ಗುಳೆ ಹೋಗಿದ್ದವರು ವಾಪಸ್ ಬಂದರು

7
ಮತದಾನ ಮಾಡಲು ತವರಿಗೆ ಬಂದರು ಅನೇಕರು l ಬಸ್‌ಗಳ ಕೊರತೆ l ಜನರ ಪರದಾಟ

ಗುಳೆ ಹೋಗಿದ್ದವರು ವಾಪಸ್ ಬಂದರು

Published:
Updated:
ಗುಳೆ ಹೋಗಿದ್ದವರು ವಾಪಸ್ ಬಂದರು

ಚಾಮರಾಜನಗರ: ಉದ್ಯೋಗಕ್ಕಾಗಿ ಗುಳೆ ಹೊರಡುವುದಕ್ಕೆ ಹೆಸರುವಾಸಿ ಯಾದ ಚಾಮರಾಜನಗರದ ಗ್ರಾಮಗಳಲ್ಲಿ ಈಗ ಜನವೋ ಜನ. ಇಲ್ಲಿವರೆಗೆ ಕೇವಲ ವೃದ್ಧಾಶ್ರಮಗಳಂತಾಗಿದ್ದ ಹಳ್ಳಿಗಳಲ್ಲಿ ಶುಕ್ರವಾರ ಸಂಜೆಯಿಂದಲೇ ಯುವಕ, ಯುವತಿಯರ ದಂಡು ಸೇರತೊಡಗಿದೆ.ಹೊಟ್ಟೆಪಾಡಿಗಾಗಿ ಬೇರೆ ಊರಿನಲ್ಲಿ ನೆಲೆ ನಿಂತಿದ್ದ ಅನೇಕರು ಮತದಾನ ಮಾಡಲೆಂದು ತವರಿನತ್ತ ಮುಖ ಮಾಡಿದ್ದಾರೆ.

ಮುಖ್ಯವಾಗಿ ಚಾಮರಾಜನಗರ, ಕೊಳ್ಳೇಗಾಲ, ಹನೂರು ವಿಧಾನಸಭಾ ಕ್ಷೇತ್ರಗಳಿಗೆ ಸೇರಿದ ಸಾವಿರಾರು ಜನರು ಉದ್ಯೋಗ ಅರಸಿ ಬೆಂಗಳೂರು, ಮೈಸೂರು ಭಾಗಗಳಲ್ಲಿ ತಾತ್ಕಾಲಿಕವಾಗಿ ನೆಲೆ ನಿಂತಿದ್ದಾರೆ. ಗುಂಡ್ಲುಪೇಟೆ ಭಾಗದ ಜನರು ಕೇರಳ ಹಾಗೂ ತಮಿಳುನಾಡುಗಳಿಗೆ ಕೆಲಸ ಅರಸಿ ಹೊರಟಿದ್ದಾರೆ. ಕೆಲವು ಊರುಗಳಲ್ಲಂತೂ ಯುವಜನರೇ ಇಲ್ಲದೇ ಕೇವಲ ವಯೋವೃದ್ಧರಷ್ಟೇ ಉಳಿದಿದ್ದಾರೆ. ವಲಸೆ ಹೋದವರೆಲ್ಲರೂ ಹಬ್ಬ ಹರಿದಿನಗಳಿಗೆ, ಸಮಾರಂಭಗಳಿಗೆ ಇಲ್ಲಿಗೆ ಬರುತ್ತಿರುತ್ತಾರೆ. ಮತದಾರರ ಪಟ್ಟಿಯಲ್ಲಿ ಇಲ್ಲಿಯೇ ಹೆಸರು ಇರುವುದರಿಂದ ಬಹಳಷ್ಟು ಮಂದಿ ಮತ ಚಲಾವಣೆಗಾಗಿಯೇ ಇಲ್ಲಿಗೆ ಬಂದಿದ್ದಾರೆ.

ಮತದಾನದ ದಿನ ಶನಿವಾರವಾಗಿರುವುದರಿಂದ ಭಾನುವಾರವೂ ಸೇರಿದಂತೆ ಒಟ್ಟು 2 ದಿನಗಳು ರಜೆ ಸಿಗುತ್ತದೆ. ಹುಟ್ಟೂರಿನಲ್ಲಿ ಆರಾಮವಾಗಿ ಎರಡು ದಿನಗಳ ಕಾಲ ಇರಬಹುದು ಎಂಬುದು ಒಂದು ಲೆಕ್ಕಾಚಾರವಾದರೆ, ಮತ್ತೊಂದಿಷ್ಟು ಜನರಿಗೆ ಇಲ್ಲಿನ ಅಭ್ಯರ್ಥಿಗಳು ಅಥವಾ ಬೆಂಬಲಿಗರು ದೂರವಾಣಿ ಕರೆ ಮಾಡಿ ಮನವಿ ಮಾಡಿರುವುದು ಮತ್ತೊಂದು ಕಾರಣವಾಗಿದೆ. ಈ ಎರಡೂ ಕಾರಣಗಳಿಂದಾಗಿ ವಲಸಿಗರು ಇತ್ತ ಬರುತ್ತಿದ್ದಾರೆ.

ಮತದಾನ ಮಾಡಲೇಬೇಕು ಎನ್ನುವ ಚುನಾವಣಾ ಆಯೋಗದ ವ್ಯಾಪಕ ಪ್ರಚಾರಕ್ಕೆ ಓಗೊಟ್ಟು ಅನೇಕರು ಬರುತ್ತಿದ್ದಾರೆ. ಮಧ್ಯಾಹ್ನದ ನಂತರ ಬೆಂಗಳೂರು, ಮೈಸೂರು, ತಮಿಳುನಾಡು ಹಾಗೂ ಕೇರಳದಿಂದ ಬರುವ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕ ಇತ್ತು. ಮೈಸೂರಿನಿಂದಂತೂ ಇಲ್ಲಿಗೆ ಬರುವ ಎಲ್ಲ ಬಸ್‌ಗಳಲ್ಲೂ ಕಿಕ್ಕಿರಿದು ಜನರು ‍ಪ್ರಯಾಣಿಸುತ್ತಿದ್ದರು.

ಒಂದೇ ಊರಿನ ಅಥವಾ ಅಕ್ಕಪಕ್ಕದ ಊರಿನವರು ಗುಂಪಾಗಿ ಒಂದೆಡೆ ನೆಲೆಸಿರುವಂಥವರು ಕುಟುಂಬಗಳ ಸಮೇತ ಖಾಸಗಿ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌ಗಳಲ್ಲಿ ತವರಿನತ್ತ ಬರುತ್ತಿದ್ದಾರೆ. ಇವರಲ್ಲಿ ಮತದಾನ ಮಾಡಬೇಕು ಎಂಬ ಹಂಬಲದವರು ಕೆಲವರಿದ್ದರೆ, ಅಭ್ಯರ್ಥಿಗಳ ಬೆಂಬಲಿಗರ ವಿರೋಧವನ್ನು ಕಟ್ಟಿಕೊಳ್ಳಬಾರದು ಎನ್ನುವ ಹಲವರೂ ಇದ್ದಾರೆ.

ಇದರಿಂದಾಗಿ ಶನಿವಾರ ಹಾಗೂ ಭಾನುವಾರ ಎರಡು ದಿನವೂ ಎಲ್ಲ ಹಳ್ಳಿಗಳೂ ಯುವಜನರಿಂದ ತುಂಬಿ ಹೋಗಲಿವೆ. ಗ್ರಾಮಗಳಿಗೆ ಊರಹಬ್ಬದ ಕಳೆ ಬಂದಿದೆ. ಈ ರೀತಿ ಬೇರೆ ಊರಿನಿಂದ ಬಂದವರನ್ನು ಅಭ್ಯರ್ಥಿಗಳ ಬೆಂಬಲಿಗರು ಮನೆಮನೆಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದ ದೃಶ್ಯಗಳು ಶುಕ್ರವಾರ ಸಂಜೆ ಸಾಮಾನ್ಯವಾಗಿತ್ತು.

