ಭಾನುವಾರ, ಮಾರ್ಚ್ 26, 2023
31 °C

ಅಣ್ವಸ್ತ್ರ ಪರೀಕ್ಷೆಯಿಂದ ನಾವು ಪಡೆದಿದ್ದೇನು?

ಆಕಾರ್‌ ಪಟೇಲ್ Updated:

ಅಕ್ಷರ ಗಾತ್ರ : | |

ಅಣ್ವಸ್ತ್ರ ಪರೀಕ್ಷೆಯಿಂದ ನಾವು ಪಡೆದಿದ್ದೇನು?

1998ರ ಮೇ 11 ಮತ್ತು 13ರಂದು ರಾಜಸ್ಥಾನದ ಪೋಖ್ರಾನ್ ಪ್ರದೇಶದಲ್ಲಿ ಭಾರತ ಐದು ಅಣುಬಾಂಬ್‌ಗಳ ಪರೀಕ್ಷೆ ನಡೆಸಿತು. ಇದು ನಡೆದಿದ್ದು, 1974ರಲ್ಲಿ ಅದೇ ಪೋಖ್ರಾನ್‌ನಲ್ಲಿ ಆದ ಮೊದಲ ಅಣುಬಾಂಬ್ ಪರೀಕ್ಷೆಯ 24 ವರ್ಷಗಳ ನಂತರ. ಆ ಸಂದರ್ಭದಲ್ಲಿ, ಕೆನಡಾದಿಂದ ಪರಮಾಣು ತಂತ್ರಜ್ಞಾನ ಆಮದು ಮಾಡಿ

ಕೊಳ್ಳುವಾಗ ಮಾಡಿಕೊಂಡಿದ್ದ ಒಪ್ಪಂದವನ್ನು ಇಂದಿರಾ ಗಾಂಧಿ ಅವರು ಮುರಿದರು, ಭಾರತ ದಿಗ್ಬಂಧನ ಎದುರಿಸಬೇಕಾಯಿತು.

ಭಾರತ ಮೊದಲ ಅಣುಬಾಂಬ್ ಪರೀಕ್ಷೆ ನಡೆಸಿದ್ದು ನಿಶ್ಚಿತವಾಗಿಯೂ ಅಸ್ಥಿರವಾಗಿದ್ದ ಕಾಲಘಟ್ಟದಲ್ಲಿ. ಆ ಪರೀಕ್ಷೆ ನಡೆದ ಹತ್ತು ವರ್ಷಗಳ ಮೊದಲು ಚೀನಾ ಅಣ್ವಸ್ತ್ರ ಶಕ್ತಿ ಹೊಂದಿರುವ ರಾಷ್ಟ್ರವಾಯಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿರುವ ಐದು ರಾಷ್ಟ್ರಗಳ ಪೈಕಿ ಅಣ್ವಸ್ತ್ರ ಹೊಂದಿದ ಕೊನೆಯ ರಾಷ್ಟ್ರ ಚೀನಾ. ಭಾರತ ಮೊದಲ ಅಣ್ವಸ್ತ್ರ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ವಿಶ್ವದ ಹಲವೆಡೆ ಯುದ್ಧಗಳು ನಡೆಯುತ್ತಿದ್ದವು. ಅಮೆರಿಕವು ವಿಯೆಟ್ನಾಮಿನಲ್ಲಿ ರಕ್ತಸಿಕ್ತ ಯುದ್ಧವೊಂದನ್ನು ಪೂರ್ಣಗೊಳಿಸುವ ಹಂತದಲ್ಲಿತ್ತು. ಇಂದಿರಾ ಗಾಂಧಿ ಅವರು ಅಣ್ವಸ್ತ್ರ ಪರೀಕ್ಷೆ ನಡೆಸಿದ ಕೆಲವೇ ವರ್ಷಗಳ ನಂತರ ಸೋವಿಯತ್ ಒಕ್ಕೂಟವು ಆಫ್ಗಾನಿಸ್ತಾನದ ಮೇಲೆ ಆಕ್ರಮಣ ನಡೆಸಿತು. ಜಗತ್ತು ಹೇಗೆ ಎಂಬುದನ್ನು 1970ರ ದಶಕದಲ್ಲಿ ಅಂದಾಜಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಆಗ ಜಗತ್ತಿನಲ್ಲಿ ಸಂಘರ್ಷಗಳೇ ಹೆಚ್ಚಿದ್ದವು. ಕೊರಿಯಾ ಯುದ್ಧದ ಸಮಯದಲ್ಲಿ ಅಮೆರಿಕದ ಹಿರಿಯ ಸೇನಾಧಿಕಾರಿ ಮಕಾರ್ಥರ್ ಅವರು, ಚೀನಾ ಮತ್ತು ಉತ್ತರ ಕೊರಿಯಾ ವಿರುದ್ಧ ಅಣ್ವಸ್ತ್ರ ಪ್ರಯೋಗ ಮಾಡುವುದಾಗಿ ಅದೆಷ್ಟು ಸಲೀಸಾಗಿ ಹೇಳಿದ್ದರೆಂದರೆ, ಆ ಮಾತು ಅಮೆರಿಕನ್ನರನ್ನೂ ಭೀತಿಗೆ ನೂಕಿತ್ತು. 48 ವರ್ಷಗಳ ಹಿಂದೆ ಇಂದಿರಾ ಗಾಂಧಿ ಅವರು ಅಣ್ವಸ್ತ್ರ ಪರೀಕ್ಷೆ ನಡೆಸಿದ ಕಾಲಘಟ್ಟ ಹೀಗಿತ್ತು.

ಆದರೆ 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಆಡಳಿತ ಅವಧಿಯಲ್ಲಿ ಇಂತಹ ಯಾವ ಅನಿವಾರ್ಯಗಳೂ ಇರಲಿಲ್ಲ. 1998ರ ವೇಳೆಗಾಗಲೇ ಸೋವಿಯತ್ ಒಕ್ಕೂಟ ಪತನವಾಗಿ ಶೀತಲ ಸಮರ ಕೊನೆಗೊಂಡಿತ್ತು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕ್ರಾಂತಿಯ ಬಾಗಿಲಿನಲ್ಲಿ ಜಗತ್ತು ನಿಂತಿತ್ತು. ಸೇವಾ ವಲಯವನ್ನು ಆಧರಿಸಿದ ಹೊಸ ಆರ್ಥಿಕ ಭವಿಷ್ಯವೊಂದರತ್ತ ಭಾರತವನ್ನು ಕೊಂಡೊಯ್ಯುವ ಕೆಲಸವನ್ನು ಬೆಂಗಳೂರು ನಗರ ಮಾಡಲಿದೆ ಎಂಬುದೂ ಈ ಹೊತ್ತಿಗೆ ಸ್ಪಷ್ಟವಾಗಿತ್ತು.

ತೈವಾನ್, ಸಿಂಗಪುರ, ದಕ್ಷಿಣ ಕೊರಿಯಾ ಮತ್ತು ಇತರ 'ಏಷ್ಯನ್ ಟೈಗರ್‌'ಗಳು ಆರ್ಥಿಕವಾಗಿ ಬೆಳೆದು ನಿಂತ ಬಗೆಯು, ಶಕ್ತಿ ಇರುವುದು ಸಂಪತ್ತಿನಲ್ಲೇ ವಿನಾ ಶಸ್ತ್ರಾಸ್ತ್ರಗಳಲ್ಲಿ ಅಲ್ಲ ಎಂಬುದನ್ನು ಸಾಬೀತು ಮಾಡಿತ್ತು. ಉತ್ತರ ಕೊರಿಯಾ ದೇಶವು ಮಿಲಿಟರಿ ದೃಷ್ಟಿಯಿಂದ ದೊಡ್ಡ ಶಕ್ತಿಯಾಗಿದ್ದರೂ ದೇಶದ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದುದು ಈ ಮಾತಿಗೆ ಪುಷ್ಟಿ ನೀಡಿತ್ತು. 1998ರಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆ ಬಗ್ಗೆ ನಮ್ಮಲ್ಲಿ ಚರ್ಚೆಗಳೇ ಆಗಲಿಲ್ಲ. ವಾಜಪೇಯಿ ನೇತೃತ್ವದ ಸರ್ಕಾರವು ಅಣ್ವಸ್ತ್ರ ಪರೀಕ್ಷೆಯನ್ನು ತನ್ನ ಮೊದಲ 13 ದಿನಗಳ ಆಡಳಿತ ಅವಧಿಯಲ್ಲೇ ನಡೆಸುವ ಇರಾದೆ ಹೊಂದಿತ್ತಂತೆ. ಆದರೆ, ಆ ಅವಧಿಯಲ್ಲಿ ಪರೀಕ್ಷೆ ನಡೆಸಲು ತಾನು ಒಪ್ಪುವುದಿಲ್ಲ ಎಂದು ಅಧಿಕಾರಶಾಹಿ ಹೇಳಿತ್ತು. ಅಣ್ವಸ್ತ್ರ ಪರೀಕ್ಷೆಗಳನ್ನು ಎಷ್ಟು ಸಲೀಸಾಗಿ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಇವೆಲ್ಲವೂ ಹೇಳುತ್ತವೆ.

ನಮ್ಮಲ್ಲಿ ಅಣ್ವಸ್ತ್ರ ಪರೀಕ್ಷೆಗಳು ನಡೆದ ನಂತರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಇವೆಲ್ಲವೂ ಪರೀಕ್ಷೆ ನಡೆಸಿದ ನಂತರವೂ ಇಲ್ಲಿ ಚರ್ಚೆಗಳು ನಡೆಯದಂತೆ ಮಾಡಿದವು. ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಲೂ ಇಲ್ಲ, ಅವುಗಳಿಗೆ ಉತ್ತರ ಕೊಡಲೂ ಇಲ್ಲ. ಅಣ್ವಸ್ತ್ರ ಪರೀಕ್ಷೆ ನಡೆದು ಇಪ್ಪತ್ತು ವರ್ಷಗಳು ಸಂದಿವೆ. ಈಗ ಹಳೆಯ ವಿಚಾರಗಳು ಬೋರು ಹೊಡೆಸುತ್ತವೆ. ಅಂದಿದ್ದ ಭಾವ ತೀವ್ರತೆ ಈಗ ಉಳಿದಿಲ್ಲ. ಹಾಗಾಗಿ, ಆ ಪ್ರಶ್ನೆಗಳತ್ತ ಒಂದು ನೋಟ ಹರಿಸೋಣ.

ಮೊದಲನೆಯದಾಗಿ, ಅಂದಿನ ಪರೀಕ್ಷೆಗಳು ಭಾರತವನ್ನು ಅಣ್ವಸ್ತ್ರ ಶಕ್ತ ರಾಷ್ಟ್ರವನ್ನಾಗಿ ಮಾಡಿದವೇ? ಇದಕ್ಕೆ ಉತ್ತರ 'ಇಲ್ಲ'. ನಮ್ಮ ಅಣುಶಕ್ತಿ ಕಾರ್ಯಕ್ರಮವನ್ನು ಅಣ್ವಸ್ತ್ರ ತಯಾರಿಕೆಗೆ ಬಳಸಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿಶ್ವದ ಇತರ ರಾಷ್ಟ್ರಗಳು ಇಂದಿರಾ ಮತ್ತು ಇಂಡಿಯಾಕ್ಕೆ ಪರಮಾಣು ತಂತ್ರಜ್ಞಾನ ನಿರಾಕರಿಸುವ ಮೂಲಕ ಶಿಕ್ಷೆಗೆ ಗುರಿಪಡಿಸಿದ್ದವು. 1998ರ ಪರೀಕ್ಷೆಗಳ ನಂತರವೂ ಆಗಿದ್ದು ಹಳೆಯದರ ಪುನರಾವರ್ತನೆ ಮಾತ್ರ.

ಎರಡನೆಯ ಪ್ರಶ್ನೆ, ಈ ಪರೀಕ್ಷೆಯು ಭಾರತವನ್ನು ಇನ್ನಷ್ಟು ಸುರಕ್ಷಿತ ಆಗಿಸಿತೇ? ಇದಕ್ಕೆ ಕೂಡ ಉತ್ತರ 'ಇಲ್ಲ'. ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಒಂದು ವರ್ಷ ನಂತರ, ಅಂದರೆ 1999ರಲ್ಲಿ, ಪಾಕಿಸ್ತಾನವು ಕಾರ್ಗಿಲ್‌ ಯುದ್ಧ ಆರಂಭಿಸಿತು. ಇದರಲ್ಲಿ ನಮ್ಮ ಐದುನೂರು ಯೋಧರು ಪ್ರಾಣ ಕಳೆದುಕೊಂಡರು. ಇದಾದ ಹತ್ತು ವರ್ಷಗಳ ನಂತರ ಮುಂಬೈ ಮೇಲೆ ದಾಳಿ ನಡೆಯಿತು. ಕಾಶ್ಮೀರ ಕಂಡ ಅತ್ಯಂತ ಹಿಂಸಾತ್ಮಕ ಘಟ್ಟವು, ಅಂದರೆ 2001ರ ಅವಧಿ, ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ನಂತರ ಕಂಡುಬಂತು. ಆ ಸಂದರ್ಭದಲ್ಲಿ ಅಲ್ಲಿ 4,500 ಜನ ಮೃತಪಟ್ಟರು. ಮೂರನೆಯದು, ಪರೀಕ್ಷೆಯು ನಮ್ಮಲ್ಲಿನ ಪರಮಾಣು ತಂತ್ರಜ್ಞಾನವನ್ನು ಸುಧಾರಿಸಿತೇ? ಇಲ್ಲಿ ಕೂಡ ಉತ್ತರ 'ಇಲ್ಲ'. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಅಮೆರಿಕ ಸರ್ಕಾರದ ಜೊತೆ ಪರಮಾಣು ಒಪ್ಪಂದ ಮಾಡಿಕೊಂಡಿತು. ಆದರೆ ಅದರಿಂದ ಏನೂ ಆಗಿಲ್ಲ. ನಾಲ್ಕನೆಯ ಪ್ರಶ್ನೆ, ಈ ಪರೀಕ್ಷೆ ಭಾರತದ ಘನತೆಯನ್ನು ಹೆಚ್ಚಿಸಿತೇ? ಇದಕ್ಕೆ ಉತ್ತರ 'ಇಲ್ಲ'. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತನಗೆ ಕಾಯಂ ಸ್ಥಾನ ಸಿಗಬೇಕು ಎಂದು ಭಾರತ ಬಹುಕಾಲದಿಂದಲೂ ಹೇಳುತ್ತ ಬಂದಿದೆ. ಆದರೆ ಅಣ್ವಸ್ತ್ರ ಪರೀಕ್ಷೆಯು ನಮಗೆ ಅಲ್ಲೊಂದು ಸ್ಥಾನ ಕೊಡಿಸಲು ನೆರವಾಗಲಿಲ್ಲ. ಬಹುಶಃ ಅದು ನಮಗೆ ಅಲ್ಲಿ ಸ್ಥಾನ ಗಿಟ್ಟಿಸುವ ವಿಚಾರದಲ್ಲಿ ತೊಂದರೆ ಮಾಡಿತು. ಭಾರತವು ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪಿನಲ್ಲಿ ಸದಸ್ಯತ್ವ ಪಡೆಯಬೇಕು ಎಂದು ನರೇಂದ್ರ ಮೋದಿ ಬಯಸಿದರು. ಆದರೆ ಅದು ಕೂಡ ಯಶಸ್ಸು ಕಂಡಿಲ್ಲ.

ಐದನೆಯ ಪ್ರಶ್ನೆ, ಪರಮಾಣು ತಂತ್ರಜ್ಞಾನವು ಹೆಚ್ಚು ವಿದ್ಯುತ್ ಉತ್ಪಾದಿಸಲು ನಮಗೆ ನೆರವಾಯಿತೇ? ಇದಕ್ಕೆ ಕೂಡ 'ಇಲ್ಲ' ಎಂಬುದೇ ಉತ್ತರ. ವಿದ್ಯುತ್ ಉತ್ಪಾದನೆಯಲ್ಲಿ ಇಂದು ಭಾರತದ ಆದ್ಯತೆಯು ಪರಮಾಣು ಮೂಲದ ಬದಲು ಸೌರ ಮೂಲದೆಡೆಗೆ ತಿರುಗಿದೆ.

ಆರನೆಯದು, ನಾವು ನಡೆಸಿದ ಪರೀಕ್ಷೆಯು ದಕ್ಷಿಣ ಏಷ್ಯಾದಲ್ಲಿ ಶಕ್ತಿಶಾಲಿ ದೇಶಗಳು ಯಾವುವು ಎಂಬುದರಲ್ಲಿ ಬದಲಾವಣೆ ತಂದಿತೇ? 'ಇಲ್ಲ'. ನಾವು ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನವು ಬಲೂಚಿಸ್ತಾನದ ಛಾಗಾಯ್ ಪ್ರಾಂತ್ಯದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಉಪಖಂಡದಲ್ಲಿ ಈಗ ಅಣ್ವಸ್ತ್ರಗಳ ವಿಚಾರದಲ್ಲಿ ಯಾರೂ ಗೆದ್ದಿಲ್ಲ, ಯಾರೂ ಸೋತಿಲ್ಲ ಎಂಬಂತಹ ಸ್ಥಿತಿ ಇದೆ. ಆದರೆ, ಸಾಂಪ್ರದಾಯಿಕವಾಗಿ ನಾವು ಹೊಂದಿದ್ದ ಪ್ರಾಬಲ್ಯವನ್ನು ಈಗ ಬಳಸಲು ಸಾಧ್ಯವಿಲ್ಲ. ಏಕೆಂದರೆ, ಪರಿಸ್ಥಿತಿ ಹದಗೆಡುವ ಭೀತಿ ಇದ್ದೇ ಇರುತ್ತದೆ. ಚೀನಾ ದೇಶವು ತನ್ನ ಆರ್ಥಿಕ ಚಟುವಟಿಕೆಗಳನ್ನು ನಮ್ಮ ಪ್ರದೇಶದಲ್ಲಿ ನಡೆಸುತ್ತಿದೆ. ಇಂದು ನಮಗೆ ಭೀತಿ ಇರುವುದು ಚೀನಾದ ಮಿಲಿಟರಿಯಿಂದ ಅಲ್ಲ. ಬದಲಿಗೆ, ನಮ್ಮೆದುರಿನ ಆಯ್ಕೆಗಳನ್ನು ಕಿತ್ತುಕೊಳ್ಳುವ ಚೀನಾದ ಸಾಮರ್ಥ್ಯ ನಮಗಿರುವ ಬೆದರಿಕೆ.

ಹಲವು ವರದಿಗಳು ಹೇಳುವ ಪ್ರಕಾರ, ಅಣ್ವಸ್ತ್ರ ಸಿಡಿತಲೆಗಳ ಲೆಕ್ಕಾಚಾರದಲ್ಲಿ ಇಂದು ಪಾಕಿಸ್ತಾನ ನಮಗಿಂತ ಮುಂದಿದೆ. 1998ರಲ್ಲಿ ನಾವು ನಡೆಸಿದ ಕ್ರಿಯೆಯಿಂದಾಗಿ ಪಾಕಿಸ್ತಾನದವರೂ ಅದರೆಡೆ ಮುಖ ಮಾಡುವಂತೆ ಆಯಿತು ಎಂಬುದರಲ್ಲಿ ಎರಡನೆಯ ಮಾತು ಇಲ್ಲ. 1998ರಲ್ಲಿ ಈ ಪ್ರಶ್ನೆಗಳನ್ನೆಲ್ಲ ನಾವು ಕೇಳಿಕೊಳ್ಳಬೇಕಿತ್ತು. ಆದರೆ ನಾವು ಹಾಗೆ ಕೇಳಿಕೊಳ್ಳಲಿಲ್ಲ. ಇಂತಹ ದೂರಗಾಮಿ ಪರಿಣಾಮಗಳನ್ನು ಹೊಂದಬಲ್ಲ ಕ್ರಮಗಳ ಬಗ್ಗೆ ಯಾವುದೇ ಪ್ರಬುದ್ಧ ಸಮಾಜ, ಅದರಲ್ಲೂ ಮುಖ್ಯವಾಗಿ ಒಂದು ಪ್ರಜಾತಂತ್ರ ವ್ಯವಸ್ಥೆ, ಚರ್ಚಿಸಬೇಕಿತ್ತು. ಆದರೆ ನಾವು ಈ ವಿಚಾರವನ್ನು ಪಟಾಕಿಗೆ ಬೆಂಕಿ ತಗುಲಿಸಿದಷ್ಟು ಸಲೀಸಾಗಿ ಪರಿಗಣಿಸಿದೆವು.

ಆದರೆ, ಈ ಪರಿಣಾಮಗಳೆಲ್ಲವೂ ಗೊತ್ತಿದ್ದಿದ್ದರೆ ನಾವು ಪರೀಕ್ಷೆ ನಡೆಸುತ್ತಿದ್ದೆವಾ? ಈ ಬಗ್ಗೆ ತೀರ್ಮಾನಕ್ಕೆ ಬರುವ ಹೊಣೆಯನ್ನು ನಾನು ಓದುಗರಿಗೆ ಬಿಟ್ಟುಬಿಡುತ್ತೇನೆ. ಅಣ್ವಸ್ತ್ರ ಪರೀಕ್ಷೆಯು ನಮಗೆ ತಂದುಕೊಟ್ಟ ಒಂದೇ ಒಂದು ಪ್ರಯೋಜನವನ್ನು ಕೂಡ ನನ್ನಿಂದ ಗುರುತಿಸಲು ಆಗುತ್ತಿಲ್ಲ. ಆ ಪರೀಕ್ಷೆಯಿಂದ ಆದ ಒಂದು ಮಹತ್ವದ ನಷ್ಟವನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಕಳೆದ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಭಾರತದಲ್ಲಿನ ವಿದೇಶಿ ಬಂಡವಾಳದ ಹೊರಹರಿವು, ಒಳಹರಿವಿಗಿಂತ ಹೆಚ್ಚಿದ್ದಿದ್ದು 1998-1999ರಲ್ಲಿ. ಆ ವರ್ಷ ವಿದೇಶಿ ಹಣ ಭಾರತದಿಂದ ಹೊರಕ್ಕೆ ಓಡಿಹೋಯಿತು. ಬಂಡವಾಳ ಎಂಬುದು ಹೇಡಿ ಇದ್ದಂತೆ. ಅಪಾಯಕಾರಿ ತಂತ್ರಜ್ಞಾನವೊಂದನ್ನು ಅಷ್ಟು ಸಲೀಸಾಗಿ ಕಂಡಿದ್ದರಿಂದ ಉಂಟಾದ ಅಸ್ಥಿರತೆಯನ್ನು ತಾಳಿಕೊಳ್ಳಲು 'ಬಂಡವಾಳ'ಕ್ಕೆ ಸಾಧ್ಯವಾಗಲಿಲ್ಲ. ಇದರಿಂದ ಭಾರತಕ್ಕೆ ಮತ್ತು ಅದರ ಅರ್ಥ ವ್ಯವಸ್ಥೆಗೆ ಉಂಟಾದ ನಷ್ಟ ಯಾವತ್ತೂ ಚರ್ಚೆಯಾಗಿಲ್ಲ. ಅಣ್ವಸ್ತ್ರ ಪರೀಕ್ಷೆ ಇಪ್ಪತ್ತನೆಯ ವರ್ಷದಲ್ಲಿ ಅದರ ಬಗ್ಗೆ ನಮ್ಮಲ್ಲಿ ಸಂಭ್ರಮಾಚರಣೆ ಕಡಿಮೆ ಇರುವುದನ್ನು ಗಮನಿಸಿದರೆ, ಏನೂ ಆಗಿಲ್ಲ ಎಂಬಂತೆ ನಾವು ಮುನ್ನಡೆದಿರುವಂತೆ ಕಾಣುತ್ತಿದೆ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.