ಶುಕ್ರವಾರ, ಮಾರ್ಚ್ 5, 2021
24 °C

ಚಿದಂಬರಂ ಪ್ರಕರಣ ಕಾಂಗ್ರೆಸ್‌ ಪಾಲಿಗೆ ‘ನವಾಜ್‌ ಷರೀಫ್‌ ಪ್ರಕರಣ’ – ಬಿಜೆಪಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಚಿದಂಬರಂ ಪ್ರಕರಣ ಕಾಂಗ್ರೆಸ್‌ ಪಾಲಿಗೆ ‘ನವಾಜ್‌ ಷರೀಫ್‌ ಪ್ರಕರಣ’ – ಬಿಜೆಪಿ

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ‘ಚಿದಂಬರಂ ಹಾಗೂ ಅವರ ಕುಟುಂಬದ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿದರೆ ಅದು ಕಾಂಗ್ರೆಸ್‌ ಪಾಲಿಗೆ ‘ನವಾಜ್‌ ಷರೀಫ್‌ ಪ್ರಕರಣ’ ಆಗಲಿದೆ ಎಂದು ಆರೋಪಿಸಿದೆ.

ಪ್ರಕರಣ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ‘ಅಕ್ರಮ ಆಸ್ತಿ ಸಂಪಾದನೆ ಹಾಗೂ ವಿದೇಶಗಳಲ್ಲಿ ಹಲವು ಖಾತೆಗಳನ್ನು ಹೊಂದಿರುವುದಕ್ಕೆ ಸಂಬಂಧಿಸಿದಂತೆ ಕಪ್ಪುಹಣ ಕಾನೂನಿನಡಿಯಲ್ಲಿ ಚಿದಂಬರಂ ಹಾಗೂ ಅವರ ಕುಟುಂಬದ ವಿರುದ್ಧ 4 ಚಾರ್ಜ್‌ಶೀಟ್‌ಗಳನ್ನು ನೀಡಲಾಗಿದೆ. ಅಕ್ರಮ ಆಸ್ತಿ ಮೊತ್ತ ₹ 20 ಸಾವಿರ ಕೋಟಿ ಎನ್ನಲಾಗಿದೆ’ ಎಂದು ತಿಳಿಸಿದ್ದಾರೆ.

‘ಸುಪ್ರೀಂಕೋರ್ಟ್‌ ಆದೇಶದ ಹೊರತಾಗಿಯೂ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಹಾಗೂ ಹಣಕಾಸು ಸಚಿವ ಪಿ.ಚಿದಂಬರಂ ಎಸ್‌ಐಟಿ ರಚನೆಗೆ ವಿಳಂಬ ಧೋರಣೆ ಅನುಸರಿಸಿದ್ದು ಏಕೆ ಎಂಬುದನ್ನು ಇದು ವಿವರಿಸುತ್ತದೆ. ತಮ್ಮದೇ ತಪ್ಪನ್ನು ಅವರು ಹೇಗೆ ದೂರಲು ಸಾಧ್ಯ? ಕಪ್ಪುಹಣದ ವಿರುದ್ಧ ಹೋರಾಡಲು ಎಸ್‌ಐಟಿ ರಚಿಸುವುದೇ ಮೋದಿ ಸರ್ಕಾರದ ಮೊದಲ ನಿರ್ಧಾರವಾಗಿತ್ತು!’ ಎಂದೂ ಹೇಳಿದ್ದಾರೆ.

ಇದಕ್ಕೂ ಮೊದಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಚಿದಂಬರಂ ಪ್ರಕರಣವನ್ನು, ‘ಕಾಂಗ್ರೆಸ್‌ ಪಾಲಿಗೆ ನವಾಜ್‌ ಷರೀಫ್‌ ಪ್ರಕರಣ’ ಎಂದು ಬಣ್ಣಸಿದರು. ಆದಾಯ ತೆರಿಗೆ ಇಲಾಖೆ ಚಿದಂಬರಂ ಹಾಗೂ ಕುಟುಂಬ ಸದಸ್ಯರಿಗೆ 4 ಚಾರ್ಜ್‌ಶೀಟ್‌ಗಳನ್ನು ನೀಡಿದೆ. ಹೀಗಿದ್ದರೂ ಕಾಂಗ್ರೆಸ್‌ ಏಕೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ರಾಹುಲ್‌ ಗಾಂಧಿ ಅವರನ್ನೂ ಪ್ರಶ್ನಿಸಿರುವ ರಕ್ಷಣಾ ಸಚಿವೆ, ‘ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ನಾಯಕನ ವಿರುದ್ಧದ ಪ್ರಕರಣದ ತನಿಖೆಗೆ ಒಪ್ಪುತ್ತಾರೆಯೇ ಇಲ್ಲವೇ ಎಂಬುದನ್ನು ತಿಳಿಸಲಿ’ ಎಂದಿದ್ದಾರೆ.

ಪನಾಮಾ ಪೇಪರ್ಸ್‌ ಹಗರಣ ಮತ್ತು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ನವಾಜ್‌ ಷರೀಫ್‌ ಅವರು ಉಚ್ಚಾಟನೆಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.