ಮಂಗಳವಾರ, ಮಾರ್ಚ್ 2, 2021
23 °C

ಪ್ರತಿಭಟನೆಯೋ? ಪಲಾಯನವೋ?

ನಟರಾಜ ಹುಳಿಯಾರ್ Updated:

ಅಕ್ಷರ ಗಾತ್ರ : | |

ಪ್ರತಿಭಟನೆಯೋ? ಪಲಾಯನವೋ?

2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆ ಚಲಾವಣೆಯಾದ ಶೇಕಡ 56.8ರಷ್ಟು ಮತಗಳಲ್ಲಿ ಶೇಕಡ 2.49ರಷ್ಟು ‘ನೋಟಾ’ ಮತಗಳಿದ್ದವು. ಯಾವುದೇ ಮತದಾನದಲ್ಲಿ NOTA (ನನ್ ಆಫ್ ದಿ ಎಬವ್) ಚಲಾಯಿಸಿದರೆ, ‘ಈ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಯಾರಿಗೂ ನನ್ನ ಮತ ಇಲ್ಲ’ ಎಂದು ಅರ್ಥ. ಕಳೆದ ವರ್ಷದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ‘ನೋಟಾ’ ಕೆಲವರಿಗೆ ನೇರವಾಗೇ ಹೊಡೆತ ಕೊಟ್ಟಂತಿದೆ. ಅಲ್ಲಿ ಕೆಲವು ಅಭ್ಯರ್ಥಿಗಳು ಎರಡು– ಮೂರು ಸಾವಿರ ಮತಗಳ ಅಂತರದಲ್ಲಿ ಸೋತರು; ಆ ಕ್ಷೇತ್ರಗಳಲ್ಲಿ ‘ನೋಟಾ’ಕ್ಕೆ ಬಿದ್ದ ಮತಗಳು ಈ ಎರಡು– ಮೂರು ಸಾವಿರಕ್ಕಿಂತ ಹೆಚ್ಚು! ಕಳೆದ ವರ್ಷದ ದೆಹಲಿಯ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳಿಗಿಂತ ‘ನೋಟಾ’ಕ್ಕೆ ಹೆಚ್ಚಿನ ಮತಗಳು ಬಿದ್ದವು.

ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಮುನ್ನಾ ದಿನ ‘ನೋಟಾ’ ಆಯ್ಕೆಯ ತಾತ್ವಿಕತೆಯ ಬಗ್ಗೆ ಆಳವಾಗಿ ಯೋಚಿಸುವ ಅಗತ್ಯವಿದೆ. ತಮ್ಮ ವೋಟಿಗೆ ಶಕ್ತಿಯಿದೆ ಎಂದು ನಿಜಕ್ಕೂ ನಂಬುವ ಗ್ರಾಮೀಣ ಮತದಾರರು ‘ನೋಟಾ’ ಚಲಾಯಿಸುತ್ತೇವೆ ಎನ್ನವುದು ತೀರಾ ಕಡಿಮೆ; ನಗರಗಳ ಮತದಾರರ ಬಾಯಲ್ಲಿ ಈ ಮಾತು ಅಲ್ಲಲ್ಲಿ ಕೇಳುತ್ತಿದೆ. ಈಚೆಗೆ ವೇದಿಕೆಯೊಂದು ಕೂಡ ‘ನೋಟಾ’ ಚಲಾಯಿಸಲು ಕರೆ ಕೊಟ್ಟಿದೆ. ಈ ಬಗೆಯ ದನಿಗಳನ್ನು ಚುನಾವಣಾ ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳವರು ಗಂಭೀರವಾಗಿ ಪರಿಶೀಲಿಸಬೇಕು.

2013ರಲ್ಲಿ ಸುಪ್ರೀಂ ಕೋರ್ಟು, ‘ನೋಟಾ’ ಅವಕಾಶ ಕುರಿತು ಚುನಾವಣಾ ಆಯೋಗಕ್ಕೆ ಆದೇಶ ಕೊಟ್ಟ ಮೇಲೆ ಚುನಾವಣಾ ಆಯೋಗ ‘ನೋಟಾ’ ಪರ್ಯಾಯವನ್ನು ಮತಪತ್ರದಲ್ಲಿ ಮುದ್ರಿಸಿತು. ‘ನೋಟಾ’ದ ಪರ, ವಿರೋಧ ಚರ್ಚೆಗಳು ಕೆಲಕಾಲ ನಡೆದವಾದರೂ ಅದರ ದೀರ್ಘ ಪರಿಣಾಮ ಕುರಿತು ರಾಜಕೀಯ ಪಕ್ಷಗಳು ಯೋಚಿಸಲಿಲ್ಲ. ಜಗತ್ತಿನ ಕೆಲವು ದೇಶಗಳಂತೆ ಇಲ್ಲೂ ‘ನೋಟಾ’ ಪ್ರಯೋಗವಾಗಲಿ ಎಂದು ಆರಾಮಾಗಿದ್ದ ರಾಜಕೀಯ ಪಕ್ಷಗಳು ‘ನೋಟಾ’ ತಮ್ಮ ಬುಡಕ್ಕೇ ಬರುತ್ತಿರುವುದರ ಬಗ್ಗೆ ಎಚ್ಚೆತ್ತುಕೊಂಡಿದ್ದು ಕಳೆದ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ; ಅಲ್ಲಿನ ಕೆಲವು ಶಾಸಕರು ‘ನೋಟಾ’ ಚಲಾಯಿಸಲಿರುವ ಸುದ್ದಿ ಹಬ್ಬಿದಾಗ. ಇದರ ಹಿಂದಿನ ತರ್ಕ ಸರಳವಾಗಿತ್ತು: ಚುನಾವಣೆಯಲ್ಲಿ ಮತದಾರರಿಗೆ ದೊರೆತ ಹಕ್ಕು, ಮತದಾರರು ಆರಿಸಿ ಕಳಿಸಿದ ಶಾಸಕರಿಗೂ ಇರುತ್ತದಲ್ಲವೇ? ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರು ‘ನೋಟಾ’ ಚಲಾಯಿಸಿದರೆ ಅವರ ಶಾಸಕತ್ವಕ್ಕೆ ಧಕ್ಕೆಯಿಲ್ಲ. ‘ರಾಜ್ಯಸಭಾ ಚುನಾವಣೆಯಲ್ಲಿ ‘ನೋಟಾ’ ಚಲಾವಣೆ ತನ್ನ ಪಕ್ಷದ ಬಗ್ಗೆ ಶಾಸಕನೊಬ್ಬ ತೋರುವ ಅಸಮಾಧಾನವೂ ಆಗಬಹುದು’ ಎಂದು ರಾಜಕೀಯ ವಿಜ್ಞಾನಿ ಯೋಗೇಂದ್ರ ಯಾದವ್ ವಾದಿಸಿದ್ದರು.

ಆದರೆ, ನಮ್ಮ ಆಯ್ಕೆ ಯಾರೆಂಬುದನ್ನು ಸೂಚಿಸದ ‘ನೋಟಾ’ ಮತಗಳು ಅಂತಿಮವಾಗಿ ವ್ಯರ್ಥವಲ್ಲವೇ? ಇತರ ಎಲ್ಲ ಅಭ್ಯರ್ಥಿಗಳಿಗಿಂತ ‘ನೋಟಾ’ಕ್ಕೆ ಹೆಚ್ಚು ಮತ ಬಿದ್ದರೂ ಅವು ಲೆಕ್ಕಕ್ಕಿಲ್ಲ. ಇನ್ನುಳಿದ ಮತಗಳಲ್ಲಿ ಯಾರು ಹೆಚ್ಚು ಮತ ಪಡೆಯುತ್ತಾರೋ ಅವರು ಆಯ್ಕೆಯಾಗುತ್ತಾರೆ. ಅಂದರೆ ಹೆಚ್ಚಿನ ಸಂಖ್ಯೆಯ ಮತದಾರರು ತಿರಸ್ಕರಿಸಿದ ವ್ಯಕ್ತಿಗಳೇ ಆ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆ ಯಾಗುತ್ತಾರೆ. ಆಗ ಅವರನ್ನು ‘ಅತ್ಯಂತ ತಿರಸ್ಕೃತ ನಾಯಕರು’ ಎಂದು ಬಣ್ಣಿಸಬಹುದೇ! ಈ ನೋಟಾ ಚಲಾವಣೆ ಎಲ್ಲ ಚುನಾವಣೆಗಳಿಗೂ ಹಬ್ಬಿದರೆ ಏನಾಗಬಹುದು? ರಾಷ್ಟ್ರಪತಿ ಚುನಾವಣೆಗೂ ಅನ್ವಯವಾದರೆ ಏನಾಗಬಹುದು? ಅಕಸ್ಮಾತ್ ದೇಶದ ಹೆಚ್ಚಿನ ಸಂಖ್ಯೆಯ ಶಾಸಕ ಮತದಾರರು ಒಬ್ಬ ರಾಷ್ಟ್ರಪತಿ ಅಭ್ಯರ್ಥಿಯ ವಿರುದ್ಧ ‘ನೋಟಾ’ ಚಲಾಯಿಸಿದರೂ ಆ ಅಭ್ಯರ್ಥಿ ರಾಷ್ಟ್ರಪತಿಯಾಗಬಹುದು; ಆದರೆ ಆ ಸ್ಥಾನಕ್ಕೆ ಜನಮನ್ನಣೆ ಇರುತ್ತದೆಯೇ?

‘ನೋಟಾ’ ಜಾರಿಯಾದಾಗಿನಿಂದ ಆ ಬಗ್ಗೆ ವಿಶ್ಲೇಷಕರು ಆತಂಕ ವ್ಯಕ್ತಪಡಿಸುತ್ತಿದ್ದರೂ ಚುನಾವಣೆಯ ಇನ್ನಿತರ ಪಾಲುದಾರರು ಈ ಬಗ್ಗೆ ಸರಿಯಾಗಿ ಯೋಚಿಸಿದಂತಿಲ್ಲ. ಪರ್ಯಾಯ ಆಯ್ಕೆಯಿಲ್ಲದ ಹಾಗೂ ಕೇವಲ ಅಸಮಾಧಾನವನ್ನು ತೋರಿಸುವ ‘ನೋಟಾ’ದಿಂದಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾದೀತು ಎಂಬುದನ್ನು ಗಮನಿಸಿದಂತಿಲ್ಲ. ಒಂದು ಚುನಾವಣೆಯಲ್ಲಿ ಮತದಾರರನ್ನು ಸ್ವತಂತ್ರವಾಗಿ ಯೋಚಿಸಿ ಮತ ಚಲಾಯಿಸಲು ಪ್ರೇರೇಪಿಸಲು ಪ್ರಯತ್ನಿಸಬೇಕೇ ಹೊರತು ಅವರನ್ನು ಸಿನಿಕರನ್ನಾಗಿಸಬಾರದು. ‘ನೋಟಾ’ ಚಲಾಯಿಸುವುದೆಂದರೆ, ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳೂ ಅನರ್ಹರು ಎಂದು ತೀರ್ಮಾನಿಸಿದಂತೆ ತಾನೆ? ಅದರ ಬದಲಿಗೆ, ತಮ್ಮ ಕ್ಷೇತ್ರದಲ್ಲಿ ಯಾವುದೇ ಚುನಾವಣಾ ಭ್ರಷ್ಟಾಚಾರದಲ್ಲಿ ತೊಡಗಿಲ್ಲವೆಂದು ಖಾತ್ರಿಯಿರುವ ಒಬ್ಬ ಸಾಮಾನ್ಯ ಅಭ್ಯರ್ಥಿಗೇ ಮತ ಹಾಕಬಹುದು. ಆಗ ಮತದಾರನಾಗಿ ತಾನು ಕೂಡ ಆಮಿಷಕ್ಕೆ ಒಳಗಾಗದೆ ಉತ್ತಮ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದೆನೆಂಬ ಸಮಾಧಾನಪಡೆಯಬಹುದು; ಆ ಮೂಲಕ ಭವಿಷ್ಯದ ಉತ್ತಮ ನಾಯಕನನ್ನೋ, ನಾಯಕಿಯನ್ನೋ ರೂಪಿಸಬಹುದು. ತಾನು ಯಾಕೆ ಈ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡೆ ಎಂಬುದಕ್ಕೆ ಕಾರಣಗಳನ್ನು ತನ್ನಂತೆ ಯೋಚಿಸುತ್ತಿರುವವರ ಜೊತೆಯೂ ಹಂಚಿಕೊಳ್ಳಬಹುದು. ಆಗ ‘ನೋಟಾ’ದ ನಕರಾತ್ಮಕತೆಯ ಬದಲಿಗೆ ಖಚಿತವಾದ ಸಕಾರಾತ್ಮಕ ಹೆಜ್ಜೆಯನ್ನಿಟ್ಟಂತಾಗುತ್ತದೆ. ಕಣದಲ್ಲಿರುವ ಹಲವರನ್ನು ತಿರಸ್ಕರಿಸಿ, ಒಬ್ಬರನ್ನು ಆಯ್ಕೆ ಮಾಡುವ ಮೂಲಕ ಮತದಾರರು ಕೊಡಬಲ್ಲ ಖಚಿತ ಸಂದೇಶ ‘ನೋಟಾ’ ಮೂಲಕ ಸಾಧಿತವಾಗುವುದಿಲ್ಲ. ‘ನೋಟಾ’ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಖಾತ್ರಿಯಿಲ್ಲ.

ಇಷ್ಟಾಗಿಯೂ, ‘ನೋಟಾ’ ಕೆಲವೊಮ್ಮೆ ರಾಜಕಾರಣಿಗಳಿಗೆ ನೀಡಿದ ಎಚ್ಚರಿಕೆಯಾಗಬಹುದು, ನಿಜ. ಆದರೆ ಅದು ‘ಈ ವ್ಯವಸ್ಥೆಯಲ್ಲಿ ಯಾವುದೂ ಸರಿಯಲ್ಲ’ ಎಂಬ ಬೇಜವಾಬ್ದಾರಿ ಸಿನಿಕತನವಾಗಬಾರದು. ಅದರಲ್ಲೂ, ಪ್ರಜಾಪ್ರಭುತ್ವದ ಸಂಸ್ಥೆಗಳ ಹಲಬಗೆಯ ರಕ್ಷಣೆಗಳು ಅತ್ಯಗತ್ಯವಾಗಿರುವ ಶೋಷಿತ ಹಾಗೂ ದುರ್ಬಲ ಸಮುದಾಯಗಳಂತೂ ‘ನೋಟಾ’ವನ್ನು ಅಸ್ತ್ರವಾಗಿ ಬಳಸುವುದು ತಿರುಗುಬಾಣವಾಗಬಲ್ಲದು. ಈ ಕುರಿತ ಸಂಘಟಿತ ಕರೆಗಳು ಜಾತೀಯತೆ, ಕೋಮುವಾದ, ಸ್ವಜನಪಕ್ಷಪಾತಗಳಿಂದ ಪೀಡಿತವಾದ ಸಮಾಜದಲ್ಲಿ ಅಪಾಯಕಾರಿಯಾಗಬಲ್ಲವು. ಒಂದು ಸಮಾಜದಲ್ಲಿ ಯಾರೂ ಸರಿಯಾದ ನಾಯಕರಿಲ್ಲ ಎಂಬ ಜನರ ಅಸಮಾಧಾನಕ್ಕೆ ಅರ್ಥವಿರಬಹುದು. ಆದರೆ ಇದಕ್ಕೆ ಪರಿಹಾರ ಹುಡುಕುವ ಜವಾಬ್ದಾರಿಯನ್ನು ‘ನೋಟಾ’ ಮತದಾರರು ಹೊತ್ತುಕೊಳ್ಳುವಂತೆ ಕಾಣುವುದಿಲ್ಲ. ಪರ್ಯಾಯದ ಹುಡುಕಾಟದ ಜವಾಬ್ದಾರಿ ಹೊರದಂಥ ಮತದಾರರು ಮಾಡುವ ಪ್ರಜ್ಞಾಪೂರ್ವಕ ತಿರಸ್ಕಾರವು ಅಜ್ಞಾನದಿಂದ ಮಾಡುವ ಮತದಾನಕ್ಕಿಂತ ಹೆಚ್ಚು ಅಪಾಯಕಾರಿಯಲ್ಲವೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.