ಸದ್ಯವೇ ವಿದ್ಯುತ್ ದರ ಏರಿಕೆ

7
ಪ್ರತಿ ಯುನಿಟ್‌ಗೆ 20ರಿಂದ 30 ಪೈಸೆ ಹೆಚ್ಚಳ?

ಸದ್ಯವೇ ವಿದ್ಯುತ್ ದರ ಏರಿಕೆ

Published:
Updated:
ಸದ್ಯವೇ ವಿದ್ಯುತ್ ದರ ಏರಿಕೆ

ಬೆಂಗಳೂರು: ವಿಧಾನಸಭೆ ಚುನಾವಣೆಯ ಶಾಖದಿಂದ ಹೊರಬರುವ ಮುನ್ನವೇ ರಾಜ್ಯದ ಜನತೆ ವಿದ್ಯುತ್‌ ದರ ಏರಿಕೆಯ ‘ಶಾಕ್‌’ ಎದುರಿಸಲು ಸಿದ್ಧರಾಗಬೇಕಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್‌ ದರವನ್ನು ಪ್ರತಿ ಯುನಿಟ್‌ಗೆ 20ರಿಂದ 30 ಪೈಸೆಯಷ್ಟು ಹೆಚ್ಚಿಸುವ ಸಾಧ್ಯತೆ ಇದ್ದು, ಈ ಕುರಿತಂತೆ ಆಯೋಗವು ಸೋಮವಾರ (ಮೇ 14) ಆದೇಶ ಪ್ರಕಟಿಸಲಿದೆ.

‘ಪ್ರಜಾವಾಣಿ’ಗೆ ಭಾನುವಾರ ಮಾಹಿತಿ ನೀಡಿದ ಕೆಇಆರ್‌ಸಿ ಅಧ್ಯಕ್ಷ, ಎಂ.ಕೆ. ಶಂಕರಲಿಂಗೇಗೌಡ, ‘ಹೆಚ್ಚಿನ ವಿವರಗಳನ್ನು ಸೋಮವಾರ (ಮೇ 14)  ಪ್ರಕಟಿಸಲಾಗುವುದು’ ಎಂದರು.

‘ದರ ಜಾಸ್ತಿಯೂ ಆಗಬಹುದು ಅಥವಾ ಕಡಿಮೆಯೂ ಆಗಬಹುದು. ಆದರೆ, ಬಡ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪೂರ್ವಾನ್ವಯ: ‘2017ರ ಡಿಸೆಂಬರ್‌ನಲ್ಲೇ ಎಲ್ಲ ಎಸ್ಕಾಂಗಳು (ವಿದ್ಯುತ್‌ ಸರಬರಾಜು ಕಂಪನಿಗಳು) ಪ್ರತಿ ಯೂನಿಟ್‌ ದರ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿದ್ದವು. ಅದರನ್ವಯವೇ ದರ ಹೆಚ್ಚಳವಾಗುತ್ತಿದೆ. ಈ ಪರಿಷ್ಕೃತ ದರ 2018ರ ಏಪ್ರಿಲ್‌ ತಿಂಗಳಿನಿಂದಲೇ ಪೂರ್ವಾನ್ವಯ ಆಗಲಿದೆ’ ಎಂದು ಮೂಲಗಳು ’ಪ್ರಜಾವಾಣಿ’ಗೆ ತಿಳಿಸಿವೆ.

ಜೆಸ್ಕಾಂ ಪ್ರಸ್ತಾವ ಹೆಚ್ಚು:  ‘ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ) ಪ್ರತಿ ಯೂನಿಟ್‌ಗೆ ₹ 1.62ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿದ್ದರೆ, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ₹ 1.45ರಷ್ಟು ಹೆಚ್ಚಳದ ಪ್ರಸ್ತಾವ ಸಲ್ಲಿಸಿದೆ’ ಎಂದು ತಿಳಿದು ಬಂದಿದೆ.

‘ವಿದ್ಯುತ್‌ ಖರೀದಿ ವೆಚ್ಚ, ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವ ಕಾರಣಕ್ಕಾಗಿ ದರ ಹೆಚ್ಚಳ ಅನಿವಾರ್ಯ ಎಂದು ಕಂಪನಿಗಳು ಕಾರಣ ನೀಡಿವೆ. ಎಲ್ಲ ವಿಭಾಗಗಳೂ ದರ ಏರಿಕೆ ಕುರಿತಂತೆ ಸಲ್ಲಿಸಿರುವ ಅರ್ಜಿಗಳನ್ನು ಆಯೋಗ ಈಗಾಗಲೇ ವಿಚಾರಣೆ ನಡೆಸಿದೆ. ಚುನಾವಣಾ ನೀತಿ ಸಂಹಿತೆ ಇದ್ದ ಕಾರಣಕ್ಕಾಗಿ ಈ ತನಕ ಹೊಸ ದರಗಳ ಪ್ರಕಟಣೆ ತಡೆ ಹಿಡಿದಿತ್ತು’ ಎಂದು ಮೂಲಗಳು ವಿವರಿಸಿವೆ.

ಕಳೆದ ವರ್ಷ ಶೇ 8ರಷ್ಟು ಅಂದರೆ, ಪ್ರತಿ ಯೂನಿಟ್‌ಗೆ 48 ಪೈಸೆ ಹೆಚ್ಚಳ ಮಾಡಲಾಗಿತ್ತು. 2011ರ ನಂತರ ಮಾಡಲಾದ ದರ ಏರಿಕೆಯಲ್ಲಿ 2017ರ ಈ ದರ ಏರಿಕೆಯೇ ಹೆಚ್ಚಿನ ಪ್ರಮಾಣದ ಏರಿಕೆ ಎನಿಸಿತ್ತು.

‘ನಗರ ಪ್ರದೇಶಗಳ ಗೃಹ ಬಳಕೆ ಗ್ರಾಹಕರು, ವಾಣಿಜ್ಯ ಬಳಕೆದಾರರು ಮತ್ತು ಗ್ರಾಮೀಣ ಭಾಗದಲ್ಲಿ ಗೃಹ ಹಾಗೂ ವಾಣಿಜ್ಯ ಬಳಕೆದಾರರಿಗೆ ಪ್ರತ್ಯೇಕ ದರಗಳು ಅನ್ವಯವಾಗಲಿವೆ.

*

ಪ್ರತಿ ಯೂನಿಟ್‌ಗೆ ₹ 1.62 ಹೆಚ್ಚಿಸಲು ಜೆಸ್ಕಾಂ ಪ್ರಸ್ತಾವ

₹ 1.45ರಷ್ಟು ಏರಿಸಲು ಬೆಸ್ಕಾಂ ಬೇಡಿಕೆ

ದರ ಹೆಚ್ಚಳ ಅನಿವಾರ್ಯ– ಎಸ್ಕಾಂಗಳ ವಾದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry