ಜಿಲ್ಲಾ ಉಸ್ತುವಾರಿ ಸೋಲು ಇದೇ ಮೊದಲಲ್ಲ!

7
ಮೊದಲ ಸಚಿವ ಎಚ್‌. ಶಿವಪ್ಪ ಅವರಿಂದ ಆರಂಭಗೊಂಡು ಈಗಿನ ಎಸ್‌ಎಸ್ಎಂವರೆಗೂ ಇದೆ ಸರಪಳಿ

ಜಿಲ್ಲಾ ಉಸ್ತುವಾರಿ ಸೋಲು ಇದೇ ಮೊದಲಲ್ಲ!

Published:
Updated:

ದಾವಣಗೆರೆ: ದಾವಣಗೆರೆ ಹೊಸ ಜಿಲ್ಲೆಯಾಗಿ ರಚನೆಯಾಗಿದ್ದು 1997ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಲ್ಲರೂ ಒಮ್ಮೆ ಸೋಲಿನ ನೋವು ಉಂಡವರು. ಹೊಸ ಜಿಲ್ಲೆಯ ಮೊದಲ ಉಸ್ತುವಾರಿ ಸಚಿವರಾಗಿದ್ದ ಎಚ್. ಶಿವಪ್ಪ, ವೈದ್ಯರೂ ಆಗಿದ್ದ ಡಾ.ವೈ. ನಾಗಪ್ಪ, ಬಿಜೆಪಿ ಮುಖಂಡ ಎಸ್‌.ಎ. ರವೀಂದ್ರನಾಥ್‌ ಹಾಗೂ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಸೋತ ಪಟ್ಟಿಯಲ್ಲಿದ್ದಾರೆ. 

1999ರಲ್ಲಿ ವಿಧಾನಸಭಾ ಚುನಾವಣೆ‌ಯಾದಾಗ ದಾವಣಗೆರೆ ಜಿಲ್ಲೆಯವರೇ ಆದ ಜೆ.ಎಚ್‌. ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಎಚ್. ಶಿವಪ್ಪ ಜಿಲ್ಲಾ ಮಂತ್ರಿ. ಹರಿಹರದಿಂದ ಜೆಡಿಯುನಿಂದ ಸ್ಪರ್ಧಿಸಿದ್ದರು.  ಕಾಂಗ್ರೆಸ್‌ನಿಂದ ಡಾ.ವೈ. ನಾಗಪ್ಪ ಅವರ ಎದುರಾಳಿಯಾಗಿದ್ದರು. ಆ ಚುನಾವಣೆಯಲ್ಲಿ ಸುಮಾರು 3 ಸಾವಿರ ಮತಗಳ ಅಂತರದಿಂದ ಶಿವಪ್ಪ ಪರಾಭವಗೊಂಡಿದ್ದರು. ನಂತರ 2004ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಮಾಡಿದರೂ ಶಿವಪ್ಪ ಅವರಿಗೆ ಗೆಲ್ಲಲು ಆಗಲೇ ಇಲ್ಲ.

1999ರ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಎಸ್‌.ಎಸ್. ಮಲ್ಲಿಕಾರ್ಜುನ 54,401 ಮತಗಳಿಂದ ಗೆದ್ದಿದ್ದರು. ಅವಾಗ ಬಿಜೆಪಿಯ ಯಶವಂತರಾವ್ ಜಾಧವ್‌ ಮಲ್ಲಿಕಾರ್ಜುನ ಅವರಿಗೆ ಎದುರಾಳಿಯಾಗಿದ್ದರು. ಮೊದಲ ಗೆಲುವಿನಲ್ಲೇ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವರಾಗಿದ್ದರು. ಅಂದಿನ ಸರ್ಕಾರದಲ್ಲಿ ಅತಿ ಕಿರಿಯ ಸಚಿವ ಎಂಬ ಮಲ್ಲಿಕಾರ್ಜುನ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಜಿಲ್ಲೆಯ ಉಸ್ತುವಾರಿ ಹೊಣೆಯೂ ಅವರ ಮೇಲೆ ಬಿದ್ದಿತ್ತು.

ಉಸ್ತುವಾರಿ ಇಬ್ಬರಿಗೆ ಹಂಚಿಕೆ: 2004ರ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನಗೆ ಪಕ್ಷ ಟಿಕೆಟ್‌ ಅನ್ನೇ ಕೊಡಲಿಲ್ಲ. ಮಗನ ಬದಲಿಗೆ ಅಪ್ಪ ಶಾಮನೂರು ಶಿವಶಂಕರಪ್ಪ ಟಿಕೆಟ್‌ ಪಡೆದು ಗೆಲುವು ಕಂಡರು. ಇದೇ ಚುನಾವಣೆಯಲ್ಲಿ ಹರಿಹರ ಕ್ಷೇತ್ರದಿಂದ ಗೆದ್ದಿದ್ದ ಡಾ.ವೈ. ನಾಗಪ್ಪ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಧರ್ಮಸಿಂಗ್‌ ಕ್ಯಾಬಿನೆಟ್‌ನಲ್ಲಿ ಸಮಾಜ ಕಲ್ಯಾಣ ಸಚಿವರಾದರು. ಸಹಜವಾಗಿಯೇ ಜಿಲ್ಲೆಯ ಮಂತ್ರಿ ಸ್ಥಾನ ಅವರ ಪಾಲಾಯಿತು.

ಅದೇ ಕಾಲಾವಧಿಯಲ್ಲಿ ಮೈತ್ರಿ ಮುರಿದ ನಂತರ ರಚನೆಯಾದ ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂತ್ರಿ ಮಂಡಲದಲ್ಲಿ ಎಸ್‌.ಎ. ರವೀಂದ್ರನಾಥ್‌ ಸಕ್ಕರೆ ಖಾತೆ ಸಚಿವರಾಗಿದ್ದರು. ಜಿಲ್ಲಾ ಉಸ್ತುವಾರಿಕೆ ಅವರಿಗೆ ಒಲಿದು ಬಂದಿತ್ತು.

2008ರ ಚುನಾವಣೆಯಲ್ಲಿ ಡಾ. ನಾಗಪ್ಪ ಬಿಜೆಪಿಯ ಬಿ.ಪಿ. ಹರೀಶ್‌ ಎದುರು ಸೋಲುತ್ತಾರೆ. ಆದರೆ, ಇನ್ನೊಬ್ಬ ಉಸ್ತುವಾರಿ ಸಚಿವ ಎಸ್‌.ಎ. ರವೀಂದ್ರನಾಥ್‌ ಭಾರೀ ಅಂತರ (53,910)ದ ಮತಗಳಿಂದ ಗೆಲ್ಲುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರಾದವರು ಪುನರಾಯ್ಕೆಯಾಗಿದ್ದು ದಾಖಲೆ ಯಾಗುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ನಡೆದ ಟಿಕೆಟ್‌ ಗೊಂದಲ ರವೀಂದ್ರನಾಥ್ ಅವರ ಗೆಲುವಿಗೆ ನೆರವಾಗಿತ್ತು.

ರವೀಂದ್ರನಾಥ್‌ಗೆ ಯಡಿಯೂರಪ್ಪ ಮುಖ್ಯಮಂತ್ರಿ ಮಂಡಲದಲ್ಲಿ ಕೃಷಿ ಮತ್ತು ತೋಟಗಾರಿಕೆ ಸಚಿವ ಎರಡೂ ಇಲಾಖೆಯ ಜವಾಬ್ದಾರಿ ಸಿಕ್ಕಿತ್ತು. ಜಿಲ್ಲೆಯಿಂದ ರೇಣುಕಾಚಾರ್ಯ, ಜಿ. ಕರುಣಾಕರ ರೆಡ್ಡಿ ಸಚಿವರಾಗಿದ್ದರೂ ಜಿಲ್ಲೆಯ ಉಸ್ತುವಾರಿಯನ್ನು ರವೀಂದ್ರನಾಥ್‌ಗೆ ನೀಡಲಾಗಿತ್ತು. 2013ರಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ರವೀಂದ್ರನಾಥ್ ಮತ್ತೆ ಸ್ಪರ್ಧೆ ಮಾಡುತ್ತಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್‌.ಎಸ್‌. ಮಲ್ಲಿಕಾರ್ಜುನ 88,101 ಮತ ಪಡೆದು 57,280 ಮತಗಳ ಅಂತರದಿಂದ ಅವರನ್ನು ಸೋಲಿಸುತ್ತಾರೆ. ಇದೇ ಅವಧಿಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಗೆಲುವು ಕಂಡಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗುವ ಅವಕಾಶ ಸಿಕ್ಕಿತು. ಇದೇ ಕಾಲಾವಧಿಯಲ್ಲಿ ನಡೆದ ಸಚಿವ ಸಂಪುಟ ಪುನರ್‌ ರಚನೆಯಲ್ಲಿ ಮಲ್ಲಿಕಾರ್ಜುನ ಅವರೂ ಜಿಲ್ಲಾ ಉಸ್ತುವಾರಿ ಸಚಿವರಾದರು.

ಪ್ರಸ್ತುತ ಚುನಾವಣೆಯಲ್ಲಿ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ರವೀಂದ್ರನಾಥ್‌ ಅವರು 4,071 ಮತಗಳ ಅಂತರದಿಂದ ಮಲ್ಲಿಕಾರ್ಜುನ ಅವರನ್ನು ಸೋಲಿಸಿ, ಹಳೆಯ ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಸೋಲಿನ ಸರಪಳಿಯೂ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry