ಶನಿವಾರ, ಮಾರ್ಚ್ 6, 2021
18 °C
ಬೇಸಿಗೆಯಲ್ಲಿ ಜನರನ್ನು ಸೆಳೆಯುವ ವೈವಿಧ್ಯಮಯ ಹಣ್ಣುಗಳು

ಬಡಾವಣೆ ಬೀದಿಗಳಲ್ಲೂ ಹಣ್ಣಿನ ವ್ಯಾಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡಾವಣೆ ಬೀದಿಗಳಲ್ಲೂ ಹಣ್ಣಿನ ವ್ಯಾಪಾರ

ರಾಯಚೂರು: ನಗರದಲ್ಲಿ ಹಣ್ಣುಗಳ ಮಾರಾಟ ಜೋರಾಗಿ ನಡೆದಿದ್ದು, ರಸ್ತೆ ಹಾಗೂ ಬಡಾವಣೆಗಳು ಸೇರಿ ಎಲ್ಲೆಡೆ ಹಣ್ಣುಗಳ ಮಾರಾಟವೇ ಕಂಡು ಬರುತ್ತಿದೆ.

ತರಕಾರಿ ಮಾರುಕಟ್ಟೆ, ಬಂಗಿಕುಂಟಾ ಪ್ರದೇಶ ಹಾಗೂ ಪ್ರಮುಖ ವೃತ್ತಗಳಲ್ಲಿ ಹಣ್ಣು ಮಾರಾಟ ಸಾಮಾನ್ಯವಾಗಿದೆ. ಆದರೆ, ಬೇಸಿಗೆ ಅವಧಿಯಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿ ಕಂಡು ಬರುವುದರಿಂದ ರಸ್ತೆಯ ಬದಿಯಲ್ಲಿ ಹಾಗೂ ಬಡಾವಣೆಗಳಲ್ಲಿ ಸುತ್ತಾಡಿ ಮಹಿಳೆಯರು ಹಣ್ಣು ಮಾರಾಟ ಮಾಡುವುದು ಹೆಚ್ಚಾಗಿ ಕಂಡು ಬರುತ್ತಿದೆ.

ವರ್ಷವಿಡೀ ಹಣ್ಣುಗಳ ಮಾರಾಟ ಮಾಡಲಾಗುತ್ತದೆ. ಆದರೆ, ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು, ಕಲ್ಲಂಗಡಿ ಹಣ್ಣು ಹಾಗೂ ವಿಶೇಷವಾಗಿ ತಾಳೆ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆಯಿಡುವುದರಿಂದ ಈ ಅವಧಿಯಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಆದ್ದರಿಂದ ತರಕಾರಿಗಿಂತ ಹೆಚ್ಚಾಗಿ ಹಣ್ಣುಗಳ ಮಾರಾಟವೇ ಹೆಚ್ಚು ನಡೆಯುತ್ತಿದೆ.

ಬಿಸಿಲಿನ ಝಳದಿಂದ ಬಿಸಿಯಾದ ದೇಹವನ್ನು ತಂಪಾಗಿಸಿಕೊಳ್ಳಲು ಹಣ್ಣುಗಳು ಸಹಕಾರಿ ಆಗಿರುವುದರಿಂದ ಹೆಚ್ಚಿನ ಜನರು ಹಣ್ಣುಗಳ ಮೊರೆ ಹೋಗಿದ್ದಾರೆ. ಪ್ರಸ್ತುತ ದಿನಗಳಲ್ಲಿ ಬಿಸಿಲಿನ ತಾಪಮಾನ 40ರಿಂದ 43 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇರುವುದರಿಂದ ಮಧ್ಯಾಹ್ನದ ಹೊತ್ತಿನಲ್ಲಿ ಜನರು ಹೊರ ಬರುವುದು ವಿರಳವಾಗಿದೆ. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಹೆಚ್ಚಾಗಿ ಹಣ್ಣುಗಳನ್ನು ತಿನ್ನುತ್ತಿದ್ದಾರೆ.

ನಗರದ ಎಲ್ಲಾ ಬಡಾವಣೆಗಳಲ್ಲಿ ಮಹಿಳೆಯರು ಪುಟ್ಟಿಗಳಲ್ಲಿ ಹಣ್ಣುಗಳನ್ನು ಹೊತ್ತುಕೊಂಡು ಮಾರಾಟ ಮಾಡುತ್ತಾ ಬರುತ್ತಾರೆ. ಅಲ್ಲದೇ ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಕುಳಿತು ಹಣ್ಣುಗಳು ಮಾರಾಟ ಮಾಡುವ ಮಹಿಳೆಯರು ಇದರಲ್ಲಿ ಉದ್ಯೋಗವನ್ನು ಕಂಡುಕೊಂಡಿದ್ದಾರೆ.

ಬಿರು ಬಿಸಿಲಿನಲ್ಲೂ ಈ ಮಹಿಳೆಯರು ಹಣ್ಣುಗಳು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಾರೆ. ಬೇಸಿಗೆಯಲ್ಲಿ ಹಣ್ಣುಗಳ ಸೀಸನ್ ಇರುವುದಿರಂದ ಒಂದಿಷ್ಟು ಹಣ ಗಳಿಕೆ ಮಾಡಲು ಸಹಕಾರಿಯಾಗಿದೆ ಎಂದು ಹಣ್ಣು ಮಾರುವ ಮಹಿಳೆಯರು ಹೇಳುತ್ತಾರೆ.

ಬೇಸಿಗೆಯ ಅವಧಿಯಲ್ಲಿ ಬರುವ ಹಣ್ಣುಗಳಾದ ತಾಳೆಹಣ್ಣಿಗೆ ಈ ಭಾಗದಲ್ಲಿ ಬಹಳಷ್ಟು ಬೇಡಿಕೆ ಕಂಡು ಬರುತ್ತದೆ. ಆದ್ದರಿಂದ ನಗರದ ಕೇಂದ್ರ ಬಸ್‌ ನಿಲ್ದಾಣ, ತೀನ್‌ ಕಂದಿಲ್ ವೃತ್ತ ಹಾಗೂ ಚಂದ್ರಮೌಳೀಶ್ವರ ರಸ್ತೆ ಸೇರಿದಂತೆ ವಿವಿಧೆಡೆ ಮಹಿಳೆಯರು ಸಾಲಾಗಿ ಕುಳಿತು ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗಿದೆ.

ಈ ಹಣ್ಣಿನಲ್ಲಿ ಹಲವು ಔಷಧೀಯ ಗುಣಗಳು ಇರುವುದರಿಂದ ಬಹುತೇಕ ಜನರು ಇದೇ ಹಣ್ಣಿಗೆ ಮಾರು ಹೋಗಿದ್ದಾರೆ. ತಾಳೆ ಹಣ್ಣುಗಳ ಒಂದು ಡಜನ್ ಬೆಲೆ ₹20 ರಿಂದ ₹30 ಇದೆ.

ಹಣ್ಣುಗಳ ರಾಜ ಮಾವಿನ ಹಣ್ಣುಗಳಿಗೂ ಬೇಡಿಕೆ ಹೆಚ್ಚಾಗಿದ್ದು, ನಗರದಲ್ಲಿನ ಬಹಳಷ್ಟು ಕಡೆಗಳಲ್ಲಿ ಈ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಜನರು ಕೆಜಿಗಟ್ಟಲೆ ಹಣ್ಣುಗಳನ್ನು ಖರೀದಿಸಿಕೊಂಡು ಹೋಗಿ, ಮನೆಯಲ್ಲಿ ಕುಟುಂಬದವರೆಲ್ಲ ತಿನ್ನುತ್ತಾರೆ. ಬೆನಸನ್‌, ತೊತಾಪುರಿ, ಮೊಲಗೋವಾ ಸೇರಿ ವಿವಿಧ ಬಗೆಯ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕೆಜಿ ಹಣ್ಣಿಗೆ ₹60ರಿಂದ ₹100 ರವರೆಗೆ ಬೆಲೆಯಿದೆ.

ಕಲ್ಲಂಗಡಿ ಹಣ್ಣುಗಳನ್ನು ನಗರದ ರಸ್ತೆ ಬದಿಯಲ್ಲಿ ಕತ್ತರಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಪ್ಲೇಟ್‌ಗಳಂತೆ ಮಾರಾಟ ಮಾಡಲಾಗುತ್ತದೆ. ಈ ಹಣ್ಣಿನ ಸೇವನೆಯಿಂದ ದೇಹದಲ್ಲಿನ ಬಿಸಿ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ವಿಶೇಷವಾಗಿ ಇದೇ ಹಣ್ಣನ್ನು ತಿನ್ನಲು ಜನರು ಮುಗಿ ಬೀಳುತ್ತಾರೆ.

**

ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ದೇಹವನ್ನು ಒಂದಿಷ್ಟಾದರೂ ತಂಪಾಗಿಸಲು ಹಣ್ಣುಗಳನ್ನು ತಿನ್ನುತ್ತೇವೆ - ಶ್ರೀನಿವಾಸ, ಗ್ರಾಹಕ 

ಪಿ.ಹನುಮಂತು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.