನ ಸಮಸ್ಯೆ ಇನ್ನೂ ಹಾಗೆಯೇ ಇದೆ. ಗುಡ್ಡಗಾಡಿನ ಪ್ರದೇಶವಾಗಿರುವ ಇಲ್ಲಿ ನೀರಿನ ಸೆಲೆ ಇಲ್ಲ. ಬೋರ್‌ವೆಲ್‌ ತೆಗೆಸಿದರೂ ನೀರು ಹತ್ತುವುದಿಲ್ಲ. ಇದರ ಬಗ್ಗೆ ಹಲವು ಬಾರಿ ಶಾಸಕರಿಗೆ ಮನವಿ ಮಾಡಿದ್ದೇವು. ಇತ್ತೀಚೆಗಷ್ಟೇ ಭೂಮಿ ಅಗೆದು ಪೈಪ್‌ಲೈನ್‌ ಹಾಕಿದ್ದಾರೆ. ಆದರೆ, ಇನ್ನೂ ನೀರು ಬಂದಿಲ್ಲ. ಯಮಕನಮರಡಿ ಊರಿನೊಳಗೆ ಒಂದು ಕಡೆ ಮಾತ್ರ ಹಿಡಕಲ್‌ ಜಲಾಶಯದಿಂದ ನೀರು ಸಂಪರ್ಕ ನೀಡಲಾಗಿದೆ. ಇಲ್ಲಿಂದಲೇ ನೀರು ಪಡೆಯಬೇಕಾಗಿದೆ ಎಂದು ವಾಸ್ತವ ಚಿತ್ರಣ ಬಿಡಿಸಿಟ್ಟರು.

‘ಹಾಲಿ ಶಾಸಕರ ಬಗ್ಗೆ ಅಸಮಾಧಾನವಿಲ್ಲ. ಆದರೆ, ಎರಡು ಬಾರಿ ಅಧಿಕಾರ ನೀಡಿದ್ದೇವೆ. ಈ ಸಲ ಹೊಸಬರಿಗೆ ಏಕೆ ಅವಕಾಶ ನೀಡಬಾರದು’ ಎಂದು ಸಹಜವಾಗಿ ಪ್ರಶ್ನಿಸುತ್ತಾರೆ. ಅವರ ಒಲವು ಬಿಜೆಪಿಯ ಮಾರುತಿ ಅಷ್ಟಗಿ ಅವರತ್ತ ವಾಲಿದೆ.

ಮಾರುತಿ ಅಷ್ಟಗಿ ಯುವಕರಾಗಿದ್ದಾರೆ. ಕಳೆದ ಬಾರಿಯೂ ಸ್ಪರ್ಧಿಸಿದ್ದರು. ಈ ಸಲವೂ ಸ್ಪರ್ಧಿಸಿದ್ದಾರೆ. ಸಾಮಾನ್ಯ ಜನರ ಕೈಗೆ ಸಿಗುವಷ್ಟು ಸರಳವಾಗಿದ್ದಾರೆ ಎನ್ನುತ್ತಾರೆ. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವವೂ ಕ್ಷೇತ್ರದಲ್ಲಿ ಕಾಣಿಸುತ್ತಿದೆ. ವಿಶೇಷವಾಗಿ ಯುವಕರೆಲ್ಲರೂ ಮೋದಿ ಪ್ರಭಾವಕ್ಕೆ ಒಳಗಾದಂತೆ ಕಂಡುಬಂದಿತು.

ಮರಾಠಾ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಬಿಜೆಪಿ ಹೆಚ್ಚಿನ ಪ್ರಚಾರ ನಡೆಸುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪ್ರಚಾರ ಸಭೆಯನ್ನು ಕಡೋಲಿಯಲ್ಲಿ ಇದೇ ಉದ್ದೇಶದಿಂದ ಆಯೋಜಿಸಲಾಗಿತ್ತು. ಸಭೆಗೆ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು. ಬಿಜೆಪಿಯ ಹಿಂದುತ್ವ, ಮೋದಿ ಅಲೆಯ ಪ್ರಭಾವ ಎಷ್ಟರಮಟ್ಟಿಗೆ ಮಾರುತಿ ಅಷ್ಟಗಿ ಅವರ ಮತಗಳಾಗಿ ಪರಿವರ್ತನೆಯಾಗುತ್ತವೆ ಎನ್ನುವ ಕುತೂಹಲ ಮೂಡಿದೆ.

 

***

ಮತದಾರರ ಸಂಖ್ಯೆ

ಪುರುಷರು: 92,126

ಮಹಿಳೆಯರು: 92,236

ಒಟ್ಟು: 1,84,362

 

***

ಕಣದಲ್ಲಿರುವವರು

ಅಭ್ಯರ್ಥಿಗಳು                  ಪಕ್ಷ

ಸತೀಶ ಜಾರಕಿಹೊಳಿ          ಕಾಂಗ್ರೆಸ್‌

ಮಾರುತಿ ಅಷ್ಟಗಿ               ಬಿಜೆಪಿ

ಶಂಕರ ಭರಮಾ ಗಸ್ತಿ          ಜೆಡಿಎಸ್

ಯಲಗುಂಡ ಬಸನಾಯಿಕ ನಾಯಕ     ಪಕ್ಷೇತರ

ಭೀಮಸಿ ಸಿದ್ದಪ್ಪ ನಾಯಕ              ಪಕ್ಷೇತರ

 

***

ಹಿಂದಿನ ಎರಡು ಚುನಾವಣೆಗಳ ಫಲಿತಾಂಶ

ವರ್ಷ      ಗೆದ್ದವರು                ಪಕ್ಷ          ಸಮೀಪಸ್ಪರ್ಧಿ         ಪಕ್ಷ

2008    ಸತೀಶ ಜಾರಕಿಹೊಳಿ   ಕಾಂಗ್ರೆಸ್‌     ಬಾಳಗೌಡ ಪಾಟೀಲ   ಜೆಡಿಎಸ್‌

2013    ಸತೀಶ ಜಾರಕಿಹೊಳಿ   ಕಾಂಗ್ರೆಸ್‌     ಮಾರುತಿ ಅಷ್ಟಗಿ       ಬಿಜೆಪಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.