ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಮೆಟ್ರೊ’ ಸಂಚಾರದಲ್ಲಿ ವ್ಯತ್ಯಯ

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮಧ್ಯಾಹ್ನ ಸುಮಾರು 20 ನಿಮಿಷ  ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಕೆಲವು ಮೆಟ್ರೊ ರೈಲುಗಳು ನಿಲ್ದಾಣಗಳಲ್ಲೇ 10 ನಿಮಿಷಕ್ಕೂ ಹೆಚ್ಚು ಹೊತ್ತು ನಿಂತಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು.

‘ವಿದ್ಯುತ್‌ ಪೂರೈಸುವ ಕೇಬಲ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಅದರ ದುರಸ್ತಿ ಸಲುವಾಗಿ ಮಧ್ಯಾಹ್ನ 3.14ರಿಂದ 3.33ರ ಮಧ್ಯೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಬಳಿಕ ಸಂಚಾರವನ್ನು ಮತ್ತೆ ಆರಂಭಿಸಲಾಯಿತು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಕಾರ್ಯನಿರ್ವಾಹಕ ನಿರ್ದೇಶಕ (ಕಾರ್ಯಾಚರಣೆ ವಿಭಾಗ) ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದುರಸ್ತಿಯ ವೇಳೆ ರೈಲುಗಳು ಸುಮಾರು 10ರಿಂದ 15 ನಿಮಿಷ ನಿಲ್ದಾಣದಲ್ಲೇ ನಿಂತಿದ್ದವು. ಟ್ರಿನಿಟಿ ನಿಲ್ದಾಣ ಹಾಗೂ ಕೆಂಪೇಗೌಡ ನಿಲ್ದಾಣದ ನಡುವೆ ಸಂಚರಿಸುವ ರೈಲುಗಳ ಸೇವೆಯಲ್ಲಿ ಹೆಚ್ಚು ವ್ಯತ್ಯಯಉಂಟಾಯಿತು. ಉಳಿದಂತೆ ರೈಲುಗಳಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

‘ನಾನು ಹೊಸಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಮಧ್ಯಾಹ್ನ 2.54ಕ್ಕೆ ರೈಲು ಹತ್ತಿದ್ದೆ. ಎಂದಿನ ಪ್ರಕಾರ ಮಧ್ಯಾಹ್ನ 3.10ಕ್ಕೆ ಆ ರೈಲು ಎಂ.ಜಿ.ರಸ್ತೆ ನಿಲ್ದಾಣವನ್ನು ತಲುಪಬೇಕಿತ್ತು. ಆದರೆ, ಇಂದು ಮಧ್ಯಾಹ್ನ 3.37ಕ್ಕೆ ತಲುಪಿತು. ಈ ನಡುವೆ ರೈಲು ಸೆಂಟ್ರಲ್‌ ಕಾಲೇಜಿನ ಸರ್‌ ಎಂ.ವಿಶ್ವೇಶ್ವರಯ್ಯ ನಿಲ್ದಾಣದಲ್ಲಿ ಸುಮಾರು 10 ನಿಮಿಷ ಹಾಗೂ ವಿಧಾನಸೌಧದ ಡಾ.ಬಿ.ಆರ್‌.ಅಂಬೇಡ್ಕರ್‌ ನಿಲ್ದಾಣದಲ್ಲಿ ಸುಮಾರು 10 ನಿಮಿಷ ನಿಂತಿತ್ತು’ ಎಂದು ಪ್ರಯಾಣಿಕ ಸುರೇಶ್‌ ತಿಳಿಸಿದರು.

‘ಅಂಬೇಡ್ಕರ್ ನಿಲ್ದಾಣದಲ್ಲಿ ರೈಲು ನಿಂತಾಗ ಬಾಗಿಲು ತೆರೆದಿತ್ತು. ಕೆಲವು ಪ್ರಯಾಣಿಕರು ರೈಲಿನಿಂದ ಇಳಿದಿದ್ದರು. ಅಷ್ಟರಲ್ಲೇ ಏಕಾಏಕಿ ಬಾಗಿಲು ಮುಚ್ಚಿತು. ಕೆಳಗೆ ಇಳಿದಿದ್ದ ಅನೇಕರು ನಿಲ್ದಾಣದಲ್ಲೇ ಉಳಿದರು’ ಎಂದು ಹೇಳಿದರು.

‘ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರೆ ಸರಿಯಾದ ಸಮಯಕ್ಕೆ ತಲುಪಬಹುದು ಎಂದು ಭಾವಿಸಿದ್ದೆವು. ಆದೆ, ಇತ್ತೀಚೆಗೆ ಪದೇ ಪದೇ ಮೆಟ್ರೊ ರೈಲು ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT