ಗುರುವಾರ , ಫೆಬ್ರವರಿ 25, 2021
30 °C

ನನ್ನೂರು ಚಿಕ್ಕಮಗಳೂರು ನನಗಿಷ್ಟ

ಶಾಹಿನ್ ಎಸ್. ಮೊಕಾಶಿ Updated:

ಅಕ್ಷರ ಗಾತ್ರ : | |

ನನ್ನೂರು ಚಿಕ್ಕಮಗಳೂರು ನನಗಿಷ್ಟ

ನನ್ನ ಹೆಸರು ಶ್ರೀನಿಧಿ ಗೌಡ. ಈಗ ಬರೀ ಶ್ರೀ ಗೌಡ. ಹುಟ್ಟಿ, ಬೆಳೆದದ್ದು ಚಿಕ್ಕಮಗಳೂರಲ್ಲಿ. ಓದಿದ್ದು ಬಿ.ಕಾಂ. ಚಿಕ್ಕ, ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ನಾನು ಕಾಲೇಜು ದಿನಗಳಿಂದಲೂ ಸ್ಟೈಲಿಶ್ ಆಗಿದ್ದೆ. ಯಾವಾಗಲೂ ಹೊಸ ಕೇಶವಿನ್ಯಾಸ ಮತ್ತು ಗಡ್ಡ ಬೆಳೆಸುತ್ತಿದ್ದೆ. ಯಾವುದೇ ಸಿನಿಮಾದ ಡೈಲಾಗ್‌ಗಳನ್ನು ಕನ್ನಡಿ ಮುಂದೆ ಹೇಳುತ್ತ ಕಾಲ ಕಳೆಯುತ್ತಿದ್ದೆ. ತರಬೇತಿ ಪಡೆದವನಲ್ಲ. ಡಿಗ್ರಿ ಮುಗಿದ ನಂತರ ನನ್ನೆಲ್ಲ ಕನಸುಗಳನ್ನು ಮೂಟೆ ಕಟ್ಟಿ ಬೆಂಗಳೂರಿಗೆ ಬಂದೆ.

ಅವಕಾಶಕ್ಕಾಗಿ ಸುತ್ತುವಾಗ ಕೆಲವೊಮ್ಮೆ ಎನಿಸಿತ್ತು,  ನಮ್ಮವರು, ನಮಗೆ ಪರಿಚಯಿಸುವವರು ಯಾರಾದರೂ ಇರಬೇಕಿತ್ತು ಅಂತ. ನನ್ನಷ್ಟಕ್ಕೆ ನಾನು ಪ್ರಯತ್ನ ಪಡುತ್ತಿದ್ದೆ. ನನ್ನ ಖರ್ಚಿಗೆ ಅಂತ ಬೆಂಗಳೂರಲ್ಲೇ ಒಂದು ಕೆಲಸಕ್ಕೆ ಸೇರಿಕೊಂಡೆ. ಇಷ್ಟು ದಿನ ಬೆಳೆಸಿ, ಓದಿಸಿದ ಅಪ್ಪ, ಅಮ್ಮನಿಗೆ ಹೆಗಲಾಗಬೇಕೇ ಹೊರತು ಹೊರೆಯಾಗಬಾರದು ಎನ್ನುವ ತತ್ವ ನನ್ನದು. ಅದಕ್ಕಾಗಿ ನನಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಜೀವನಕ್ಕಾಗುವ ದಾರಿ ಹುಡುಕಿಕೊಳ್ಳಲು ಹೊರಟೆ. ಇಂಡಸ್ಟ್ರಿಗೆ ಬಂದ ಐದು ವರ್ಷಗಳಲ್ಲಿ ನನಗೆ ಚಿಕ್ಕ, ಪುಟ್ಟ ಪಾತ್ರ ಮಾಡಲು ಅವಕಾಶ ಸಿಕ್ಕರೂ ಯಾವುದು ಬ್ರೇಕ್ ಕೊಡುವಂಥ ಪಾತ್ರ ಇರಲಿಲ್ಲ. ಬೇಡವೇ ಬೇಡ ಸ್ಯಾಂಡಲ್‌ವುಡ್ ಸಹವಾಸ ಅಂತ ಬೇಸತ್ತು ಮರಳಿ ಗೂಡಿಗೆ ಸೇರುವಾಗ ‘ಈ ಪಟ್ಟಣಕ್ಕೆ ಏನಾಗಿದೆ’ ಸಿನಿಮಾ ನಿರ್ದೇಶಕ ರವಿ ಸುಬ್ಬರಾವ್ ಅವರ ಪರಿಚಯವಾಯ್ತು. ಅಂದಿನಿಂದ ಅದೃಷ್ಟದ ಬಾಗಿಲು ತೆರೆದಂಗಾಯ್ತು.

ಸುಮಾರು ಧಾರಾವಾಹಿಗಳಿಗೆ ಆಡಿಷನ್‌ಗೆ ಹೋದಾಗ ಬಿಯರ್ಡ್ ತೆಗೆದುಬಿಡಿ ಅಂತ ಹೇಳೋರು. ಅವನ್ನೆಲ್ಲ ಒಪ್ಪಲೇ  ಇಲ್ಲ. ಕೆಲವೊಂದು ಬಾರಿ ನನಗೆ ನನ್ನ ಮೇಲೆಯೇ ಕೋಪ ಬರುತ್ತಿತ್ತು. ಐದು ವರ್ಷ ಸಿಕ್ಕ ಪಾತ್ರಗಳನ್ನು ನಿರ್ವಹಿಸುವ ಅನಿವಾರ್ಯ ಇತ್ತು. ಒಂದೊಂದು ದಿನದ ಪಾತ್ರಗಳಲ್ಲೂ ನಾನು ಕಾಣಿಸಿಕೊಂಡಿರುವ ಉದಾಹರಣೆಗಳಿವೆ.

‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರದಲ್ಲಿ  ಮೈಸೂರಿಗೆ ಬರುವ ಒಬ್ಬ ಮುಸ್ಲಿಂ ಯುವಕನ ಪಾತ್ರ. ಅದು ಮಾಡಿದ ಮೇಲೆ ಮತ್ತೆ ಆಡಿಷನ್ ಕರೆದ್ರು. ಆಗ, ನನ್ನ ಗಡ್ಡ ತೆಗೆಸಿ ನಾಯಕನಾದೆ. ಲೀಡ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡೆ. ಈ ಸಿನಿಮಾದ ಕಥೆ ಕ್ರಿಕೆಟ್ ಬೆಟ್ಟಿಂಗ್ ಮತ್ತು ಅನೇಕ ದುಶ್ಟಟಗಳ ಸುತ್ತ   ತನ್ನದೇ ಒಂದು ಸಂದೇಶವನ್ನು ರವಾನಿಸುತ್ತದೆ.

ಅವಕಾಶ ಸಿಕ್ಕರೆ ಎಂತಹ ಪಾತ್ರ ಸಿಕ್ಕರೂ ಒಪ್ಪಿಕೊಳ್ಳುವೆ. ಪಾತ್ರ ಯಾವುದಾದರೇನು? ಅದಕ್ಕೆ ಜೀವ ತುಂಬುವ ಕೆಲಸ ಪಾತ್ರಧಾರಿಯಿಂದಾಗಬೇಕು. ನನಗೆ ನಟನೆಯ ಜೊತೆಗೆ ನಿರ್ದೇಶನ ಮಾಡೋ ಹಂಬಲ. ಅದರಲ್ಲೂ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾ ಮಾಡಬೇಕು ಅನ್ನೋ ಆಸೆ. ಜೊತೆಗೆ ಕಥೆ ಬರೀತಿನಿ. ಅದರಲ್ಲೂ ಪೂರ್ಣಪ್ರಮಾಣವಾಗಿ ತೊಡಗಿಸಿಕೊಳ್ಳಬೇಕು ಅಷ್ಟೇ.

ಆರಂಭದ ದಿನಗಳಲ್ಲಿ ನನಗೆ ಅವಕಾಶ ಕೊಡಿ ಅಂತ ಸಾಕಷ್ಟು ಜನರ ಹತ್ರ ಹೋದಾಗ ದುಡ್ಡು ಕೊಡಿ ಅಂತ ಕೇಳಿದವರೇ ಜಾಸ್ತಿ. ನಮ್ಮ ಅಭಿನಯ ನೋಡದೆ ಜನ ನೇರವಾಗಿ ಅಷ್ಟು ಕೊಡು, ಇಷ್ಟು ಕೊಡು ಅಂತ ಕೇಳಿದ್ರು. ಆದರೆ, ಕೆಲವರು ಕರೆದು  ಆ್ಯಕ್ಟ್‌ ಮಾಡ್ತೀರಾ ಅಂತ ಕೇಳಿದ್ರು. ಇಂಡಸ್ಟ್ರಿಲೀ ನಮಗೆ ಎಲ್ಲ ತರಹದ ಜನ ಸಿಗ್ತಾರೆ. ಅದಕ್ಕೆ ಹೇಳುವುದು ಸಮಯ ನಮಗಾಗಿ ಕಾಯಲ್ಲ.

ಅವಕಾಶ ನಮ್ಮನ್ನು ಹುಡುಕಿಕೊಂಡು ಬರುವುದು ನಾವು ಅಂದುಕೊಂಡಾಗ ಅಲ್ಲ. ನಾವು ಅವಕಾಶಗಳನ್ನು ಸೃಷ್ಟಿ ಮಾಡಬೇಕು. ಸಿಗುವುದನ್ನು ಸ್ವೀಕರಿಸಿ ಮುನ್ನಡೆಯಬೇಕು. ಹಾಗೆ ನಾನು ಮುನ್ನಡೆಯಲು ಸಹಾಯ ಮಾಡಿದವರು ಅನೇಕರಿದ್ದಾರೆ ಸ್ಯಾಂಡಲ್‌ವುಡ್‌ನಲ್ಲಿ.

ನಟನೆಯಲ್ಲಿ ತೊಡಗಿಸಿಕೊಳ್ಳದಿದ್ದಲ್ಲಿ ಊರಲ್ಲಿ ನಮ್ಮದು ಕಾಫಿ ತೋಟ ಇದೆ. ಸ್ವಲ್ಪ ಜಮೀನಿದೆ. ನನಗೆ ಅಲ್ಲಿ ವೃದ್ಧಾಶ್ರಮ ಅಥವಾ ಅನಾಥಾಶ್ರಮ ಕಟ್ಟಬೇಕು ಅನ್ನೋ ಕನಸಿದೆ. ಅದು ನಾನು ಸಂಪಾದಿಸಿರುವ ಹಣದಿಂದನೇ ಮಾಡ್ಬೇಕು.

ನನ್ನಿಂದ ಸಾಧ್ಯ ಆದಷ್ಟು ಪರೋಪಕಾರ ಮಾಡ್ತೀನಿ. ನನ್ನ ಹುಟ್ಟುಹಬ್ಬವನ್ನು ನಾನು ಯಾವುದಾದರೂ ಅನಾಥಾಶ್ರಮದಲ್ಲೋ, ವೃದ್ಧಾಶ್ರಮದಲ್ಲೋ ಆಚರಿಸುವ ಹಾಗೆ ಅವರಿಗಾಗಿ ಏನಾದರೂ ಮಾಡಬೇಕು ಅನ್ನುವ ಗುರಿ ಇದೆ.

ಬಿಡುವು ಸಿಕ್ಕಾಗೆಲ್ಲಾ ಊರಿನ ಕಡೆ ಪಯಣ ಬೆಳೆಸುವೆ. ನನಗೆ ನಮ್ಮ ಊರು, ಚಿಕ್ಕಮಗಳೂರು ಅಂದ್ರೆ ತುಂಬಾ ಇಷ್ಟ. ಟ್ರೆಕ್ಕಿಂಗ್ ಹೋಗೋದು ತುಂಬಾ ಇಷ್ಟ.  ಬೇಜಾರಾದಾಗ ಬೈಕ್ ಮೇಲೆ ಯಾವುದೋ ಗೊತ್ತಿಲ್ಲದ ದಾರಿಯಲ್ಲಿ, ಹಾಡುಗಳನ್ನು ಕೇಳ್ತಾ  ಹೋಗ್ತೀನಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.