ಶುಕ್ರವಾರ, ಮಾರ್ಚ್ 5, 2021
28 °C
ಚಾವಡಿ ಕಟ್ಟೆಯಲ್ಲಿ ಚನಾವಣಾ ಫಲಿತಾಂಶದ್ದೇ ಚರ್ಚೆ

ಅವರಲ್ಲ, ಇವರು ಗೆಲ್ತಾರೆ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವರಲ್ಲ, ಇವರು ಗೆಲ್ತಾರೆ....

ಶ್ರೀರಂಗಪಟ್ಟಣ: ವಿಧಾನಸಭೆ ಚುನಾವಣೆ ಕುರಿತು ಸುಮಾರು ಒಂದು ತಿಂಗಳಿನಿಂದ ತಮ್ಮ ಅಭ್ಯರ್ಥಿಗಳ ಪರ ಕೆಲಸ ಮಾಡಿ ದಣಿದಿರುವ ಜನರು ಇದೀಗ ಮೇ 15ರ ಫಲಿತಾಂಶದ ಬಗ್ಗೆ ಚಾವಡಿ ಕಟ್ಟೆಗಳಲ್ಲಿ ಚರ್ಚೆ ಶುರು ಮಾಡಿದ್ದಾರೆ.

ಪಟ್ಟಣ ಸೇರಿದಂತೆ ಹಳ್ಳಿಗಳ ಅಂಗಡಿ– ಮುಂಗಟ್ಟುಗಳ ಬಳಿ ಇದೇ ಚರ್ಚೆ ನಡೆಯುತ್ತಿದೆ. ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಸಕಾರಾತ್ಮಕ ಮತ್ತು ಎದುರಾಳಿಗಳ ನಕಾರಾತ್ಮಕ ಅಂಶಗಳ ಬಗ್ಗೆ ಮಾತನಾಡುತ್ತಿದ್ದಾರೆ. ನೀರಿಲ್ಲದೆ ಬೇಸಿಗೆ ಬೆಳೆ ಕಳೆದುಕೊಳ್ಳುವ ತಲೆ ಬಿಸಿಗಿಂತ ಚುನಾವಣಾ ಫಲಿತಾಂಶದ ಬಗೆಗಿನ ಚರ್ಚೆಯ ಬಿಸಿ ತುಸು ಜಾಸ್ತಿಯಾಗಿದೆ.

‘ಕಾಂಗ್ರೆಸ್‌ ಪಕ್ಷದ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ ಇತರ ಯೋಜನೆಗಳು ಜನರಿಗೆ ಮುಟ್ಟಿವೆ. ಕಾಂಗ್ರೆಸ್‌ ಅಭ್ಯರ್ಥಿ ರಮೇಶ ಬಂಡಿಸಿದ್ದೇಗೌಡ ಸದಾ ಕಾಲ ಜನರ ಜತೆಗೇ ಇರುವುದರಿಂದ ಚನಾವಣೆಯಲ್ಲಿ ಹೆಚ್ಚು ಜನರು ಅವರನ್ನು ಬೆಂಬಲಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್‌ನ ಎಲ್ಲ ಮುಖಂಡರು ಈ ಬಾರಿ ಒಗ್ಗೂಡಿ ಮುನ್ನೆಲೆಗೆ ಬಂದು ಕೆಲಸ ಮಾಡಿದ್ದಾರೆ. ಹಿಂದುಳಿದ ವರ್ಗದ ಮತಗಳು ಗಣನೀಯವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬಿದ್ದಿವೆ. ಹಾಗಾಗಿ ಕಾಂಗ್ರೆಸ್‌ ಅಭ್ಯರ್ಥಿ ರಮೇಶ ಬಂಡಿಸಿದ್ದೇಗೌಡ ಗೆಲುವು ಸಾಧಿಸಲಿದ್ದಾರೆ’ ಎಂಬುದು ಮನ್‌ಮುಲ್‌ ನಿರ್ದೇಶಕ ಬಿ. ಬೋರೇಗೌಡ ಅವರ ಮಾತು.

‘ಮಂಡ್ಯ ಜಿಲ್ಲೆಯಲ್ಲಿ ಹಿಂದೆಂದೂ ಇಲ್ಲದ ರೀತಿ ಜೆಡಿಎಸ್‌ ಪಕ್ಷದ ಪರ ಅಲೆ ಎದ್ದಿದೆ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ನಮ್ಮ ಕಷ್ಟ ಕಳೆಯುತ್ತದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ರಮೇಶ ಬಂಡಿಸಿದ್ದೇಗೌಡ ಜನರ ಜತೆ ಚರ್ಚಿಸದೆ ದಿಢೀರ್‌ ಪಕ್ಷ ಬದಲಿಸಿದ್ದು ಅವರಿಗೆ ಮುಳುವಾಗಲಿದೆ. 2013ರ ಸುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿದ್ದ ರವೀಂದ್ರ ಶ್ರೀಕಂಠಯ್ಯ ಅವರು ಶಾಸಕರಾಗಲಿ ಎಂಬ ಭಾವನೆ ಮೂಡಿರುವುದು ಜೆಡಿಎಸ್‌ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರ ಗೆಲುವಿಗೆ ವರದಾನವಾಗಲಿದೆ’ ಎಂಬುದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಎಂ.ಸುರೇಶ್‌ ಅವರ ವಾದವಾಗಿದೆ.

‘ಕಾಂಗ್ರೆಸ್‌ ಅಭ್ಯರ್ಥಿ ರಮೇಶ ಬಂಡಿಸಿದ್ದೇಗೌಡ ಹಾಗೂ ಜೆಡಿಎಸ್‌ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರ ಕುಟುಂಬ ಸದಸ್ಯರನ್ನು ಮತದಾರರು ಸಾಕಷ್ಟು ಬಾರಿ ಗೆಲ್ಲಿಸಿದ್ದಾರೆ. ಕಳೆದ 37 ವರ್ಷಗಳಿಂದ ರೈತರಿಗಾಗಿ, ಕಾವೇರಿ ನೀರಿನ ಹಕ್ಕಿಗಾಗಿ, ಅನ್ಯಾಯ ಮತ್ತು ಅಕ್ರಮಗಳ ತಡೆಗಾಗಿ ಹೋರಾಡುತ್ತಿರುವ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ನಂಜುಂಡೇಗೌಡ ಅವರ ಪರ ಜನರು ಒಲವು ತೋರಿಸಿದ್ದಾರೆ. 6 ಬಾರಿ ಸೋತಿರುವ ನಂಜುಂಡೇಗೌಡ ಅವರ ಪರ ಜನರಲ್ಲಿ ಅನುಕಂಪವೂ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕೂಡ ಕೆ.ಎಸ್‌. ನಂಜುಂಡೇಗೌಡ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ’ ಎಂದು ಪಟ್ಟಣದ ಕೃಷ್ಣರಾಜೇಂದ್ರ ಸೊಸೈಟಿಯ ಉಪಾಧ್ಯಕ್ಷ ಉಮೇಶ್‌ಕುಮಾರ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.