ಸೋಮವಾರ, ಮಾರ್ಚ್ 8, 2021
31 °C
ಪ್ರಾದೇಶಿಕ ಪಕ್ಷಗಳು ನಿರ್ಧರಿಸುವ ವ್ಯಕ್ತಿ ಮುಂದಿನ ಪ್ರಧಾನಿ: ಮಮತಾ ಬ್ಯಾನರ್ಜಿ

‘ಬಿಜೆಪಿ ಗೆಲ್ಲದು; ಕಾಂಗ್ರೆಸ್‌ಗೆ ಬಹುಮತ ಕಷ್ಟ’

ಪಿಟಿಐ Updated:

ಅಕ್ಷರ ಗಾತ್ರ : | |

‘ಬಿಜೆಪಿ ಗೆಲ್ಲದು; ಕಾಂಗ್ರೆಸ್‌ಗೆ ಬಹುಮತ ಕಷ್ಟ’

ಕೋಲ್ಕತ್ತ: ದೇಶದ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದು ಕಷ್ಟ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿದರೆ ಪ್ರಧಾನಿಯಾಗಲು ಸಿದ್ಧ ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ರಾಹುಲ್‌ ತಮ್ಮ ಅಭಿಪ್ರಾಯ ಹೇಳಲು ಸ್ವತಂತ್ರರು. ಆದರೆ, ದೇಶದಲ್ಲಿಯ ವಾಸ್ತವ ಸ್ಥಿತಿಯೇ ಬೇರೆ ಇದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಗಳಿಸಿದರಷ್ಟೇ ರಾಹುಲ್‌ ಪ್ರಧಾನಿಯಾಗಲು ಸಾಧ್ಯ’ ಎಂದು ಮಮತಾ ಹೇಳಿದ್ದಾರೆ.

ದೇಶದ ಮುಂದಿನ ಪ್ರಧಾನಿ ಯಾರಾಗಬೇಕು ಎನ್ನುವುದನ್ನು ಪ್ರಾದೇಶಿಕ ಪಕ್ಷಗಳು ನಿರ್ಧರಿಸಲಿವೆ ಎಂದು ಅವರು ಹೇಳಿದ್ದಾರೆ.

ಒಕ್ಕೂಟ ರಂಗದಿಂದ ಕಾಂಗ್ರೆಸ್‌ ಪಕ್ಷವನ್ನು ಹೊರಗಿಟ್ಟು ಬಿಜೆಪಿ ಸೋಲಿಸಲು ಸಾಧ್ಯವೇ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್‌ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು ತಮಗೆ ಮಾತ್ರ ಸರ್ಕಾರ ರಚಿಸುವ ಹಕ್ಕು ಇದೆ ಎಂಬ ಭ್ರಮೆಯಲ್ಲಿವೆ’ ಎಂದು ಛೇಡಿಸಿದ್ದಾರೆ.

ಕಾಂಗ್ರೆಸ್‌ಗೂ ಕೆಲವು ಇತಿಮಿತಿಗಳಿವೆ. ಪ್ರವರ್ಧಮಾನಕ್ಕೆ ಬರುತ್ತಿರುವ ಒಕ್ಕೂಟ ರಂಗ ಅಥವಾ ಪ್ರಾದೇಶಿಕ ರಂಗದೊಂದಿಗೆ ಕೈಜೋಡಿಸದೆ ಆ ಪಕ್ಷಕ್ಕೆ ಬೇರೆ ಮಾರ್ಗವಿಲ್ಲ. ಮಧ್ಯಪ್ರದೇಶ ಮತ್ತು ಛತ್ತೀಸಗಡ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಹೀನಾಯವಾಗಿ ಸೋಲಲಿದೆ ಎಂದರು.

ದಲಿತರ ಮೇಲಿನ ಹಲ್ಲೆ ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಸಿಪಿಎಂ ಮತ್ತು ಕಾಂಗ್ರೆಸ್‌ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.

ಕರ್ನಾಟಕ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್‌ ದಲಿತರ ಮೇಲಿನ ಹಲ್ಲೆಗಳ ಬಗ್ಗೆ ತೋರಿಕೆಯ ಅನುಕಂಪ ಪ್ರದರ್ಶಿಸುತ್ತಿದೆ ಎಂದರು.

ಒಕ್ಕೂಟ ರಂಗಕ್ಕೆ ಭವಿಷ್ಯ

ಬಲಗೊಳ್ಳುತ್ತಿರುವ ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡ ‘ಒಕ್ಕೂಟ ರಂಗ’ಕ್ಕೆ ಉಜ್ವಲ ರಾಜಕೀಯ ಭವಿಷ್ಯವಿದೆ. ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಈ ದೇಶದ ಚುಕ್ಕಾಣಿ ಹಿಡಿಯಲಿವೆ ಎಂದು ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಿಎಂಸಿ, ಬಿಜೆಡಿ,ಆರ್‌ಜೆಡಿ,ಟಿಡಿಪಿ,ಟಿಆರ್‌ಎಸ್‌,ಡಿಎಂಕೆಯಂತಹ ಬಲಿಷ್ಠ ಪ್ರಾದೇಶಿಕ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲಿವೆ. ಈ ದೇಶದ ರಾಜಕೀಯ ಭವಿಷ್ಯವನ್ನು ಈ ಪಕ್ಷಗಳೇ ನಿರ್ಧರಿಸಲಿವೆ ಎಂದು ಹೇಳಿದ್ದಾರೆ.

ಪ್ರಾದೇಶಿಕ ಪಕ್ಷಗಳ ನೇತೃತ್ವದ ಒಕ್ಕೂಟ ರಂಗ: ಕೇಂದ್ರದಲ್ಲಿ ಸರ್ಕಾರ ರಚಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಮಮತಾ ಬ್ಯಾನರ್ಜಿ ಅವರು ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ 'ಒಕ್ಕೂಟ ರಂಗ' ರಚಿಸಲು ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಅವರು ಈಗಾಗಲೇ ಪ್ರಾದೇಶಿಕ ಪಕ್ಷಗಳ ನಾಯಕರ ಜತೆ ಮಾತುಕತೆ ನಡೆಸುತ್ತಿದ್ದಾರೆ.

‘ಕರ್ನಾಟಕದಲ್ಲಿ ದೇವೇಗೌಡರು ಅನಿವಾರ್ಯ’

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ, ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬಹುಮತ ಸಿಗುವುದಿಲ್ಲ ಎಂದು ಮಮತಾ ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ನೇತೃತ್ವದ ಜೆಡಿಎಸ್‌, ಕರ್ನಾಕದ ಹೊಸ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.

ಕಾಂಗ್ರೆಸ್‌ ಪಕ್ಷವು ದೇವೇಗೌಡರೊಂದಿಗೆ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಉತ್ತಮ. ಕಾಂಗ್ರೆಸ್‌ನ ಈ ಎಚ್ಚರಿಕೆಯ ನಡೆಯೇ ಮುಂದೆ ಅದರ ನೆರವಿಗೆ ಬರಬಹುದು ಎಂದು ಅವರು ಕಿವಿಮಾತು ಹೇಳಿದ್ದಾರೆ.

*

ಪ್ರಾದೇಶೀಕ ಪಕ್ಷಗಳ ಸಹಾಯ ಇಲ್ಲದೆ ಕಾಂಗ್ರೆಸ್‌ ಸ್ವಂತ ಬಲದ ಮೇಲೆ ಕೇಂದ್ರದಲ್ಲಿ ಸರ್ಕಾರ ರಚಿಸುವುದು ಸಾಧ್ಯವಿಲ್ಲ.

–ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.