ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಟೆಯೆಡೆಗೆ ಗರಿಗೆದರಿದ ರಣಹದ್ದು

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ನಮ್ಮಲ್ಲಿಯ ಈ ರಣ ಹದ್ದುವಿಗೆ “ಇಜಿಪ್ಶಿಯನ್  ವಲ್ಚರ್- Neophron percnopterus ವೈಜ್ನಾನಿಕ ತಳಿ ” ಎಂಬ ಹೆಸರು ಪರಿಚಿತ.  ಇಜಿಪ್ಟಿನಲ್ಲಿ ಇದು ರಾಜಯೋಗ್ಯದ ಗುರುತು  ಹಾಗೂ ಬದುಕುವ ಎಲ್ಲರ ರಕ್ಷಣೆಗೆ ಮತ್ತು ಕಾಲವಶವಾದ ಜೀವಿಗಳ ಸ್ವಚ್ಚತಾ ಕಾಯಕಕ್ಕೆ ನೇಮಿತವಾದ ಅಲ್ಲಿನ ದೇವತೆಗಳ ಗುರುತರವಾದ ಸಹಚರ್ಯೆಯಲ್ಲಿರುವ ದೈವಾಂಶ ಸಂಭೂತ ಕೂಡಾ ಈ ವಲ್ಚರ್. ನಮ್ಮಪೂರ್ವಜರೂ ಇದನ್ನು ಗೌರವಿಸುತ್ತಲೇ ಬಂದಿದ್ದಾರೆ. ಸರೀಸೃಪ , ಜಂತುಗಳು, ಸಣ್ಣ ಪ್ರಾಣಿ- ಪಕ್ಷಿಗಳು, ಮೊಟ್ಟೆಗಳು,  ಸತ್ತ ಮೀನುಗಳು ಇತ್ಯಾದಿ ಇವುಗಳ ಆಹಾರ.

ಆಫ್ರಿಕಾ, ದಕ್ಷಿಣ ಯುರೋಪ್, ಭಾರತದೆಲ್ಲೆಡೆ ಇವು ಸ್ವಚ್ಚಂದವಾಗಿ ಜೀವಿಸುತ್ತವೆಯಾದರೂ, ಒಟ್ಟಾರೆ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಪ್ರಕೃತಿಯೇ “ಸ್ಕ್ಯಾವೆಂಜರ್” ಆಗಿ ನೀಡಿರುವ ಈ ತೀಕ್ಷ್ಣ ಕಣ್ಣಿನ ಪಕ್ಷಿ,  ಆಗಷ್ಟೇ ಸಾಯುತ್ತಿರುವ ಜೀವಿಗಳನ್ನು ದೂರದಿಂದಲೇ ಗಮನಿಸಿ,  ಸಾಯುತ್ತಿದ್ದಂತೆಯೇ ಅವನ್ನು ತಿಂದು ಮುಗಿಸಿ ಪ್ರಕೃತಿಯ ಋಣ ತೀರಿಸಿಯೇ ಬಿಡುತ್ತದೆ. ಅಂತಹುದೊಂದು ರಣಹದ್ದು ಹೇಸರಘಟ್ಟದ ಹಸಿರು ಹುಲ್ಲುಗಾವಲಿನಲ್ಲಿ ಎತ್ತರದ ದಿಣ್ಣೆ ಏರಿ ಬೇಟೆ ಏನಾದರೂ ದಕ್ಕೀತೆಂದು ದೌಡಾಯಿಸಲು ತನ್ನ ವಿಶಿಷ್ಟ ಮಾಟದ ರೆಕ್ಕೆ- ಪುಕ್ಕ ಕೆದರಿ ಸಜ್ಜಾಗುವಾಗ ದೂರದಿಂದಲೇ ಕ್ಯಾಮೆರಾ ರೆಡಿಮಾಡಿ ಒಂದು ಮುಂಜಾನೆ ಆ ದೃಶ್ಯವನ್ನು ತ್ವರಿತವಾಗಿ ಸೆರೆಹಿಡಿದವರು, ಚಿಕ್ಕಾಲ್ಲಸಂದ್ರದ  ಡಾಕ್ಟರ್ಸ್ ಬಡಾವಣೆಯ ಶರ್ಮಾ ಬಿ.ಸಿ. ವೃತ್ತಿಯಲ್ಲಿ ಹ್ಯಾವ್ಲೆಟ್ ಪಾಕರ್ಡ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಕಳೆದ ಹದಿನೈದು ವರ್ಷಗಳಿಂದಲೂ ವನ್ಯ ಜೀವಿ , ಪಕ್ಷಿ ಛಾಯಾಗಹಣದ ಹವ್ಯಾಸದಲ್ಲಿ ತೊಡಗಿರುವ ಶರ್ಮಾ, ಬಳಸಿರುವ ಕ್ಯಾಮೆರಾ ನಿಕಾನ್ ಡಿ 7000, ಜೊತೆಗೆ 500 ಎಂ.ಎಂ.

ಫೋಕಲ್ ಲೆಂಗ್ತ್ ನ ಜೂಂ ಲೆನ್ಸ್ ಕ್ಯಾಮೆರಾದ ಎಕ್ಸ್ಪೋಶರ್ ವಿವರ ಇಂತಿವೆ:  ಅಪರ್ಚರ್  ಎಫ್ 8.  ಶಟರ್ ವೇಗ 1/ 320 ಸೆಕೆಂಡ್, ಐ.ಎಸ್.ಒ 100, ಫ್ಲಾಶ್ ಬಳಸಿಲ್ಲ, ಟ್ರೈಪಾಡ್ ಬದಲು ವಾಹನದ  ಬಾಗಿಲನ್ನೇ ಕ್ಯಾಮೆರಾಕ್ಕೆ ಆಧಾರವಾಗಿಟ್ಟುಕೊಳ್ಳಲಾಗಿದೆ. 

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:

ಮುಂಜಾನೆಯ ಬೆಳಕಿನ ಸಂದರ್ಭವಾಗಿದ್ದರಿಂದ, ಕ್ಯಾಮೆರಾದ ತಾಂತ್ರಿಕ ಅಂಶಗಳೆಲ್ಲವೂ ಸಮರ್ಪಕವಾಗಿವೆ. ಈ ಪಕ್ಷಿಯ ರೆಕ್ಕೆಗಳ ಮತ್ತು ಒಳ ಪುಟಾಣಿ ಪದರುಗಳ ಮಾಟವೇ  ವಿಚಿತ್ರವಾದವು,  ಇತರೆ ಪಕ್ಷಿಗಳ ಮಾದರಿಯಲ್ಲಿ ಸರಳವಾದದ್ದಲ್ಲ. ಉಣ್ಣೆಯ ತರಹದಲ್ಲಿ ತುಂಬಿ  ಉಬ್ಬಿದ ಪುಟ್ಟ ಪುಟ್ಟ ಪುಕ್ಕಗಳು  ಗರಿ ಕೆದರುವ ಪ್ರಾರಂಭದಲ್ಲಿ ಅತ್ಯಂತ ತ್ವರಿತವಾಗಿ  ಚಲಿಸಿ “ಶೇಕ್” ಆಗುವ ಪರಿಯನ್ನು ಅನೇಕರು ದೂರದಿಂದ ಗಮನಿಸುವುದು ವಿರಳ.

ಪಕ್ಷಿಗಳ ಸಂದರ್ಭದಲ್ಲಿ 500 ಎಂ.ಎಂ. ದೊಡ್ಡ ಜೂಂ ಗೆ ಸಾಮಾನ್ಯವಾಗಿ  ಶಟರ್ ವೇಗ 1/ 500  ಸೆಕೆಂಡ್ ಗಿಂತ ಇನ್ನಷ್ಟು “ ತ್ವರಿತ ವೇಗದ ಶಟರ್ ಸ್ಪೀಡ್ ಬಳಸುವುದು ಸಹಜ. ಹಾಗಿದ್ದಲ್ಲಿ, ಪಕ್ಷಿಯ ಎಲ್ಲ ಭಾಗಗಳೂ, ರೆಕ್ಕೆ- ಪುಕ್ಕಗಳೂ ಸ್ಪುಟವಾಗಿ ( ಶಾರ್ಪ್- ಫೋಕಸ್), ಇಡೀ ಚಿತ್ರ ಸ್ಥಬ್ದವಾಗಿ ( ಸ್ಟೇಲ್ ) ಬಿಡುವ ಸಾದ್ಯತೆ ಇತ್ತು. ಇಲ್ಲಿ ಅದಕ್ಕಿಂತ ಕಡಿಮೆ ವೇಗ ಇಡಲಾಗಿದೆ.

ಹಾಗಾಗಿ, ಪಕ್ಷಿಯ ಮುಖ, ಕಾಲು ಇತ್ಯಾದಿ ಕೊಂಚವೂ ಅಲುಗದೇ, ಬಲು ರಭಸದಿಂದ ಬಡಿಯುತ್ತಿರುವ ಹಿಂಬದಿಯ ಪುಕ್ಕಗಳ  ಅಂಚುಗಳಷ್ಟೇ ಅಲುಗುತ್ತಿದ್ದುದು ದೃಶ್ಯದಲ್ಲಿ ಮೂಡಿರುವುದು, ಸಂದರ್ಭದ  ಔಚಿತ್ಯವನ್ನು ಸಂವಹನಾತ್ಮಕವಾಗಿ (ಫ್ಯಾಕ್ತ್ಚುಯೆಲ್  ಕಮ್ಯೂನಿಕೇಶನ್ ) ನೋಡುಗನ ಕಣ್ಣಿಗೆ ಕಟ್ಟುತ್ತದೆ. ಅಂತೆಯೇ, ಸ್ಥಿರ (ಸ್ಟಿಲ್) ಚಿತ್ರದಲ್ಲಿ ಚಲನೆ( ಯ್ಯಾಕ್ಷನ್ ) ಕೂಡಾ ದಾಖಲಿಸುವಂತಾಗಿದೆ.

ಚಿತ್ರ- ಸಂಯೋಜನೆಯೂ ಕಲಾತ್ಮಕ , ಭಾವಪೂರ್ಣ ಛಾಯಾಗ್ರಹಣದಲ್ಲಿದ್ದಂತೆಯೇ ವನ್ಯಜೀವಿ- ವನ್ಯ ಪಕ್ಷಿಗಳ ಛಾಯಾಗ್ರಹಣದಲ್ಲಿ ಕೂಡಾ ಮುಖ್ಯವಾದ ಅಂಶವೇ ಎಂದು ಗಮನಿಸ ಬಹುದು. ಲಲಿತಕಲೆಗಳಲ್ಲಿನ ಕೆಲವಾರು ಶೈಲಿಯ ಪ್ರಕಾರ ಒಂದು ಚೌಕಟ್ಟಿನಲ್ಲಿ   ಮುಖ್ಯವಸ್ತುವಿಗೆ ನೀಡಿರುವ ಜಾಗದ ಪ್ರಾಮುಖ್ಯತೆ, ದೃಷ್ಟಿಗೆ ಎದುರು ಸಾಕಷ್ಟು ರಿಲೀಫ್ ಇರಬೇಕಾದದ್ದು  ಸರಿಯಷ್ಟೆ. ಚಿತ್ರದಲ್ಲಿರುವ ಇತರೆ ವಸ್ತುಗಳೂ ಸಂವೇದನೆಗೆ ಪೂರಕವಾಗಿರುವುದು, ಅವುಗಳ ಆಕರ್ಷಣೀಯ ಸಮತೋಲ, ರೇಖಾವಿನ್ಯಾಸದಲ್ಲಿನ ನಿಯಂತ್ರಣ, ವಸ್ತುವಿನ ರೂಪಿಕೆಯಲ್ಲಿನ ಜೀವಂತಿಕೆ, ತಾಂತ್ರಿಕ ಕುಶಲತೆ, ವರ್ಣ- ಛಾಯಾಂತರಗಳ ವಿತರಣೆ ಮತ್ತು ಹೊಂದಾಣಿಕೆ ಕೂಡಾ ಉತ್ತಮವಾದ ಗುಣಗಳು.

ಒಟ್ಟಾರೆ,  ಚಿತ್ರಣ ನೋಡುಗನಲ್ಲಿ ಉಂಟುಮಾಡಬಲ್ಲ  ಪ್ರಭಾವ ಮತ್ತು ಭಾವಸ್ಪಂದನೆ ಆ ಒಂದು ಚೌಕಟ್ಟಿನ ಕಲಾತ್ಮಕ ನಿರೂಪಣೆಗೂ ಸಹಕಾರಿಯಾಗುವುದು. ಈ ಚಿತ್ರದಲ್ಲಿ  ಮೇಲಿನ ಹಲವು ಅಂಶಗಳು ಸೂಕ್ತವಾವ ಮೂಡಿ ಬಂದಿವೆ, ಉದಾಹರಣೆಗೆ, ಕದಡಿದ ರೆಕ್ಕೆಯ ಪುಕ್ಕಗಳ, ಅವುಗಳ ಸ್ಪುಟಗೊಳ್ಳುತ್ತಿರುವ ಮಾಟ;  ಅವುಗಳ ಚಲನೆಯ ಮಾದರಿಗೆ ಪೂರಕವಾಗಿ ಆ ಕಡೆಗೇ ಬಳಕುತ್ತಾ ಸಮತೋಲ ನೀಡುತ್ತಿರುವ ಹುಲ್ಲು ದಂಟುಗಳು; ಕಂದು ಬಣ್ಣದ ರಣಹದ್ದಿನ ರಭಸದ ಆ್ಯಕ್ಷನ್ ಗೆ ಸ್ಪುಟನೀಡಲು ಸಹಕಾರಿಯಾಗಿರುವ ಹಿನ್ನೆಲೆಯ ( ಬ್ಯಾಕ್ ಗ್ರೌಂಡ್) ತಿಳಿ ಮಂದವಾದ ಹಸಿರು ವರ್ಣದ ಹಂದರ.. ಉತ್ತಮವಾದ ಭಾವ ನಿರೂಪಣೆಗೆ ಮತ್ತಷ್ಟು ಬಲನೀಡುತ್ತ  ಉತ್ತಮವಾಗಿ ಫೋಕಸ್ ಆಗಿರುವ ಪಕ್ಷಿಯ ಚೂಪನೆಯ ಕೊಕ್ಕು ಮುತ್ತು  ಕಣ್ಣಿನ ದೃಷ್ಟಿ..

ಹೀಗೇ, ಇಡೀ ಚೌಕಟ್ಟು ನೋಡುಗನ ಕಣ್ಣು ಮತ್ತು ಮನಸ್ಸನ್ನು ಒಮ್ಮೆಲೇ ಸೆಳೆಯಬಲ್ಲ ಹಲವಾರು ಅಂಶಗಳು ಈ ಚಿತ್ರದಲ್ಲಿರುವುದರಿಂದ, ಛಾಯಾಚಿತ್ರಕಾರರು ಅಭಿನಂದನಾರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT