ಮಂಗಳವಾರ, ಮಾರ್ಚ್ 2, 2021
31 °C

ಸ್ಥಳೀಯ 'ಅಸ್ಮಿತೆ’ಗೆ ಅರಳಿದ ಕಮಲ

ಪ್ರಮೋದ ಜಿ.ಕೆ. Updated:

ಅಕ್ಷರ ಗಾತ್ರ : | |

ಸ್ಥಳೀಯ 'ಅಸ್ಮಿತೆ’ಗೆ ಅರಳಿದ ಕಮಲ

ಹುಬ್ಬಳ್ಳಿ: ‘ಹೊರಗಿನವರಿಗಿಂತ ಸ್ಥಳೀಯರೇ ಮೇಲು’ ಎನ್ನುವ ಲೆಕ್ಕಾಚಾರ ಹೊಂದಿದ್ದ  ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದ ಮತದಾರರು ಬಿಜೆಪಿ ಅಭ್ಯರ್ಥಿ ಸಿ.ಎಂ. ನಿಂಬಣ್ಣವರ ಅವರಿಗೆ ಮಣೆ ಹಾಕಿದ್ದಾರೆ. ನಿಂಬಣ್ಣವರ 26,139 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಇವರಿಗೆ ಲಭಿಸಿದ ಒಟ್ಟು ಮತ 83,354. ಇದೇ ಕ್ಷೇತ್ರದಿಂದ ಸತತ ಎರಡು ಸಲ ಶಾಸಕರಾಗಿ ಆಯ್ಕೆಯಾಗಿ, ಸಚಿವರೂ ಆಗಿದ್ದ ಸಂತೋಷ್‌ ಲಾಡ್‌ ಈ ಬಾರಿ ಮುಗ್ಗರಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರಿನವರಾದ ಸಂತೋಷ್‌ ಲಾಡ್‌ 2008 ಮತ್ತು 2013ರ ಚುನಾವಣೆಯಲ್ಲಿ ಇದೇ ನಿಂಬಣ್ಣವರ ವಿರುದ್ಧ ಗೆಲುವು ಪಡೆದಿದ್ದರು.

ಆದರೆ, ಲಾಡ್‌ ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಜನರ ಕೈಗೆ ಸಿಗುವುದೇ ಇಲ್ಲ ಎನ್ನುವ ದೂರು ಸಾಮಾನ್ಯವಾಗಿತ್ತು. ಇದರಿಂದ ಕ್ಷೇತ್ರದ ಮತದಾರರು ಲಾಡ್‌ ಪ್ರಚಾರಕ್ಕೆ ಹೋದ ಕೆಲವು ಕಡೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ‘ಹಿಂದಿನ ಹತ್ತು ವರ್ಷಗಳಲ್ಲಿ ನಮ್ಮ ಕ್ಷೇತ್ರಕ್ಕೆ ಮಾಡಿದ್ದಾದರೂ ಏನು’ ಎಂದು ಪ್ರಶ್ನಿಸಿದ್ದರು.

ಇದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೇ, ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೇ ಆನೆ ನಡೆದದ್ದೇ ದಾರಿ ಎನ್ನುವಂತೆ ಸಾಗಿದ್ದ  ಲಾಡ್ ಅವರಿಗೆ ಪಾಠ ಕಲಿಸಿ ‘ಸ್ಥಳೀಯ ಅಸ್ಮಿತೆ’ ಉಳಿಸಿಕೊಳ್ಳುವ ಸಲುವಾಗಿ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದರು. ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’ ನಡೆಸಿದ್ದ ಸಾಕ್ಷಾತ್‌ ಸಮೀಕ್ಷೆಯಲ್ಲಿಯೂ ಜನ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

‘ವ್ಯಕ್ತಿ ಯಾರಾದರೂ ಪರವಾಗಿಲ್ಲ, ಆದರೆ, ಸ್ಥಳಿಯರೇ ಆಗಿರಬೇಕು’ ಎಂದು ಮತದಾರರು ಘಂಟಾಘೋಷವಾಗಿ ಹೇಳಿದ್ದರಿಂದ ನಿಂಬಣ್ಣವರ ಪರ ಅಲೆ ಜೋರಾಗಿತ್ತು. 

ವರವಾದ ನಿಂಬಣ್ಣವರ ಹೋರಾಟ: ಬಿಜೆಪಿ ಮೊದಲು ಕಲಘಟಗಿ ಕ್ಷೇತ್ರಕ್ಕೆ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್‌ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ನಿಂಬಣ್ಣವರ ‘ಜನಶಕ್ತಿ’ ಪ್ರದರ್ಶಿಸಿ ಪಕ್ಷದ ಮುಖಂಡರ ಗಮನ ಸೆಳೆದಿದ್ದರು. ಇದರಿಂದ ಎಚ್ಚೆತ್ತುಕೊಂಡ ಮುಖಂಡರು ಮಹೇಶ ಬದಲು ನಿಂಬಣ್ಣವರಿಗೆ ಟಿಕೆಟ್‌ ಘೋಷಿಸಿತ್ತು. ಇದು ಕೂಡ ನಿಂಬಣ್ಣವರ ಅವರಿಗೆ ವರವಾಗಿ ಪರಿಣಮಿಸಿದೆ.

ನಿಂಬಣ್ಣವರ ಬಗ್ಗೆ ಸ್ಥಳೀಯರಲ್ಲಿ ಉತ್ತಮ ಅಭಿಪ್ರಾಯವಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ, ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರ ಕೈಗೂ ಸುಲಭವಾಗಿ ಸಿಗುತ್ತಾರೆ ಎನ್ನುವ ಭರವಸೆಯೇ ಗೆಲುವಿಗೆ ಕಾರಣಗಿದೆ.

ಕ್ಷೇತ್ರದಲ್ಲಿ ಸಂಪೂರ್ಣವಾಗಿ ನೀರಾವರಿ ಯೋಜನೆ ಜಾರಿಗೆ ತರಬೇಕು, ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ನಿಂಬಣ್ಣವರ ಅವರು ಚುನಾವಣೆಗೂ ಮೊದಲು ಕಲಘಟಗಿಯಿಂದ ಧಾರವಾಡದ ತನಕ ಪಾದಯಾತ್ರೆ ಮಾಡಿದ್ದರು.

ಜನರ ವಿಶ್ವಾಸ ಗಳಿಸಿದ್ದು, ಎಲ್ಲರೊಂದಿಗೂ ಬೆರತದ್ದು, ಹಿಂದಿನ ಎರಡೂ ಚುನಾವಣೆಗಳಲ್ಲಿ ಸೋತ ಬಳಿಕವೂ ಜನರ ಒಡನಾಟದಲ್ಲಿಯೇ ಬದುಕು ಕಳೆದಿದ್ದು ನಿಂಬಣ್ಣವರ ಗೆಲುವಿಗೆ ಕಾರಣವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.