ಉತ್ತಮ ಸೌಲಭ್ಯ: ಮತದಾರರ ಉತ್ಸಾಹ

7
ಮೂಲ್ಕಿ, ಸುಬ್ರಹ್ಮಣ್ಯದಲ್ಲಿ ಆದಿ– ಅಂತ್ಯ ಬಿರುಸು, ಅಲ್ಲಲ್ಲಿ ಮಾತಿನ ಚಕಮಕಿ

ಉತ್ತಮ ಸೌಲಭ್ಯ: ಮತದಾರರ ಉತ್ಸಾಹ

Published:
Updated:

ಮೂಲ್ಕಿ:  ಮೂಲ್ಕಿ ಹೋಬಳಿಯಲ್ಲಿ ಆರಂಭದಲ್ಲಿ ಇದ್ದ ಬಿರುಸು ಮಧ್ಯಾಹ್ನ ನೀರಸ ಕಂಡು ಬಂದು ಸಂಜೆಯಾಗುವಾಗ ಮತ್ತೆ ಬಿರುಸು ಕಂಡಿತು. ಮತದಾರರಲ್ಲಿ ಮತಚಲಾವಣೆಗೆ ಉತ್ಸಾಹದ ಮನೋಭಾವ ಕಂಡುಬಂತು. ಅಲ್ಲಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದರೂ ಘರ್ಷಣೆಯಂಹ ವಾತಾವರಣ ಕಂಡು ಬಂದಿಲ್ಲ.

ಮೂಲ್ಕಿ ಹೋಬಳಿಯ ಪಡು ಪಣಂಬೂರು ಗ್ರಾಮ ಪಂಚಾಯಿತಿಯ ಬೆಳ್ಳಾಯರು-ಕೆರೆಕಾಡು ಬೂತ್ ಸಂಖ್ಯೆ-119ರಲ್ಲಿ ಸಾಂಪ್ರದಾಯಿಕ ಮತಗಟ್ಟೆ ಎಂಬ ಪ್ರಚಾರದಿಂದ ಕೆಲವರು ಮತಗಟ್ಟೆಯನ್ನು ವೀಕ್ಷಿಸಲು ಬಂದಿದ್ದರೂ ಸಹ ಅವರಿಗೆ ಒಳಗೆ ಪ್ರವೇಶವಿಲ್ಲದಿದ್ದರಿಂದ ಹೊರಗೆ ಸ್ವಾಗತ ಕಮಾನುಗಳನ್ನೇ ವೀಕ್ಷಿಸಿ ತೆರಳಿದ್ದರು.

ಗೊಂದಲ ಘರ್ಷಣೆ: ಮೂಲ್ಕಿಯ ಬಳಿಯ ಚಿತ್ರಾಪುವಿನ 116 ಮತಟ್ಟೆಯಲ್ಲಿ ವೃದ್ಧರೊಬ್ಬರಿಗೆ ಪಕ್ಷದ ಕಾರ್ಯಕರ್ತ ಮತದಾನಕ್ಕೆ ನೆರವಾದುದು ರಾದ್ಧಾಂತ ವಾಗಿ ಅದು ವಿರೋಧ ಪಕ್ಷದ ಕಾರ್ಯ ಕರ್ತರಲ್ಲಿ ಮಾತಿನ ಚಕಮಕಿ ನಡೆದು ವೃದ್ಧರು ತಾನು ಮರಳಿ ಮತದಾನ ಮಾಡುತ್ತೇನೆ ಎಂದು ಪಟ್ಟು ಹಿಡಿದರು ಅದಕ್ಕೆ ನಿಯಮಾನುಸಾರ ಅವಕಾಶ ಇಲ್ಲ ಎಂದು ಮತಗಟ್ಟೆ ಅಧಿ ಕಾರಿ ತಿಳಿಸಿ ದ್ದರಿಂದ ಸಮಸ್ಯೆ ಶಮನಗೊಂಡಿತು.

ಮೂಲ್ಕಿಯ ಕೆ.ಎಸ್.ರಾವ್‌ ನಗರದಲ್ಲಿ ಎರಡೂ ಪಕ್ಷದ ಕಾರ್ಯ ಕರ್ತರ ನಡುವೆ ಘರ್ಷಣೆ, ಗೊಂದಲದ ವಾತಾವರಣ ನಿರ್ಮಾಣವಾಗಿ ಕೊನೆಗೆ ಪೊಲೀಸರು ಲಾಠಿಬೀಸಿ ಚದುರಿಸಿ ಎಚ್ಚರಿಕೆಯನ್ನು ನೀಡಿದ್ದರಿಂದ ಮರಳಿ ಅಂತಹ ವಾತಾವರಣ ಕಂಡು ಬರಲಿಲ್ಲ.

ಮಟ್ಟು ಪ್ರದೇಶದ ಮೂಲೊಟ್ಟು ವಿನಲ್ಲಿ ಬಿಜೆಪಿ ಕಾರ್ಯಕರ್ತ ಗಣೇಶ್ ಎಂಬುವರು ರಿಕ್ಷಾದಲ್ಲಿ ಮತದಾರರನ್ನು ಕರೆತಂದುದಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಪುಷ್ಪರಾಜ್ ಎಂಬುವವರು ಆಕ್ಷೇಪ ವ್ಯಕ್ತಪಡಿಸಿ ಅದು ಮಾತಿಗೆ ಮಾತು ಬೆಳೆದು ಹೊಯ್‌ಕೈ ಹಂತಕ್ಕೆ ಬಂದಾಗ ಪ್ರಮುಕ ನಾಯಕರು ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿದರು.

ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ 141ನೇ ಬೂತ್‌ನಲ್ಲಿ ಈ ಹಿಂದೆ ಹಲವು ಬಾರಿ ಮತದಾನ ಮಾಡಿದ್ದ ಹರಿವಿಜಯ ಶೆಣೈಯವರು ತಮ್ಮ ಪತ್ನಿಯೊಂದಿಗೆ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಹಳೆಯಂಗಡಿ ಗ್ರಾಮ ಪಂಚಾಯಿತಿಯ ಸಸಿಹಿತ್ಲು ಬೂತ್ ನಂ.144 ಮತ್ತು 145ರಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳೇ ಶಾಮಿಯಾನ ಮತ್ತು ಕುರ್ಚಿಗಳನ್ನು ಹಾಕಲು ಮುಂದಾಗಿದ್ದನ್ನು ಬೂತ್ ಅಧಿಕಾರಿ ನಿರಾಕರಿಸಿದರು. ಅದರೆ ಹಳೆಯಂಗಡಿ ಗ್ರಾಮ ಪಂಚಾಯಿತಿಯ ಬೂತ್ ನಂ. 141ರಲ್ಲಿ ಶಾಮಿಯಾನ ಕುರ್ಚಿಯನ್ನು ಹಾಕಲು ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಎಂದು ಪಂಚಾಯಿತಿಯ ಪ್ರಭಾರ ಪಿಡಿಒ ಕೇಶವ ದೇವಾಡಿಗ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

ಸಸಿಹಿತ್ಲು ಪ್ರದೇಶಕ್ಕೆ ಮಂಗಳೂರಿನ ತುಂಬೆಯಿಂದ ಕುಡಿಯುವ ನೀರಿನ ಸರಬರಾಜು ಆಗುವುದರಿಂದ ಕೊನೆ ಕ್ಷಣದಲ್ಲಿ ನೀರನ್ನು ನೀಡಲಾಯಿತು. ಇದಕ್ಕಾಗಿ ಪಂಚಾಯಿತಿಯು ಟ್ಯಾಂಕರ್ ಮೂಲಕ ನೀಡಲು ಸಜ್ಜಾಗಿತ್ತು.  ಕಿನ್ನಿಗೋಳಿ ಮತ್ತು ಕಟೀಲು ಪ್ರದೇಶದಲ್ಲಿ ಶಾಂತಿಯುತವಾಗಿ ಮತ ಚಲಾವಣೆ ನಡೆಯಿತು. ಕಿನ್ನಿಗೋಳಿಯ ಬಳಿಯ ಪದ್ಮನೂರು ಎಂಬಲ್ಲಿ ಶಂಕರ ಶೆಟ್ಟಿಯವರು ತಮ್ಮ 95ರ ಹರೆಯದಲ್ಲೂ ಉತ್ಸಾಹದಿಂದ ಮತ ಚಲಾವಣೆ ನಡೆಸಿದರು.

ಮೂಲ್ಕಿ ಪಟ್ಟಣ ಪಂಚಾಯಿತಿಯಲ್ಲಿ ಬೆಳಿಗ್ಗೆ ನಿಧಾನವಾಗಿ ಮತ ಚಲಾವಣೆ ನಡೆಸುತ್ತಿದ್ದುದನ್ನು ಮತದಾರರು ಆಕ್ಷೇಪ ವ್ಯಕ್ತಪಡಿಸಿದಾಗ ಅಧಿಕಾರಿಗಳ ಹಾಗೂ ಮತದಾರರ ನಡುವೆ ಕ್ಷಣಕಾಲ ಆವೇಶದ ಮಾತುಗಳು ಕೇಳಿ ಬಂದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿದರು.

ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜೀವನ್ ಕೃಷ್ಣ ಶೆಟ್ಟಿ ಅವರು ಕಾನರ್ಾಡಿನ ಸಿಎಸ್ಐ ಶಾಲೆಯಲ್ಲಿ ಮತದಾನ ನಡೆಸಿದರು.

ಸುಬ್ರಹ್ಮಣ್ಯದಲ್ಲಿ ಬಿರುಸಿನ ಮತದಾನ

ಸುಬ್ರಹ್ಮಣ್ಯ: ನಾಲ್ಕೂರು ಗ್ರಾಮ ನಡುಗಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಕಾಂಗ್ರೆಸ್ ಪರ ಮತಗಟ್ಟೆಯಏಜೆಂಟ್ ಆಗಿ ಧಾರ್ಮಿಕ ದತ್ತಿ ಇಲಾಖೆಯಿಂದ ನೇಮಿಸಲ್ಪಟ್ಟ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರು ಕರ್ತವ್ಯದಲ್ಲಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು, ಅಧಿಕಾರಿಗಳು  ಅವರನ್ನು ಬದಲಾಯಿಸಿದ ಬಳಿಕ ಸಮಸ್ಯೆ ನಿವಾರಣೆ ಆಯಿತು.

ಮತದಾನದ ಮುನ್ನ ದಿನ ಶುಕ್ರವಾರ ತಡರಾತ್ರಿ ಕೊಲ್ಲಮೊಗ್ರು ಗ್ರಾಮದ ಕೊಳಗೆ, ಗಡಿಕಲ್ಲು, ಕೋನಡ್ಕ, ಕಟ್ಟ ಹಾಗೂ ಹರಿಹರ ಗ್ರಾಮದ ಐನಕಿದು ಗುಂಡಡ್ಕ ಕಾಲನಿಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜೀಪಿನಲ್ಲಿ ಬಂದು ಮದ್ಯದ ಬಾಟಲಿ ವಿತರಿಸುತ್ತಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಮದ್ಯವಿರುವ ಜೀಪನ್ನು ಬೆನ್ನಟ್ಟಿರುವ ಘಟನೆ ನಡೆದಿದೆ. ಈ ಕುರಿತು ಬಿಜೆಪಿ ಕಾರ್ಯಕರ್ತರು ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದರು. ಈ ಮೇರೆಗೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಮದ್ಯ ಹಂಚಿದ ಕುರಿತು ಸಾಬೀತುಗೊಂಡಿಲ್ಲ.

ಕೊಲ್ಲಮೊಗ್ರು ಬಂಗ್ಲೆಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಬಳಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೇಂದ್ರಗಳನ್ನು ತೆರೆದಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಮತದಾರೊಬ್ಬರಿಗೆ ಹಣ ನೀಡಿರುವುದನ್ನು ಬಿಜೆಪಿಯ ಮಹಿಳಾ ಕಾರ್ಯಕರ್ತೆ ಕಂಡಿದ್ದು ಅದಕ್ಕೆ ಆಕ್ಷೇಪಿಸಿದರು.

ಪಂಜ ಕರಿಕ್ಕಳ ಮತಗಟ್ಟೆಯಲ್ಲಿ ಬೆಳಗ್ಗಿನಿಂದಲೇ ನೀರಸ ಮತದಾನ ನಡೆಯಿತು. ಇಲ್ಲಿಯ ಮತದಾರರು ಹೆಚ್ಚು ಪ್ರಮಾಣದಲ್ಲಿ ವಿದೇಶಗಳಿರುವುದರಿಂದ ಇಲ್ಲಿ ಮತದಾನ ಕಡಿಮೆ ಪ್ರಮಾಣದಲ್ಲಿ ಆಗಿದೆ.

ಸುಬ್ರಹ್ಮಣ್ಯ ಗುತ್ತಿಗಾರು, ಮಡಪ್ಪಾಡಿ, ಯೇನೆಕಲ್ಲು ಈ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿತ್ತು. ಬೆಳಗ್ಗಿನಿಂದಲೇ ಮತದಾರರು ಸರತಿ ಸಾಲಿನಲ್ಲಿ ಮತಗಟ್ಟೆಗಳ ಮುಂದೆ ನಿಂತು ಮತ ಚಲಾಯಿಸಿದರು. ಮತಗಟ್ಟೆಗಳ ವ್ಯಾಪ್ತಿಯಲ್ಲಿ ಅಂಗವಿಕಲ ಮತದಾರರನ್ನು ವಾಹನದಲ್ಲಿ ತರಲು ವ್ಯವಸ್ಥೆಯನ್ನು ಮೊಟ್ಟಮೊದಲ ಬಾರಿಗೆ ಈ ಬಾರಿ ಮಾಡಲಾಗಿತ್ತು. ಮತಗಟ್ಟೆಗಳ ಹೊರಗೆ ಬಿಜೆಪಿ-ಕಾಂಗ್ರೆಸ್ ಹಾಗೂ ಪಕ್ಷದ ಅಬ್ಯರ್ಥಿಗಳ ಪರ ಕಾರ್ಯಕರ್ತರು ಜಮಾಯಿಸಿದ್ದರು. ಅಶಕ್ತರು, ವೃದ್ಧರು, ಅನಾರೋಗ್ಯ ಪೀಡಿತರು ಮತಗಟ್ಟೆಗೆ ಬಂದು ಮತದಾನ ನಡೆಸಿದರು. ಪಕ್ಷಗಳಿಂದ ಮತದಾರರನ್ನು ಮತಗಟ್ಟೆಗೆ ತರಲು ವಾಹನ ವ್ಯವಸ್ಥೆ ಇತ್ತು.

ಆರಂಭದಲ್ಲೇ ಕೆಟ್ಟ ಮತಯಂತ್ರ

ಪುತ್ತೂರು :  ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನೆಟ್ಟಣಿಗೆ ಮುಡ್ನೂರು ಗ್ರಾಮದ ನೂಜಿಬೈಲು ಮತದಾನ ಕೇಂದ್ರದಲ್ಲಿ ಮತದಾನ ಆರಂಭಕ್ಕೆ ಮುನ್ನ ನಡೆದ ಪರಿಶೀಲನಾ ಮತ ಚಲಾವಣೆಯ ಪ್ರಕ್ರಿಯೆಯ ವೇಳೆಯೇ ಮತಯಂತ್ರ ಕೆಟ್ಟು ಹೋದ ಘಟನೆ ನಡೆಯಿತು. ಅದೇ ಪ್ರದೇಶ ವ್ಯಾಪ್ತಿಯಲ್ಲಿದ್ದ ಸೆಕ್ಟರ್ ಆಫೀಸರ್ ಅವರ ಬಳಿಯಿದ್ದ ಮತಯಂತ್ರವನ್ನು ಪಡೆದು ಬದಲಿ ವ್ಯವಸ್ಥೆ ಮಾಡುವ ಮೂಲಕ ಸಮಯಕ್ಕೆ ಸರಿಯಾಗಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ಬೆಟ್ಟಂಪಾಡಿ, ಮಿತ್ತಡ್ಕ ಮೊದಲಾದ ಮತಗಟ್ಟೆಗಳಲ್ಲಿನ ಮತ ಯಂತ್ರ ಕೆಟ್ಟು ಹೋದ ಪರಿಣಾಮವಾಗಿ ಮತದಾನ ಆರಂಭದಲ್ಲಿ ಸ್ವಲ್ಪ ವಿಳಂಬವಾಯಿತೆಂದು ತಿಳಿದು ಬಂದಿದೆ.

ಕೇಂದ್ರ ಸಚಿವರಿಂದ ಮತ ಚಲಾವಣೆ

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪುತ್ತೂರು ನಗರದ ಹಾರಾಡಿ ಶಾಲೆಯಲ್ಲಿರುವ 123ನೇ ಮತಗಟ್ಟೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ  ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಸದಾನಂದ ಗೌಡ ಅವರು ಪತ್ನಿ ಡಾಟಿ ಸದಾನಂದ ಗೌಡ ಹಾಗೂ ಪುತ್ರ ಕಾರ್ತಿಕ್ ಅವರ ಜೊತೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry