ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ಗೆ ನಾಲ್ಕು ತಾಸು ದಿಗ್ಬಂಧನ

ಒತ್ತಾಯ ಪೂರ್ವಕ ಮತದಾನಕ್ಕೆ ಮುಂದಾದ ತಹಶೀಲ್ದಾರ್‌ ಕ್ರಮಕ್ಕೆ ಕಡದರಗಡ್ಡಿ ಗ್ರಾಮಸ್ಥರ ಆಕ್ರೋಶ
Last Updated 13 ಮೇ 2018, 6:33 IST
ಅಕ್ಷರ ಗಾತ್ರ

ಲಿಂಗಸುಗೂರು: ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕಾರ ಹಾಕಿದ್ದ ಕಡದರಗಡ್ಡಿ ಗ್ರಾಮದಲ್ಲಿ ಒತ್ತಾಯಪೂರ್ವಕವಾಗಿ ಸ್ಥಳೀಯ ನೌಕರರಿಂದ ಮತದಾನ ಮಾಡಿಸಿದ ತಹಶೀಲ್ದಾರ್‌ ಎಂ.ಎ.ಎಸ್‌.ಬಾಗವಾನ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ನೌಕರರಿಂದ ಮತದಾನ ಮಾಡಿಸಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಗ್ರಾಮದ ಯುವಕರು, ಮಕ್ಕಳು, ಮಹಿಳೆಯರು, ಮುಖಂಡರು ಗ್ರಾಮ ಪ್ರವೇಶಿಸುವ ರಸ್ತೆಗೆ ಅಡ್ಡಲಾಗಿ ಕಲ್ಲು, ಮುಳ್ಳು ಹಾಕಿ ಸಂಚಾರ ಬಂದ್‌ ಮಾಡಿದರು. ನಂತರ ತಹಶೀಲ್ದಾರ್‌ ವಾಹನಕ್ಕೆ ಗುಂಡು ಕಲ್ಲು ಉರುಳಿಸಿ ವಾಹನ ತಡೆದು ಕನಿಷ್ಠ 4 ತಾಸು ಧಿಕ್ಕಾರ ಹಾಕುತ್ತ ಗ್ರಾಮದಿಂದ ಹೊರ ಹೋಗದಂತೆ ಕೂಡಿ ಹಾಕಿದ್ದರು. ಶನಿವಾರ ಮತದಾನ ಬಹಿಷ್ಕಾರ ವಿಷಯ ಸಂಬಂಧ ಗ್ರಾಮಸ್ಥರ ಮನವೊಲಿಸಿ ಮತದಾನ ಆರಂಭಿಸಬೇಕಿದ್ದ ತಹಶೀಲ್ದಾರ್‌ ಗ್ರಾಮ ಲೆಕ್ಕಾಧಿಕಾರಿ ಸಹಾಯಕ ಹುಸೇನಸಾಬ, ನೀರಗಂಟಿ ಸಂಜೀವಪ್ಪ, ಏಜೆಂಟ್‌ ತಿರುಪತಿ ಅವರಿಗೆ ಮತದಾನ ಮಾಡದಿದ್ದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿ ಮತದಾನ ಬಹಿಷ್ಕಾರ ಯತ್ನ ವಿಫಲಗೊಳಿಸುವ ಸಂಚು ನಡೆಸಿದ್ದಾರೆ ಎಂದು ಆರೋಪಿಸಿದರು.

ಹಲವು ವರ್ಷಗಳಿಂದ ಗೋನವಾಟ್ಲ ಕಡದರಗಡ್ಡಿ ಮಧ್ಯದ ಕೃಷ್ಣಾ ನದಿಗೆ ಸೇತುವೆ ನಿರ್ಮಿಸಬೇಕು. ನಡುಗಡ್ಡೆ ಪ್ರದೇಶಗಳಿಗೆ ಪ್ರತ್ಯೇಕ ಗ್ರಾಮ ಪಂಚಾಯಿತಿ, ನ್ಯಾಯಬೆಲೆ ಅಂಗಡಿ, ಆರೋಗ್ಯ ಕೇಂದ್ರ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತ ಬಂದರೂ ಯಾವೊಬ್ಬ ಪ್ರತಿನಿಧಿ, ಅಧಿಕಾರಿ ಸ್ಪಂದಿಸಿಲ್ಲ. ಮತದಾನ ಬಹಿಷ್ಕಾರ ಹಾಕುತ್ತ ಬಂದಿದ್ದರೂ ಇಂತಹ ಅಧಿಕಾರಿಗಳಿಂದ ನ್ಯಾಯ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್‌ ಅಧಿಕಾರಿಗಳ ಪರದಾಟ: ಮತದಾನ ಬಹಿಷ್ಕಾರ ಯತ್ನ ವಿಫಲ ಗೊಳಿಸಲು ಮುಂದಾದ ಆರೋಪಕ್ಕೆ ತಹಶೀಲ್ದಾರ್‌ ವಾಹನ ನಡೆದು ಗ್ರಾಮ ದಿಂದ ಹೊರ ಹೋಗದಂತೆ ನಡೆಸಿದ ಪ್ರತಿಭಟನೆಯಿಂದ ಕಂಗಲಾದ ಡಿವೈಎಸ್ಪಿ ಎಸ್‌.ಎಚ್‌. ಸುಬೇದಾರ ನೇತೃತ್ವದ ಪೊಲೀಸ್‌ ಅಧಿಕಾರಿಗಳ ತಂಡ ಪರದಾಡಿದ ಚಿತ್ರಣ ಕಂಡು ಬಂತು.

ಗುಂತಗೋಳ ಸಂಸ್ಥಾನಿಕರ ಸಂಧಾನ: ಸುರಪುರ ರಾಜಮನೆತನಕ್ಕೆ ಸೇರಿದ ಗುಂತಗೋಳ ಸಂಸ್ಥಾನಿಕರಾದ ರಾಜಾ ಅಮರೇಶ್ವರ ನಾಯಕ, ರಾಜಾ ಶ್ರೀನಿವಾಸ ನಾಯಕ ಗ್ರಾಮಕ್ಕೆ ಭೇಟಿ ನೀಡಿ ತಹಶೀಲ್ದಾರ್‌ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ನಡುಗಡ್ಡೆ ಗ್ರಾಮಸ್ಥರಿಗೆ ಸೌಲಭ್ಯ ನೀಡದೆ, ಸಂಜೆವರೆಗೆ ಮತದಾನಕ್ಕೆ ಅವಕಾಶ ಇದ್ದರೂ ಮತದಾನ ಯಶಸ್ವಿಗಾಗಿ ಈ ರೀತಿ ಕ್ರಮ ಸರಿಯಲ್ಲ ಎಂದು ಹೇಳಿದರು.

ನಡುಗಡ್ಡೆ ಗ್ರಾಮಸ್ಥರು ಮೃದು ಸ್ವಭಾವದವರು. ಯಾವ ಸೌಲಭ್ಯ ಇಲ್ಲದಿದ್ದರು ಬದುಕು ಕಟ್ಟಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಾಣ ಸೇರಿದಂತೆ ಅಗತ್ಯ ಸೌಲಭ್ಯಕ್ಕೆ ಸರ್ಕಾರಕ್ಕೆ ತಕ್ಷಣ ವರದಿ ಸಲ್ಲಿಸಬೇಕು. ತಹಶೀಲ್ದಾರ್‌ ಕ್ಷಮೆ ಕೋರುತ್ತಿದ್ದು ಇದೊಂದು ಬಾರಿ ಮತದಾನ ಮಾಡಿ. ಸಂವಿಧಾನ ಹಕ್ಕನ್ನು ಚಲಾಯಿಸಿರಿ. ತಹಶೀಲ್ದಾರ್‌ ಅವರನ್ನು ಬಂಧನದಿಂದ ಮುಕ್ತಗೊಳಿಸುವಂತೆ ಮಾಡಿದ ಸಂಧಾನ ಯಶಸ್ವಿಗೊಂಡಿತು.

ಕ್ಷಮೆ ಕೋರಿದ ತಹಶೀಲ್ದಾರ್‌: ಮತದಾನ ಬಹಿಷ್ಕಾರ ಬೇಡ ಎಂದು ತಮಗೆ ಹಲವು ಬಾರಿ ಮನವೊಲಿಸಲು ಬಂದಿದ್ದೆ. ತಾವು ಸ್ಪಂದಿಸದೆ ಹೋಗಿದ್ದರಿಂದ ಹಿರಿಯ ಅಧಿಕಾರಿಗಳ ಸೂಚನೆಯಂತೆ ಗ್ರಾಮದ ನೌಕರರಿಗೆ ತಾಕೀತು ಮಾಡಿದ್ದು ನಿಜ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ತಮ್ಮ ಸಮಸ್ಯೆಗಳ ಬಗ್ಗೆ ತಮಗೂ ಅರಿವಿದೆ. ತಪ್ಪಾಗಿ ಭಾವಿಸಿದ್ದರೆ ಕ್ಷಮಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಡಿವೈಎಸ್ಪಿ ಎಸ್‌.ಎಚ್‌. ಸುಬೇದಾರ, ಸಿಪಿಐ ವಿನೋದಕುಮಾರ ಮುಕ್ತೆದಾರ, ಪಿಎಸ್‌ಐ ದಾದಾವಲಿ ನೇತೃತ್ವದಲ್ಲಿ ಪೊಲೀಸ್‌ ಬಿಗಿ ಬಂದೊಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಖಂಡರಾದ ಹನುಮನಗೌಡ ಪಾಟೀಲ, ಬಾಲನಗೌಡ ಪಾಟೀಲ, ಮುದುಕಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT