ಈ ಅಭ್ಯರ್ಥಿಗಳ ಮತ ಅವರಿಗೇ ಇಲ್ಲ!

7
ದಾವಣಗೆರೆ: ದಕ್ಷಿಣ ಕ್ಷೇತ್ರದಲ್ಲಿ ರವೀಂದ್ರನಾಥ್‌, ಉತ್ತರ ಕ್ಷೇತ್ರದಲ್ಲಿ ಶಾಮನೂರು ಮತ ಚಲಾವಣೆ

ಈ ಅಭ್ಯರ್ಥಿಗಳ ಮತ ಅವರಿಗೇ ಇಲ್ಲ!

Published:
Updated:

ದಾವಣಗೆರೆ: ಒಂದೊಂದು ಮತವನ್ನೂ ಬುಟ್ಟಿಗೆ ಹಾಕಿಕೊಳ್ಳಲು ಬಿರುಸಿನ ಪ್ರಚಾರ ನಡೆಸಿರುವ ಈ ನಾಯಕರ ಮತ ಅವರಿಗೇ ಇಲ್ಲ !

ಹಿರಿಯ ರಾಜಕಾರಣಿಗಳಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎ. ರವೀಂದ್ರನಾಥ್‌ ಸ್ಪರ್ಧಿಸಿರುವ ಕ್ಷೇತ್ರಗಳ ಮತದಾರರಪಟ್ಟಿಯಲ್ಲಿ ಇವರಿಬ್ಬರ ಹೆಸರೂ ಇಲ್ಲ.

ಕಾಂಗ್ರೆಸ್‌ ಹುರಿಯಾಳು ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಆದರೆ, ಅವರು ವಾಸವಿರುವುದು ಉತ್ತರ ಕ್ಷೇತ್ರ ವ್ಯಾಪ್ತಿಯ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ. ಈ ವಾರ್ಡ್‌ನ ಮತದಾರರ ಪಟ್ಟಿಯಲ್ಲೇ ಅವರ ಹೆಸರು ಇದೆ. ಇಲ್ಲಿನ ಐಎಂಎ ಸಭಾಂಗಣದಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಅವರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಬಿಜೆಪಿಯಿಂದ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ರವೀಂದ್ರನಾಥ್‌ ಅವರ ಊರು ಶಿರಮಗೊಂಡನಹಳ್ಳಿ. ಈ ಹಳ್ಳಿ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ರವೀಂದ್ರನಾಥ್‌ ಅವರು ಶಿರಮಗೊಂಡನಹಳ್ಳಿಯ ಶಾಲೆಯಲ್ಲಿ ತೆರೆದಿರುವ ಮತಗಟ್ಟೆಯಲ್ಲಿ ಮತದಾನ ಮಾಡಲಿದ್ದಾರೆ.

ಇನ್ನು ಮಾಯಕೊಂಡ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶೀಲಾನಾಯ್ಕ ಅವರು ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿ ವಾಸವಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅವರ ಹೆಸರೂ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಇಲ್ಲ. ಇದೇ ಕ್ಷೇತ್ರದ ಮತ್ತೊಬ್ಬ ಅಭ್ಯರ್ಥಿ ಬಿಜೆಪಿಯ ಪ್ರೊ. ಲಿಂಗಣ್ಣ ಕೂಡ ದಾವಣಗೆರೆಯ ಎಂ.ಸಿ.ಸಿ ‘ಬಿ’ ಬ್ಲಾಕ್‌ ವ್ಯಾಪ್ತಿಯಲ್ಲಿ ವಾಸವಿದ್ದಾರೆ. ಅವರೂ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಹೊಂದಿಲ್ಲ.

ಹರಪನಹಳ್ಳಿ ಕ್ಷೇತ್ರದಲ್ಲಿ ಗೆದ್ದು ಕಂದಾಯ ಸಚಿವರಾಗಿದ್ದ ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿ ಅವರ ಹೆಸರು ಕೂಡ ಹರಪನಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿಲ್ಲ. 10 ವರ್ಷಗಳಿಂದ ಹರಪನಹಳ್ಳಿಯಲ್ಲಿ ರಾಜಕಾರಣ ಮಾಡುತ್ತಿರುವ ರೆಡ್ಡಿ, ‘ಬಳ್ಳಾರಿ ಜಿಲ್ಲೆ ಹಂಸಭಾವಿ ಪಟ್ಟಣದ ಸಿರಗುಪ್ಪ ರಸ್ತೆಯಲ್ಲಿ ವಾಸವಿದ್ದೇನೆ’ ಎಂದು ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

ಹಾಗೆಯೇ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಎನ್‌. ಕೊಟ್ರೇಶ್‌ ಅವರ ಮತವೂ ಹರಪನಹಳ್ಳಿ ಕ್ಷೇತ್ರದಲಿಲ್ಲ. ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ಕೊಟ್ರೇಶ್‌ ವಾಸವಿದ್ದಾರೆ. ಅರಸೀಕೆರೆ ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದೆ. ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ವಿ. ರಾಮಚಂದ್ರ ದಾವಣಗೆರೆಯ ಕೆ.ಬಿ. ಬಡಾವಣೆಯಲ್ಲಿ ಸ್ವಂತ ಮನೆ ಹೊಂದಿದ್ದು, ಇಲ್ಲಿಯೇ ಇದ್ದಾರೆ. ಅವರು ದಾವಣಗೆರೆ ನಗರದಲ್ಲಿಯೇ ಮತ ಚಲಾಯಿಸಲಿದ್ದಾರೆ.

ಹೀಗಾಗಿ, ಈ ಅಭ್ಯರ್ಥಿಗಳಿಗೆ ಅವರವರ ಮತಗಳನ್ನು ಹಾಕಿಕೊಳ್ಳುವ ಅವಕಾಶ ಸಿಗದು.

ಇವರಿಗಿದು ಮೊದಲ ಚುನಾವಣೆ

ಜೆಡಿಎಸ್‌ನಿಂದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಮಾನುಲ್ಲಾ ಖಾನ್‌, ಉತ್ತರ ಕ್ಷೇತ್ರದ ಅಭ್ಯರ್ಥಿ ಆನಂದ್‌, ಮಾಯಕೊಂಡದಿಂದ ಕಣಕ್ಕಿಳಿದಿರುವ ಶೀಲಾನಾಯ್ಕ ಅವರಿಗಿದು ಮೊದಲ ವಿಧಾನಸಭಾ ಚುನಾವಣೆ.

ಮಾಯಕೊಂಡದಲ್ಲಿ ಜಿಲ್ಲಾ ಪಂಚಾಯ್ತಿ ಆನಗೋಡು ಕ್ಷೇತ್ರದ ಸದಸ್ಯ ಕೆ.ಎಸ್‌. ಬಸವರಾಜ್‌ (ಬಸವಂತಪ್ಪ) ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದ್ದು, ಇವರಿಗೂ ಇದು ವಿಧಾನಸಭೆಗೆ ಮೊದಲ ಸ್ಪರ್ಧೆ. ಜಗಳೂರು ಕ್ಷೇತ್ರದ ಬಂಡಾಯ (ಕಾಂಗ್ರೆಸ್‌) ಅಭ್ಯರ್ಥಿ ಪುಷ್ಪಾ ಲಕ್ಷ್ಮಣಸ್ವಾಮಿ ಕೂಡ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry