ಸೋಲು, ಗೆಲುವಿನ ಲೆಕ್ಕಾಚಾರ ಶುರು

7
ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರ

ಸೋಲು, ಗೆಲುವಿನ ಲೆಕ್ಕಾಚಾರ ಶುರು

Published:
Updated:

ಹಾಸನ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಖಾಡದಲ್ಲಿರುವ 53 ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರವಾಗಿದೆ.

ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಸ್ಟ್ರಾಂಗ್‌ ರೂಂಗಳಲ್ಲಿ ಭದ್ರವಾಗಿ ಇಡಲಾಗಿದೆ. ಮೇ 1 5 ರಂದು ಬೆಳಿಗ್ಗೆ 8 ರಿಂದ ಮತ ಎಣಿಕೆ ನಡೆಯಲಿದೆ.

ಇವಿಎಂ ದೋಷದಿಂದ ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಗಿ ಆರಂಭಗೊಂಡಿತ್ತು. ಹೀಗಾಗಿ ಎರಡು ತಾಸು ವಿಸ್ತರಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.

ಬೇಲೂರು ವಿಧಾನಸಭಾ ಕ್ಷೇತ್ರದ ಜಾವಗಲ್‌ ಸಮೀಪದ ನೇರ್ಲಿಗಿ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ಎರಡು ತಾಸು ಮತದಾನ ಸ್ಥಗಿತಗೊಂಡಿತ್ತು. ಹೀಗಾಗಿ ರಾತ್ರಿ 9 ರವರೆಗೂ ಮತದಾನ ನಡೆಯಿತು.  ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಮತದಾನ ಪ್ರಕ್ರಿಯೆ ಶನಿವಾರ ರಾತ್ರಿ ಪೂರ್ಣಗೊಂಡಿತು.

ಏಳು ಕ್ಷೇತ್ರಗಳ ಮತಯಂತ್ರಗಳು ಮತ್ತು ವಿವಿ ಪ್ಯಾಟ್‌ ಗಳನ್ನು ನಗರದ ಸರ್ಕಾರಿ  ಎಂಜಿನಿಯರಿಂಗ್‌ ಕಾಲೇಜಿನ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದೆ. ಶನಿವಾರ ರಾತ್ರಿ ಕೆಲ ಕ್ಷೇತ್ರಗಳ ಮತಯಂತ್ರಗಳು ಎಣಿಕೆ ಕೇಂದ್ರ ತಲುಪಿದ್ದವು. ಭಾನುವಾರ ಬೆಳಿಗ್ಗೆ ಎಲ್ಲಾ ಕ್ಷೇತ್ರಗಳ ಮತಯಂತ್ರಗಳನ್ನು ತಲುಪಿಸಲಾಯಿತು.

ನಂತರ ಭದ್ರತಾ ಕೊಠಡಿಗಳಲ್ಲಿ ಇರಿಸಿ, ಬಾಗಿಲು ಹಾಕಿ ಮೊಹರು ಮಡಲಾಗಿದೆ. ಮತಯಂತ್ರಗಳನ್ನು ಇರಿಸಿರುವ ಕೊಠಡಿಗಳು ಮತ್ತು ಎಣಿಕೆ ಕೇಂದ್ರಕ್ಕೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ರಿಲ್ಯಾಕ್ಸ್‌ ಮೂಡ್‌ನಲ್ಲಿ ಅಭ್ಯರ್ಥಿಗಳು

ಬಿರು ಬಿಸಿಲನ್ನೂ ಲೆಕ್ಕಿಸದೆ ಕ್ಷೇತ್ರದ ಮೂಲೆ ಮೂಲೆ ಎಡತಾಕಿದ್ದ ಅಭ್ಯರ್ಥಿಗಳು ಈಗ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. ದೇಹ ವಿಶ್ರಾಂತಿ ಬಯಸಿದರೂ, ಮನಸ್ಸು ಮಾತ್ರ ಲೆಕ್ಕಾಚಾರದಲ್ಲೇ ಮುಳುಗಿದೆ.

ಮತದಾನ ಆಧರಿಸಿ ಯಾವ ಬೂತ್‌ನಲ್ಲಿ ಎಷ್ಟು ಮತ ಬಂದಿರಬಹುದು, ಯಾರು ಕೈ ಕೊಟ್ಟರೂ, ಯಾವ ವಿಚಾರ ಕೈ ಹಿಡಿಯಲಿದೆ ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ಕ್ಷೇತ್ರ ಸುತ್ತಿ ಬಳಲಿದ್ದ ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಸಮಾಲೋಚನೆಯಲ್ಲಿ ತೊಡಗಿರುವುದು ಕಂಡು ಬಂತು. ಫಲಿತಾಂಶ ಕುರಿತು ಮುಖಂಡರಿಂದ ಮಾಹಿತಿ ಕಲೆ ಹಾಕಿದರು. ಭಾನುವಾರ ದಿನವಿಡೀ ವಿಶ್ರಾಂತಿ ಪಡೆದರು.

ಕೆಲ ಕ್ಷೇತ್ರಗಳ ಅಭ್ಯರ್ಥಿಗಳು ಮುಖಂಡರೊಂದಿಗೆ ದಣಿವಾರಿಸಿಕೊಳ್ಳಲು ರೆಸಾರ್ಟ್‌ ಮೊರೆ ಹೋದರೆ, ಕೆಲವರು ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿ, ಕಾರ್ಯಕರ್ತರ ಜತೆ ಮತದಾನ ಕುರಿತು ಸಮಾಲೋಚನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry