ಸೋಮವಾರ, ಮಾರ್ಚ್ 1, 2021
31 °C
ಎಐಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ವಿರುದ್ಧ ಎಫ್‌ಐಆರ್‌

ದೇಣಿಗೆ ಹೆಸರಿನಲ್ಲಿ ಚೆಕ್ ಪಡೆದು ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಣಿಗೆ ಹೆಸರಿನಲ್ಲಿ ಚೆಕ್ ಪಡೆದು ವಂಚನೆ

ಬೆಂಗಳೂರು: ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದಲ್ಲಿ ಪ್ರಚಾರ ಆರಂಭಿಸಿದ್ದ ‘ಅಖಿಲ ಭಾರತ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ (ಎಐಎಂಇಪಿ)‘ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಖ್‌ ವಿರುದ್ಧ, ಅವರದ್ದೇ ಪಕ್ಷದ 150ಕ್ಕೂ ಹೆಚ್ಚು ಅಭ್ಯರ್ಥಿಗಳು ಸಿಡಿದೆದ್ದಿದ್ದಾರೆ.

‘ದೇಣಿಗೆ ಹೆಸರಿನಲ್ಲಿ ₹50 ಸಾವಿರದ ಚೆಕ್‌ ಹಾಗೂ ಖಾಲಿ ಚೆಕ್‌ ಪಡೆದಿರುವ ನೌಹೀರಾ, ಅವುಗಳನ್ನು ವಾಪಸ್‌ ಕೊಡದೆ ವಂಚಿಸಿದ್ದಾರೆ. ಚೆಕ್‌ ಕೇಳಿದ್ದಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸುತ್ತಿರುವ ಅಭ್ಯರ್ಥಿಗಳು, ಜೀವನ್‌ಬಿಮಾ ನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ನೌಹೀರಾ ಹಾಗೂ ಅವರ ಸಂಗಡಿಗರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ಮಹಿಳೆಯರು ಸೇರಿದಂತೆ ಐವರು ಅಭ್ಯರ್ಥಿಗಳು, ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ವಂಚನೆ, ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಜತೆಗೆ, ಹಲವರು ತಮಗಾದ ವಂಚನೆ ಬಗ್ಗೆ ಹೇಳಿಕೆ ಸಹ ಕೊಟ್ಟಿದ್ದಾರೆ. ತನಿಖೆ ನಡೆಯುತ್ತಿದ್ದು, ಸದ್ಯಕ್ಕೆ ಏನನ್ನೂ ಹೇಳಲಾಗದು’ ಎಂದು ಪೊಲೀಸರು ತಿಳಿಸಿದರು.

ದೂರಿನ ಬಗ್ಗೆ ಮಾತನಾಡಿದ ಮಹಿಳಾ ಅಭ್ಯರ್ಥಿಯೊಬ್ಬರು, ‘ದೇಣಿಗೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗಿದೆ. ಒಂದೇ ಕ್ಷೇತ್ರಕ್ಕೆ ಹೆಚ್ಚು ಅಭ್ಯರ್ಥಿಗಳಿಗೆ ‘ಬಿ’ ಫಾರ್ಮ್ ಕೊಡಲಾಗಿದೆ. 224ರ ಪೈಕಿ ಬಹುಪಾಲು ಅಭ್ಯರ್ಥಿಗಳಿಗೆ ವಂಚನೆ ಆಗಿದೆ. ಹೀಗಾಗಿ, ಅಭ್ಯರ್ಥಿಗಳೆಲ್ಲರೂ ಸೇರಿ ಕಾನೂನು ಹೋರಾಟ ಆರಂಭಿಸಿದ್ದೇವೆ’ ಎಂದರು.

‘ಸ್ವಯಂ ಸೇವಾ ಸಂಸ್ಥೆ ಮೂಲಕ ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡುತ್ತಿದ್ದೆ. ಫೆಬ್ರುವರಿ 23ರಂದು ನನ್ನನ್ನು ಸಂಪರ್ಕಿಸಿದ್ದ ನೌಹೀರಾ, ಪಕ್ಷಕ್ಕೆ ಸೇರಿಕೊಳ್ಳಿ ಎಂದಿದ್ದರು. ನಂತರ, ಸಿಂಡಿಕೇಟ್ ಬ್ಯಾಂಕ್‌ನ 2 ಚೆಕ್‌ಗಳನ್ನು ಪಡೆದುಕೊಂಡು ‘ಬಿ’ ಫಾರ್ಮ್‌ ಸಹ ನೀಡಿದ್ದರು. ಬಳಿಕ, ನಮ್ಮದೇ ಕ್ಷೇತ್ರದಲ್ಲಿ ಬೇರೊಬ್ಬರಿಗೆ ‘ಬಿ’ ಫಾರ್ಮ್‌ ಕೊಟ್ಟು ದ್ರೋಹ ಎಸಗಿದರು’ ಎಂದು ದೂರಿದರು.

‘ಏಪ್ರಿಲ್ 28ರಂದು ಲೀಲಾ ಪ್ಯಾಲೆಸ್‌ ಹೋಟೆಲ್‌ನಲ್ಲಿ ಪಕ್ಷದ ಸಭೆ ಕರೆಯಲಾಗಿತ್ತು. ಚುನಾವಣಾ ಪ್ರಚಾರಕ್ಕಾಗಿ ಪಾರ್ಟಿಯಿಂದ ₹30 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಅದನ್ನು ನಂಬಿ ನಾನು, ಚುನಾವಣೆಯ ಪೂರ್ವ ತಯಾರಿಗಾಗಿ ₹4 ಲಕ್ಷ ಖರ್ಚು ಮಾಡಿದ್ದೆ. ಬೇರೆಯವರಿಗೆ ‘ಬಿ’ ಫಾರ್ಮ್‌ ಕೊಟ್ಟಿದ್ದರಿಂದ ಚುನಾವಣೆಗೂ ಸ್ಪರ್ಧಿಸಲು ಆಗಲಿಲ್ಲ’

‘ನಾನು ಕೊಟ್ಟಿರುವ ಚೆಕ್‌ ವಾಪಸ್‌ ಕೊಡುವಂತೆ ಕೇಳುತ್ತಿದ್ದೇನೆ. ಆದರೆ, ನೌಹೀರಾ ಅವುಗಳನ್ನು ಕೊಡಲು ನಿರಾಕರಿಸುತ್ತಿದ್ದಾರೆ. ಕರೆ ಸಹ ಸ್ವೀಕರಿಸುತ್ತಿಲ್ಲ. ಹೀಗಾಗಿ, ಅವರ ವಿರುದ್ಧ ದೂರು ನೀಡಿದ್ದೇನೆ’ ಎಂದರು.

ಹುಬ್ಬಳ್ಳಿಯ ಸಂತೋಷ್‌ ಧಾಮೋಳ್, ‘ಕೆಲ ಅಭ್ಯರ್ಥಿಗಳನ್ನು ನೌಹೀರಾಗೆ ಪರಿಚಯ ಮಾಡಿಕೊಟ್ಟಿದ್ದೆ. ಅವರೆಲ್ಲ ಚೆಕ್‌ ವಾಪಸ್‌ ಕೊಡಿಸುವಂತೆ ಕೇಳುತ್ತಿದ್ದರು. ಚೆಕ್‌ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ನೌಹೀರಾ ಹಾಗೂ ಅವರ ಸಂಗಡಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ನೌಹೀರಾ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.