ಜೋರಾದ ಬೆಟ್ಟಿಂಗ್‌

ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಗಳಲ್ಲಿ ಬೆಟ್ಟಿಂಗ್ ನಡೆಯುವುದು ಸಾಮಾನ್ಯ ಎಂಬಂತಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಇದೀಗ ಚುನಾವಣಾ ಬೆಟ್ಟಿಂಗ್ ವ್ಯಾಪಕವಾಗಿದೆ. ಆದರೆ, ಐಪಿಎಲ್ ಬೆಟ್ಟಿಂಗ್‌ನಷ್ಟು ಇದೊಂದು ದಂದೆ ಸ್ವರೂಪ ಪಡೆದಿಲ್ಲ. ಹಳ್ಳಿಗಳಲ್ಲಿನ ಮುಖಂಡರು, ರಾಜಕೀಯ ಪಕ್ಷಗಳ ಪ್ರಮುಖರು, ಅಭ್ಯರ್ಥಿಗಳ ಬೆಂಬಲಿಗರ ನಡುವೆ ಸ್ನೇಹಪರತೆಯ ಬೆಟ್ಟಿಂಗ್ ಅಭ್ಯರ್ಥಿಗಳ ಮೇಲೆ ನಡೆಯುತ್ತಿದೆ. ಬೆಟ್ಟಿಂಗ್‌ನಲ್ಲಿ ಪಾರ್ಟಿ, ಭೋಜನ, ಹೊಸಬಟ್ಟೆ, ಕೋಳಿ, ಹಸು, ಹಣ... ಹೀಗೆ ನಾನಾ ಸ್ವರೂಪಗಳೂ ಇವೆ.

ಚುರುಕಾದ ಅರಳಿಕಟ್ಟೆ ಚರ್ಚೆ

ಅರಳಿಕಟ್ಟೆಗಳಲ್ಲಿ, ಶಾಲೆ, ಅಂಗನವಾಡಿಗಳ ಪಡಸಾಲೆಯಲ್ಲಿ, ಚಹಾದಂಗಡಿ, ಕ್ಯಾಂಟೀನ್‌ಗಳಲ್ಲಿ ಚುನಾವಣಾ ಲೆಕ್ಕಾಚಾರದ ಗಹನ ಚರ್ಚೆಗಳು ಸಾಮಾನ್ಯರ ನಡುವೆ ನಡೆಯುತ್ತಿದೆ. ಯಾವ ಯಾವ ಅಭ್ಯರ್ಥಿಗಳಿಗೆ ಈ ಬಾರಿ ಪ್ಲಸ್ ಪಾಯಿಂಟ್ ಇದೆ, ಯಾರು ಯಾರಿಗೆ ಮೈನಸ್ ಪಾಯಿಂಟ್ ಹೆಚ್ಚು ಎನ್ನುವ ಚರ್ಚೆಗಳು ಸಾಮಾನ್ಯ ಎಂಬಂತಾಗಿದೆ.

ಊರಸುದ್ದಿಗಿಂತ ರಾಜಕೀಯದ ಸುದ್ದಿಗಳೇ ಹೆಚ್ಚಿನ ಮಹತ್ವ ಪಡೆದಿವೆ. ಕೆಲವೊಮ್ಮೆ ಚರ್ಚೆಗಳು ವಿಕೋಪಕ್ಕೆ ಹೋಗಿ ಜಗಳಗಳೂ ನಡೆಯುತ್ತಿವೆ. ವೈಮನಸ್ಸುಗಳೂ ಸೃಷ್ಟಿಯಾಗುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry