ಸ್ವಂತ ವರ್ಚಸ್ಸಿಗೆ ಕ್ರಿಕೆಟ್‌ ಆಡಬೇಡಿ

6
ಶತಕ ದಾಖಲಿಸುವ ದುರಾಸೆ ಬೇಡ: ಸೈಯದ್‌ ಕಿರ್ಮಾನಿ

ಸ್ವಂತ ವರ್ಚಸ್ಸಿಗೆ ಕ್ರಿಕೆಟ್‌ ಆಡಬೇಡಿ

Published:
Updated:
ಸ್ವಂತ ವರ್ಚಸ್ಸಿಗೆ ಕ್ರಿಕೆಟ್‌ ಆಡಬೇಡಿ

ಶಿರ್ವ: ‘ಭಾರತೀಯ ಕ್ರಿಕೆಟ್ ಆಟಗಾರರು ಸ್ವಂತ ವರ್ಚಸ್ಸಿಗಿಂತ ದೇಶಕ್ಕಾಗಿ ಆಡುವ ಪರಿಪಾಠ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ಆಡುವ ಶ್ರದ್ಧೆ ಬೆಳೆಸಿಕೊಂಡಾಗ ಎಲ್ಲ ಪಂದ್ಯಗಳಲ್ಲಿ ಗೆಲುವು ಕಾಣಲು ಸಾಧ್ಯ. ಶತಕ ದಾಖಲಿಸುವ ದುರಾಸೆ ಬಿಡಬೇಕು’ ಎಂದು ಮಾಜಿ ಕ್ರಿಕೆಟ್‌ ಆಟಗಾರ ಸೈಯದ್ ಕಿರ್ಮಾನಿ ಹೇಳಿದರು.

ಶುಕ್ರವಾರ ಕಟಪಾಡಿಗೆ ಬಂದಿದ್ದ ಅವರು ‘ಪ್ರಜಾವಾಣಿ’ ಜತೆಗೆ ಅಭಿಪ್ರಾಯ ಹಂಚಿಕೊಂಡರು. ಕ್ರಿಕೆಟ್‌ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ತಮ್ಮ ಮಾತು ಆರಂಭಿಸಿದರು.

‘ಕ್ರಿಕೆಟ್ ದೇಶದ ಶಿಸ್ತಿನ, ಮೆಚ್ಚಿನ ಕ್ರೀಡೆ. ನಾಲ್ಕು ದಶಕಗಳ ಹಿಂದೆ ನಾನು ಕೂಡಾ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದೆ. ಈಗ ಸಾಕಷ್ಟು ಬದಲಾವಣೆ ಗಾಳಿ ಬೀಸುತ್ತಿದೆ. ಕ್ರಿಕೆಟ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಮಾಧ್ಯಮಗಳಿಂದಾಗಿ ಸಾಕಷ್ಟು ಪ್ರಚಾರವೂ ಸಿಗುತ್ತಿದೆ. 1975ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವಿಶ್ವಕಪ್‌ ಗೆದ್ದು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದೆವು. ಆಗ ನಮ್ಮೆಲ್ಲರೂ ಆಟ ಬಗ್ಗೆ ಬದ್ಧತೆ ಇತ್ತು’ ಎಂದು ನೆನಪಿಸಿಕೊಂಡರು.

‘ಪುರುಷರ ಕ್ರಿಕೆಟ್ ಜತೆಗೆ ಮಹಿಳೆಯರೂ ಕ್ರಿಕೆಟ್‌ಗೆ ಲಗ್ಗೆ ಇಟ್ಟಿದ್ದಾರೆ. ಐಪಿಎಲ್, ಕೆಪಿಎಲ್ ಮಾದರಿ ಕ್ರಿಕೆಟ್ ಬಂದ ಮೇಲೆ ಟೆಸ್ಟ್ ಸರಣಿಗೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ. ಕರ್ನಾಟಕದಲ್ಲಿಯೂ ಕ್ರಿಕೆಟ್ ದಿಗ್ಗಜರು ಸಾಧನೆ ಮೆರೆಯುತ್ತಿದ್ದಾರೆ. ಆಟಗಾರರ ಆಯ್ಕೆಯಿಂದ ಹಿಡಿದು ಸವಲತ್ತುಗಳವರೆಗೆ ಎಲ್ಲವೂ ಬದಲಾವಣೆ ಆಗಿದೆ. ಮಂಡಳಿ ಕೂಡಾ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ’ ಎಂದು ಹೇಳಿದರು.

‘ಕರಾವಳಿ ಜಿಲ್ಲೆಯಲ್ಲಿ ಉಡುಪಿ ಮತ್ತು ಮಂಗಳೂರಿನಲ್ಲಿ ಯುವ ಕ್ರೀಡಾಪಟುಗಳಿಗೆ ಅಕಾಡೆಮಿಗಳ ಮೂಲಕ ಸಾಕಷ್ಟು ತರಬೇತಿ ಸಿಗುತ್ತಿದೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಕರಾವಳಿ ಆಟಗಾರರು ಕೂಡ ಮಿಂಚಬೇಕು. ಈ ಭಾಗದ ಜತೆಗೆ 20 ವರ್ಷಗಳಿಂದ ನಂಟು ಇದೆ. ಕರಾವಳಿಗರು ಸ್ನೇಹ ಜೀವಿಗಳು’ ಎಂದು ಬಣ್ಣಿಸಿದರು.

‘ಒತ್ತಾಯಕ್ಕೆ ಮಣಿದು ಕ್ರಿಕೆಟ್‌ಗೆ ಬರಬೇಡಿ’

‘ಕ್ರಿಕೆಟ್ ಆಟಗಾರರಲ್ಲಿ ಶಿಸ್ತು ಬೇಕು. ಅಂದರೆ ಮಾತ್ರ ಮಿಂಚಲು ಸಾಧ್ಯ. ಹಿರಿಯರನ್ನು ಪ್ರೀತಿ ಆದರದಿಂದ ಕಾಣುವ ಗುಣ ಇದ್ದಾಗ ಜೀವನದಲ್ಲಿ ಗುರಿ ಸಾಧನೆ ಸಾಧ್ಯ. ತಂದೆ –ತಾಯಿ ಒತ್ತಾಯಕ್ಕೆ ಕ್ರಿಕೆಟ್ ತರಬೇತಿ ಪಡೆಯಬಾರದು. ತರಬೇತಿ ಅವಧಿಯಲ್ಲಿ ಆಲ್ ರೌಂಡರ್ ಆಗಿ ಮೂಡಿಬರುವ ಪ್ರಯತ್ನಕ್ಕಾಗಿ ಶಕ್ತಿಮೀರಿ ದುಡಿಯಬೇಕು. ಎಲ್ಲ ವಿಭಾಗಗಳಲ್ಲಿ ತರಬೇತಿ ಪಡೆದಾಗ ಮಾತ್ರ ಕ್ರಿಕೆಟ್ ಬಗ್ಗೆ ಸಂಪೂರ್ಣ ತಿಳಿವಳಿಕೆ ಬರುವುದಕ್ಕೆ ಸಾಧ್ಯ’ ಎಂದು ಸೈಯದ್‌ ಕಿರ್ಮಾನಿ ಹೇಳಿದರು.

ಪ್ರಕಾಶ್‌ ಸುವರ್ಣ ಕಟಪಾಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry