ತೆರಿಗೆ ಪಾವತಿ ಲೆಕ್ಕ ಹಾಕಲು ಕ್ರಮ

7
ವಾಲ್‌ಮಾರ್ಟ್‌ನಿಂದ ಫ್ಲಿಪ್‌ಕಾರ್ಟ್‌ ಖರೀದಿ ಒಪ್ಪಂದ

ತೆರಿಗೆ ಪಾವತಿ ಲೆಕ್ಕ ಹಾಕಲು ಕ್ರಮ

Published:
Updated:
ತೆರಿಗೆ ಪಾವತಿ ಲೆಕ್ಕ ಹಾಕಲು ಕ್ರಮ

ನವದೆಹಲಿ: ವಾಲ್‌ಮಾರ್ಟ್‌ನಿಂದ ಫ್ಲಿಪ್‌ಕಾರ್ಟ್‌ ಖರೀದಿ ಒಪ್ಪಂದದ ತೆರಿಗೆ ಪಾವತಿ ಲೆಕ್ಕ ಹಾಕಲು, ಆದಾಯ ತೆರಿಗೆ ಇಲಾಖೆಯು ಷೇರು ಖರೀದಿಯ ವಿವರಗಳನ್ನು ಕೇಳಲಿದೆ.

ಸಿಂಗಪುರ ಮತ್ತು ಮಾರಿಷಸ್‌ ಜತೆಗಿನ ದ್ವಿಪಕ್ಷೀಯ ತೆರಿಗೆ ಒಪ್ಪಂದಗಳಲ್ಲಿನ ಪ್ರಯೋಜನಗಳು, ವಾಲ್‌ಮಾರ್ಟ್‌ಗೆ ಷೇರುಗಳನ್ನು ಮಾರಾಟ ಮಾಡುವ ವಿದೇಶಿ ಹೂಡಿಕೆದಾರರಿಗೆ ಅನ್ವಯವಾಗಲಿವೆಯೇ ಎನ್ನುವುದನ್ನು ಇಲಾಖೆ ಪರಿಶೀಲಿಸಲಿದೆ.

ಸಿಂಗಪುರದಲ್ಲಿ ನೋಂದಾವಣೆಗೊಂಡಿರುವ ಫ್ಲಿಪ್‌ಕಾರ್ಟ್‌ ಪ್ರೈವೇಟ್‌ ಲಿಮಿಟೆಡ್‌, ಫ್ಲಿಪ್‌ಕಾರ್ಟ್‌ ಇಂಡಿಯಾದಲ್ಲಿ ಗರಿಷ್ಠ ಪಾಲು ಬಂಡವಾಳ ಹೊಂದಿದೆ. ಫ್ಲಿಪ್‌ಕಾರ್ಟ್‌ನ ಶೇ 77ರಷ್ಟು ಪಾಲು ಬಂಡವಾಳ ಖರೀದಿಯಿಂದ ಫ್ಲಿಪ್‌ಕಾರ್ಟ್‌ ಇಂಡಿಯಾದ ಮಾಲೀಕತ್ವವು ವಾಲ್‌ಮಾರ್ಟ್‌ಗೆ ವರ್ಗಾವಣೆಗೊಳ್ಳಲಿದೆ. ಈ ಒಪ್ಪಂದದಡಿ, ಷೇರುದಾರರು ತಮ್ಮ ಪಾಲು ಬಂಡವಾಳ ಮಾರಾಟದಿಂದ ಪಡೆದ ಲಾಭಕ್ಕೆ ತೆರಿಗೆ ವಿಧಿಸುವ ಸಂಬಂಧ ರೆವಿನ್ಯೂ ಇಲಾಖೆಯು ಫ್ಲಿಪ್‌ಕಾರ್ಟ್‌ಗೆ ಪತ್ರ ಬರೆಯಲಿದೆ. ಷೇರು ಖರೀದಿ ಒಪ್ಪಂದದ ವಿವರಗಳನ್ನೆಲ್ಲ ತನಗೆ ಸಲ್ಲಿಸುವಂತೆ ಕೇಳಿಕೊಳ್ಳಲಿದೆ.

ಈ ಒ‍ಪ್ಪಂದದ ಔಪಚಾರಿಕ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡ ನಂತರ, ಇಲಾಖೆಯು ಷೇರು ಖರೀದಿ ಒಪ್ಪಂದದ ವಿವರಗಳನ್ನು ಕೇಳಲಿದೆ. ಹಣದ ಹರಿವಿನ ಜಾಡು ಗುರುತಿಸಲು ಮತ್ತು ಅಂತಿಮವಾಗಿ ಯಾರು ಲಾಭ ಮಾಡಿಕೊಂಡಿದ್ದಾರೆ ಎನ್ನುವುದನ್ನು ಗುರುತಿಸಲು  ಒಪ್ಪಂದದ ಈ ವಿವರಗಳು ನೆರವಾಗಲಿವೆ. ಹೂಡಿಕೆ ಉದ್ದೇಶ ಮತ್ತು ಗಳಿಸಿದ ಲಾಭವನ್ನು ಖಾತರಿಪಡಿಸಿಕೊಳ್ಳಲು ಷೇರು ಖರೀದಿ ಒಪ್ಪಂದವನ್ನು ರೆವಿನ್ಯೂ ಇಲಾಖೆಯು ವಿವರವಾಗಿ ಪರಿಶೀಲಿಸಲಿದೆ ಎಂದುಅಧಿಕಾರಿಗಳು ತಿಳಿಸಿದ್ದಾರೆ.

ದ್ವಿಪಕ್ಷೀಯ ತೆರಿಗೆ ಒಪ್ಪಂದ ಪ್ರಯೋಜನಗಳು ಈ ಒಪ್ಪಂದದಲ್ಲಿ ಇರುವುದನ್ನು ತಿಳಿದುಕೊಳ್ಳಲು, ಇಲಾಖೆಯು ದುಪ್ಪಟ್ಟು ತೆರಿಗೆ ತಪ್ಪಿಸುವ ಒಪ್ಪಂದದ ವಿವರಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಿದೆ.

ಫ್ಲಿಪ್‌ಕಾರ್ಟ್‌ ಸಿಂಗಪುರದ ಷೇರುಗಳನ್ನು ಸಾಫ್ಟ್‌ಬ್ಯಾಂಕ್‌ ಅಥವಾ ಇತರ ವಿದೇಶಿ ಹೂಡಿಕೆದಾರರು ಮಾರಾಟ ಮಾಡಿದ ಸಂದರ್ಭದಲ್ಲಿ ಬಂಡವಾಳ ಗಳಿಕೆ ತೆರಿಗೆ ಪಾವತಿಸಬೇಕಾಗುತ್ತದೆ.

ಫ್ಲಿಪ್‌ಕಾರ್ಟ್ ಸಿಂಗಪುರ ಸಂಸ್ಥೆಯ ಸಂಪತ್ತಿನ ಬಹುಭಾಗವು ಭಾರತದಲ್ಲಿ ಇದೆ. ಹೀಗಾಗಿ ಷೇರು ಮಾರಾಟಗಾರರು ಬಂಡವಾಳ ಗಳಿಕೆ ತೆರಿಗೆ ಪಾವತಿಸಲು ಬಾಧ್ಯಸ್ಥನಾಗಿರುತ್ತಾರೆ. ಫ್ಲಿಪ್‌ಕಾರ್ಟ್‌ ಸಹ ಸ್ಥಾಪಕರಾದ ಸಚಿನ್ ಬನ್ಸಲ್‌ ಮತ್ತು ಬಿನ್ನಿ ಬನ್ಸಲ್‌ ಅವರೂ ಶೇ 20ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry