ರಾಜಧಾನಿಯಲ್ಲಿ ಹೆಚ್ಚುವುದೇ ಮತ ಪ್ರಮಾಣ

7

ರಾಜಧಾನಿಯಲ್ಲಿ ಹೆಚ್ಚುವುದೇ ಮತ ಪ್ರಮಾಣ

Published:
Updated:
ರಾಜಧಾನಿಯಲ್ಲಿ ಹೆಚ್ಚುವುದೇ ಮತ ಪ್ರಮಾಣ

ಬೆಂಗಳೂರು: ಎರಡು ತಿಂಗಳಿಂದ ಕೈಗೊಂಡ ಅಭಿಯಾನಗಳಿಂದಾಗಿ ರಾಜಧಾನಿಯಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ ಎಂದು ಬಿಬಿಎಂಪಿ ವಿಶ್ವಾಸ ವ್ಯಕ್ತಪಡಿಸಿದೆ.

ಈ ಸಲ ಚುನಾವಣೆ ಘೋಷಣೆಯಾದ ಕೂಡಲೇ ಬಿಬಿಎಂಪಿ ವ್ಯಾಪ್ತಿಯಲ್ಲಿನ ಮತದಾರರಿಗೆ ಮತದಾನದ ಕುರಿತು ಶಿಕ್ಷಣ ನೀಡುವ ಚಟುವಟಿಕೆ ತೀವ್ರಗೊಂಡಿತು. ನಗರದ 119 ಸ್ಥಳಗಳಲ್ಲಿ ಮತದಾರರ ಜಾಗೃತಿ ಸಂದೇಶಗಳನ್ನು ಅಳವಡಿಸಲಾಗಿದೆ. ಅನೇಕ ಕಡೆ ಇವಿಎಂ ಹಾಗೂ ವಿವಿಪ್ಯಾಟ್‌ ಬಳಕೆ ಕುರಿತ ಜಾಗೃತಿ ಶಿಬಿರ ನಡೆಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಹೇಶ್ವರ ರಾವ್‌ ತಿಳಿಸುತ್ತಾರೆ.

ಛಾಯಾಚಿತ್ರ ಪ್ರದರ್ಶನ:

ದೇಶದ ಚುನಾವಣಾ ಪ್ರಕ್ರಿಯೆಯ ಕುರಿತ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಪ್ರದರ್ಶನದಲ್ಲಿ 150 ಛಾಯಾಚಿತ್ರಗಳು ಇದ್ದವು. ಚುನಾವಣೆಗಳ ಐತಿಹಾಸಿಕ ಛಾಯಾಚಿತ್ರಗಳು, ಮತಪತ್ರದ ಮುದ್ರಣ, ಮತ ಎಣಿಕೆ, ಮತ ಪೆಟ್ಟಿಗೆ, ಹೆಸರು ಸೇರಿಸುವ ವಿಧಾನ, ಇವಿಎಂ ಮತ್ತು ಮತದಾನ, ವಿವಿಪ್ಯಾಟ್‌, ರಾಷ್ಟ್ರೀಯ ಮತದಾರರ ದಿನ, ಮತದಾರರ ಪ್ರತಿಜ್ಞೆಯ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ಚುನಾವಣಾ ಅಧಿಕಾರಿಗಳ ಕೈಪಿಡಿ, ಎಂಸಿಸಿ ವರದಿ, ವಿಟ್ರ್ಯಾಕ್‌ ಹಾಗೂ ಚುನಾವಣಾ ರಸಪ್ರಶ್ನೆ ಎಂಬ ಮೊಬೈಲ್‌ ಆ್ಯಪ್‌ಗಳನ್ನು ಸಿದ್ಧಪಡಿಸಿ ಚುನಾವಣಾ ಸಿಬ್ಬಂದಿಗೆ ಅನುಕೂಲ ಮಾಡಿಕೊಡಲಾಗಿದೆ.ಪಾಲಿಕೆಯ ವ್ಯಾಪ್ತಿಯ ಎಲ್ಲ ಕ್ಷೇತ್ರಗಳಲ್ಲಿ ಪಥಸಂಚಲನ ನಡೆಸಿ ಮತದಾನದ ಜಾಗೃತಿ ಮೂಡಿಸಲಾಗಿದೆ ಎಂದು ಪಾಲಿಕೆಯ ವಿಶೇಷ ಆಯುಕ್ತ ಮನೋಜ್‌ ರಾಜನ್‌ ಹೇಳುತ್ತಾರೆ.

2013ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾನ ಪ್ರಮಾಣ ಶೇ 70.2ರಷ್ಟಿತ್ತು. ಬೆಂಗಳೂರು ನಗರದಲ್ಲಿ ಶೇ 53ರಷ್ಟು ಮತದಾರರು ಹಕ್ಕು ಚಲಾಯಿಸಿದ್ದರು. 2008ಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ 5ರಷ್ಟು ಜಾಸ್ತಿಯಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ 77.9 ಮಂದಿ ಮತ ಹಾಕಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry