7

ಎಡಕಲ್ಲು ಗುಡ್ಡದಲ್ಲಿ ಈಡೇರಿದ ಕನಸು

Published:
Updated:
ಎಡಕಲ್ಲು ಗುಡ್ಡದಲ್ಲಿ ಈಡೇರಿದ ಕನಸು

‘ಸಮಾಜದ ಒಳಿತಿಗೆ ಸಿನಿಮಾ ಮಾಡಬೇಕು. ಅಂತಹ ಚಿತ್ರಕ್ಕೆ ಪ್ರಶಸ್ತಿಯೂ ಸಿಗಬೇಕು’ ಎಂದು ಕನಸು ಕಂಡಿದ್ದರು ವಿವಿನ್ ಸೂರ್ಯ. ತಾವೇ ನಿರ್ದೇಶಿಸಿರುವ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಆ ಕನಸನ್ನು ಈಡೇರಿಸಿದ ಖುಷಿ ಅವರ ಮುಖದಲ್ಲಿತ್ತು. ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಗುಡ್ಡ ಏರಿ ನಿಂತಿದ್ದರು.

ಎಪ್ಪತ್ತದ ದಶಕದಲ್ಲಿ ತೆರೆಕಂಡ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಇಂದಿಗೂ ಚಿತ್ರರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಈ ಶೀರ್ಷಿಕೆ ಇಟ್ಟುಕೊಂಡೇ ವಿವಿನ್‌ ಸೂರ್ಯ ನಿರ್ದೇಶಿಸಿರುವ ಚಿತ್ರ ಈ ವಾರ (ಮೇ 11) ತೆರೆಕಾಣುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

‘ಇದು ಚಿಣ್ಣರ ಮೇಲೆ ಕೇಂದ್ರೀಕರಿಸಿರುವ ಸಿನಿಮಾ. ಸಮಾಜದಲ್ಲಿ ಮಕ್ಕಳು ಹದಗೆಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೇರು ತೆಗೆದುಕೊಂಡು ಸಿನಿಮಾ ಮಾಡಿದ್ದೇನೆ. ಚಿಣ್ಣರ ಬದುಕು ರೂ‍ಪಿಸುವ ಪೋಷಕರು ಜವಾಬ್ದಾರಿ ಮರೆತರೆ ಆಗುವ ಅನಾಹುತಗಳ ಬಗ್ಗೆ ಹೇಳಿದ್ದೇನೆ’ ಎಂದರು ವಿವಿನ್‌.

ಕಮರ್ಷಿಯಲ್‌ ಆಗಿ ಜನರಿಗೆ ಇಷ್ಟವಾಗುವಂತೆ ಸಿನಿಮಾ ರೂಪಿಸಲಾಗಿದೆ ಎಂಬುದು ಚಿತ್ರತಂಡದ ಹೇಳಿಕೆ.

‘ಇದು ನಾಯಕಿ ಪ್ರಧಾನ ಚಿತ್ರ. ನನ್ನ ವೃತ್ತಿ ಜೀವನದ ಆರಂಭದಲ್ಲಿಯೇ ಇಂತಹ ಪಾತ್ರ ಸಿಕ್ಕಿರುವುದು ಖುಷಿ ಕೊಟ್ಟಿದೆ’ ಎಂದು ಸಂತಸ ಹಂಚಿಕೊಂಡರು ನಾಯಕಿ ಸ್ವಾತಿ ಶರ್ಮ.

ವಾರಕ್ಕೆ ಏಳೆಂಟು ಸಿನಿಮಾಗಳು ತೆರೆಕಾಣುತ್ತಿರುವ ಬಗ್ಗೆ ನಟ ದತ್ತಣ್ಣ ಅವರಿಗೆ ಬೇಸರವಿತ್ತು. ‘ಇದಕ್ಕೆ ಪರಿಹಾರ ಗೊತ್ತಾಗುತ್ತಿಲ್ಲ. ಕೆಲವು ಚಿತ್ರಗಳು ಒಂದು ವಾರವೂ ಪ್ರದರ್ಶನಗೊಳ್ಳುವುದಿಲ್ಲ. ಚಿತ್ರಮಂದಿರಗಳಿಂದ ತೆಗೆದು ಹಾಕಿದರೆ ಅದು ಆ ಸಿನಿಮಾಗಳಿಗೆ ಮಾಡುವ ಅಪಮಾನ. ಈ ಬಗ್ಗೆ ಪರಿಹಾರ ಹುಡುಕುವ ಪ್ರಯತ್ನ ನಡೆಯಬೇಕಿದೆ’ ಎಂದು ಆಶಿಸಿದರು.

ನಕುಲ್‌ ಈ ಚಿತ್ರದ ನಾಯಕ. ಭಾರತಿ ವಿಷ್ಣುವರ್ಧನ್, ಕೂದುವಳ್ಳಿ ಚಂದ್ರಶೇಖರ್, ಶ್ರೀನಾಥ್, ವೀಣಾ ಸುಂದರ್, ಮನ್‌ದೀಪ್ ರಾಯ್, ಮೂಗು ಸುರೇಶ್, ಸಿಹಿಕಹಿ ಚಂದ್ರು, ರವಿ ಭಟ್, ಉಷಾ ಭಂಡಾರಿ, ಧರ್ಮೇಂದ್ರ ತಾರಾಗಣದಲ್ಲಿದ್ದಾರೆ. ಜಿ.‍ಪಿ. ಪ್ರಕಾಶ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶಂಕರ್‌ ಛಾಯಾಗ್ರಹಣ ಇರುವ ಚಿತ್ರಕ್ಕೆ ಆಶಿಕ್‌ ಅರುಣ್‌ ಸಂಗೀತ ಸಂಯೋಜಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry