ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಅಬ್ಬರಿಸಿದ ವರುಣ

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯ ವಿವಿಧೆಡೆಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾದರೆ, ಗಾಳಿಯ ಅಬ್ಬರಕ್ಕೆ ಬೆಂಗಳೂರು, ರಾಮನಗರ ಜಿಲ್ಲೆ ಮತ್ತು ಗದಗ ಜಿಲ್ಲೆಗಳಲ್ಲಿ ಮರ, ವಿದ್ಯುತ್‌ ಕಂಬಗಳು ಧರೆಗುರುಳಿವೆ.

ರಾಜಧಾನಿಯ ವಿಜಯನಗರ, ಮಲ್ಲೇಶ್ವರ, ರಾಜಾಜಿನಗರ, ಓಕಳಿಪುರ, ಜಯನಗರ, ನಾಯಂಡಹಳ್ಳಿ, ಮಾಗಡಿ ರಸ್ತೆ, ಶಾಂತಿ ನಗರ, ಕೆ.ಪಿ ಆಗ್ರಹಾರ ಮತ್ತು ಕೋರಮಂಗಲದಲ್ಲಿ ಉತ್ತಮ ಮಳೆಯಾಗಿದೆ.

ಮಳೆಗೂ ಮುನ್ನ ಬೀಸಿದ ಗಾಳಿಗೆ ಆರ್‌.ಪಿ.ಸಿ ಬಡಾವಣೆ, ನಾಗರಬಾವಿ, ಕೆ. ಪಿ ಅಗ್ರಹಾರದಲ್ಲಿ ಮರ ಬಿದ್ದು ಹಾಗೂ ಓಕಳಿಪುರ ಜಂಕ್ಷನ್‌ನ ಅಂಡರ್‌ಪಾಸ್‌ನಲ್ಲಿ ಮೂರು ಅಡಿಗಳಷ್ಟು ನೀರು ತುಂಬಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆಯಾದರೆ, ಕೊಪ್ಪ ತಾಲ್ಲೂಕಿನ ಜಯಪುರ, ಹೇರೂರು, ಶಾಂತಿಪುರ, ಬನ್ನೂರು, ಕಳಸ ಸೇರಿದಂತೆ ವಿವಿಧ ಭಾಗಗಳಲ್ಲಿ ಜಿಟಿಜಿಟಿ ಮಳೆ ಸುರಿದಿದೆ.

ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಗಾಳಿ, ಮಳೆಯಿಂದಾಗಿ ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೇರೂರಿನ ಹಿರಿಯ ಪ್ರಾಥಮಿಕ ಶಾಲಾ ಕಾಂಪೌಂಡ್ ಮೇಲೆ ಮರ ಬಿದ್ದು ಹಾನಿಯಾಗಿದೆ.

ಕೊಡಗು ಜಿಲ್ಲೆಯ ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಗೋಣಿಕೊಪ್ಪಲು, ಶನಿವಾರಸಂತೆ, ವಿರಾಜಪೇಟೆ, ಕುಶಾಲನಗರದಲ್ಲಿ ಧಾರಾಕಾರ ಮಳೆ ಸುರಿದಿದೆ. ವಾರದಿಂದ ಮಳೆಯಾಗುತ್ತಿದ್ದರಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಕಾಣಿಸಿಕೊಂಡಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಸಂಜೆ ಒಂದು ಗಂಟೆ ಕಾಲ ಸಾಧಾರಣ ಮಳೆಯಾಯಿತು. ನಾಲ್ಕೈದು ದಿನಗಳಿಂದ ಮಳೆ ಬರುತ್ತಿರುವುದರಿಂದ ತಂಬಾಕು ನಾಟಿ ಕೆಲಸ ಚುರುಕುಗೊಂಡಿದೆ.

ಗದಗ–ಬೆಟಗೇರಿ ಅವಳಿ ನಗರ, ನರಗುಂದ, ಲಕ್ಷ್ಮೇಶ್ವರ, ನರೇಗಲ್‌ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಸಂಜೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ.

ನರಗುಂದ ತಾಲ್ಲೂಕಿನಾದ್ಯಂತ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಮನೆಗಳಿಗೆ ಹೊದಿಸಲಾಗಿದ್ದ ತಗಡಿನ ಶೀಟ್‌ಗಳು ಗಾಳಿಯ ಅಬ್ಬರಕ್ಕೆ ಹಾರಿಹೋಗಿವೆ.

ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿ ಮಧ್ಯಾಹ್ನ ಒಂದು ತಾಸು ಮಳೆಯಾಗಿದೆ. ಧಾರವಾಡದಲ್ಲಿ ಸಂಜೆ ತುಂತುರು ಮಳೆಯಾಗಿದೆ.

ರಭಸದ ಗಾಳಿ, ಮಳೆ: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ, ಗೋಕಾಕದಲ್ಲಿಯೂ ಮಳೆಯಾಗಿದೆ. ಬಲವಾದ ಗಾಳಿ ಬೀಸಿದ್ದರಿಂದ ಅನೇಕ ಮನೆಗಳ ಚಾವಣಿಗೆ ಹೊದಿಸಿದ ಶೀಟ್‌ಗಳು ಹಾರಿಹೋಗಿವೆ. ಕೆಲವೆಡೆ ವಿದ್ಯುತ್‌ ಕಂಬ ಬಿದ್ದಿರುವ ಬಗ್ಗೆ ವರದಿಯಾಗಿದೆ.

*
ಗುಡುಗು ಸಹಿತ ಮಳೆ ಸಾಧ್ಯತೆ

ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ.

ಹಳಿಯಾಳ, ದೇವರಹಿಪ್ಪರಗಿ, ಆನವಟ್ಟಿ, ಹಳ್ಳಿ ಮೈಸೂರು, ಮಳವಳ್ಳಿಯಲ್ಲಿ 4ಸೆಂ.ಮೀ, ಕಾಗಿನೆಲೆ, ತಿ.ನರಸೀಪುರದಲ್ಲಿ 3, ಹುಬ್ಬಳ್ಳಿ, ಶಿರಹಟ್ಟಿ, ಮುಂಡರಗಿ, ಜಮಖಂಡಿ, ಕಲಬುರ್ಗಿಯಲ್ಲಿ 2, ಬನವಾಸಿ, ಧಾರವಾಡ, ಹಿರೇಕೆರೂರು, ಹಾವೇರಿ, ಕುಶಾಲನಗರ, ಮದ್ದೂರು, ಮಾಗಡಿಯಲ್ಲಿ ತಲಾ 1 ಸೆಂ.ಮೀ ಮಳೆ ದಾಖಲಾಗಿದೆ.

ಕಲಬುರ್ಗಿಯಲ್ಲಿ 41.8 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ರಾಜ್ಯದ ಕೆಲವು ಪ್ರದೇಶಗಳಲ್ಲಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT