‘ಈ ಬಾರಿ ಗೆಲುವು ಯಾರದು?’

7
ಚಾಮರಾಜನಗರ ಜಿಲ್ಲಾದ್ಯಂತ ಸೋಲು, ಗೆಲುವಿನದೇ ಚರ್ಚೆ

‘ಈ ಬಾರಿ ಗೆಲುವು ಯಾರದು?’

Published:
Updated:

ಚಾಮರಾಜನಗರ: ಜಿಲ್ಲೆಯಲ್ಲಿ ನಿರೀಕ್ಷೆಯಂತೆಯೇ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿತು. ಸದ್ಯ, ಈಗ ನಡೆಯುತ್ತಿರುವುದು ಸೋಲು– ಗೆಲುವಿನ ಲೆಕ್ಕಾಚಾರಗಳು.

ಯಾರು ಯಾರಿಗೇ ದೂರವಾಣಿ ಕರೆ ಮಾಡಿದರೂ ಮೊದಲು ಕೇಳುವುದೇ ‘ನಿಮ್ಮ ಕಡೆ ಯಾರು ಗೆಲ್ಲುತ್ತಾರೆ’ ಎಂದು. ಇಂತಹ ಅಭ್ಯರ್ಥಿಯ ಕಡೆಯವರು ಕಡೇ ಗಳಿಗೆಯಲ್ಲಿ ಹಣ ಹಂಚಿದರಂತೆ ಹೌದಾ? ಎಷ್ಟು ಹಂಚಿದರು? ಹೇಗೆ ಹಂಚಿದರು? ಹೀಗೆ ಚುನಾವಣೆ ಕುರಿತು ಪ್ರಶ್ನಾವಳಿಗಳು ಒಂದರ ಮೇಲೊಂದರಂತೆ ಕೇಳಿ ಬರುತ್ತಿವೆ.

ರಾಜಕೀಯ ಪಕ್ಷಗಳ ಬೆಂಬಲಿಗರು ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ‘ಹೇಗಿದೆ ವಾತಾವರಣ’ ಎಂದು ಕೇಳುತ್ತಿದ್ದಾರೆ. ವಿವಿಧ ಪಕ್ಷಗಳ ಮುಖಂಡರಲ್ಲಿ ಮಾತ್ರವಲ್ಲ ಕಾರ್ಯಕರ್ತರಲ್ಲೂ ಕುತೂಹಲ ಮಡುಗಟ್ಟಿದೆ. ‌

ಚಹಾದಂಗಡಿಗಳು ಸಿಗರೇಟಿನ ಗೂಡಂಗಡಿಗಳಾಗಿ ಮಾತ್ರ ಇರದೇ ರಾಜಕೀಯ ಚರ್ಚೆಯ ತಾಣವಾಗಿಯೂ ಬದಲಾಗಿವೆ. ಪರಸ್ಪರ ಪರಿಚಯ ಇಲ್ಲದವರೂ ರಾಜಕೀಯದ ಕುರಿತು ಚರ್ಚೆಯಲ್ಲಿ ಪರಿಚಿತರಂತೆ ಮಾತನಾಡುತ್ತಿರುವುದು ಸಾಮಾನ್ಯ ಸಂಗತಿ ಎನಿಸಿದೆ. ಕೆಲವೊಮ್ಮೆ ಇಂತಹ ಚರ್ಚೆಗಳು ವಿಕೋಪಕ್ಕೆ ಹೋದ ಉದಾಹರಣೆಗಳೂ ಇವೆ.

ಗೆಲುವು– ಸೋಲಿಗೆ ಜನಸಾಮಾನ್ಯರು ತಮ್ಮದೇ ಆದ ವಾದಗಳನ್ನು ಮಂಡಿಸುತ್ತಿದ್ದಾರೆ. ಹಣ ಹಂಚಿಕೆಯೊಂದೇ ಅಭ್ಯರ್ಥಿಯ ಕೈ ಹಿಡಿಯದು ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಆ ಅಭ್ಯರ್ಥಿ ಇಷ್ಟು ಹಣ, ಈ ಅಭ್ಯರ್ಥಿ ಅಷ್ಟು ಹಣ ಹಂಚಿದರಂತೆ, ಚೆಕ್‌ಪೋಸ್ಟ್‌ಗಳಲ್ಲಿ ಅಡ್ಜಸ್ಟ್ ಮಾಡಿಕೊಂಡರಂತೆ, ₹ 40 ಸಾವಿರದ ಹಾಗೆ ಕಾರ್ಯಕರ್ತರು ತಮ್ಮ ತಮ್ಮ ಹಳ್ಳಿಗಳಿಗೆ ದಾಟಿಸಿದರಂತೆ ಎನ್ನುವ ಮಾತುಗಳು ಬಲವಾಗಿಯೇ ಪ್ರತಿಧ್ವನಿಸುತ್ತಿವೆ. ಜಾತಿವಾರು ಲೆಕ್ಕಾಚಾರಗಳೂ ಗರಿಗೆದರಿವೆ. ಇಂತಿಂತಹ ಊರುಗಳಲ್ಲಿ ಇಂತಹ ಅಭ್ಯರ್ಥಿಗಳ ಜಾತಿಯವರೇ ಹೆಚ್ಚಿದ್ದಾರೆ. ಇವರೆಲ್ಲರ ಓಟು ಇವರಿಗೆ ಸರಾಗವಾಗಿ ಸಿಕ್ಕಿದೆ ಎನ್ನುವ ಊಹಾಪೋಹದ ಮಾತುಗಳಿಗೇನೂ ಕಡಿಮೆ ಇಲ್ಲ. ಹಣ ಮತ್ತು ಜಾತಿ ಕುರಿತ ಚರ್ಚೆಯೇ ಬಹುಪಾಲು ಎಲ್ಲೆಡೆ ನಡೆಯುತ್ತಿದೆ.

ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ಹಳ್ಳಿಗಳಲ್ಲಿ ರಾಜಕೀಯ ಕುರಿತ ಚರ್ಚೆಯೇ ಹೆಚ್ಚಾಗಿ ನಡೆಯುತ್ತಿದೆ. ಮತ ಹಾಕಲು ಬಂದವರು ಭಾನುವಾರ ವಾಗಿರುವುದರಿಂದ ತಮ್ಮ ತಮ್ಮ ಊರುಗಳಲ್ಲೇ ಇದ್ದಾರೆ. ಇದರಿಂದ ಜನರ ಗುಂಪು ಎಲ್ಲೆಡೆ ಹೆಚ್ಚುತ್ತಿದೆ.

ದೇವಸ್ಥಾನದ ಆವರಣದಲ್ಲಿ, ಅರಳಿಕಟ್ಟೆ ಜಗಲಿಗಳಲ್ಲಿ, ಚಹಾದಂಗಡಿ, ಕ್ಯಾಂಟೀನ್‌, ಹೋಟೆಲ್‌ಗಳು ಇಂತಹ ಚರ್ಚೆಯ ತಾಣಗಳಾಗಿವೆ. ಇದರ ಜತೆಗೆ ಕೆಲವು ಅಂಗಡಿಗಳು, ರಾಜಕೀಯ ಮುಖಂಡರ ಮನೆಯ ಪಡಸಾಲೆಗಳೂ ಸೋಲು–ಗೆಲುವಿನ ಲೆಕ್ಕಾಚಾರಗಳ ತಾಣಗಳಾಗಿವೆ.

ಜೋರಾಗಿ ಸಾಗಿರುವ ಬೆಟ್ಟಿಂಗ್

ಅಭ್ಯರ್ಥಿಗಳ ಸೋಲು– ಗೆಲುವು ಕುರಿತು ಬೆಟ್ಟಿಂಗ್ ಜೋರಾಗಿ ಸಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಇದು ಹೆಚ್ಚಾಗಿದೆ. ಹಣ, ಔತಣ ಕೂಟಗಳೇ ಬೆಟ್ಟಿಂಗ್‌ನ ಪಣಕ್ಕೆ ಇಟ್ಟ ಸರಕುಗಳಾಗಿವೆ. ವಿವಿಧ ಪಕ್ಷಗಳ ಬೆಂಬಲಿಗರ ಮಧ್ಯೆ ಮಾತ್ರವಲ್ಲ ಒಂದೇ ಪಕ್ಷದ ಬೆಂಬಲಿಗರ ನಡುವೆಯೂ ಈ ಬೆಟ್ಟಿಂಗ್ ತೀವ್ರಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry