ಶನಿವಾರ, ಫೆಬ್ರವರಿ 27, 2021
25 °C
ಆತ್ಮೀಯ ಗೆಳೆಯನ ಜೊತೆಗಿನ ಒಡನಾಟ ಮೆಲುಕು ಹಾಕಿದ ‘ಗಿರಿಜವ್ವನ ಮಗ’

ನಮ್ದು ಯಾರೂ ಅಗಲಿಸಲಾರದ ಗೆಳೆತನ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ದು ಯಾರೂ ಅಗಲಿಸಲಾರದ ಗೆಳೆತನ....

ಗಿರಡ್ಡಿ ಗೋವಿಂದರಾಜ, ಚಂದ್ರಶೇಖರ ಪಾಟೀಲ ಮತ್ತು ನನ್ನದು ಯಾರೂ ಅಗಲಿಸಲಾಗದ ಗೆಳೆತನ. ನಾವು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ (ಕೆಸಿಡಿ) ಕೂಡಿಯೇ ಕಲಿತವರು. ಕೂಡಿಯೇ ಕಲಿಸಿದವರು. ನಾನು ಕೆಸಿಡಿಯಲ್ಲೇ ಉಳಿದೆ. ಗಿರಡ್ಡಿ, ಕರ್ನಾಟಕ ಯೂನಿವರ್ಸಿಟಿಗೆ ಹೋದ. ಅಲ್ಲಿಂದ ಫಾರಿನ್‌ಕೂ ಹೋದ. ಯೂನಿವರ್ಸಿಟಿ ಮಾಸ್ತರಿಕಿ ಮುಗಿದ ಮ್ಯಾಲ ಚಂಪಾ ಬೆಂಗಳೂರಿಗೆ ಹೋದ. ನಾನು ಮಾತ್ರ ಮೇಟಿ ಕಟಗಿಹಂಗ ಇಲ್ಲೇ ಧಾರವಾಡದಾಗ ಉಳಿದೆ. ಆಗಾಗ ಮೂವರೂ ಭೆಟ್ಟಿ ಆಗ್ತಿದ್ದೆವು.

1964ರೊಳಗ ಗಿರಡ್ಡಿ, ಚಂಪಾ ಮತ್ತು ನಾನು ಸೇರಿಕೊಂಡು ‘ಸಂಕ್ರಮಣ’ ಪತ್ರಿಕೆ ಚಾಲೂ ಮಾಡಿದೆವು. ಮಾಡಿದ್ದಷ್ಟ ಅಲ್ಲ; ಹನ್ನೊಂದು ವರ್ಷ ಜೊತೆಯಾಗಿ ನಡೆಸಿದವು. ಆ ನಂತರವೂ ಚಂಪಾ ನಡೆಸಿಕೊಂಡು ಹೊಂಟಾನ. ಮೂವರದ್ದೂ ಎಂಥ ಅಪರೂಪದ ಗೆಳೆತನ ಅಂದ್ರ, ನಮ್ಮನ್ನು ಯಾರೂ, ಯಾವ ಕಾಲಕ್ಕೂ ಅಗಲಿಸಾಕ ಸಾಧ್ಯನ.. ಇಲ್ಲದಂಥ ಗೆಳೆತನ ಇತ್ತು.

ಗಿರಡ್ಡಿ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಾಗ ಪ್ರಾಧ್ಯಾಪಕ ಆಗಿದ್ದ. ನಾನು ಕೆಸಿಡಿ ಹಿಂದಿ ವಿಭಾಗದಾಗ ಇದ್ದೆ. ಅಂವಾ ವಿಮರ್ಶೆಯ ಕಡೆ ಹೊರಳಿದರೆ; ಚಂಪಾ ವಿಡಂಬನೆ, ರಾಜಕೀಯದತ್ತ ಹೊರಳಿದ. ನಾನು ಕಾವ್ಯ, ಮನುಷ್ಯ ಸಂಬಂಧಗಳನ್ನು ಬರಕೊಂತ ಹೊಂಟೆ. ನಮ್ಮ ಸಾಹಿತ್ಯದ ಒಲವುಗಳು ಭಿನ್ನ ಆಗಿದ್ವು. ನಾವು ಮೂವರೂ ಸೇರಿದಾಗ ಸಾಕಷ್ಟು ವಿಚಾರ ಚರ್ಚೆ ಮಾಡತಿದ್ದೆವು. ಮಾತುಕತೆ ಮೂಲಕನ ನಮ್ಮ ಮಧ್ಯದ ಸಾಹಿತ್ಯಕ ಭಿನ್ನಾಭಿಪ್ರಾಯಾನೂ ಪರಿಹಾರ ಮಾಡಿಕೊಂತಿದ್ದೆವು.

ನಮ್ಮ ಕಾಲೇಜು ದಿನಗಳಲ್ಲಿ ನಮ್ಮ ಸ್ನೇಹ ಹೇಗಿತ್ತೋ ಈಗಲೂ ಹಾಗೆಯೇ ಇತ್ತು. ‘ಸಂಕ್ರಮಣ’ ಬಿಟ್ಟ ನಂತರನೂ ಆಗಾಗ ಅವನು ನನ್ನ ಮನೆಗೆ ಬರ್ತಿದ್ದ. ನಾನು, ಹೇಮಾ ಅವನ ಮನೆಗೆ ಹೋಗ್ತಿದ್ದೆವು. ಇತ್ತೀಚೆಗೆ ನಾಗರಾಜ ವಸ್ತಾರೆ, ಅಪರ್ಣಾ ದಂಪತಿ ಬಂದಾಗ ಅವರ ಮನೆಗೆ ಕರೆದೊಯ್ಯುವಂತೆ ಕೇಳಿದ್ದರು. ಗಿರಡ್ಡಿಗೆ ಫೋನ್‌ ಮಾಡಿ ಹೇಳಿದಾಗ ಖುಷಿಯಿಂದ ನಮ್ಮನ್ನು ಬರಮಾಡಿಕೊಂಡಿದ್ದ. ಆ ನಂತರ ನನ್ನ ಆತ್ಮಕತೆ ‘ಗಿರಿಜವ್ವನ ಮಗ’ ಬಿಡುಗಡೆಯಾಯ್ತು. ಅದನ್ನು ನಾನೇ ಖುದ್ದಾಗಿ ತಲುಪಿಸಲು ಆಗಿರಲಿಲ್ಲ. ಹೇಮಾ ಪೋಸ್ಟ್‌ ಮೂಲಕ ಕಳಿಸಿದ್ದಳು. ‘ನಿನ್ನ ಪುಸ್ತಕ ಬಂದು ಮುಟ್ಟಿದೆ’ ಎಂದು ಎಸ್‌ಎಂಎಸ್‌ ಕಳಿಸಿದ್ದ. ಅಬ್ಬಾ ನನ್ನ ಗೆಳೆಯಾ ನನ್ನ ಆತ್ಮಕಥಿ ಓದಾಕತ್ತಾನ ಅಂತ ಖುಷಿ ಆಗಿತ್ತು. ಅಂಥಾ ಜೀವದ ಗೆಳೆಯ ಈಗ ಇಲ್ಲ ಅಂದರೆ ನನಗಂತೂ ನಂಬಾಕ ಆಗಾಕತ್ತಿಲ್ಲ. ಅವನು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ನ ಅಧ್ಯಕ್ಷನಾಗಿದ್ದ. ನಾನು ಮತ್ತು ಚಂಪಾ ಆ ಸಂಭ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆವು. ವಿಧಿ ಅವನನ್ನು ಇಷ್ಟು ಲಗೂನ ಕರೆಸಿಕೊಳ್ಳಬಾರದಿತ್ತು.

ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.