ಶುಕ್ರವಾರ, ಫೆಬ್ರವರಿ 26, 2021
29 °C

ಬೆಂಗಳೂರು ಬೇಗೆ ತೀರಿಸುವ ಬಗೆ

ಚಂದ್ರಹಾಸ ಕೋಟೆಕಾರ್ Updated:

ಅಕ್ಷರ ಗಾತ್ರ : | |

ಬೆಂಗಳೂರು ಬೇಗೆ ತೀರಿಸುವ ಬಗೆ

ರವಿತೇಜ, ಸೂರ್ಯಕೋಟಿ ಸಮ ಪ್ರಭ ಎಂಬಂತೆ ಉರಿಯುತ್ತಿದ್ದಾನೆ. ಧಗೆಗೆ ಎಲ್ಲಿ ಕುಳಿತರೂ, ನಿಂತರೂ ಮೈಯೆಲ್ಲ ಉರಿ ಉರಿ. ಮುಖಕ್ಕೆ ರಪ ರಪನೇ ಬೀಸುವ ಬಿಸಿಗಾಳಿ. ಅರೆಕ್ಷಣ ಟ್ರಾಫಿಕ್‌ನಲ್ಲಿ ನಿಂತರೆ ಬಿಸಿಯನ್ನು ತಡೆದುಕೊಳ್ಳಲಾರದ ಸಂಕಟ. ಬೀಸುವ ಬಿಸಿ ಗಾಳಿಗೆ ಬಸವಳಿದ ಪಕ್ಷಿ ಸಂಕುಲಗಳೇ ದೂರ ತೀರದ ಹಸಿರನ್ನು ಅರಸಿ ಕೊಂಡು ಹೋಗಿವೆ.

ಅಭಿವೃದ್ಧಿಯ ಭರಾಟೆಯಲ್ಲಿ ಮರಗಳ ಹಸಿರು ಪ್ರೀತಿ ಕಾಣೆಯಾಗಿವೆ. ಚಪ್ಪರದಂತೆ ರೆಂಬೆ, ಕೊಂಬೆಗಳನ್ನು ಹಬ್ಬಿಕೊಂಡು ನೆರಳನ್ನು ನೀಡುವ ಮರಗಳು ವರ್ಷ ಉರುಳಿದಂತೆ ಕ್ಷೀಣಿಸುತ್ತಿವೆ. ಕಾಂಕ್ರೀಟ್ ಕಾಡಾಗಿ ಬೆಳೆದು ನಿಂತಿರುವ ಕೆಂಪೇಗೌಡರ ನಾಡು ಬೆಂಗಳೂರು ಈಗ ಬೆಂದಕಾಳೂರು ಆಗಿದೆ.

ಹೊಸದಾಗಿ ಬೆಂಗಳೂರಿಗೆ ಕಾಲಿಟ್ಟವರಿಗೆ ಇದು ಹೈದರಾಬಾದ್ ಕರ್ನಾಟಕವೋ ಎಂಬಷ್ಟು ಇಲ್ಲಿನ ಹವಾಮಾನ ಬದಲಾಗಿದೆ. ಸಾಮಾನ್ಯವಾಗಿ ಏಪ್ರಿಲ್‌, ಮೇ ತಿಂಗಳಲ್ಲಿ 28, 29 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತಿತ್ತು. ಈ ವರ್ಷ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿಯೇ 34 ಡಿಗ್ರಿ ಸೆಲ್ಸಿಯಸ್‌ ಇತ್ತು.

ಹವಾಮಾನದಲ್ಲಿ ಬಿಸಿಲ ತಾಪ ಜಾಸ್ತಿಯಾದಾಗ ಸಂಜೆಯ ಹೊತ್ತಿಗೆ ಜೋರಾಗಿ ಮಳೆ ಬರುತ್ತದೆ. ಈ ಬಾರಿ ವಾತಾವರಣ ತಂಪಾಗುವಷ್ಟು ಮಳೆ ಬಂದಿಲ್ಲ. ರಾತ್ರಿ ಹೊತ್ತು ಮತ್ತೇ ಸೆಕೆ ಹಾಗೇನೇ ಮುಂದುವರಿಯುತ್ತಿದೆ. ಬೆಂಕಿಯಲ್ಲಿ ಕಾಯಿಸಿದ ಬಿಸಿ ಪಾತ್ರೆಗೆ ನೀರು ಸುರಿದ ಹಾಗೆ ಆಗುತ್ತವೆ. ಇಳೆಗೆ ಸುರಿದ ಮಳೆ ಒಡಲು ಸೇರಿದೊಡನೆ ತಾಪ ತಡೆಯಲಾರದೆ ಬಿದ್ದಿರುವ ನೀರ ಹನಿಗಳಲ್ಲಿ ವಿಚಿತ್ರ ಗುಳ್ಳೆಗಳು ನೆಲಕ್ಕೆ ಬಿದ್ದ ಮಳೆ ನೀರಲ್ಲಿ ಕಂಡು ಬಂದವು. ತಾಪಮಾನ ಎಷ್ಟು ಹೆಚ್ಚಾಗಿದೆ ಎಂದರೆ , ಮೊದಲ ಮಳೆಯ ಸಿಂಚನಕ್ಕೆ ನೆಲ ಎಷ್ಟು ಬಾಯಾರಿದೆ, ಭೂಮಿಯ ಅಂತರ್ ಜಲ ಎಷ್ಟರ ಮಟ್ಟಿಗೆ ಕುಸಿದಿದೆ, ಪೂರ್ತಿ ಬತ್ತಿ ಹೋಗಿದೆ ಅಂತಲೇ ಹೇಳ ಬಹುದು ಅನ್ನುತ್ತಾರೆ ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಡಾ.ಎಸ್.ವಿ ಹಿತ್ತಿಲಮನಿ.

ಬೆಂಗಳೂರಿನಲ್ಲಿ ತಾಪಮಾನ ಇನ್ನೂ ಮುಂದೆ ಹೆಚ್ಚೆಚ್ಚು ಆಗುತ್ತ ಹೋಗುತ್ತದೆಯೇ ಹೊರತೂ ಕಮ್ಮಿಯಾಗುವುದಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಗೆ ಹವಾಮಾನ ಹದಗೆಡುತ್ತಿದೆ. ನೆಲವನ್ನು ಒಂದಿಂಚೂ ಬಿಡದಷ್ಟು ಬಗೆದು ತಲೆ ಎತ್ತುತ್ತಿರುವ ಗಗನ ಚುಂಬಿ ಕಾಂಕ್ರೀಟ್ ಕಟ್ಟಡಗಳು, ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯ ಅರ್ಭಟ, ಅದಕ್ಕೆ ಅನುಗುಣವಾಗಿ ಹೆಚ್ಚುತ್ತಿರುವ ಕಾಂಕ್ರೀಟ್ ರಸ್ತೆಗಳು, ಇವುಗಳ ಧಾಂಗುಡಿಯಿಂದಾಗಿ ಮಳೆ ನೀರು ಭೂಮಿಯನ್ನು ಸೇರದೆ ಗಟಾರದಲ್ಲಿ ಸರಾಗವಾಗಿ ಹರಿದು ಹೋಗುತ್ತಿದೆ. ಸಾಮಾನ್ಯವಾಗಿ ಬಿದ್ದ ಮಳೆ ನೀರು ಭೂಮಿಯನ್ನು ಸೇರಿದರೆ ಅಂತರ್ಜಲದ ಮಟ್ಟ ಹೆಚ್ಚು ಆಗುತ್ತದೆ. ಆದರೆ, ಬೆಂಗಳೂರಿನಂತಹ ಬೃಹತ್ ಬೆಳೆಯುತ್ತಿರುವ ನಗರಗಳಲ್ಲಿ ಆ ರೀತಿ ಆಗುವುದಿಲ್ಲ. ಬಿದ್ದ ಎಲ್ಲ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತದೆ. ನೀರು ಭೂಮಿಗೆ ಇಳಿಯುವುದಿಲ್ಲ. ಹಾಗಾಗಿ ಅಂತರ್ಜಲ ಕಮ್ಮಿಯಾಗಿ ಭೂಮಿಯ ತಾಪಮಾನ ಹೆಚ್ಚಾಗುತ್ತ ಹೋಗುತ್ತದೆ.

ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿದು, ಹಸಿರು ಇಲ್ಲದ ಪರಿಸ್ಥಿತಿ ಉಂಟಾಗಿದೆ. ನವೆಂಬರ್‌, ಡಿಸೆಂಬರ್ ತಿಂಗಳ ಚಳಿಗಾಲಕ್ಕೆ ಸಾವಿರಾರು ಮೈಲು ದೂರದಿಂದ ನೂರಾರು ಜಾತಿಯ ವಿದೇಶಿ ಪಕ್ಷಿಗಳು ಬೆಂಗಳೂರು ಮತ್ತು ಇನ್ನಿತರ ಕೆರೆಗಳಿರುವ ತಂಪಾದ ಪ್ರದೇಶಗಳಿಗೆ ಅರಸಿಕೊಂಡು ಬರುತ್ತಿದ್ದವು. ಈಗ ಅವುಗಳ ಸಂಖ್ಯೆಗಳು ಕೂಡಾ ಗಣನೀಯವಾಗಿ ಇಳಿಮುಖವಾಗಿವೆ. ಸಾವಿರ ಸಂಖ್ಯೆಯಲ್ಲಿದ್ದ ಗುಬ್ಬಚ್ಚಿಗಳಂತೂ ನೋಡುವುದಕ್ಕಾದರೂ ಒಂದಿಷ್ಟು ಇಲ್ಲವಾಗಿವೆ. ಗಿಳಿ, ಪರಿವಾಳ ಇತರ ಪಕ್ಷಿಗಳು ಸಣ್ಣ ಪ್ರಮಾಣದಲ್ಲಿ ಇವೆಯಾದರೂ, ಅವುಗಳಿಗೆ ಆಹಾರ ಮತ್ತು ಹಸಿರಿನ ಕೊರತೆ ಕಾಡುತ್ತಿದೆ. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಜತೆಗೆ ಬಿಸಿಲ ತಾಪದಿಂದ ನಗರವನ್ನು ತೊರೆದು ಮರಗಳಿರುವ ತಂಪಾದ ಪ್ರದೇಶಗಳನ್ನು ಅವುಗಳು ಹುಡುಕಿಕೊಂಡು ಹೋಗುತ್ತವೆ. ಮರಗಳಲ್ಲಿ ಪೊಟರೆಗಳನ್ನು ಅಥವಾ ಮರದ ಕಾಂಡಗಳಲ್ಲಿ ಬಿಳಲು ಮಾಡಿಕೊಂಡು ಒಂದಿಷ್ಟು ತಂಪನ್ನು ಆಶ್ರಯಿಸುತ್ತವೆ. ಹಾಗಾಗಿ ನಗರಗಳಲ್ಲಿ, ಪಕ್ಷಿಗಳ ಜತೆಯಲ್ಲಿ ಹಣ್ಣು ಪ್ರಿಯವಾದ ಅಳಿಲು, ಕೋತಿ, ಮುಂಗುಸಿಗಳ ಸಂಖ್ಯೆ ಕಣ್ಮರೆಯಾಗುವ ಸ್ಥಿತಿಗೆ ಬಂದಿದೆ.

ಮೊದಲೇ ಇದ್ದ ನೂರಾರು ಕೆರೆಗಳನ್ನು ಮುಚ್ಚಿ ಹಾಕಿ ನೀರು ಕುಡಿದಿದ್ದೇವೆ. ಆ ಕೆರೆಗಳು ಇಂದು ಇದ್ದಿದ್ದರೆ ಇಂತಹ ದುರ್ಗತಿ ನಮಗೆ ಬರುತ್ತಿರಲಿಲ್ಲ. ಅಂತರ್ಜಲದ ಮಟ್ಟವು ಹೆಚ್ಚಾಗಿ ನೀರಿಗೂ ಬರ ಆಗುತ್ತಿರಲಿಲ್ಲ. ನಗರಗಳಲ್ಲಿ ಉಳಿದ ಒಂದಿಷ್ಟು ಕೆರೆಗಳನ್ನಾದರೂ ಉಳಿಸಿ ಅಭಿವೃದ್ಧಿ ಪಡಿಸಿ ನೀರು ಉಳಿಸಿ, ಅಂತರ್ಜಲ ಹೆಚ್ಚಿಸಬೇಕು. ನಗರದಲ್ಲಿ ಅಳಿದುಳಿದಿರುವ ಮರಗಳನ್ನು ರಕ್ಷಿಸಿ, ಹಸಿರು ತಾಣಗಳನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಜನರ ಪಾತ್ರವೂ ಇದೆ ಎಂಬುದನ್ನು ಮರೆಯುವಂತಿಲ್ಲ. ಎಲ್ಲರೂ ಕೈ ಜೋಡಿಸಿದರೆ ಈಗಿರುವ ತಾಪಮಾನವನ್ನು ಒಂದಿಷ್ಟು ಕಮ್ಮಿ ಮಾಡಬಹುದು ಎನ್ನುತ್ತಾರೆ ಡಾ.ಎಸ್.ವಿ ಹಿತ್ತಲಮನಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.