ಸೋಮವಾರ, ಮಾರ್ಚ್ 1, 2021
23 °C

ಸತ್ಯ ಹೇಳಿದ್ದೇನೆ: ನವಾಜ್ ಷರೀಫ್ ಸಮರ್ಥನೆ

ಪಿಟಿಐ Updated:

ಅಕ್ಷರ ಗಾತ್ರ : | |

ಸತ್ಯ ಹೇಳಿದ್ದೇನೆ: ನವಾಜ್ ಷರೀಫ್ ಸಮರ್ಥನೆ

ಇಸ್ಲಾಮಾಬಾದ್‌: ‘ಮುಂಬೈನಲ್ಲಿ 2008ರ ನವೆಂಬರ್‌ 26ರಂದು ಪಾಕಿಸ್ತಾನದ ಭಯೋತ್ಪಾದಕರೇ ದಾಳಿ ನಡೆಸಿದ್ದರು’ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್, ‘ಅದರ ಪರಿಣಾಮ ಏನೇ ಇರಲಿ, ಸತ್ಯ ಹೇಳಿದ್ದೇನೆ ಅಷ್ಟೆ’ ಎಂದಿದ್ದಾರೆ.

‘ನನ್ನ ಹೇಳಿಕೆಯಲ್ಲಿ ಹೊಸದೇನು ಇಲ್ಲ. ಹಿಂದಿನ ಪ್ರಧಾನಿ ಪರ್ವೇಜ್ ಮುಷರಫ್, ಆಂತರಿಕ ಭದ್ರತಾ ಸಚಿವರಾಗಿದ್ದ ರೆಹಮಾನ್ ಮಲ್ಲಿಕ್‌ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಮೊಹಮದ್ ಅಲಿ ದುರಾನಿ ಈ ಹಿಂದೆಯೇ ಇದನ್ನು ಹೇಳಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ನಾವು ಸಾಕಷ್ಟು ತ್ಯಾಗಗಳನ್ನು ಮಾಡಿದ್ದರೂ ಜಗತ್ತು ನಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿರುವ ಅವರು, ‘ಪ್ರಶ್ನೆ ಕೇಳಿದ ಕಾರಣಕ್ಕೆ ನನ್ನನ್ನು ದೇಶದ್ರೋಹಿ ಎಂದು ಕರೆಯುತ್ತಿರುವುದು ವಿಷಾದದ ಸಂಗತಿ’ ಎಂದರು.

‘ಸರ್ಕಾರೇತರ ಶಕ್ತಿಗಳು ಎಂದು ಕರೆಯಬಹುದಾದ ಭಯೋತ್ಪಾದಕ ಸಂಘಟನೆಗಳು ಗಡಿ ದಾಟಿ ಮುಂಬೈನಲ್ಲಿ ಸುಮಾರು 150 ಮಂದಿಯನ್ನು ಹತ್ಯೆ ಮಾಡಬಹುದೇ? ಇಂತಹ ನೀತಿಗೆ ಅವಕಾಶ ನೀಡಿರುವುದು ಸರಿಯೇ? ಈ ಪ್ರಕರಣದ ವಿಚಾರಣೆಯನ್ನು ಏಕೆ ಮುಕ್ತಾಯಗೊಳಿಸುತ್ತಿಲ್ಲ. ಈ ಬಗ್ಗೆ ನನಗೆ ವಿವರ ನೀಡಿ’ ಎಂದು ನವಾಜ್‌ ಷರೀಫ್ ‘ಡಾನ್’ ಪತ್ರಿಕೆಗೆ ಶನಿವಾರ ನೀಡಿರುವ ಸಂದರ್ಶನದಲ್ಲಿ ಪ್ರಶ್ನೆ ಎತ್ತಿದ್ದರು.

ಈ ಹೇಳಿಕೆ ಪಾಕಿಸ್ತಾನದಲ್ಲಿ ಸಂಚಲನ ಉಂಟು ಮಾಡಿದ್ದು, ಷರೀಫ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ‘ಪಾಕಿಸ್ತಾನ್ ಮುಸ್ಲಿಂ ಲೀಗ್–ನವಾಜ್’ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ಷರೀಫ್‌ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದೆ.

ಆರೋಪ ತಳ್ಳಿಹಾಕಿದ ಎನ್‌ಎಸ್‌ಸಿ

ಪಾಕಿಸ್ತಾನದ ಭಯೋತ್ಪಾದಕರೇ ಮುಂಬೈ ದಾಳಿ ನಡೆಸಿದ್ದಾರೆಂದು ನವಾಜ್ ಷರೀಫ್ ಮಾಡಿರುವ ಆರೋಪವನ್ನು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ತಳ್ಳಿಹಾಕಿದೆ.

ಪ್ರಧಾನಿ ಶಾಹಿದ್‌ ಖಾಕನ್‌ ಅಬ್ಬಾಸಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಎನ್‌ಎಸ್‌ಸಿ ಸಭೆಯಲ್ಲಿ ಷರೀಫ್ ಹೇಳಿಕೆಯನ್ನು ಸರ್ವಾನುಮತದಿಂದ ಖಂಡಿಸಲಾಯಿತು. ‘ಇದೊಂದು ದಾರಿತಪ್ಪಿಸುವ ಹೇಳಿಕೆ’ ಎಂದು ಟೀಕಿಸಲಾಯಿತು.

‘ಷರೀಫ್ ತಮ್ಮ ಹೇಳಿಕೆಯಲ್ಲಿ ಸತ್ಯ ಮತ್ತು ಸಾಕ್ಷ್ಯಗಳನ್ನು ಕಡೆಗಣಿಸಿರುವುದು ದುರದೃಷ್ಟ ಮತ್ತು ವಿಷಾದನೀಯ’ ಎಂದು ಎನ್‌ಎಸ್‌ಸಿ ಅಭಿಪ್ರಾಯಪಟ್ಟಿದೆ.

ತಪ್ಪಾಗಿ ಅರ್ಥೈಸಿವೆ: ಅಬ್ಬಾಸಿ

ನವಾಜ್ ಷರೀಫ್ ಅವರ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಪಾಕ್ ಪ್ರಧಾನಿ ಶಾಹಿದ್‌ ಖಾಕನ್‌ ಅಬ್ಬಾಸಿ ಹೇಳಿದರು.

'ಷರೀಫ್ ನೀಡಿರುವ ಸಂದರ್ಶನದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಕೆಲವು ಮಾತುಗಳನ್ನು ಆಡಿದ್ದಾರೆ. ಇದನ್ನು ಎನ್‌ಎಸ್‌ಸಿ ಸಭೆಯಲ್ಲೂ ನಾನು ಸ್ಪಷ್ಟಪಡಿಸಿದ್ದೇನೆ. ಆದರೆ, ಭಾರತದ ಮಾಧ್ಯಮಗಳು ಭಿನ್ನವಾಗಿ ವರ್ಣನೆ ಮಾಡುತ್ತಿವೆ’ ಎಂದೂ ಅವರು ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.