ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ

ಜಿಲ್ಲೆಯಲ್ಲಿ ಶಾಂತಿಯುತ ಮತದಾನ; ಕೆಲವೆಡೆ ಕೈಕೊಟ್ಟ ಮತಯಂತ್ರ; ಗೊಂದಲದ ವಾತಾವರಣ
Last Updated 13 ಮೇ 2018, 7:20 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಶಾಂತಿಯುತ ಮತದಾನ ನಡೆದಿದ್ದು, 147 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಮೇ 15ರಂದು ಮತ ಎಣಿಕೆ ನಡೆಯಲಿದೆ.

ಎಲ್ಲ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನವಾಗಿದ್ದು, ಭದ್ರತೆಗಾಗಿ ಕೇಂದ್ರೀಯ ಅರೆ ಮೀಸಲು ಪೊಲೀಸ್‌ ಪಡೆ ಸೇರಿದಂತೆ ಸುಮಾರು 5,000 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು.

ಚಾಮುಂಡೇಶ್ವರಿ ಕ್ಷೇತ್ರದ ಕೆಲವೆಡೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲವೆಡೆ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿರು ಬಿಸಿಲಿನ ನಡುವೆ ಮತದಾರರು ಸರತಿ ಸಾಲಿನಲ್ಲಿ ನಿಂತು ಬಿರುಸಿನಿಂದ ಮತದಾನ ಮಾಡಿದರು.

ಕೆಲ ಗ್ರಾಮಗಳಲ್ಲಿ ಹಾಗೂ ಮತಗಟ್ಟೆಯ ಅನತಿ ದೂರದಲ್ಲಿ ಕಾರ್ಯಕರ್ತರು ಗುಂಪು ಕಟ್ಟಿಕೊಂಡು ಮತದಾರರನ್ನು ಓಲೈಸಲು ಕಸರತ್ತು ನಡೆಸುತ್ತಿದ್ದ ದೃಶ್ಯ ಕಂಡುಬಂತು. ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಟಾಂಗಾದಲ್ಲಿ ಪ್ರಚಾರ ನಡೆಸಿದರು.

ಮತ ಖಾತರಿ ಸೌಲಭ್ಯದ ವಿವಿ ಪ್ಯಾಟ್‌ ಹಾಗೂ ವಿದ್ಯುನ್ಮಾನ ಮತಯಂತ್ರ ಕೈಕೊಟ್ಟ ಕಾರಣ ಕೆಲವೆಡೆ ಮತದಾನ ವಿಳಂಬವಾಯಿತು.

ಮೈಸೂರಿನ ಕೃಷ್ಣರಾಜ ಕ್ಷೇತ್ರದ 192/ಎ ಮತಗಟ್ಟೆಯಲ್ಲಿ ನಾಲ್ಕು ಬಾರಿ ಮತಯಂತ್ರ ಕೈಕೊಟ್ಟಿತು. ಹುಣಸೂರಿನ ಕಟ್ಟೆಮಳಲವಾಡಿ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ವಿಳಂಬವಾದ ಕಾರಣ ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ನಂಜನಗೂಡಿನ ನಗರಸಭೆಯ ಮತದಾನ ಕೇಂದ್ರದಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ 1 ಗಂಟೆ ತಡವಾಯಿತು.

ಕೆಲವೆಡೆ ಮತಕೇಂದ್ರಗಳಲ್ಲಿ ಮತದಾರರ ಹೆಸರೇ ನಾಪತ್ತೆಯಾಗಿದ್ದವು. ಮತದಾರರ ಗುರುತಿನ ಚೀಟಿ ಇದ್ದರೂ ನಿರಾಸೆಯಿಂದ ವಾಪಸ್‌ ಹೋದರು. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಮತಗಟ್ಟೆ 112ರಲ್ಲಿ ಮತದಾನ ಮಾಡಲು ಬಂದ ವರಲಕ್ಷ್ಮಿ ಎಂಬುವರಿಗೆ ‘ನಿಮ್ಮ ವಿಳಾಸ ಹಾಗೂ ಹೆಸರಿನಲ್ಲಿ ಈಗಾಗಲೇ ಮತದಾನ ಮಾಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ನಾಗರಿಕ ಸೌಲಭ್ಯ ಕಲ್ಪಿಸಿಲ್ಲವೆಂದು ಆರೋಪಿಸಿ ಚಾಮರಾಜ ಕ್ಷೇತ್ರದ ಕೈಲಾಸಪುರ ಬಡಾವಣೆಯ ಜನರು ಪ್ರತಿಭಟನೆ ನಡೆಸಿದರು.

ಆದಿವಾಸಿ ಸಮುದಾಯದವರ ಮತದಾನದ ಪ್ರಮಾಣ ಹೆಚ್ಚಿಸಲು ಸ್ಥಾಪಿಸಲಾಗಿದ್ದ ಬುಡಕಟ್ಟು ಮತಗಟ್ಟೆ ಹಾಗೂ ಸಾಂಪ್ರದಾಯಿಕ ಮತಗಟ್ಟೆಗಳು ಗಮನ ಸೆಳೆದವು. ಗಿರಿಜನರು ತಂಡೋಪ ತಂಡವಾಗಿ ಹೊಸ ಬಟ್ಟೆ ತೊಟ್ಟು ಮಕ್ಕಳೊಂದಿಗೆ ಮತಗಟ್ಟೆಗೆ ವಾಹನದಲ್ಲಿ ಬಂದರು. ಗಿರಿಜರ ಸಂಸ್ಕೃತಿ, ಪರಂಪರೆ ಬಿಂಬಿಸುವಂತೆ ನಿರ್ಮಿಸಲಾಗಿದ್ದ ಈ ಆಕರ್ಷಣೀಯ ಮತಗಟ್ಟೆಯಲ್ಲಿ ಉತ್ಸುಕತೆಯಿಂದ ಹಕ್ಕು ಚಲಾಯಿಸಿದರು. ಮತದಾನ ಪವಿತ್ರವೆಂದು ಅರಿತು ಮತಗಟ್ಟೆ ಹೊರಗೆ ತಮ್ಮ ಪಾದರಕ್ಷೆ ಬಿಟ್ಟು ಮತ ಚಲಾಯಿಸಿದರು.

ಕೆ.ಆರ್‌.ನಗರ ತಾಲ್ಲೂಕಿನ ಸನ್ಯಾಸಿಪುರ, ಸಾಲಿಗ್ರಾಮ ಮತ್ತು ನರಚನಹಳ್ಳಿಯಲ್ಲಿ ಸ್ಥಾಪಿಸಿದ್ದ ಮಾದರಿ ಮತಗಟ್ಟೆಗಳಲ್ಲಿ ಮತದಾರರಿಗೆ ಹೂವು, ಮಜ್ಜಿಗೆ, ವಿವಿಧ ಜಾತಿಯ ಗಿಡ ವಿತರಿಸಲಾಯಿತು.

ಪಿಂಕ್ ಮತಗಟ್ಟೆಗಳು ಗಮನ ಸೆಳೆದವು. ಮತಗಟ್ಟೆ ಅಧಿಕಾರಿಗಳು ನಸುಗೆಂಪು ಸೀರೆ ಧರಿಸಿದ್ದರು. ಮಹಿಳಾ ಮತದಾರರಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಲಾಯಿತು. ಬಳಿಕ ಅರಿಸಿನ ಕುಂಕುಮ, ಬಳೆ ನೀಡಿ ಬೀಳ್ಕೊಟ್ಟರು.

ನವಜೋಡಿ: ನವ ವಿವಾಹಿತ ಜೋಡಿ ಹುಣಸೂರಿನ ಗಾವಡಗೆರೆ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿತು. ಗ್ರಾಮದ ನಿವಾಸಿ ಭೈರನಾಯಕ ಮತ್ತು ಮಹದೇವಮ್ಮ ಮತದಾನ ಮಾಡಿದ ಜೋಡಿ. ಇತ್ತ ಮತದಾನ ನಡೆಯುತ್ತಿದ್ದರೆ, ಅತ್ತ ಕೃಷಿ ಕೂಲಿ ಕಾರ್ಮಿಕರು ಹೊಲದಲ್ಲಿ ತಂಬಾಕು ನಾಟಿ ಮಾಡುವಲ್ಲಿ ತಲ್ಲೀನರಾಗಿದ್ದರು.

ದಾಳಿ: ಪಿರಿಯಾಪಟ್ಟಣ ಬಿಜೆಪಿ ಅಭ್ಯರ್ಥಿ ಎಸ್‌.ಮಂಜುನಾಥ್ ಅವರ ನಿವಾಸದ ಮೇಲೆ ಶುಕ್ರವಾರ ರಾತ್ರಿ ದಾಳಿ ಮಾಡಿರುವ ಕಿಡಿಗೇಡಿಗಳು ವಾಹನ ಜಖಂಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT