ಒಗ್ಗಟ್ಟಿನ ಮಂತ್ರ: ಬಿಜೆಪಿ ಗೆಲುವಿನ ತಂತ್ರ

7
ವಿನಯ ಕುಲಕರ್ಣಿ ‘ಕೈ’ ಹಿಡಿಯದ ಲಿಂಗಾಯತ ಹೋರಾಟದ ಫಲ

ಒಗ್ಗಟ್ಟಿನ ಮಂತ್ರ: ಬಿಜೆಪಿ ಗೆಲುವಿನ ತಂತ್ರ

Published:
Updated:
ಒಗ್ಗಟ್ಟಿನ ಮಂತ್ರ: ಬಿಜೆಪಿ ಗೆಲುವಿನ ತಂತ್ರ

ಧಾರವಾಡ: ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ, ಸರ್ಕಾರದ ಭಾಗ್ಯಗಳ ಆಸರೆ ಪಡೆದು ಗೆಲುವಿನ ನಿರೀಕ್ಷೆಯಲ್ಲಿದ್ದ ವಿನಯ ಕುಲಕರ್ಣಿ ಭಾರೀ ಅಂತರದಿಂದ ಸೋಲುಂಡು ಮುಖಭಂಗ ಅನುಭವಿಸಿದ್ದಾರೆ.

ಇದೇ ಕ್ಷೇತ್ರದಲ್ಲಿ ಸತತ ಎಂಟು ಚುನಾವಣೆಗಳಿಂದ ಸ್ಪರ್ಧಿಸುತ್ತಿರುವ ಹಂಗರಕಿ ದೇಸಾಯಿ ಕುಟುಂಬದ ಅಮೃತ ದೇಸಾಯಿ 85,123 ಮತಗಳನ್ನು ಪಡೆದು 19,340 ಮತಗಳ ಅಂತರ ಭರ್ಜರಿ ಗೆಲುವು ಪಡೆದಿದ್ದಾರೆ.

2013ರ ಚುನಾವಣೆಯಲ್ಲಿ ಸೀಮಾ ಮಸೂತಿ ಬಿಜೆಪಿಯಿಂದ, ತವನಪ್ಪ ಅಷ್ಟಗಿ ಕೆಜೆಪಿಯಿಂದ ಹಾಗೂ ಅಮೃತ ದೇಸಾಯಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಈ ಮೂವರೂ ಸೇರಿ 73 ಸಾವಿರ ಮತ ಪಡೆದಿದ್ದರು. ಆಗ ವಿನಯ ಕುಲಕರ್ಣಿ 53 ಸಾವಿರ ಮತ ಪಡೆದಿದ್ದರು. ಆರಂಭಿಕ ಭಿನ್ನಮತದ ಹೊರತಾಗಿಯೂ ಈ ಮೂವರೂ ಒಟ್ಟಾಗಿದ್ದರಿಂದ ಆ ಮತಗಳು ಕ್ರೋಡೀಕರಣಗೊಂಡು ಬಿಜೆಪಿಗೆ ಅನಾಯಾಸವಾಗಿ ಗೆಲುವು ಸಾಧಿಸಿದೆ.

ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ವಿನಯ ಕುಲಕರ್ಣಿ ಹೆಸರೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿ ಕಿಮ್ಸ್‌ ವೈದ್ಯರ ಮೇಲಿನ ಹಲ್ಲೆ ಪ್ರಕರಣವನ್ನು ಪ್ರಸ್ತಾಪಿಸಿದ್ದರೂ ಬಿಜೆಪಿ ಮತ ಗಳಿಕೆಗೆ ಅನುಕೂಲವಾಗಿದೆ. ಹೆಬ್ಬಳ್ಳಿಯಲ್ಲಿ ಅಮಿತ್ ಶಾ ಹಾಗೂ ಉಪ್ಪಿನಬೆಟಗೇರಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ನಡೆಸಿದ ಸಮಾವೇಶಗಳೂ ಬಿಜೆಪಿ ಅಭ್ಯರ್ಥಿಯ ನೆರವಿಗೆ ಬಂದವು ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ನಂತರ ತೆರವಾಗಿದ್ದ ಹೆಬ್ಬಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಯಾಸದ ಗೆಲುವು ಸಾಧಿಸಿತ್ತು. ಈ ಚುನಾವಣೆಯಲ್ಲಿ ಕ್ಷೇತ್ರವಿನಯ ಕುಲಕರ್ಣಿ ಅವರ ಕೈ ಹಿಡಿದಿಲ್ಲ. ಕ್ಷೇತ್ರ ವ್ಯಾಪ್ತಿಯ ನಾಲ್ಕು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 55 ಹಳ್ಳಿಗಳಲ್ಲಿ ಹಾಗೂ ಮಹಾನಗರ ಪಾಲಿಕೆಯ ಎಂಟು ವಾರ್ಡ್‌ಗಳಲ್ಲೂ  ಬಿಜೆಪಿ ಮುನ್ನಡೆ ಸಾಧಿಸಿದ್ದು, ಕುಲಕರ್ಣಿ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ.

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಿರಿಯ ಮುಖಂಡ ಎಸ್‌.ಆರ್.ಮೋರೆ ಹಾಗೂ ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಬಂಡಾಯ ಸಾರಿದ್ದು ಮಾತ್ರವಲ್ಲ, ಟಿಕೆಟ್‌ ತಪ್ಪಲು ವಿನಯ ಕುಲಕರ್ಣಿ ನೇರ ಕಾರಣ ಎಂದು ಬಹಿರಂಗವಾಗಿಯೇ ಸಾರಿದ್ದರು. ನಂತರ ಈ ಇಬ್ಬರೂ ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದರು. ಹೀಗಾಗಿ, ಕಾಂಗ್ರೆಸ್‌ನ ಬಂಡಾಯದ ಬಿಸಿಯೂ ತಟ್ಟಿದೆ ಎನ್ನಲಾಗುತ್ತಿದೆ.

ಲಿಂಗಾಯತ ಧರ್ಮದ ಹೋರಾಟದಲ್ಲಿ ಸಕ್ರಿಯವಾಗಿದ್ದ ವಿನಯ ಕುಲಕರ್ಣಿ ಅವರಿಗೆ ಹೋರಾಟವೂ ಕೈ ಹಿಡಿದಿಲ್ಲ.

ಹಂಗರಕಿ ಕುಟುಂಬದ ಕುಡಿ

ಈ ಹಿಂದೆ 1985ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಎ.ಬಿ.ದೇಸಾಯಿ ಶಾಸಕರಾಗಿದ್ದರು. ನಂತರ 2004 ರವರೆಗೂ ನಡೆದ ಚುನಾವಣೆಗಳಲ್ಲಿ ಇವರು ಸ್ಪರ್ಧಿಸಿದ್ದರೂ ಗೆದ್ದಿರಲಿಲ್ಲ. 2008ರ ನಂತರ ಜೆಡಿಎಸ್‌ನಿಂದ 2 ಬಾರಿ ಸ್ಪರ್ಧಿಸಿದ್ದ ಅಮೃತ ದೇಸಾಯಿ ಸೋಲನ್ನುಂಡಿದ್ದರು. ಆದರೆ ಈ ಬಾರಿ ಸ್ವತಃ ಎ.ಬಿ.ದೇಸಾಯಿ ಅವರೇ ಅಖಾಡಕ್ಕೆ ಇಳಿದಿದ್ದರು. ಅಮೃತ ದೇಸಾಯಿ ಪ್ರಚಾರದ ಜತೆ–ಜತೆಗೆ ಎ.ಬಿ.ದೇಸಾಯಿ ಪ್ರಚಾರ ನಡೆಸಿ, ಬೆಂಬಲಿಸುವಂತೆ ಕೋರಿಕೊಂಡಿದ್ದರು.

ನೋಟಾಗಿಂತಲೂ ಕಡಿಮೆ ಜೆಡಿಎಸ್‌ ಮತ

ಪಾಲಿಕೆ ಸದಸ್ಯ ತಿರುಕಪ್ಪ (ಶ್ರೀಕಾಂತ) ಜಮನಾಳ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಇವರು ಪಡೆದ ಮತಗಳು 1263. ಆದರೆ ಈ ಕ್ಷೇತ್ರದಲ್ಲಿ ನೋಟಾಕ್ಕೆ ಬಿದ್ದ ಮತಗಳ ಸಂಖ್ಯೆ 1967.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry