ಸಮೀರ್‌, ಸಾಯಿ ಪ್ರಣೀತ್‌ಗೆ ಸೋಲು

7
ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌: ಸೆಮಿಗೆ ಮನು, ಸುಮಿತ್‌

ಸಮೀರ್‌, ಸಾಯಿ ಪ್ರಣೀತ್‌ಗೆ ಸೋಲು

Published:
Updated:
ಸಮೀರ್‌, ಸಾಯಿ ಪ್ರಣೀತ್‌ಗೆ ಸೋಲು

ಸಿಡ್ನಿ: ಭಾರತದ ಬಿ.ಸಾಯಿ ಪ್ರಣೀತ್‌ ಮತ್ತು ಸಮೀರ್‌ ವರ್ಮಾ ಅವರು ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಸಾಯಿ ಪ್ರಣೀತ್‌ 21–23, 14–21ರಲ್ಲಿ ಹಾಂಕಾಂಗ್‌ನ ಲೀ ಚೆವುಕ್‌ ಯಿಯು ವಿರುದ್ಧ ಪರಾಭವಗೊಂಡರು.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಪ್ರಣೀತ್‌ ಆರಂಭಿಕ ಗೇಮ್‌ನಲ್ಲಿ ಚುರುಕಿನ ಆಟ ಆಡಿದರು. ಲೀ ಕೂಡ ಮಿಂಚಿದರು. ಹೀಗಾಗಿ ಮೊದಲಾರ್ಧದ ಆಟದಲ್ಲಿ ಸಮಬಲದ ‍ಪೈಪೋಟಿ ಕಂಡುಬಂತು.

ದ್ವಿತೀಯಾರ್ಧದಲ್ಲೂ ಉಭಯ ಆಟಗಾರರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 21–21ರ ಸಮಬಲ ಕಂಡುಬಂತು. ಸಂದಿಗ್ಧ ಪರಿಸ್ಥಿತಿಯಲ್ಲಿ ಒತ್ತಡ ಮೀರಿನಿಂತ ಲೀ, ಚುರುಕಾಗಿ ಎರಡು ಪಾಯಿಂಟ್ಸ್‌ ಕಲೆಹಾಕಿ ಗೇಮ್‌ ಜಯಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿರುವ ಪ್ರಣೀತ್, ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು.

ಎದುರಾಳಿ ಆಟಗಾರನ ರ‍್ಯಾಕೆಟ್‌ನಿಂದ ಸಿಡಿಯುತ್ತಿದ್ದ ಬಲಿಷ್ಠ ಸ್ಮ್ಯಾಷ್‌ಗಳನ್ನು ಹಿಂತಿರುಗಿಸಲು ಪ್ರಯಾಸ ಪಟ್ಟ ಅವರು ಸುಲಭವಾಗಿ ಸೋಲೊಪ್ಪಿಕೊಂಡರು. ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತ ಆಟಗಾರ ಸಮೀರ್‌ 14–21, 6–21ರಲ್ಲಿ ಚೀನಾದ ಲು ಗುವಾಂಗ್‌ಜು ವಿರುದ್ಧ ಪರಾಭವಗೊಂಡರು. ಅರ್ಹತಾ ಸುತ್ತಿನಲ್ಲಿ ಆಡಿ ಪ್ರಧಾನ ಹಂತಕ್ಕೆ ಲಗ್ಗೆ ಇಟ್ಟಿದ್ದ ಗುವಾಂಗ್‌ಜು, ಎರಡು ಗೇಮ್‌ಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿ ಭಾರತದ ಆಟಗಾರನ ಸವಾಲು ಮೀರಿದರು.

ಸೆಮಿಗೆ ಮನು, ಸುಮಿತ್‌: ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿರುವ ಬಿ.ಸುಮಿತ್‌ ರೆಡ್ಡಿ ಮತ್ತು ಮನು ಅತ್ರಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಕ್ವಾರ್ಟರ್‌ ಫೈನಲ್‌ನಲ್ಲಿ ಮನು ಮತ್ತು ಸುಮಿತ್‌ 17–21, 21–19, 21–18ರಲ್ಲಿ ಭಾರತದವರೇ ಆದ ರಾಮಚಂದ್ರನ್‌ ಶ್ಲೋಕ್‌ ಮತ್ತು ಎಂ.ಆರ್‌.ಅರ್ಜುನ್‌ ಅವರನ್ನು ಸೋಲಿಸಿದರು. ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಮನು ಮತ್ತು ಸುಮಿತ್‌ ಮೊದಲ ಗೇಮ್‌ನಲ್ಲಿ ಪರಾಭವಗೊಂಡರು. ಇದರಿಂದ ವಿಚಲಿತರಾಗದ ಅವರು ನಂತರದ ಎರಡು ಗೇಮ್‌ಗಳಲ್ಲಿ ಛಲದಿಂದ ಹೋರಾಡಿ ಗೆದ್ದರು.

ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಮನು ಮತ್ತು ಸುಮಿತ್‌, ಇಂಡೊನೇಷ್ಯಾದ ಬೆರಿ ಆ್ಯಂಗ್ರಿವಾನ್‌ ಮತ್ತು ಹರ್ಡಿಯಾಂಟೊ ವಿರುದ್ಧ ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry