ಸೋಮವಾರ, ಮಾರ್ಚ್ 1, 2021
30 °C
ದಂಡಿನಶಿವರ ಹೋಬಳಿ ವ್ಯಾಪ್ತಿಯಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ

ಮಳೆ ಗಾಳಿ ಅಬ್ಬರಕ್ಕೆ ಗ್ರಾಮಗಳು ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಗಾಳಿ ಅಬ್ಬರಕ್ಕೆ ಗ್ರಾಮಗಳು ತತ್ತರ

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಹಡವನಹಳ್ಳಿ ಮತ್ತು ಗೊಲ್ಲರಹಟ್ಟಿಯಲ್ಲಿ ಭಾನುವಾರ ಸಂಜೆ ಗುಡುಗು– ಮಿಂಚು ಸಹಿತ, ಮಳೆ ಬಿರುಗಾಳಿಗೆ ವಿದ್ಯುತ್ ಕಂಬ, ತೆಂಗು, ಅಡಿಕೆ, ಮನೆಯ ಹಂಚುಗಳು ಹಾನಿಯಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ.

ದಂಡಿನಶಿವರ ಹೋಬಳಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಮರಗಳು ಬಿದ್ದು 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿವೆ. ಇನ್ನು ಕೆಲವೆಡೆ ವಿದ್ಯುತ್ ತಂತಿಗಳು ನೆಲಕ್ಕೆ ಬಿದ್ದಿವೆ. ಬೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಭಾನುವಾರ ಸಂಜೆ ಸುರಿದ ಮಳೆಗಾಳಿಗೆ ಹಡವನಹಳ್ಳಿ ಮತ್ತು ಹಡವನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮನೆಗಳಲ್ಲಿನ ವಸ್ತುಗಳು ಸಂಪೂರ್ಣ ಅಸ್ತವ್ಯಸ್ತವಾಗಿ ಜನ ಜೀವನ ಮುರಾಬಟ್ಟೆಯಂತಾಗಿದೆ. ಇದೇ ಗ್ರಾಮದ ರತ್ನಮ್ಮ ಅವರಿಗೆ ಸೇರಿದ ತಲಾ 50 ತೆಂಗು, ಅಡಿಕೆ ಮರಗಳು ನೆಲಕಚ್ಚಿ ಅವರ ಮನೆಯೂ ಸಹ ಮಳೆಗಾಳಿಗೆ ಕುಸಿದಿದೆ. ಇದೇ ಊರಿನ ತಿಮ್ಮೇಗೌಡರ ಎಮ್ಮೆಯ ಮೇಲೆ ತೆಂಗಿನಮರ ಬಿದ್ದು ಸೊಂಟ ಮುರಿದಿದೆ.

ಲೋಕೇಶ್ ಸೇರಿದಂತೆ ಇನ್ನು ಹಲವರ 50ಕ್ಕೂ ಹೆಚ್ಚು ಮನೆಗಳ ಹೆಂಚು ಮತ್ತು ಶೀಟುಗಳು ಗಾಳಿಗೆ ತೂರಿ ಹೋಗಿವೆ. ಹಡವನಹಳ್ಳಿ ಗೊಲ್ಲರಹಟ್ಟಿಯಲ್ಲಿ ರಸ್ತೆ ಮಧ್ಯೆ ಅವೈಜ್ಞಾನಿಕ ವಿದ್ಯುತ್ ಕಂಬ ಎಳೆ ಹಾಕಲಾಗಿತ್ತು. ಊರಿನ ನಡುರಸ್ತೆಯಲ್ಲೆ ವಿದ್ಯುತ್ ಲೈನ್ ತುಂಡರಿಸಿ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಹಡವನಹಳ್ಳಿ ಗೊಲ್ಲರಹಟ್ಟಿ ಪ್ರಾಥಮಿಕ ಶಾಲೆಯ ಮುಂಭಾಗ ಮರ ಗಾಳಿಗೆ ಸೀಳಿ ರಸ್ತೆಗೆ ಉರುಳಿದೆ. ಮಿಲ್ ಪುಟ್ಟರಾಜು ಅವರ ಜಾಲಿಮರ ಗಾಳಿಗೆ ಸೀಳಿಕೊಂಡು ರಸ್ತೆಗೆ ಬಿದ್ದಿದೆ. ಜನತಾ ಕಾಲೊನಿಯ ಬಸ್ ನಿಲ್ದಾಣದ ಮೇಲೆ ಮರ ಬಿದ್ದು ಜಖಂ ಆಗಿದೆ. ರಸ್ತೆ ಬದಿಯ ಗುಡಿಸಲು ಅಂಗಡಿಯ ಮೇಲೆ ಮರದ ಕೊಂಬೆ ಮುರಿದು ಬಿದ್ದಿದೆ.

ಚಾಕುವಳ್ಳಿ ಪಾಳ್ಯದಲ್ಲಿ ಮರಗಳು ಧರೆಗೆ ಉರುಳಿವೆ. ಅಲ್ಲಿ 5 ಮನೆಗಳ ಹಂಚುಗಳು ಗಾಳಿಗೆ ತೂರಿವೆ ಮತ್ತು ಬಸವರಾಜು ಮತ್ತು ಎ.ಎಲ್.ಚಂದ್ರಯ್ಯ ಮನೆಯ ಕೂಲಿಂಗ್ ಶೀಟ್‌ಗಳು ಗಾಳಿಗೆ ಒಡೆದು ಪುಡಿಯಾಗಿವೆ. ಇದೇ ಗ್ರಾಮದ ಗೊಂವಿಂದರಾಜು ಎಂಬುವವರ ಮನೆಯ ಹಂಚುಗಳು ಒಡೆದು ಮನೆಯಲ್ಲಿ ನೀರು ನಿಂತಂತಾಗಿದೆ.

ಹಡವನಹಳ್ಳಿ, ಹೊನ್ನೆಬಾಗಿ ಮತ್ತು ಜನತಾ ಕಾಲೊನಿಯಲ್ಲಿ 20ಕ್ಕೂ ಹೆಚ್ಚಿನ ಮನೆಯ ಹಂಚುಗಳು ಹೊಡೆದು ಪುಡಿಯಾಗಿದೆ ಮನೆಯೊಳಗೆ ಮಳೆ ನೀರು ನಿಂತು ಜನರು ಬೀದಿಗೆ ಬೀಳುವಂತಾಗಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.