ಗುರುವಾರ , ಮಾರ್ಚ್ 4, 2021
18 °C
ಪಂಚಾಯಿತಿ ಚುನಾವಣೆ ವೇಳೆ ವ್ಯಾಪಕ ಸಂಘರ್ಷ: 8 ಸಾವು, 43 ಮಂದಿಗೆ ಗಾಯ

ಹಿಂಸೆಗೆ ನಲುಗಿದ ಪಶ್ಚಿಮ ಬಂಗಾಳ: 6 ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಹಿಂಸೆಗೆ ನಲುಗಿದ ಪಶ್ಚಿಮ ಬಂಗಾಳ: 6 ಸಾವು

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಸೋಮವಾರ ನಡೆದ ಪಂಚಾಯಿತಿ ಚುನಾವಣೆಯ ಮತದಾನ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರವಾಗಿದೆ. ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. 43 ಮಂದಿ ಗಾಯಗೊಂಡಿದ್ದಾರೆ. ಸಂಘರ್ಷದ ನಡುವೆಯೂ ಸಂಜೆ ಐದು ಗಂಟೆಯವರೆಗೆ ಶೇ 73ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಆ ಹೊತ್ತಿಗೆ ಮತ್ತಷ್ಟು ಮತದಾರರು ಮತಗಟ್ಟೆಗಳ ಮುಂದೆ ಸಾಲಿನಲ್ಲಿ ನಿಂತಿದ್ದರು.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಬೆಂಬಲಿಗರು ಮತ್ತು ವಿರೋಧ ಪಕ್ಷಗಳ ಕಾರ್ಯಕರ್ತರ ನಡುವೆ ಮತದಾನಕ್ಕೆ ಮೊದಲು ಸಂಘರ್ಷ ಉಂಟಾಗಿದೆ. ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು, ನಡಿಯಾ, ಮುರ್ಷಿದಾಬಾದ್‌ ಮತ್ತು ದಕ್ಷಿಣ ದಿನಜ್‌ಪುರ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದೆ.

ಈ ಎಲ್ಲ ಪ್ರದೇಶಗಳಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. 60 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಮತಗಟ್ಟೆಗಳನ್ನು ಗುರಿಯಾಗಿಸಿಕೊಂಡೇ ಹಿಂಸಾಕೃತ್ಯಗಳನ್ನು ಎಸಗಲಾಗಿದೆ. ಹಲವು ಮತಗಟ್ಟೆಗಳಿಗೆ ಕಚ್ಚಾ ಬಾಂಬ್‌ ಎಸೆಯಲಾಗಿದೆ. ತೃಣಮೂಲ ಕಾಂಗ್ರೆಸ್‌ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವವನ್ನು ಧ್ವಂಸ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಆದರೆ ಈ ಆರೋಪಗಳನ್ನು ಟಿಎಂಸಿ ಅಲ್ಲಗಳೆದಿದೆ. ಸಿಪಿಎಂ ಅಧಿಕಾರದಲ್ಲಿದ್ದಾಗ ನಡೆಯುತ್ತಿದ್ದ ಹಿಂಸಾಚಾರಕ್ಕೆ ಹೋಲಿಸಿದರೆ ಈಗಿನದ್ದು ಏನೂ ಅಲ್ಲ ಎಂದು ಹೇಳಿದೆ.

ಮುರ್ಷಿದಾಬಾದ್‌ನ ಸುಜಾಪುರ ಗ್ರಾಮದ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಅವರು ತನ್ನ ಕಾರ್ಯಕರ್ತ ಎಂದು ಬಿಜೆಪಿ ಹೇಳಿದೆ. ದಕ್ಷಿಣ ದಿನಜ್‌ಪುರದ ಮತಗಟ್ಟೆಯ ಮೇಲೆ ಎಸೆದ ಕಚ್ಚಾ ಬಾಂಬ್‌ ಸಿಡಿದು ಒಬ್ಬರು ಮೃತಪಟ್ಟರೆ ಹಲವರು ಗಾಯಗೊಂಡಿದ್ದಾರೆ. ನಕಾಶಿಪಾರಾಲ್ಲಿನ ಗುಂಪು ಘರ್ಷಣೆಯಲ್ಲಿ ಒಬ್ಬರು ಸತ್ತಿದ್ದಾರೆ.

ಬಿರ್‌ಭೂಮ್‌ನ ಮತಗಟ್ಟೆಯ ಹೊರಭಾಗದಲ್ಲಿ ಮುಸುಕುಧಾರಿ ವ್ಯಕ್ತಿಯೊಬ್ಬ ಆಯುಧ ಹಿಡಿದು ಮತದಾರರನ್ನು ಬೆದರಿಸುತ್ತಿದ್ದ ದೃಶ್ಯಗಳು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ. ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿ ಎಂಬಲ್ಲಿಯೂ ಇಂತಹುದೇ ಘಟನೆಗಳು ವರದಿಯಾಗಿವೆ.

ರಾಜ್ಯ ಚುನಾವಣಾ ಆಯೋಗದ ಕಚೇರಿಯ ಹೊರಭಾಗದಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಧರಣಿ  ನಡೆಸಿದ್ದಾರೆ.

**

ಪಂಚಾಯಿತಿ ಚುನಾವಣೆಗೆ ಹಿಂಸಾಚಾರದ ಇತಿಹಾಸವಿದೆ. 1990ರಲ್ಲಿ 400 ಜನ ಸತ್ತಿದ್ದರು. ಆಗ ಸಿಪಿಎಂ ಆಡಳಿತ ಇತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಯತ್ತ ಸಾಗುತ್ತಿದೆ

– ಡೆರೆಕ್‌ ಒ ಬ್ರಯಾನ್‌, ಟಿಎಂಸಿ ಮುಖಂಡ

**

ನಾಮಪತ್ರ ಸಲ್ಲಿಸಲು ಅವರು ಅವಕಾಶ ಕೊಡಲಿಲ್ಲ. ನಾಮಪತ್ರ ವಾಪಸ್‌ ಪಡೆಯುವಂತೆ ಬೆದರಿಕೆ ಹಾಕಲಾಗಿದೆ. ವಾಪಸ್‌ ಪಡೆಯದವರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ

–ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.