ಶನಿವಾರ, ಫೆಬ್ರವರಿ 27, 2021
31 °C
ಉಭಯ ತಂಡಗಳಿಗೂ ಜಯ ಅನಿವಾರ್ಯ; ರಾಹುಲ್‌, ಗೇಲ್‌ ಆಕರ್ಷಣೆ

ಮುಂಬೈ–ಕಿಂಗ್ಸ್‌ಗೆ ಗೆಲುವಿನ ಕನಸು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ–ಕಿಂಗ್ಸ್‌ಗೆ ಗೆಲುವಿನ ಕನಸು

ಮುಂಬೈ: ಆರ್‌ಸಿಬಿ ಎದುರು ಹೀನಾಯವಾಗಿ ಸೋತಿರುವ ಕಿಂಗ್ಸ್ ಇಲೆವನ್ ಪಂಜಾಬ್‌ ತಂಡ ಐಪಿಎಲ್‌ನಲ್ಲಿ ಬುಧವಾರ ಆತಿಥೇಯ ಮುಂಬೈ ಇಂಡಿಯನ್ಸ್ ಎದುರು ಸೆಣಸಲಿದೆ.

ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವನ್ ತಲಾ 12 ಪಂದ್ಯಗಳನ್ನು ಆಡಿದ್ದು ಕ್ರಮವಾಗಿ 10 ಮತ್ತು 12 ಪಾಯಿಂಟ್‌ಗಳನ್ನು ಹೊಂದಿವೆ. ಆದ್ದರಿಂದ ಪ್ಲೇ ಆಫ್‌ ಹಂತದ ಕನಸು ಜೀವಂತವಾಗಿರಿಸಬೇಕಾದರೆ ಎರಡೂ ತಂಡಗಳಿಗೆ ಈ ಪಂದ್ಯದಲ್ಲಿ ಜಯ ಅನಿವಾರ್ಯ.

ಆರಂಭದ ಹಂತದಲ್ಲಿ ನಿರಂತರ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ನಂತರ ಚೇತರಿಸಿಕೊಂಡಿತ್ತು. ಹೀಗಾಗಿ ಪ್ಲೇ ಆಫ್‌ ಹಂತದ ಆಸೆ ಚಿಗುರಿತ್ತು. ಕಳೆದ ಐದು ಪಂದ್ಯಗಳ ಪೈಕಿ ಮೂರನ್ನು ಗೆದ್ದು ಗಮನ ಸೆಳೆದಿತ್ತು. ಆದರೆ ನಿರಂತರ ಮೂರು ಗೆಲುವುಗಳ ನಂತರ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಎಂಟು ವಿಕೆಟ್‌ಗಳಿಂದ ಸೋತ ತಂಡ ಗೆಲುವಿನ ಲಯಕ್ಕೆ ಮರಳಲು ಶ್ರಮಿಸಲಿದೆ.

ಕಿಂಗ್ಸ್ ಇಲೆವನ್‌ ಕಳೆದ ಪಂದ್ಯದಲ್ಲಿ ಆರ್‌ಸಿಬಿ ಎದುರು ಎಡಹುವುದರೊಂದಿಗೆ ಹ್ಯಾಟ್ರಿಕ್‌ ಸೋಲು ಕಂಡಿತ್ತು. ಕಳೆದ ಐದು ಪಂದ್ಯಗಳಲ್ಲಿ ಇದು ಈ ತಂಡದ ನಾಲ್ಕನೇ ಸೋಲಾಗಿತ್ತು. ಉತ್ತಮ ರನ್ ರೇಟ್ ಹೊಂದಿರುವ ಮುಂಬೈ ಇಂಡಿಯನ್ಸ್‌ ಮತ್ತು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಕಿಂಗ್ಸ್‌ ಇಲೆವನ್‌ ನಡುವಿನ ಪಂದ್ಯಕ್ಕೆ ಬುಧವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಮಧ್ಯಮ ಕ್ರಮಾಂಕದ ಚಿಂತೆ: ಮುಂಬೈ ಇಂಡಿಯನ್ಸ್‌ ತಂಡದ ಅಗ್ರ ಕ್ರಮಾಂಕ ಉತ್ತಮವಾಗಿ ಆಡುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಕಂಡುಬರುತ್ತಿಲ್ಲ. ನಾಯಕ ರೋಹಿತ್ ಶರ್ಮಾ ಅವರಿಗೆ ನಿರೀಕ್ಷೆಗೆ ತಕ್ಕ ಬ್ಯಾಟಿಂಗ್‌ ಮಾಡಲು ಆಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್ ಮಾತ್ರ ತಂಡದಲ್ಲಿ ನಿರಂತರವಾಗಿ ಉತ್ತಮ ಆಟ ಆಡಲು ಸಾಧ್ಯವಾಗಿದೆ. ಕೆಲವು ಪಂದ್ಯಗಳಲ್ಲಿ ಅವರಿಗೆ ಎವಿನ್ ಲೂಯಿಸ್‌ ಉತ್ತಮ ಸಹಕಾರ ನೀಡಿದ್ದಾರೆ.

ಮುಂಬೈ ತಂಡದ ಬೌಲಿಂಗ್ ವಿಭಾಗ ಕೂಡ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಿಲ್ಲ. ಹೀಗಾಗಿ ಕೆ.ಎಲ್‌.ರಾಹುಲ್‌, ಕ್ರಿಸ್ ಗೇಲ್‌ ಮುಂತಾದವರನ್ನು ಒಳಗೊಂಡ ಕಿಂಗ್ಸ್‌ ಇಲೆವನ್ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸಲು ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಮಯಂಕ್ ಮಾರ್ಕಂಡೆ ಮತ್ತು ಮಿಷೆಲ್ ಮೆಕ್‌ಲೆಂಘಾನ್‌ ಹೆಚ್ಚು ಶ್ರಮ ವಹಿಸಬೇಕು.

ಕಿಂಗ್ಸ್ ಇಲೆವನ್‌ ತಂಡ ಬ್ಯಾಟಿಂಗ್‌ನಲ್ಲಿ ರಾಹುಲ್ ಮತ್ತು ಗೇಲ್ ಅವರನ್ನು ಅವಲಂಬಿಸಿದೆ. ಆದರೆ ಸೋಮವಾರದ ಪಂದ್ಯದಲ್ಲಿ ಆರ್‌ಸಿಬಿಯ ಉಮೇಶ್ ಯಾದವ್‌ಗೆ ಇವರಿಬ್ಬರೂ ಔಟಾಗಿದ್ದರು. ಇದು ತಂಡದ ಆತಂಕಕ್ಕೆ ಕಾರಣವಾಗಿದೆ.

ಅಫ್ಗಾನಿಸ್ತಾನದ ಲೆಗ್ ಸ್ಪಿನ್ನರ್‌ ಮುಜೀಬ್‌ ಉರ್ ರಹಿಮಾನ್‌ ಅವರು ಗಾಯಗೊಂಡಿರುವುದು ಪಂಜಾಬ್ ತಂಡದ ಬೌಲಿಂಗ್ ವಿಭಾಗದಲ್ಲಿ ಆತಂಕ ಸೃಷ್ಟಿಸಿದೆ. ಅವರು ಬುಧವಾರ ಆಡದೇ ಇದ್ದರೆ ಸ್ಪಿನ್ ವಿಭಾಗದ ಜವಾಬ್ದಾರಿ ನಾಯಕ ರವಿಚಂದ್ರನ್‌ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಅವರು ಹೊತ್ತುಕೊಳ್ಳಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.