ಗುರುವಾರ , ಮಾರ್ಚ್ 4, 2021
30 °C

ಮಳೆ: ₹25 ಲಕ್ಷದ ಸಕ್ಕರೆ ಹಾಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ: ₹25 ಲಕ್ಷದ ಸಕ್ಕರೆ ಹಾಳು

ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರಿನ ಆರ್ಭಟ ಮುಂದುವರಿದಿದೆ. ಸೋಮವಾರ ರಾಜಧಾನಿ ಬೆಂಗಳೂರು ಸೇರಿ ಹುಬ್ಬಳ್ಳಿ–ಧಾರವಾಡ, ಚಿತ್ರದುರ್ಗ, ಉತ್ತರ ಕನ್ನಡ, ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.

ಸಿಡಿಲು ಬಡಿದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಒಂದು ಆಕಳು, ತಾಳಿಕೋಟೆಯಲ್ಲಿ 25 ಕುರಿಗಳು ಮೃತಪಟ್ಟಿವೆ. ಅನೇಕ ಕಡೆಗಳಲ್ಲಿ ಮನೆಯ ಮೇಲ್ಚಾಣಿಗಳು ಹಾರಿಹೋಗಿವೆ.

ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಕೊಳವಿ ಗ್ರಾಮದ ಹೊರವಲಯದಲ್ಲಿರುವ, ಗೋಕಾಕ ಶುಗರ್ಸ್‌ಗೆ ಸೇರಿದ ಸಕ್ಕರೆ ಗೋದಾಮಿನ ಚಾವಣಿಗೆ ಹೊದಿಸಿದ ತಗಡಿನ ಶೀಟ್‌ಗಳು ಹಾರಿ ಹೋಗಿದ್ದು, ಅಂದಾಜು ₹ 25 ಲಕ್ಷ ಮೌಲ್ಯದ ಸಕ್ಕರೆ ಹಾಳಾಗಿದೆ. ಕಾರ್ಖಾನೆ ಸುತ್ತಲಿನ ಮರಗಳು ನೆಲಕ್ಕುರುಳಿದ್ದು, ಕಟ್ಟಡಕ್ಕೂ ಹಾನಿಯಾಗಿದೆ.

ಉತ್ತರ ಕನ್ನಡ, ಗದಗ ಜಿಲ್ಲೆಯಲ್ಲಿ ಮಳೆಯೊಂದಿಗೆ ಬಲವಾದ ಗಾಳಿಯೂ ಬೀಸಿದ್ದರಿಂದ ಮರಗಳು ವಿದ್ಯುತ್‌ ಕಂಬದ ಮೇಲೆ ಬಿದ್ದು 150ಕ್ಕೂ ಹೆಚ್ಚು ಕಂಬಗಳು, 20ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳು ನೆಲಕ್ಕುರುಳಿವೆ.

ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅಡಿಕೆ, ಬಾಳೆ ತೋಟಗಳಿಗೆ ಹಾನಿಯಾಗಿದೆ. ಕುಂದಗೋಳ ತಾಲ್ಲೂಕಿನ ಹಲವೆಡೆ ಹೊಲದ ಬದುಗಳು ಕೊಚ್ಚಿಹೋಗಿವೆ.

ರಾಯಚೂರಿನ ಮುದಗಲ್ ಬಳಿ ತಾಂಡಾಗಳಲ್ಲಿ ಗಾಳಿಯಿಂದಾಗಿ ಮೇವಿನ ಬಣವೆಗಳು ಕುಸಿದಿವೆ. ದಾದುಡಿ ಕಸ್ತೂರ ನಾಯ್ಕ ತಾಂಡಾದಲ್ಲಿ ಮನೆಯ ಮೇಲ್ಚಾವಣಿ ಹಾರಿ ಹೋಗಿ ಇಬ್ಬರು ಗಾಯಗೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಭರಮಸಾಗರ, ಸಿರಿಗೆರೆ, ಹೊಸದುರ್ಗ, ಶಿವಮೊಗ್ಗದ ಸಾಗರ ತಾಲ್ಲೂಕು, ರಾಯಚೂರು ಜಿಲ್ಲೆಯ ಕವಿತಾಳ, ಹಟ್ಟಿ ಚಿನ್ನದ ಗಣಿ ಮತ್ತು ಕಲಬುರ್ಗಿ ಜಿಲ್ಲೆಯ ಚಿಂಚೋಳಿ, ಸೇಡಂನಲ್ಲಿ ಉತ್ತಮ ಮಳೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.