ಅಶ್ವಮೇಧ, ಬಳಿಕ ಪುತ್ರಕಾಮೇಷ್ಟಿ...

7

ಅಶ್ವಮೇಧ, ಬಳಿಕ ಪುತ್ರಕಾಮೇಷ್ಟಿ...

Published:
Updated:
ಅಶ್ವಮೇಧ, ಬಳಿಕ ಪುತ್ರಕಾಮೇಷ್ಟಿ...

ಯಜ್ಞತತ್ತ್ವದ ಬಗ್ಗೆ ವಿವರವಾಗಿ ನೋಡುವುದಕ್ಕೆ ಕಾರಣಗಳೇನು? ಕೌಟುಂಬಿಕ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕಲ್ಪನೆಗಳಿಗೂ ಯಜ್ಞತತ್ತ್ವಕ್ಕೂ ನೇರ ನಂಟಿದೆ. ದೇವಾಲಯದ ಕಲ್ಪನೆಗೆ ಕೂಡ ಯಜ್ಞತತ್ತ್ವವೇ ಮೂಲ ಎಂದು ವಿದ್ವಾಂಸರು ಅನೇಕರು ಪ್ರತಿಪಾದಿಸಿದ್ದಾರೆ. ಬೌದ್ಧರ ಸ್ತೂಪ ಮತ್ತು ಚೈತ್ಯಗಳಿಗೂ ಯಾಜ್ಞಿಕ ಕಲಾಪಗಳೇ ಸ್ಫೂರ್ತಿ. (ಈ ವಿವರಗಳನ್ನು ಮುಂದೆ ನೋಡೋಣ. ಆಸಕ್ತರು ಆನಂದ ಕುಮಾರಸ್ವಾಮಿ, ಸ್ಟೆಲ್ಲಾ ಕ್ರಾಮರಿಷ್‌ ಅವರ ಬರಹಗಳನ್ನು ನೋಡಬಹುದು.)

ಯಜ್ಞದಲ್ಲಿ ಪ್ರಧಾನವಾಗಿರುವ ಮೂರು ವಿಭಾಗಗಳನ್ನು ನೋಡಿದೆವು. ಎಲ್ಲ ಯಜ್ಞಗಳನ್ನು ಎರಡು ಗುಂಪುಗಳಲ್ಲಿ ಎಣಿಸುವುದೂ ಉಂಟು. ಯಜ್ಞವಿಧಾನಕ್ಕೆ ಯಾವ ವಾಙ್ಮಯ ಆಧಾರವಾಗಿದೆ ಎಂಬುದರ ಪ್ರಕಾರ ಶ್ರೌತಯಜ್ಞ ಮತ್ತು ಸ್ಮಾರ್ತಯಜ್ಞ ಎಂದು ವಿಭಾಗಿಸುವುದುಂಟು. ವೇದಸಂಹಿತೆ–ಬ್ರಾಹ್ಮಣಗಳು– ಕಲ್ಪಸೂತ್ರಗಳನ್ನು ಆಧಾರವಾಗಿಸಿಕೊಂಡಂಥವು ಶ್ರೌತಯಜ್ಞಗಳು; ಗೃಹ್ಯಸೂತ್ರಗಳು ಮತ್ತು ಧರ್ಮಸೂತ್ರಗಳು ಆಧಾರವಾಗಿರುವಂಥವು ಸ್ಮಾರ್ತಯಜ್ಞಗಳು. ಅಶ್ವಮೇಧಯಾಗವು ಶ್ರೌತಯಜ್ಞ.

‘ಅಶ್ವಮೇಧ’ ಎಂಬ ಶಬ್ದದಲ್ಲಿಯೇ ಈ ಯಾಗವು ಅಶ್ವ, ಎಂದರೆ ಕುದುರೆಗೆ ಸಂಬಂಧಿಸಿದ್ದು ಎನ್ನುವುದು ಸ್ಪಷ್ಟವಾಗುತ್ತದೆ. ಕುದುರೆಯನ್ನೇ ಯಾಗದಲ್ಲಿ ಆಹುತಿಯನ್ನಾಗಿ ನೀಡಲಾಗುತ್ತಿತ್ತು. ಈ ಯಾಗವನ್ನು ಸಾರ್ವಭೌಮನಾದ ರಾಜನೇ ಮಾಡಬೇಕಾಗುತ್ತಿತ್ತು. ಯಜ್ಞದ ಕುದುರೆಯನ್ನು ಸಂಚಾರಕ್ಕಾಗಿ ಬಿಡಬೇಕಾಗುತ್ತಿತ್ತು. ಅದು ಒಂದು ವರ್ಷ ಪೂರ್ತಿ ತನಗೆ ಇಷ್ಟಬಂದ ಕಡೆ ಸಂಚರಿಸುತ್ತಿತ್ತು. ಅದರ ಕಾವಲಿಗೆ ರಾಜಕುಟುಂಬದ ಪ್ರತಿನಿಧಿಯೊಂದಿಗೆ ಸೈನ್ಯವೂ ಹೊರಡುತ್ತಿತ್ತು. ಅದರ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನು ಒಡ್ಡುವವರು ಯುದ್ಧವನ್ನು ಎದುರಿಸಬೇಕಾಗುತ್ತಿತ್ತು.

ದಶರಥನು ಮಾಡಿದ ಅಶ್ವಮೇಧದ ವರ್ಣನೆಯು ಬಾಲಕಾಂಡದ ಹದಿನಾಲ್ಕನೇ ಸರ್ಗದಲ್ಲಿ ವಿವರವಾಗಿ ಬಂದಿದೆ. ಅಲ್ಲಿಯ ಕೆಲವೊಂದು ವಿವರಗಳನ್ನು ನೋಡಿದರೆ ಆ ಯಾಗದ ಬಗ್ಗೆ ಸ್ವಲ್ಪ ಮಾಹಿತಿ ಸಿಗಬಹುದು.

‘ಸಂವತ್ಸರವು ಪೂರ್ಣವಾಗಿ ಅಶ್ವಮೇಧದ ಕುದುರೆಯು ಹಿಂದಿರುಗಿ ಬಂದಿತು. ಆಗ ಸರಯೂನದಿಯ ಉತ್ತರತೀರದಲ್ಲಿ ದಶರಥಮಹಾರಾಜನ ಅಶ್ವಮೇಧವು ಪ್ರಾರಂಭವಾಯಿತು. ಬ್ರಾಹ್ಮಣರು ಋಷ್ಯಶೃಂಗನನ್ನು ಪ್ರಧಾನ ಋತ್ವಿಜನನ್ನಾಗಿ ಮಾಡಿಕೊಂಡು ವಿಧಿವತ್ತಾಗಿ ಅನುಷ್ಠಾನಗಳನ್ನು ಮಾಡತೊಡಗಿದರು. ವೇದಪಾರಂಗತರಾದ ಆ ಋತ್ವಿಜರು ಶಾಸ್ತ್ರೋಕ್ತ ಕ್ರಮದಲ್ಲಿಯೇ ಯಜ್ಞಶಾಲೆಯಲ್ಲಿ ವ್ಯವಹರಿಸುತ್ತಿದ್ದರು. ಅವರು ಪ್ರವರ್ಗ್ಯಹೋಮವನ್ನೂ ಉಪಸದ ಎಂಬ ಇಷ್ಟಿಯನ್ನೂ ಅದಕ್ಕೆ ಸಂಬಂಧಿಸಿದ ಇತರ ಕರ್ಮಗಳನ್ನೂ ಆಚರಿಸಿದರು.

ಆಯಾ ಕರ್ಮಾಧಿದೇವತೆಗಳನ್ನು ಪೂಜಿಸಿ ಪ್ರಾತಃಸವನ ಮುಂತಾದ ಕರ್ಮಗಳನ್ನು ಅನುಷ್ಠಾನಮಾಡಿದರು.... ಋಷ್ಯಶೃಂಗ ಮೊದಲಾದ ಋತ್ವಿಜರು ಶಿಕ್ಷಾಶಾಸ್ತ್ರವು ಬೋಧಿಸುವಂತೆ ಪರಿಶುದ್ಧವಾದ ಅಕ್ಷರಗಳನ್ನು ಉಚ್ಚರಿಸುತ್ತಾ ಮಂತ್ರಗಳಿಂದ ದೇವೇಂದ್ರನೇ ಮೊದಲಾದ ದೇವತೆಗಳನ್ನು ಆಹ್ವಾನಿಸಿದರು... ಯಾವ ಶಾಸ್ತ್ರಲೋಪವೂ ನಡೆಯಲಿಲ್ಲ... ಆ ದಿನಗಳಲ್ಲಿ ಬಳಲಿದವನಾಗಲಿ, ಹಸಿದವನಾಗಲಿ ಕಂಡುಬರಲಿಲ್ಲ. ಅಲ್ಲಿ ವಿದ್ವಾಂಸನಲ್ಲದ ಬ್ರಾಹ್ಮಣನಿರಲಿಲ್ಲ. ನೂರು ಮಂದಿ ಶಿಷ್ಯರಾದರೂ ಇಲ್ಲದ ಆಚಾರ್ಯನಿರಲಿಲ್ಲ.

ಅಲ್ಲಿ ಬ್ರಾಹ್ಮಣರೂ ಸೇವಕರೂ ತಪಸ್ವಿಗಳೂ ಸನ್ಯಾಸಿಗಳೂ ವೃದ್ಧರೂ ಹೆಂಗಸರೂ ಹುಡುಗರೂ ಪ್ರತಿದಿನವೂ ಊಟಮಾಡುತ್ತಿದ್ದರು... ಇನ್ನೂ ಅನ್ನವನ್ನು ಬಡಿಸಿರಿ, ವಸ್ತ್ರಗಳನ್ನು ಕೊಡಿ ಎಂದು ವಿಚಾರಣಾಕರ್ತರು ಹೇಳುತ್ತಲೇ ಇದ್ದರು... ಪ್ರತಿದಿನವೂ ಕ್ರಮವರಿತು ಮಾಡಿಹಾಕುತ್ತಿದ್ದ ಅನ್ನದ ರಾಶಿಗಳು ಪರ್ವತದಂತೆ ಕಾಣುತ್ತಿದ್ದವು. ನಾನಾ ದೇಶಗಳಿಂದ ಬಂದಿದ್ದವರೆಲ್ಲರೂ ಅಲ್ಲಿಯ ಅನ್ನಪಾನಗಳಿಂದ ತೃಪ್ತರಾದರು... ಯೂಪಸ್ತಂಭವನ್ನು ಪ್ರತಿಷ್ಠೆ ಮಾಡುವ ಸಮಯ ಬಂದಿತು. ಬಿಲ್ವ, ಕಗ್ಗಲಿ, ಪಲಾಶ, ದೇವದಾರು – ಹೀಗೆ ಬೇರೆ ಬೇರೆ ಮರಗಳ ಒಟ್ಟು ಇಪ್ಪತ್ತೊಂದು ಯೂಪಗಳನ್ನು ಪ್ರತಿಷ್ಠಾಪಿಸಲಾಯಿತು... ಯಜ್ಞಶಿಲ್ಪದಲ್ಲಿ ಕುಶಲರಾದ ಬ್ರಾಹ್ಮಣರು ಅಳತೆಗೆ ಅನುಸಾರವಾಗಿ ಇಟ್ಟಿಗೆಗಳನ್ನು ಮಾಡಿ ಅವುಗಳಿಂದ ವೇದಿಯನ್ನು ನಿರ್ಮಿಸಿ ಅಗ್ನಿಯನ್ನು ಚಯನ ಮಾಡಿದರು.

ಯಜ್ಞವೇದಿಯು ಚಿನ್ನದ ಗರಿಗಳಿರುವ ಗರುಡಪಕ್ಷಿಯ ಆಕಾರದಲ್ಲಿತ್ತು.... ಕೌಸಲ್ಯಾದೇವಿಯು ಅಶ್ವವನ್ನು ಪೂಜಿಸಿ, ಪ್ರದಕ್ಷಿಣೆಮಾಡಿ, ಅದರ ಎದೆಯ ಮೇಲೆ ಬಂಗಾರದ ಮೂರು ಸೂಜಿಗಳಿಂದ ಛೇದನಮಾರ್ಗವನ್ನು ಗುರುತಿಸಿದಳು... ಅನಂತರ ಹದಿನಾರು ಮಂದಿ ಋತ್ವಿಜರು ಅಶ್ವದ ಇತರ ಅಂಗಗಳನ್ನೆಲ್ಲ ವಿಧಿವತ್ತಾಗಿ ಅಗ್ನಿಯಲ್ಲಿ ಹೋಮಮಾಡಿದರು... ಅಶ್ವಮೇಧವು ಮೂರು ದಿನ ನಡೆಸತಕ್ಕ ಯಾಗ. ಮೊದಲನೆಯ ದಿನದ ಯಾಗಕಲಾಪವನ್ನು ಅಗ್ನಿಷ್ಟೋಮವೆಂದೂ, ಎರಡನೆಯ ದಿನದ ಕರ್ಮವನ್ನು ಉಕ್ಥ್ಯವೆಂದೂ, ಮೂರನೆಯ ದಿನದ ವಿಧಿಗಳನ್ನು ಅತಿರಾತ್ರವೆಂದೂ ಕರೆಯುತ್ತಾರೆ. ಇವೂ ಅಲ್ಲದೆ ಜ್ಯೋತಿಷ್ಟೋಮ, ವಿಶ್ವಜಿತ್‌, ಆಯುಷ್ಟೋಮ, ಅಭಿಜಿತ್‌, ವಿಶ್ವಜಿತ್‌, ಎರಡು ಅತಿರಾತ್ರಗಳು, ಆಪ್ತೋರ್ಯಾಮ – ಹೀಗೆ ಒಟ್ಟು ಆರು ಕ್ರತುಗಳನ್ನೂ ಮಾಡಲಾಯಿತು...’

ಅಶ್ವಮೇಧಯಾಗದ ವಿಧಿಯಲ್ಲಿರುವ ಕ್ರಿಯೆಯೊಂದು ಸ್ವಾರಸ್ಯಕರವಾಗಿದೆ. ಯಜ್ಞದೀಕ್ಷೆಯಲ್ಲಿರುವ ಮಹಾರಾಜನು ತನ್ನ ರಾಜ್ಯವನ್ನೆಲ್ಲ ಋತ್ವಿಜರಿಗೆ ದಾನ ಮಾಡುತ್ತಾನೆ. ಆದರೆ ಋತ್ವಿಜರು ಅದನ್ನು ಮತ್ತೆ ಅವನಿಗೇ ಹಿಂದಿರುಗಿಸುತ್ತಾರೆ. ದಶರಥನು ಕೂಡ ಹಾಗೆಯೇ ಮಾಡಿದ. ಆಗ ಋತ್ವಿಜರು ‘ಈ ರಾಜ್ಯವನ್ನು ನೀನೇ ರಕ್ಷಿಸಬೇಕು. ನಾವು ಇದನ್ನು ರಕ್ಷಿಸಲಾರೆವು. ನಮಗೆ ಇದರಿಂದ ಆಗಬೇಕಾದ್ದೂ ಇಲ್ಲ. ನಾವು ಯಾವಾಗಲೂ ವೇದಶಾಸ್ತ್ರಗಳನ್ನು ಅಧ್ಯಯನಮಾಡುತ್ತ ಶಿಷ್ಯರಿಗೆ ಕಲಿಸುತ್ತ ಇರತಕ್ಕವರು’ ಎಂದು ಹೇಳಿ ರಾಜ್ಯವನ್ನು ಹಿಂದಿರುಗಿಸಿದರು. ಅವರು ಅದಕ್ಕೆ ಬದಲಾಗಿ ದಕ್ಷಿಣೆಯನ್ನೂ ಹಸುಗಳನ್ನೂ ಪಡೆದರು. ಆ ಎಲ್ಲವನ್ನೂ ಋಷ್ಯಶೃಂಗ ಮತ್ತು ವಸಿಷ್ಠರಿಗೆ ಒಪ್ಪಿಸಿದರು. ಬಳಿಕ ಎಲ್ಲರೂ ಶಾಸ್ತ್ರಪ್ರಕಾರ ತಮಗೆ ಸೇರಬೇಕಾದುದನ್ನು ಮಾತ್ರವೇ ಪಡೆದು, ‘ನಾವು ಸಂತುಷ್ಟರಾದೆವು’ ಎಂದು ಘೋಷಿಸಿದರು. ಯಜ್ಞವು ಸಂಪನ್ನವಾಯಿತು.
(ಆಧಾರ: ಎನ್‌. ರಂಗನಾಥಶರ್ಮಾ ಅವರ ಅನುವಾದ)

ಯಾಗದ ಪರ್ಯಾಯಪದವೇ ತ್ಯಾಗ ಎಂಬ ಮಾತು ಉಲ್ಲೇಖಿತವಾಗಿತ್ತಷ್ಟೆ! ರಾಜನಾದವನು ಎಲ್ಲವನ್ನೂ, ಎಂದರೆ ರಾಜ್ಯವನ್ನೂ ತ್ಯಾಗ ಮಾಡಬೇಕು ಎಂಬುದು ಸೂಚಿತವಾಗಿದೆ. ಇಲ್ಲಿ ಇನ್ನೊಂದು ವಿಶೇಷವನ್ನೂ ಗಮನಿಸಬೇಕು. ದಾನ ಕೊಡುತ್ತಾರೆಂದು ನಮಗೆ ಒಗ್ಗದ, ನಮಗೆ ಸರಿತೂಗದ ವಸ್ತು–ಸಂಪತ್ತುಗಳನ್ನು ಬ್ರಾಹ್ಮಣನು ಪಡೆಯತಕ್ಕದ್ದಲ್ಲ ಎಂಬ ಶಾಸ್ತ್ರನಿಯಮವೂ ಇಲ್ಲಿ ಬಂದಿದೆ. ರಾಜ್ಯವನ್ನು ಯಾರು ಕಾಪಾಡಲು ಸಮರ್ಥನೋ ಅವನು ಮಾತ್ರವೇ ರಾಜನಾಗಲು ಅರ್ಹ ಎನ್ನುವುದು ಶಾಸ್ತ್ರ ಕೊಡುತ್ತಿರುವ ವಿವೇಕ. ಆದರ್ಶರಾಜ್ಯವೆಂದರೆ ನಮ್ಮ ಕರ್ತವ್ಯಗಳನ್ನು ಸರಿಯಾಗಿ ಪಾಲಿಸುವುದೇ ಹೌದು ಎನ್ನುತ್ತದೆ ಪರಂಪರೆ.

ಅಶ್ವಮೇಧಯಾಗ ಮುಗಿದಮೇಲೆ ದಶರಥನು ಋಷ್ಯಶೃಂಗಮುನಿಯಲ್ಲಿಗೆ ಹೋದನು. ‘ಮಹಾತ್ಮ, ನನಗೆ ವಂಶೋದ್ಧಾರಕನಾದ ಮಗನನ್ನು ಕರುಣಿಸು’ ಎಂದು ಅವನನ್ನು ಬೇಡಿಕೊಂಡ. ಆಗ ಆ ಮುನಿಯು ‘ನಿನ್ನ ವಂಶವನ್ನು ಬೆಳಗುವ ನಾಲ್ವರು ಪುತ್ರರು ಜನಿಸುತ್ತಾರೆ’ ಎಂದು ಆಶೀರ್ವದಿಸಿದ. ಸ್ವಲ್ಪಹೊತ್ತು ಸಮಾಧಿಸ್ಥನಾಗಿ ಯೋಚಿಸಿ ‘ನಿನಗೆ ಪುತ್ರಸಂತಾನವಾಗುವುದಕ್ಕಾಗಿ ಪುತ್ರಕಾಮೇಷ್ಟಿಯನ್ನು ಮಾಡಿಸುವೆ’ ಎಂದು ಹೇಳಿ, ಅದರಂತೆ ಆ ಯಾಗವನ್ನು ಮಾಡಿಸಲು ಮುಂದಾದ.

* * *

ಅಶ್ವಮೇಧಯಾಗದ ಬಗ್ಗೆ ಋಗ್ವೇದದಲ್ಲಿಯೇ ಮಂತ್ರಗಳಿವೆ. ಈ ಮಂತ್ರಗಳನ್ನು ಮನನ ಮಾಡಿದರೆ ಇವು ಕೇವಲ ಪ್ರಾಣಿರೂಪದಲ್ಲಿರುವ ಕುದುರೆಯ ಬಗ್ಗೆಯಷ್ಟೆ ಹೇಳುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹೌದು, ಮೇಲ್ನೋಟಕ್ಕೆ ಇದು ‘ಅಶ್ವ’ ಎಂಬ ಪ್ರಾಣಿಯನ್ನೇ ಯಜ್ಞಕ್ಕೆ ಆಹುತಿಯನ್ನಾಗಿ ನೀಡಲಾಗುತ್ತದೆ ಎಂತಿದೆ. ಆದರೆ ಆ ಮಂತ್ರಗಳನ್ನು ಅಷ್ಟಕ್ಕೆ ಸೀಮಿತ ಮಾಡಿಕೊಂಡರೆ ಆಗ ಅವುಗಳ ಅರ್ಥಸ್ವಾರಸ್ಯ ಕೆಡುತ್ತದೆ. ಈ ಮಂತ್ರಗಳ ದಿಟವಾದ ಧ್ವನಿ ಏನು ಎನ್ನುವುದು ‘ಬೃಹದಾರಣ್ಯಕೋಪನಿಷತ್‌’ನಲ್ಲಿದೆ:

‘ಮೇಧ್ಯವಾದ ಅಶ್ವಕ್ಕೆ (ಎಂದರೆ ಯಜ್ಞದಲ್ಲಿ ಆಹುತಿಯಾಗಲಿರುವ ಅಶ್ವ) ಉಷಾ – ಮುಹೂರ್ತವೇ – ತಲೆ; ಸೂರ್ಯನೇ ಕಣ್ಣು; ವಾಯು ಉಸಿರು; ಸಂವತ್ಸರವೇ ಆತ್ಮ; ದ್ಯುಲೋಕವು ಬೆನ್ನು; ಅಂತರಿಕ್ಷವು ಹೊಟ್ಟೆ; ದಿಕ್ಕುಗಳು ಪಕ್ಕೆಗಳು; ಋತುಗಳು ಅಂಗಗಳು; ಮಾಸಗಳೂ ಅರ್ಧಮಾಸಗಳೂ ಪರ್ವಗಳು; ನಕ್ಷತ್ರಗಳು ಎಲುಬುಗಳು; ನಭವು ಮಾಂಸ; ಸಿಂಧುಗಳು ಗುದಗಳು; ಯಕೃತ್ತು ಪರ್ವತ;  ಉದಯಿಸುವ ಸೂರ್ಯನು ಮೊದಲನೆಯ ಅರ್ಧ; ಅಸ್ತವಾಗುವ ಸೂರ್ಯನು ಕೆಳಗಿನ ಅರ್ಧ; ಅದು ಬಾಯಿ ಬಿಡುವುದೇ ಮಿಂಚು; ಅದು ಕೊಡವುತ್ತದೆಯಲ್ಲ, ಅದೇ ಗುಡುಗು; ಅದರ ಮೇಹನವೇ (ಮೂತ್ರ) ಮಳೆ; ಅದರ ಧ್ವನಿಯೇ ವಾಕ್ಕು’.

ಇಡಿಯ ಬ್ರಹ್ಮಾಂಡವನ್ನೇ ಅಶ್ವವನ್ನಾಗಿ ಇಲ್ಲಿ ಕಾಣಿಸಲಾಗಿದೆ. ಅಷ್ಟೇ ಅಲ್ಲ, ‘ನನ್ನ ಶರೀರವೇ ಮೇಧಾರ್ಹವಾದ ಅಶ್ವ’ (ಮೇಧ್ಯಂ ಮೇಧಾರ್ಹಂ ಯಜ್ಞಿಯಂ ಮೇ ಮಮ ಇದಂ ಶರೀರಂ ಸ್ಯಾತ್‌) – ಎಂಬ ಶಂಕರಾಚಾರ್ಯರ ಒಕ್ಕಣೆ ಇಲ್ಲಿ ಮನನೀಯ. ಹೀಗಾಗಿ ಯಜ್ಞತತ್ತ್ವವನ್ನು ಕೇವಲ ವಾಚ್ಯಾರ್ಥದಲ್ಲಿ ಮಾತ್ರವೇ ಗ್ರಹಿಸಿದರೆ ಅನರ್ಥಕ್ಕೆ ದಾರಿಯಾಗುತ್ತದೆಯಷ್ಟೆ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry