ಭಾನುವಾರ, ಮಾರ್ಚ್ 7, 2021
20 °C
ಫಲ ನೀಡದ ಬಿಜೆಪಿ ಕಸರತ್ತು; ಬದಿಗೆ ಸರಿದ ಮೋದಿ ಹವಾ

ಪುಟ್ಟರಂಗಶೆಟ್ಟಿ ಹ್ಯಾಟ್ರಿಕ್ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಟ್ಟರಂಗಶೆಟ್ಟಿ ಹ್ಯಾಟ್ರಿಕ್ ಗೆಲುವು

ಚಾಮರಾಜನಗರ: ಚಾಮರಾಜನಗರ ದಲ್ಲಿ ಕಮಲ ಅರಳಿಸಲು ಬಿಜೆಪಿ ವರಿಷ್ಠರು ಪಟ್ಟ ಶ್ರಮ ನಿರರ್ಥಕವಾಯಿತು. ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಮೂರನೇ ಸ್ಥಾನ ಪಡೆದ ಬಿಎಸ್‌ಪಿ ಸಾಧನೆ ಮೆರೆಯಿತು.

ಕಳೆದೆರಡು ಬಾರಿಯಿಂದ ಶಾಸಕರಾಗಿದ್ದ ಪುಟ್ಟರಂಗಶೆಟ್ಟಿ ಅವರನ್ನು ಮಣಿಸಲು ಈ ಬಾರಿ ಬಿಜೆಪಿ ಹೂಡಿದ ಎಲ್ಲ ತಂತ್ರಗಾರಿಕೆಗಳೂ ವಿಫಲವಾದವು. ಮುಖ್ಯವಾಗಿ ಲಿಂಗಾಯತ ಸಮುದಾಯದ ಜತೆಗೆ ನಾಯಕ ಸಮುದಾಯ ದವರ ಬೆಂಬಲ ಪಡೆದು ಜಯ ಗಳಿಸುವ ಅದರ ಚಾಣಾಕ್ಷ ನೀತಿ ಕೈಕೊಟ್ಟಿತು.

ಜಿ‌ಲ್ಲಾ ಪ‍ಂಚಾಯಿತಿ ಅಧ್ಯಕ್ಷ ಬಿ.ರಾಮಚಂದ್ರ ಅವರ ಸೇರ್ಪಡೆ, ಪರಿಶಿಷ್ಟ ಪಂಗಡದ ಸಮಾವೇಶಗಳು ಒಂದು ಹಂತದಲ್ಲಿ ಕಾಂಗ್ರೆಸ್‌ ಪಾಳೆಯದಲ್ಲಿ ನಡುಕ ಹುಟ್ಟಿಸಿದ್ದವು. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿ, ಭಾಷಣಗಳು ಹ್ಯಾಟ್ರಿಕ್ ಹಂತದಲ್ಲಿ ಸೋಲುತ್ತಾರೆ ಎಂಬ ಇತಿಹಾಸ ಮರುಕಳಿಸುತ್ತದೆ ಎಂದೇ ಕಾಂಗ್ರೆಸ್ ಪಾಳೆಯದಲ್ಲೂ ಭಾವಿಸಲಾಗಿತ್ತು. ಸತತ ಎರಡು ಬಾರಿ ಗೆದ್ದ ಶಾಸಕರು ಮೂರನೇ ಬಾರಿ ಗೆಲ್ಲುವುದಿಲ್ಲ ಎಂಬ ಇಲ್ಲಿನ ಇತಿಹಾಸವನ್ನು ಪುಟ್ಟರಂಗಶೆಟ್ಟಿ ಸುಳ್ಳಾಗಿಸುವಲ್ಲಿ ಸಫಲರಾದರು.

ಮರುಕಳಿಸದ ಇತಿಹಾಸ:

ಈ ಹಿಂದೆ 1967 ಹಾಗೂ 1972ರಲ್ಲಿ ಸತತ ಎರಡು ಬಾರಿ ಎಸ್.ಪುಟ್ಟಸ್ವಾಮಿ ಜಯ ಸಾಧಿಸಿದ್ದರು. ಆದರೆ, ಇವರ ಹ್ಯಾಟ್ರಿಕ್ ಕನಸನ್ನು ಎಂ.ಸಿ.ಬಸಪ್ಪ ಭಗ್ನಗೊಳಿಸಿದ್ದರು. ನಂತರ, 1983 ಹಾಗೂ 1985ರಲ್ಲಿ ಸತತ ಎರಡು ಬಾರಿ ಮತ್ತೆ ಪುಟ್ಟಸ್ವಾಮಿ ಜಯ ಸಾಧಿಸಿದರೂ ಮೂರನೇ ಬಾರಿ ಮುಗ್ಗರಿಸಿದ್ದರು. ಮುಂದೆ 1989 ಮತ್ತು 1994ರಲ್ಲಿ ಸತತ ಎರಡು ಬಾರಿ ಗೆದ್ದ ವಾಟಾಳ್ ನಾಗರಾಜ್ ಅವರ ಹ್ಯಾಟ್ರಿಕ್ ಕನಸೂ ಭಗ್ನಗೊಂಡಿತು. 3ನೇ ಬಾರಿ ಸೋತ ನಂತರ ಅವರು 2004ರಲ್ಲಿ ಗೆಲುವು ಪಡೆದರು.

ಒಟ್ಟು 3 ಬಾರಿ ಹ್ಯಾಟ್ರಿಕ್ ಹಂತದಲ್ಲಿ ಅಭ್ಯರ್ಥಿಗಳು ಸೋಲು ಕಂಡಿದ್ದರು. ಇದೇ ಇತಿಹಾಸ ಮತ್ತೆ ಮರುಕಳಿಸುತ್ತದೆ ಎಂಬ ಬಿಜೆಪಿಯ ಅವರ ನಂಬಿಕೆಯನ್ನು ಪುಟ್ಟರಂಗಶೆಟ್ಟಿ ಹುಸಿಯಾಗಿಸಿ ಗೆಲುವಿನ ನಗೆ ಬೀರಿದರು. ಈ ಮೂಲಕ ಕಾಂಗ್ರೆಸ್‌ ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಅವರು ಸಹಕರಿಸಿದರು.

ಮಲ್ಲಿಕಾರ್ಜುನಪ್ಪ ಅವರಿಗೆ ಇದು ಸತತ 2ನೇ ಸೋಲು. ಕಳೆದ ಬಾರಿಯಂತೆ ಬಿಜೆಪಿ–ಕೆಜೆಪಿ ಈ ಬಾರಿ ಇಲ್ಲ. ಮತವಿಭಜನೆಯಾಗುವುದಿಲ್ಲ ಎಂಬ ವಿಶ್ವಾಸದಲ್ಲೇ ಬಿರುಸಿನ ಪ್ರಚಾರ ನಡೆಸಿದ್ದರು. ನಾಯಕ ಸಮುದಾಯದವರ ವಿಶ್ವಾಸದ ಜತೆಗೆ ಪುಟ್ಟರಂಗಶೆಟ್ಟಿ ಅವರ ಉಪ್ಪಾರ ಸಮುದಾಯಕ್ಕೆ ಸೇರಿದ ಮುಖಂಡ ಹನುಮಂತಶೆಟ್ಟಿ ಅವರನ್ನೂ ಪಕ್ಷಕ್ಕೆ ಸೇರಿಸಿಕೊಂಡು ಗೆಲುವಿನ ನಗೆ ಬೀರಲು ಶತಪ್ರಯತ್ನ ನಡೆಸಿದ್ದರು. ಆದರೆ, ಇವು ಯಾವುವೂ ಫಲ ನೀಡುವಲ್ಲಿ ಸೋತಿವೆ.

ಬೂತ್‌ ಮಟ್ಟದಲ್ಲಿ ಪುಟ್ಟರಂಗಶೆಟ್ಟಿ ನಡೆಸಿದ ವ್ಯಾಪಕ ಪ್ರಚಾರ ಅವರನ್ನು ಅಕ್ಷರಶಃ ಕೈ ಹಿಡಿದಿದೆ. ದಲಿತರು, ಮುಸ್ಲಿಮರ ಮತಗಳ ಕ್ರೋಢೀಕರಣಕ್ಕೆ ಅವರು ಹಾಕಿದ ಶ್ರಮ ನಷ್ಟವಾಗಿಲ್ಲ. ಈ ಮಧ್ಯೆ ಕೊನೆ ಗಳಿಗೆಯಲ್ಲಿ ಎಸ್‌ಡಿಪಿಐ ಬೆಂಬಲ ನೀಡಿದ್ದು ಸಹಾಯಕ್ಕೆ ಬಂದಿದೆ.

ಕುಗ್ಗಿದ ಗೆಲುವಿನ ಅಂತರ; ಎಚ್ಚರಿಕೆ ಗಂಟೆ!

ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರೂ ಪುಟ್ಟರಂಗಶೆಟ್ಟಿ ಅವರ ಗೆಲುವಿನ ಅಂತರ ಕುಗ್ಗಿರುವುದು ಅವರ ಮುಂದಿನ ಗೆಲುವುಗಳಿಗೆ ಎಚ್ಚರಿಕೆ ಗಂಟೆಯಂತಿದೆ. ಕಳೆದ ಬಾರಿ ಇವರು 11,196 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಕೇವಲ 4,913 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

ವಾಟಾಳ್ ನಾಗರಾಜ್ ಮತ ಗಳಿಕೆಯಲ್ಲಿ ಭಾರಿ ಕುಸಿತ

ವಾಟಾಳ್ ನಾಗರಾಜ್ ಮತ ಗಳಿಕೆ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದ್ದಾರೆ. ಕಳೆದ ಬಾರಿ ಅವರು 18 ಸಾವಿರ ಮತ ಗಳಿಸಿದ್ದರು. ಆದರೆ, ಈ ಬಾರಿ ಅವರು ಪಡೆದಿರುವುದು 5977

ಮೂರನೇ ಸ್ಥಾನದಲ್ಲಿ ಬಿಎಸ್‌ಪಿ!

ಕ್ಷೇತ್ರದಲ್ಲಿ ಬಿಎಸ್‌ಪಿ ಈ ಬಾರಿ 3ನೇ ಸ್ಥಾನ ಪಡೆಯುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಬಿಎಸ್‌ಪಿ ಅಭ್ಯರ್ಥಿ ಎ.ಎಂ.ಮಲ್ಲಿಕಾರ್ಜುನಸ್ವಾಮಿ 7,062 ಮತಗಳನ್ನು ಪಡೆಯುವ ಮೂಲಕ ಪಕ್ಷಕ್ಕೆ ಬುನಾದಿ ಹಾಕಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.